ಬೈಟುಕಾಫಿ

ದೇವಮೀನು!

ಮಹಶೀರ್... ಮೀನುಗಳ ರಾಜ. ಜಗತ್ಪ್ರಸಿದ್ಧ ಕ್ರೀಡಾಮೀನು. ತಲೆ ದೊಡ್ಡದು. ಅಂದರೆ, ಮಹಾಶಿರ. ಈ ಕಾರಣಕ್ಕಾಗಿಯೇ ಇದಕ್ಕೆ...

ದೇವಮೀನು!
Published On :

ಆಂಗ್ಲ ಲೇಖಕರಿಂದ ಹಿಡಿದು ನಮ್ಮ ಪೂರ್ಣಚಂದ್ರ ತೇಜಸ್ವಿಯವರೂ ಮಹಶೀರ್ ಮೀನನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಆಗ ಮೀನಿನ ಸಂಪತ್ತೂ ಅಷ್ಟೇ ಹೇರಳವಾಗಿತ್ತು. ಆದರೆ, ಈಗ ಮಹಶೀರ್‌ಗಳ ಸಂತತಿ ಕ್ಷೀಣಿಸುತ್ತಿವೆ...

ಮಹಶೀರ್... ಮೀನುಗಳ ರಾಜ. ಜಗತ್ಪ್ರಸಿದ್ಧ ಕ್ರೀಡಾಮೀನು. ತಲೆ ದೊಡ್ಡದು. ಅಂದರೆ, ಮಹಾಶಿರ. ಈ ಕಾರಣಕ್ಕಾಗಿಯೇ ಇದಕ್ಕೆ ಮಹಶೀರ್ ಅಂತ ಹೆಸರು ಬಂತೆಂದು ಮೀನುಶಿಕಾರಿ ಪ್ರಿಯರು ವ್ಯಾಖ್ಯಾನಿಸುತ್ತಾರೆ. ಆದರೆ, ಈ ಮೀನಿನ ಸ್ಥಳೀಯ ಹೆಸರು 'ಬಿಳಿ ಮೀನು'. ಆಕರ್ಷಕ ಮೈಬಣ್ಣ, ದೊಡ್ಡ ತಲೆ, ಅಗಲವಾದ ಹುರುಪೆಗಳು ಇದರ ಪ್ರಮುಖ ಐಡೆಂಟಿಟಿ.
ಅಂದಹಾಗೆ, ಈ ಮಿನುಗಳ ರಾಜನ ಮೇಲೂ ಸಂಪ್ರದಾಯದ ಪಕಳೆಗಳು ಉದುರಿವೆ. ರಾಜ್ಯದ ಹಲವೆಡೆ ಇದಕ್ಕೆ ಪಾರಂಪರಿಕ ಮೀನಿನ ಪಟ್ಟ ಕಟ್ಟಿದ್ದಾರೆ. 'ದೇವಮೀನು' ಅಂತಲೇ ಬಿಂಬಿಸುತ್ತಾರೆ. ಹೀಗಾಗಿ, ಈ ಮೀನನ್ನು ಹಿಡಿಯುವುದು ಪಾಪವೆಂದು ಕೆಲವು ಕಡೆಯವರ ನಂಬಿಕೆ.

ಎಲ್ಲಿ ಕಂಡುಬರುತ್ತವೆ?
ಎಲ್ಲೆಂದರಲ್ಲಿ ಈ ಮೀನುಗಳು ಕಾಣಿಸುವುದಿಲ್ಲ. ಸ್ವಚ್ಛ ನೀರು ಎಲ್ಲಿರುತ್ತದೋ, ಆಮ್ಲಜನಕಭರಿತ ನೀರು ಎಲ್ಲಿ ಹರಿಯುತ್ತದೋ, ವೇಗದ ಹರಿವು ಎಲ್ಲಿದೆಯೋ... ಇಲ್ಲೆಲ್ಲ ಕಲ್ಲು ಬಂಡೆಗಳ ಪಕ್ಕ, ಆಳವಾದ ಗುಂಡಿಗಳಲ್ಲಿ ಇವು ಅಡಗಿಕೊಂಡಿರುತ್ತವೆ. ಶೃಂಗೇರಿ, ರಾಮನಾಥಪುರ, ಶಿಶಿಲದಂಥ ದೇಗುಲಗಳ ಸ್ನಾನಘಟ್ಟಗಳಲ್ಲಿ ಈ ಮೀನುಗಳನ್ನು ಕಣ್ತುಂಬಿಕೊಳ್ಳಬಹುದು. ಕಾವೇರಿ ನದಿಯ ವಾಲನೂರ್ ಮತ್ತು ನಿಸರ್ಗಧಾಮ (ಕುಶಾಲನಗರ), ಚುಂಚನಕಟ್ಟೆ ಜಲಪಾತದ ಕೆಳಗಿನ ನದಿಪಾತ್ರ (ಕೆ.ಆರ್. ನಗರ), ರಂಗನತಿಟ್ಟು ಪಕ್ಷಿಧಾಮ (ಶ್ರೀರಂಗಪಟ್ಟಣ) ಮತ್ತು ಕಾವೇರಿ ಜಲಪಾತದಿಂದ ಮೇಕೆದಾಟುವರೆಗಿನ ನದಿಪಾತ್ರ (ಭೀಮೇಶ್ವರಿ, ಗಾಲಿಬೋರೆ) ಪ್ರದೇಶಗಳೂ ಮಹಶೀರ್‌ನ ನೆಚ್ಚಿನ ತಾಣಗಳು.
ಪಶ್ಚಿಮಾಭಿಮುಖವಾಗಿ ಹರಿಯುವ ನೇತ್ರಾವತಿ, ಶರಾವತಿ ಮತ್ತು ಅಘನಾಶಿನಿಗಳಲ್ಲೂ ಈ ಮೀನಿನ ಸಂಪತ್ತು ಹೇರಳ. ಬೆಳವಣಿಗೆ ಆಮೆಗತಿಯಾದರೂ, ಹಲವು ವರ್ಷಾವಧಿಯಲ್ಲಿ ಈ ಮೀನು ದೊಡ್ಡ ಗಾತ್ರ ತಲುಪುತ್ತದೆ. 50 ಕೆ.ಜಿ. ಗಾತ್ರದವರೆಗೂ ಬೆಳೆದ ದಾಖಲೆಯಿದೆ. 

ಕಾವೇರಿ ಫೇಮಸ್!
ಮಹಶೀರ್ ಮೀನಿನ ಶಿಕಾರಿಗೆ ಕಾವೇರಿ ನದಿ ಸಿಕ್ಕಾಪಟ್ಟೆ ಫೇಮಸ್ಸು. ರಾಜ್ಯದ ಪರಿಸರ ಪ್ರವಾಸ ಈ ಮೀನಿನಿಂದಲೇ ಎಷ್ಟೋ ಉದ್ಧಾರ ಕಂಡಿದೆ. 8-10 ಕೆ.ಜಿ. ತೂಗುವ ಈ ಮೀನುಗಳು ಗಾಳಕ್ಕೆ ಸಿಕ್ಕರೆ ಪ್ರವಾಸಿಗನು ಒಳಗೊಳಗೆ ಕೃತಾರ್ಥನಾದೆ ಎಂದು ಖುಷಿಪಡುತ್ತಾನೆ. ಆದರೆ, ಗಾಳಗಾರನಿಗೆ ಅಷ್ಟು ಸುಲಭವಾಗಿ ಮಣಿಯುವುದಿಲ್ಲ ಈ ಮಹಶೀರ್. ಗಾಳಗಾರನನ್ನು ದೀರ್ಘಕಾಲ ಆಟವಾಡಿಸಿ, ಪದೇ ಪದೇ ತಪ್ಪಿಸಿಕೊಂಡು ಆತನಿಗೆ ನಿರಾಶೆ ಹುಟ್ಟಿಸುತ್ತದೆ. ಯುರೋಪ್ ಮತ್ತು ಅಮೆರಿಕದವರು ಟ್ರೌಟ್ ಮೀನಿಗಿಂತ, ಈ ಮಹಶೀರೇ ಉತ್ತಮ ಕ್ರೀಡಾಮೀನೆಂದು ಭಾವಿಸುತ್ತಾರೆ.

ಇದೀಗ ನಾಪತ್ತೆ
ಆಂಗ್ಲ ಲೇಖಕರಿಂದ ಹಿಡಿದು ನಮ್ಮ ಪೂರ್ಣಚಂದ್ರ ತೇಜಸ್ವಿಯವರೂ ಈ ಮೀನನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಆಗ ಮೀನಿನ ಸಂಪತ್ತೂ ಅಷ್ಟೇ ಹೇರಳವಾಗಿತ್ತು. ಆದರೆ, ಈಗ ಮಹಶೀರ್‌ಗಳ ಸಂತತಿ ಕ್ಷೀಣಿಸುತ್ತಿವೆ. ನಾಗರಿಕ ಮತ್ತು ಔದ್ಯೋಗಿಕ ಬೆಳವಣಿಗೆಗಳೇ ಮಹಶೀರ್ ಸಂತತಿಯ ಸಂಖ್ಯೆ ಮತ್ತು ಗಾತ್ರ ಕ್ಷೀಣಿಸಲು ಕಾರಣವೆಂದು ರಾಷ್ಟ್ರೀಯ ಕೃಷಿ ಆಯೋಗ ವರದಿ (1976) ತೋರಿಸುತ್ತದೆ. ಮಹಶೀರ್ ತಾಣಗಳನ್ನು ಮೀನುಗಾರಿಕೆ ಇಲಾಖೆಯು ಮತ್ಸ್ಯ ಧಾಮ/ ರಕ್ಷಿತ ಸ್ಥಳಗಳೆಂದು ಘೋಷಿಸಿದೆಯಾದರೂ, ಇವುಗಳ ಸಂಖ್ಯೆ ಮೊದಲಿನಷ್ಟಿಲ್ಲ.

ಕ್ಷೀಣಿಸಲು ಕಾರಣ
-ಅಣೆಕಟ್ಟುಗಳ ನಿರ್ಮಾಣದಿಂದ ನದಿಗಳಲ್ಲಿ ಹಿಂದೆ ಕಾಣುತ್ತಿದ್ದ ಹರಿವು ಈಗಿಲ್ಲದೇ ಇರುವುದು.
- ಮಾನವನ ಚಟುವಟಿಗಳ ಕಾರಣದಿಂದ ಆದ ಜಲಮಾಲಿನ್ಯ.
- ಮರಿ ಮೀನು ಮತ್ತು ಮುಂಗಾರು ಮಳೆಗಾಲದಲ್ಲಿ ಮೊಟ್ಟೆ ತುಂಬಿರುವ ಮೀನುಗಳ ಶಿಕಾರಿ.
- ಮೊಟ್ಟೆಯಿಡಲು ಹಾಗು ವಾಸಿಸಲು ಯೋಗ್ಯವಾದ ತಾಣಗಳ ನಾಶ.
- ಕಾಡು ನಾಶ ಹಾಗೂ ನಿರ್ಮಾಣ ಕಾರ್ಯಗಳಿಂದ ನದಿ ಪಾತ್ರದಲ್ಲಿ ಹೂಳು ತುಂಬುವಿಕೆ.
-ಸ್ಫೋಟಕ, ರಾಸಾಯನಿಕ ಮತ್ತು ವಿಷಯುಕ್ತ ವಸ್ತುಗಳನ್ನು ಬಳಸಿ ಮೀನು ಶಿಕಾರಿ.

ನಾವೇನು ಮಾಡಬೇಕು?

  •      ನದಿ ನೀರಿನ ಸ್ವಚ್ಛತೆಗೆ ಒತ್ತುಕೊಡಬೇಕು.
  •      ಮಹಶೀರ್ ಮರಿಗಳನ್ನು ಉತ್ಪಾದಿಸಿ ನದಿ ಮತ್ತು ಜಲಾಶಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ಬಿತ್ತನೆ ಮಾಡಬೇಕು.
  •      ಸಣ್ಣ ಮತ್ತು ಮೊಟ್ಟೆ ತುಂಬಿದ ಮೀನು ಶಿಕಾರಿ ಶಿಕ್ಷಾರ್ಹ ಅಪರಾಧವೆಂದು ಕಾಯಿದೆ ಜಾರಿಗೊಳಿಸಬೇಕು.
  •      ಮೊಟ್ಟೆಯಿಡುವ ಸಮಯದಲ್ಲಿ (ಮುಂಗಾರು) ಮಹಶೀರ್ ತಾಣಗಳಲ್ಲಿ ಮೀನು ಶಿಕಾರಿಗೆ ರಜೆ ಘೋಷಣೆ.
  •      ಮತ್ಸ್ಯಧಾಮ ಮತ್ತು ರಕ್ಷಿತ ಸ್ಥಳಗಳಲ್ಲಿ ಹೆಚ್ಚಿನ ಜಾಗರೂಕತೆಯ ಕಾವಲು.
  •      ಮೀನು ಹಿಡಿಯುವವರು ಸ್ಫೋಟಕ, ರಾಸಾಯನಿಕ ಮತ್ತು ವಿಷಯುಕ್ತ ವಸ್ತುಗಳನ್ನು ಬಳಸಬಾರದು.
  •      ಶಿಕಾರಿ ರಜೆಯ ಅವಧಿಯಲ್ಲಿ ಮೀನುಗಾರರಿಗೆ ಪರ್ಯಾಯ ಉದ್ಯೋಗ ಒದಗಿಸಬೇಕು.
  •      ಬೇಸಿಗೆಯಲ್ಲಿ ನದಿಯ ಹರಿವು ಮಳೆಗಾಲದ ಗರಿಷ್ಠ ಹರಿವಿನ ಶೇ.20- 40ರಷ್ಟು ಇರುವಂತೆ ನೋಡಿಕೊಳ್ಳಬೇಕು.
  •      ಮಹಶೀರ್ ತಾಣಗಳಲ್ಲಿ ಜನ ಜಾಗೃತಿ ಆಯೋಜನೆ.
- ಡಿ.ಎಸ್. ಕೃಷ್ಣರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.