ಬೈಟುಕಾಫಿ

ನಾಗರ ಹೊಳೆಗೆ ಪ್ರವಾಹ

ವಿಶ್ವವಿಖ್ಯಾತ ನಾಗರಹೊಳೆ ಅಭಯಾರಣ್ಯ ವೀಕ್ಷಣೆಗೆ ಭಾರತೀಯ ಪ್ರವಾಸಿಗರು, ವಿದೇಶಿ ಪ್ರವಾಸಿಗರು, ಮಕ್ಕಳು ಇತ್ತೀಚೆಗಿನ ವರ್ಷಗಳಲ್ಲಿ....

ನಾಗರ ಹೊಳೆಗೆ ಪ್ರವಾಹ
Published On :

ವಿಶ್ವವಿಖ್ಯಾತ ನಾಗರಹೊಳೆ ಅಭಯಾರಣ್ಯ ವೀಕ್ಷಣೆಗೆ ಭಾರತೀಯ ಪ್ರವಾಸಿಗರು, ವಿದೇಶಿ ಪ್ರವಾಸಿಗರು, ಮಕ್ಕಳು ಇತ್ತೀಚೆಗಿನ ವರ್ಷಗಳಲ್ಲಿ ಮುಗಿಬೀಳುತ್ತಿದ್ದಾರೆ.
ವನ್ಯಪ್ರಾಣಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ, ಕೊಡಗು ಪ್ರಮುಖ ಪ್ರವಾಸಿ ತಾಣವಾಗಿ ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವುದು, ಹುಲಿ ಯೋಜನೆ, ಆನೆ ಯೋಜನೆ ಜಾರಿ, ಸಾರ್ವಜನಿಕವಾಗಿ ಹೆಚ್ಚುತ್ತಿರುವ ವನ್ಯಪ್ರಾಣಿ ಕಾಳಜಿಯೂ ಪ್ರವಾಸಿಗರನ್ನು ನಾಗರಹೊಳೆ ಅಭಯಾರಣ್ಯದತ್ತ ಸೆಳೆಯಲು ಕಾರಣ.
2013 ಜನವರಿ ಆರಂಭದಿಂದ ಡಿ. 31ರವರೆಗೆ ನಾಗರಹೊಳೆಗೆ ಒಟ್ಟು 24,077 ಮಂದಿ ಭೇಟಿ ನೀಡಿ ಸಫಾರಿ ನಡೆಸಿದ್ದರು. ಇವರಲ್ಲಿ 21,938 ಭಾರತೀಯರು, 1722 ಮಕ್ಕಳು ಹಾಗೂ ಸ್ವಿಜರ್ಲ್ಯಾಂಡ್, ಜರ್ಮನಿ, ಲಂಕನ್ನರು ಒಳಗೊಂಡಂತೆ ಸುಮಾರು 417 ವಿದೇಶಿಗರು. ದಾಖಲೆಯ ರು. 72,98,400 ಸಫಾರಿ ಆದಾಯ ಸಂಗ್ರಹ. ಕಾವೇರಿ, ಗಂಗೋತ್ರಿ ವಸತಿಗೃಹ ಒಳಗೊಂಡು ಸುಮಾರು ರು. 75 ಲಕ್ಷ ಆದಾಯ ಲಭ್ಯವಾಗಿದೆ.
ಈ ಬಾರಿ ನಾಗರಹೊಳೆ ಹಚ್ಚಹಸಿರಾಗಿರಲು, ಸುರಿದ ಸುಮಾರು 1915 ಮಿ.ಮೀ.ಗೂ ಅಧಿಕ ಮಳೆಯೂ ಕಾರಣ. ಸಸ್ಯಾಹಾರಿ ಪ್ರಾಣಿಗಳಿಗೆ ಈ ವರೆಗೆ ಮೇವಿನ ಕೊರತೆ ಉಂಟಾಗಿಲ್ಲ.
ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್, ಸ್ವಿಜರ್ಲ್ಯಾಂಡ್ ಎಂದೆಲ್ಲಾ ಕೊಡಗನ್ನು ಬಣ್ಣಿಸಲಾಗುತ್ತದೆ. ಇದಕ್ಕೆ ಅನ್ವರ್ಥ ಎಂಬಂತೆ ಮೊನ್ನೆ ಮೊನ್ನೆ ಸ್ವಿಜರ್ಲ್ಯಾಂಡ್ನ ಪ್ರವಾಸಿಗ ದಂಪತಿ ಡಿ. 23ರಂದು ತಮ್ಮ ಪುತ್ರನೊಂದಿಗೆ ನಾಗರಹೊಳೆಗೆ ಆಗಮಿಸಿ, ಉದ್ಯಾನವನದ ಅಪೂರ್ವ ಜೀವರಾಶಿ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಾರದಲ್ಲಿ ಎರಡು ಮೂರು ಬಾರಿ ಪ್ರವಾಸಿಗರ ಕಣ್ಣಿಗೆ ಹುಲಿ-ಚಿರತೆಯೂ ಬೀಳುತ್ತವೆ. ಅಭಯಾರಣ್ಯದಲ್ಲಿ ಹಗಲು ಹುಲಿ ಕಣ್ಣಿಗೆ ಬೀಳಲು ಅದೃಷ್ಟವೂ ಬೇಕು ಎನ್ನುತ್ತಾರೆ ನಾಗರಹೊಳೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಬೆಳ್ಳಿಯಪ್ಪ.
ಸುಮಾರು 643 ಚದರ ಕಿ.ಮೀ. ವ್ಯಾಪಿಸಿರುವ ನಾಗರಹೊಳೆ ಅರಣ್ಯ ಇದೀಗ 690 ಚದರ ಕಿ.ಮೀ.ಗೆ ಉಬ್ಬಿದೆ. ಪುನರ್ವಸತಿ ಕಾರ್ಯಕ್ರಮ ಜಾರಿಯಿಂದಾಗಿ ಸೊಳ್ಳೆಪುರ ಇತ್ಯಾದಿ ಪ್ರದೇಶಗಳು ನಾಗರಹೊಳೆಗೆ ಸೇರ್ಪಡೆಗೊಂಡಿದೆ. ಅಧಿಕೃತ ಪ್ರಕಟಣೆ ಹೊರಬೀಳುವುದು ಬಾಕಿ ಇದೆ.
ಹುಲಿ ಸಂತತಿ ಹೆಚ್ಚಳ
ಅತೀ ಪುಟ್ಟ ಕಾಡಿನಲ್ಲಿ ಅತ್ಯಧಿಕ ಜೀವಜಾಲ ಇರುವ ಪ್ರದೇಶವೆಂದು ನಾಗರಹೊಳೆ ಅಭಯಾರಣ್ಯವನ್ನು ಗುರುತಿಸಲಾಗಿದೆ. ಇದೀಗ ಅದು ಹುಲಿ ಸಂರಕ್ಷಿತ ತಾಣವೂ ಹೌದು. ಹುಲಿ- ಚಿರತೆ ಸಂತತಿ ಹೆಚ್ಚಳವಾದಲ್ಲಿ ಅವುಗಳ ಆಹಾರ ಬೇಟೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚಳವಾಗಿದೆ ಎಂದೇ ಅರ್ಥ.
ಡಿ. 17ರಿಂದ 23ರವರೆಗೆ ಹುಲಿಗಣತಿ ಕಾರ್ಯ ನಡೆದಿದ್ದು, 30 ಮಂದಿಯ 7 ತಂಡ ರಚಿಸಲಾಗಿತ್ತು. ಗಣತಿ ಕಾರ್ಯ ಸಂದರ್ಭ 6 ಹುಲಿಗಳು ಕಂಡಿದ್ದವು. ಆಗ ಸಸ್ಯಾಹಾರಿ ಪ್ರಾಣಿಗಳ ಅಂಕಿ ಅಂಶ, ಸಸ್ಯವರ್ಗದ ಗಣತಿಯೂ ನಡೆದಿತ್ತು. ಶೇ.5ರಿಂದ ಶೇ.10 ವನ್ಯಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಹುಲಿ, ಚಿರತೆಯಲ್ಲದೆ ಆನೆ, ಲಂಗೂರ್, ಜಿಂಕೆ, ಕಡವೆ, ಕಾಡುಕೋಣ, ಕೆಂದಳಿಲು, ಕಾಡುಕುರಿ, ಕಾಡುಹಂದಿ, ನವಿಲು, ಕಾಡುನಾಯಿ, ಕರಡಿ, ಸೀಳುನಾಯಿ, ಹಾವುಗಳು, ಉಡ ಇವೆ. ಸಫಾರಿ ವಲಯದ 40 ಕಡೆ ಉಪ್ಪು ಗುಂಡಿ ತೋಡಲಾಗಿದೆ. ಉಪ್ಪಿನ ಆಕರ್ಷಣೆಗೆ ವನ್ಯಪ್ರಾಣಿಗಳು ಬರುವುದರಿಂದ ಸಫಾರಿಯಲ್ಲಿ ಅಧಿಕ ಪ್ರಾಣಿ ವೀಕ್ಷಣೆಗೆ ಅನುಕೂಲವಾಗಿದೆ.
ಸಫಾರಿಗೆ ಬರ್ತೀರಾ?
ನಾಗರಹೊಳೆಗೆ ಹುಣಸೂರು ಮಾರ್ಗವಾಗಿ, ಕೇರಳದ ತೋಲ್ಪಟ್ಟಿ, ಗೋಣಿಕೊಪ್ಪಲು- ಕಾನೂರು ಮಾರ್ಗವಾಗಿ, ಬಾಳೆಲೆ- ಮೂರ್ಕಲ್ ಮಾರ್ಗವಾಗಿಯೂ ಭೇಟಿ ನೀಡಬಹುದು. ಶ್ರೀಮಂಗಲ- ಕುಟ್ಟ ಮಾರ್ಗವಾಗಿಯೂ ತೆರಳಬಹುದಾಗಿದೆ. ನಾಗರಹೊಳೆಯ ಗಂಗೋತ್ರಿಯಲ್ಲಿ ವಾಸ್ತವ್ಯ ಹೂಡಲು ಮೈಸೂರು ಅರಣ್ಯಭವನದಲ್ಲಿ ರೂಮ್ ಕಾದಿರಿಸಬೇಕು. ಮೂರು ಮಿನಿ ಬಸ್ಗಳು 20 ಕಿ.ಮೀ. ದೂರ ಸಫಾರಿ ಒಯ್ಯುತ್ತವೆ. ನಾಗರಹೊಳೆಯ ನಂತರ ಇರ್ಪು ಜಲಪಾತ ಅಥವಾ ತಿರುನೆಲ್ಲಿಗೂ ಭೇಟಿ ನೀಡಬಹುದು.
ಪ್ಲಾಸ್ಟಿಕ್ ಮುಕ್ತ ವಲಯ
ನಾಗರಹೊಳೆ ಹಾಗೂ ಹುಣಸೆಕಟ್ಟೆಯಲ್ಲಿ ಎರಡು ಕಳ್ಳಬೇಟೆ ನಿರೋಧ ಶಿಬಿರವಿದೆ. ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ನಾಗರಹೊಳೆಯನ್ನು ಘೋಷಿಸಲಾಗಿದೆ. ಕಸ- ಪ್ಲಾಸ್ಟಿಕ್ ಇತ್ಯಾದಿಯನ್ನು ಅಭಯಾರಣ್ಯದ ಹೊರಕ್ಕೆ ಕೊಂಡೊಯ್ದು ವಿಲೇವಾರಿ ಮಾಡಲಾಗುವುದು ಎಂದು ವಲಯಾರಣ್ಯಾಧಿಕಾರಿ ಲೋಕೇಶ್ ತಿಳಿಸಿದ್ದಾರೆ. ಡಿಸಿಎಫ್ ಆರ್. ಗೋಕುಲ್ ಕಾಳಜಿಯೂ ಇಲ್ಲಿ ಬೇಟೆ ನಿಯಂತ್ರಣದಲ್ಲಿರಲು ಕಾರಣ.


- ಟಿ.ಎಲ್. ಶ್ರೀನಿವಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.