ಸಾಪ್ತಾಹಿಕಪ್ರಭ

ಈ-ಟೆಂಡರ್

Published On :

'ನಡೀರಿ ಒಳಿಕ್ಕೆ' ಚಪರಾಸಿ ಬಂದು ಕರೆದಾಗ ಬೆವರು ಒರೆಸಿಕೊಳ್ಳುತ್ತಾ ಬೆಳಿಗ್ಗಿನಿಂದಲೂ ತನ್ನ ಸರದಿಗಾಗಿ ಕಾಯುತ್ತಾ ನಿಂತಿದ್ದ ಆತ ಒಳಕ್ಕೆ ನಡೆದ. ಅವನಿಗೆ ಹೊರಗಿನ ಧಗೆ ಮತ್ತು ಕೊಠಡಿಯಲ್ಲಿನ ಅತಿಯಾದ ತಂಪು ಎರಡೂ ಒಂದರನಂತರ ಮತ್ತೊಂದು ತೊಂದರೆ ಕೊಟ್ಟವು. ಒಳಗೆ ಹೆಜ್ಜೆ ಊರಿದ ಕೂಡಲೇ ದೊಡ್ಡ ಮೇಜಿನ ಹಿಂದೆ ಕೂತಿದ್ದ ಮೂವರು ದಢೂತಿ ಮನುಷ್ಯರು ಕೋಲಾದ ಬಾಟಲಿ ಕೆಳಗಿಟ್ಟು ಇವನನ್ನು ದಿಟ್ಟಿಸಿ ಕೂತುಕೊಳ್ಳಿ ಎನ್ನುವಂತೆ ಹಳೆಯ ಕುರ್ಚಿ ತೋರಿಸಿದರು.
ಹಾಗೆ ಅವನು ಕೂರುವಾಗಲೇ 'ತಮ್ಮ ಪರಿಚಯ' ಎಂದ ಕೆಂಪು ಟೈಯವ.
ಭಗವಂತ ಚುಟುಕಾಗಿ ಉತ್ತರಿಸಿದ.
'ಓಹೋ ಭಗವಂತ ಎಂದರೆ ತಾವೇ ಏನು. ನಿಮ್ಮ ಬಗ್ಗೆ ನಾವು ಬಹಳಷ್ಟು ಕೇಳಿದ್ದೇವೆ. ನಿಮ್ಮ ಕೆಲಸ ಕಾರ್ಯಗಳೆಲ್ಲ ಮೆಚ್ಚತಕ್ಕದ್ದು. ಹಾಗೆಂದು ಅವುಗಳನ್ನು ಹೇಳಿ ನಿಮ್ಮನ್ನು ಹೊಗಳಲು ಸಮಯವಿಲ್ಲ. ಅಂದಹಾಗೆ ನೀವಿಲ್ಲಿಗೆ ಬಂದಿದ್ದರ ಕುರಿತಾಗಿ ನಿಮಗೆ ಮಾಹಿತಿ ಇದೆ ಎಂದು ಭಾವಿಸಿದ್ದೇವೆ'
'ಖಂಡಿತಾ ಇದೆ. ಸ್ತ್ರೀ ಪುರುಷರಿಲ್ಲದೆ ನಿಮ್ಮವರು ಸೃಷ್ಟಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ನಾನು ಈವರೆಗೂ ನಿರ್ವಹಿಸಿದ ಖಾತೆಗಳಿಗೆ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಇದು ಪ್ರಕೃತಿ ನಿಯಮಕ್ಕೆ ವಿರುದ್ಧ' ಎಂದ ಮೆಲು ದನಿಯಲ್ಲಿ.
'ನಿಮ್ಮ ವಾದ ವಿವಾದಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಿಮ್ಮ ತಕರಾರು ಏನೇ ಇದ್ದರೂ ಸಂಬಂಧಪಟ್ಟ ಇಲಾಖೆಯಲ್ಲಿ ಸಲ್ಲಿಸತಕ್ಕದ್ದು. ಕುತೂಹಲಕ್ಕೆ ಕೇಳುತ್ತೇನೆ, ಮಾನವ ನಿರ್ಮಾಣದ ಕ್ಷೇತ್ರದಲ್ಲಿ ನಿಮಗಿದ್ದ ಮನೋಪಲಿ ತಪ್ಪಿ ಹೋದದ್ದಕ್ಕಾಗಿ ಹತಾಶರಾಗಿದ್ದೀರಿ ಅಲ್ಲವೇ?' ಎಂದ ಬಿಳಿಯ ಕಾಲರಿನವನು.
'ಅಲ್ಲ, ಅದು ನಮ್ಮ ಕುಲಕಸುಬು. ಯುಗಯುಗಾಂತರದಿಂದ ಪವಿತ್ರವೆಂದು ಭಾವಿಸಿ ನಡೆಸಿದ್ದೇವೆ. ಗಂಡು ಹೆಣ್ಣಿನ ಸುಮಧುರ ಸಮಾಗಮದಿಂದ, ಧರ್ಮಸಮ್ಮತಿಯಾಗಿ... ಯಾರೆಷ್ಟೇ ಹೇಳಿದರೂ ಕೇಳದೇ ನಿಮ್ಮಗಳ ತಲೆಯಲ್ಲಿ ವಿಪರೀತ ಬುದ್ಧಿ ತುಂಬಿದ್ದರ ಪರಿಣಾಮ ಇದು. ನನಗೀಗ ಅನ್ನಿಸುತ್ತಿದೆ' ನೊಂದು ಉತ್ತರಿಸಿದ ಭಗವಂತ.
'ನೋ ಯುಆರ್ ರಾಂಗ್ ಮಿಸ್ಟರ್. ನೀವು ಕೊಟ್ಟಿದ್ದು ಇಟ್ಟಿದ್ದು ಯಾವ್ದೂ ಅಲ್ಲ. ಅವೆಲ್ಲ ಜೀನ್ ಮ್ಯುಟೇಷನ್ ಅಷ್ಟೇ. ಈಗಿನ ನಮ್ಮ ಮಕ್ಕಳಿಗೆ ಕೆರಿಯರ್ ತುಂಬಾ ಮುಖ್ಯ. ಬೇರೆಯದಕ್ಕೆಲ್ಲಾ ಸಮಯವಿಲ್ಲ' ಕೂಗಿಕೊಂಡ ಕಾಲರಿನವ.
ಮಾತು ಮುಂದುವರೆಯಲಿಲ್ಲ. ಇವನು ಸುಮ್ಮನೆ ಕೂತದ್ದು ನೋಡಿ. 'ಇವರೇ ಸುಮ್ಕೆ ವಾದ ಬ್ಯಾಡ. ನಿಮಗೇ ಯಾಕೀ ಟೆಂಡ್ರು ಕೊಡಬೇಕು ಒಂದೇ ಮಾತ್ನಾಗೆ ಹೇಳ್ರೀ' ಹಲ್ಲುಬಿಟ್ಟ ಗರಿಗರಿ ಧೋತರದವ.
'ಎಷ್ಟೆಷ್ಟೋ ಒಳ್ಳೆಯವರನ್ನ ಈ ಪ್ರಪಂಚಕ್ಕೆ ಧಾರೆ ಎರೆದಿದ್ದೇನೆ. ಉಸಿರು ತುಂಬಿದ ಎಲ್ಲವನ್ನೂ ನನ್ನ ಮಕ್ಕಳು ಎಂದೇ ಕಾಪಾಡಿದ್ದೇನೆ...' ಮಾತನ್ನು ಮಧ್ಯದಲ್ಲೇ ತುಂಡರಿಸಿದ ಧೋತರದವ. 'ಅದಲ್ರೀ ನಾನ್ಹೇಳಿದ್ದು. ನಿಮ್ಮಿಂದ ನಮಗೇನು ಲಾಭ ಅಂತ. ನಿಮಗೆ ನಮ್ಭಾಷೆ ಗೊತ್ತಾಗುದಿಲ್ಲ, ಕಮಿಷನ್ ಏನ್ ಕೊಡ್ತೀರ್ರೀ?'
ಅವಾಕ್ಕಾಗಿ ಹೋದ ಪರಮಾತ್ಮ. 'ಜೀವ ಸೃಷ್ಟಿಗೂ? ದೇವರ ಕಾರ್ಯವದು' ಎಂದ ಮಾರ್ಮಿಕವಾಗಿ.
'ಹೂಂ ಗೊತ್ತದೆ ಬುಡಿ. ನಮ್ಮಲ್ಲಿ ಎಲ್ಲಾ ಸರ್ಕಾರಿ ಕೆಲ್ಸನೂ ದೇವ್ರುದ್ದೆಯಾ' ನಗುವಿನ ಜೊತೆ ದೊಡ್ಡ ಶಬ್ಧ.
ಎದ್ದು ನಿಂತ ಸರ್ವಶಕ್ತ. ಮೂವರು ಒಮ್ಮೆಲೇ ಗಾಬರಿಗೆ ಬಿದ್ದರು. 'ನಮ್ಹೈಕ್ಳನ್ನ ಅಂಗೆಲ್ಲಾ ನಂಬಕ್ಕಾಗಕ್ಕಿಲ್ಲ. ಈ ಯಪ್ಪನ್ನ ಓಗಕ್ಕೆ ಬುಟ್ರೆ ನಮ್ಗತಿ ಅಟೆಯಾ...' ಧೋತಿಯವ ಬಾಗಿಲ ಬಳಿಯೇ ಹೋಗಿ 'ಅದ್ಯಾಕೆ ಅಂಗೆ ಒಂಟ್ರೀ? ನಾವೇನ್ ನೀವು ಕೆತ್ತೋ ಕೆಲ್ಸಕ್ಕೆಲ್ಲ ಕೊಡಿ ಅನ್ಲಿಲ್ಲ. ಮನುಷ್ರು ಮಾಡ್ತೀರಲ್ಲ ಅದ್ರಾಗೆ ಮಾತ್ರಾ' ಕಣ್ಣು ಮಿಟುಕಿಸಿದ.
ಭಗವಂತನಿಗೂ ಇವರ ಮೇಲೆಯೇ ಪೂರ್ತಿ ಜವಾಬ್ದಾರಿ ಬಿಟ್ಟು ಹೊರಡುವುದು ಸರಿಯಲ್ಲ ಎಂದೆನ್ನಿಸಿತು. 'ಸರಿ ಹಾಗಿದ್ದರೆ ನನ್ನ ಮೇಲೆ ಏನೂ ತಪ್ಪು ಬರಬಾರದು'
'ಓಹೋಹೋ ಆಗಬಹುದು' ಒಕ್ಕೊರಲಿನಿಂದ ಹೇಳಿದರು.
'ದೇಹದ ಹೊರಭಾಗ ಊನವಾದ್ರೆ ಎಲ್ಲರಿಗೂ ಗೊತ್ತಾಗತ್ತೆ. ಎಲ್ರೂ ನಂಗೆ ಬೈತಾರೆ. ಹಾಗೆ ಮಾಡೋಕ್ಕಾಗಲ್ಲ. ಇನ್ನು ಒಳಗಿರೋ ಭಾಗಗಳೂ ಮುಖ್ಯ . ಆದರೆ ಗುಣಮಟ್ಟ ಸ್ವಲ್ಪ ಕಡಿಮೆ ಮಾಡಬಹುದು. ಅವು ಜಾಸ್ತಿ ದಿನ ಬಾಳ್ಕೆ ಬರೋದಿಲ್ಲ. ಅಡ್ಡಿಯಿಲ್ಲ ತಾನೇ?' ಮುಖ ನೋಡಿದ.
'ಇಲ್ಲ ಇಲ್ಲ' ತಲೆಯಾಡಿಸಿದರು.
'ಪ್ರೀತಿ, ಸ್ನೇಹ, ಸಂಬಂಧ, ಏನೇನು ಒಳ್ಳೆಯ ಅಂಶಗಳಿವೆಯೋ ಅವುಗಳ ವೆಚ್ಚ ಜಾಸ್ತಿ. ವಿರುದ್ಧವನ್ನು ತುಂಬುತ್ತೇನೆ, ಅನಾಹುತಗಳಿಗೆ ನಾನು ಜವಾಬ್ದಾರನಲ್ಲ'
'ಹೇ ಎಲ್ಲಾದರೂ ಉಂಟೇ?' ಹಲ್ಲು ಅರಳಿಸಿದರು. 'ಹಿಂಗೆ ಕೇಳ್ತೀವಿ ಅಂತ ತಪ್ಪು ತಿಳ್ಕೋಬೇಡಿ, ಈ ಎಲ್ಲದ್ರಿಂದ ನಮಗೆ ಎಷ್ಟು ಸಿಗಬಹುದು?' ಕೆದಕಿದರು.
'ಹೆಚ್ಚೇನಿಲ್ಲ. ಒಂದೆರಡು ಪರ್ಸೆಂಟ್‌'
'ಅಯ್ಯೋ ಹೌದಾ? ನೊಣ ತಿಂದು ಜಾತಿ ಕೆಡ್ಸಿಕೊಂಡಂಗೆ ಆಗ್ಬಾರ್ದು ನೋಡಿ, ನಮ್ಮೇಲಿನ ತನಕ ಹೋಗ್ಬೇಕಲ್ಲ, ಏನಾದರೂ ಮಾಡಿ...' ರಾಗ ಎಳೆದರು.
'ಮಾಡಬಹುದು...ಮುಂದೆ ಬಹಳ ಕಷ್ಟ'
'ಅಯ್ಯಾ ಯಾವತ್ತೋ ಯಾರಿಗೋ ಏನೋ ಆಗತ್ತೆ ಅಂತ ಇವತ್ತು ನಾವ್ಯಾಕೆ ತಲೆಕೆಡಿಸಿಕೊಳ್ಬೇಕು, ಅದೇನ್ ಮಾಡಬೇಕು ಅನ್ಸತ್ತೊ ಅದನ್ನ ಮಾಡಿ. ನಮ್ಗೆ ಸೇರ್ಬೇಕಾಗಿದ್ದು ಕೊಟ್ಬಿಡಿ, ಸುಮ್ನೆ ಚರ್ಚೆ ಯಾಕೆ?' ಎಂದ ಕೆಂಪು ಟೈಯವ.
'ಬಹಳ ಬೆಲೆಬಾಳೋದು ಅಂದ್ರೆ ಮಿದುಳು, ಹೃದಯ. ಅವಕ್ಕೆ ಒಳ್ಳೆಯ ಬುದ್ಧಿ, ಮಿಡಿಯೋ ಮನಸ್ಸು ತುಂಬೋದಕ್ಕೆನೆ. ಹೀಗೆ ಮಾಡೋಣ ಅವುಗಳನ್ನ ನಾಮಕಾವಸ್ಥೆ ಇಟ್ಟು ಬಿಡೋಣ. ಶರೀರಕ್ಕೆ ಏನು ಕೆಲ್ಸ ಬೇಕೋ ಅದನ್ನ ಮಾಡ್ಕೊಂಡು ಇದ್ದುಕೊಳ್ಳಲಿ ಏನಂತೀರಿ?' ಎಲ್ಲರನ್ನು ದಿಟ್ಟಿಸಿದ.
'ಆಗಲಿ ಆಗಲಿ' ಒಟ್ಟಿಗೆ ಕಿರುಚಿದರು
ಕಡತ ಹೊತ್ತು ಹೊರಟ ಭಗವಂತ. ಹಿಂದಿನಿಂದ ಮೆಲ್ಲಗೆ ಹಿಂಬಾಲಿಸಿ ಬಂದ ಧೋತರದವ. ಆಚೀಚೆ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಳ್ಳುತ್ತಾ, 'ಸ್ವಾಮಿ ನಮ್ಕಳ್ಳುಬಳ್ಳಿಗುಳ್ಗೆ ಅದೇನೋ ಮನಸ್ಸು ಪನ್ಸು ಕೊಡ್ನಿಲ್ಲಾ ಅಂದ್ರೆ ಬ್ಯಾಡ, ಒಸಿ ಮಿದ್ಲು ಕೊಟ್ಬುಡಿ ಅವಾಗವಾಗ ಬೇಕಾಯ್ತದೆ' ಎನ್ನುತ್ತಾ ದಢಕ್ಕನೆ ಕಾಲಿಗೆ ಬಿದ್ದ.

-ದೀಪ್ತಿ ಭದ್ರಾವತಿ
deepthibdvt@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.