ಕ್ರೀಡೆ

FIFA World Cup 2026: ಫ್ರಾನ್ಸ್ ಮಣಿಸಿ ಸ್ಪೇನ್ ಫೈನಲ್‌ಗೆ ಲಗ್ಗೆ; ಇಂಗ್ಲೆಂಡ್-ಅರ್ಜೆಂಟೀನಾ ಸೆಮಿಫೈನಲ್ ಪಂದ್ಯ ಇಂದು

ಅಮೆರಿಕದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನಗಳ ಮೂಲಕ ಪ್ರಶಸ್ತಿಯ ಪ್ರಮುಖ ಫೇವರಿಟ್ ಆಗಿದ್ದ ಡಿಡಿಯರ್ ಡೆಶಾಂಪ್ಸ್ ಅವರ ಫ್ರಾನ್ಸ್ ತಂಡಕ್ಕೆ ಯುರೋಪಿಯನ್ ಚಾಂಪಿಯನ್ ಸ್ಪೇನ್ ಕಠಿಣ ಸವಾಲಾಗಿ ಪರಿಣಮಿಸಿತು.

FIFA World Cup 2026: ಫ್ರಾನ್ಸ್ ಮಣಿಸಿ ಸ್ಪೇನ್ ಫೈನಲ್‌ಗೆ ಲಗ್ಗೆ; ಇಂಗ್ಲೆಂಡ್-ಅರ್ಜೆಂಟೀನಾ ಸೆಮಿಫೈನಲ್ ಪಂದ್ಯ ಇಂದು
ಟೆಕ್ಸಾಸ್‌ನ ಡಲ್ಲಾಸ್ ಸಮೀಪದ ಆರ್ಲಿಂಗ್ಟನ್‌ನಲ್ಲಿ ಮಂಗಳವಾರ ನಡೆದ 2026ರ ಫಿಫಾ ವಿಶ್ವಕಪ್ ಮೊದಲ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಬಳಿಕ ಸಂಭ್ರಮಿಸುತ್ತಿರುವ ಸ್ಪೇನ್ ಆಟಗಾರರು.
Published On :

ಆರ್ಲಿಂಗ್ಟನ್: ಮಂಗಳವಾರ ಮಧ್ಯರಾತ್ರಿ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್‌ನ ಮೂರನೇ ವಿಶ್ವಕಪ್ ಪ್ರಶಸ್ತಿಯ ಕನಸಿಗೆ ತೆರೆ ಎಳೆದು, 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ಸ್ಪೇನ್ ತಂಡವು ಫೈನಲ್‌ನಲ್ಲಿ ಇಂಗ್ಲೆಂಡ್ ಅಥವಾ ಅರ್ಜೆಂಟೀನಾ ತಂಡವನ್ನು ಬುಧವಾರ ರಾತ್ರಿ ಎದುರಿಸಲಿದೆ.

ಅಮೆರಿಕದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನಗಳ ಮೂಲಕ ಪ್ರಶಸ್ತಿಯ ಪ್ರಮುಖ ಫೇವರಿಟ್ ಆಗಿದ್ದ ಡಿಡಿಯರ್ ಡೆಶಾಂಪ್ಸ್ ಅವರ ಫ್ರಾನ್ಸ್ ತಂಡಕ್ಕೆ ಯುರೋಪಿಯನ್ ಚಾಂಪಿಯನ್ ಸ್ಪೇನ್ ಕಠಿಣ ಸವಾಲಾಗಿ ಪರಿಣಮಿಸಿತು.

2010ರ ವಿಶ್ವಚಾಂಪಿಯನ್ ಸ್ಪೇನ್ ಪರ ಮೊದಲಾರ್ಧದಲ್ಲಿ ಮಿಕೆಲ್ ಒಯಾರ್‌ಝಾಬಲ್ ಪೆನಾಲ್ಟಿ ಮೂಲಕ ಮೊದಲ ಗೋಲು ದಾಖಲಿಸಿದರು. ಬಳಿಕ ದ್ವಿತೀಯಾರ್ಧದಲ್ಲಿ ಪೆಡ್ರೊ ಪೊರೊ ಮತ್ತೊಂದು ಗೋಲು ಬಾರಿಸಿ ಸ್ಪೇನ್‌ಗೆ 2-0 ಮುನ್ನಡೆ ತಂದುಕೊಟ್ಟರು. ಬಲಿಷ್ಠ ಆಕ್ರಮಣಕಾರಿ ಆಟಗಾರರನ್ನು ಹೊಂದಿದ್ದರೂ ಫ್ರಾನ್ಸ್‌ಗೆ ಪಂದ್ಯಕ್ಕೆ ಮರಳಲು ಸಾಧ್ಯವಾಗಲಿಲ್ಲ.

ಟೆಕ್ಸಾಸ್‌ನ ಆರ್ಲಿಂಗ್ಟನ್‌ನ ಎಟಿ & ಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧದ ಮಧ್ಯಭಾಗದಲ್ಲಿ ತಿರುವು ಸಿಕ್ಕಿತು. ಫ್ರಾನ್ಸ್‌ನ ಎಡಬದಿಯ ರಕ್ಷಣಾ ಆಟಗಾರ ಲೂಕಾಸ್ ಡಿಗ್ನೆ ಅವರು ಸ್ಪೇನ್‌ನ ಯುವ ವಿಂಗರ್ ಲಮಿನ್ ಯಮಾಲ್ ಅವರನ್ನು ಅಜಾಗರೂಕತೆಯಿಂದ ಫೌಲ್ ಮಾಡಿದ ಹಿನ್ನೆಲೆಯಲ್ಲಿ ಸಾಲ್ವಡೊರ್ ಮೂಲದ ರೆಫರಿ ಇವಾನ್ ಬಾರ್ಟನ್ ಪೆನಾಲ್ಟಿ ನೀಡಿದರು. ಈ ಅವಕಾಶವನ್ನು ಒಯಾರ್‌ಝಾಬಲ್ ಗೋಲಾಗಿ ಪರಿವರ್ತಿಸಿ, ಈ ವಿಶ್ವಕಪ್‌ನಲ್ಲಿ ತಮ್ಮ ಐದನೇ ಗೋಲು ದಾಖಲಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಮೊದಲ ಬಾರಿಗೆ ಫ್ರಾನ್ಸ್ ಹಿನ್ನಡೆಯನ್ನು ಅನುಭವಿಸಿತು.

ಇದಾದ ಕೆಲವೇ ನಿಮಿಷಗಳಲ್ಲಿ ಫ್ರಾನ್ಸ್‌ಗೆ ಮತ್ತೊಂದು ಆಘಾತ ಎದುರಾಯಿತು. ಬೆನ್ನಿನ ಗಾಯ ಮರುಕಳಿಸಿದ ಕಾರಣ ಕೇಂದ್ರ ರಕ್ಷಣಾ ಆಟಗಾರ ವಿಲಿಯಂ ಸಲೀಬಾ ಪಂದ್ಯದಿಂದ ಹೊರನಡೆದರು. ಅವರ ಸ್ಥಾನಕ್ಕೆ ಮ್ಯಾಕ್ಸೆನ್ಸ್ ಲಾಕ್ರೋಯ್ ಕಣಕ್ಕಿಳಿದರು.

ಸ್ಪೇನ್ ಕೆಲವು ಅದ್ಭುತ ಒನ್-ಟಚ್ ಪಾಸ್‌ಗಳ ಮೂಲಕ ಮತ್ತೊಂದು ಗೋಲಿನ ಸಮೀಪ ತಲುಪಿದರೂ, ಡಯೋಟ್ ಉಪಮೆಕಾನೊ ಅವರ ತಡೆ ಫೇಬಿಯನ್ ರೂಯಿಸ್‌ಗೆ ಗೋಲು ಅವಕಾಶ ಕಸಿದುಕೊಂಡಿತು.

ದ್ವಿತೀಯಾರ್ಧದ 57ನೇ ನಿಮಿಷದಲ್ಲಿ ಡೆಶಾಂಪ್ಸ್ ಬ್ರಾಡ್ಲಿ ಬಾರ್ಕೋಲಾ ಬದಲಿಗೆ ಡೆಸೈರ್ ಡೂಯೆ ಅವರನ್ನು ಕಣಕ್ಕಿಳಿಸಿ ದಾಳಿಯನ್ನು ಬಲಪಡಿಸಲು ಪ್ರಯತ್ನಿಸಿದರು. ಆದರೆ ಒಂದು ನಿಮಿಷದೊಳಗೆ ಸ್ಪೇನ್ ಮತ್ತೊಂದು ಗೋಲು ದಾಖಲಿಸಿತು.

ರಕ್ಷಣಾ ಆಟಗಾರ ಪೆಡ್ರೊ ಪೊರೊ, ಡ್ಯಾನಿ ಓಲ್ಮೊಗೆ ಪಾಸ್ ನೀಡಿ, ಮರುಪಾಸ್ ಸ್ವೀಕರಿಸಿ ಫ್ರಾನ್ಸ್ ಗೋಲ್‌ಕೀಪರ್ ಮೈಕ್ ಮೈಗ್ನಾನ್ ಅವರನ್ನು ಮಣಿಸಿ ಚೆಂಡನ್ನು ಗೋಲಿನೊಳಗೆ ಸೇರಿಸಿದರು.

ನಂತರ ಥಿಯೋ ಹೆರ್ನಾಂಡೆಸ್ ಹಾಗೂ ರಯಾನ್ ಶೆರ್ಕಿ ಅವರನ್ನು ಕಣಕ್ಕಿಳಿಸಿದರೂ ಫ್ರಾನ್ಸ್‌ಗೆ ಯಾವುದೇ ಪ್ರಯೋಜನವಾಗಲಿಲ್ಲ. ಸಂಘಟಿತ ರಕ್ಷಣೆಯೊಂದಿಗೆ ಆಡಿದ ಸ್ಪೇನ್ ಎದುರು ಫ್ರಾನ್ಸ್ ಸಂಪೂರ್ಣವಾಗಿ ವಿಫಲವಾಯಿತು. ಈ ವಿಶ್ವಕಪ್‌ನಲ್ಲಿ ಸ್ಪೇನ್ ಕೇವಲ ಒಂದು ಗೋಲು ಮಾತ್ರ ಬಿಟ್ಟುಕೊಟ್ಟಿದ್ದು, ಬಲಿಷ್ಠ ರಕ್ಷಣೆಯ ಜೊತೆಗೆ ಲಮಿನ್ ಯಮಾಲ್ ಅವರ ಸೃಜನಾತ್ಮಕ ದಾಳಿಯೂ ತಂಡದ ಯಶಸ್ಸಿಗೆ ಕಾರಣವಾಗಿದೆ.

ಈಗ ಸ್ಪೇನ್, ವಿಶ್ವಕಪ್‌ ಪ್ರಶಸ್ತಿ ಗೆಲ್ಲಲು ಕೇವಲ 90 ನಿಮಿಷಗಳ ದೂರದಲ್ಲಿದೆ. 16 ವರ್ಷಗಳ ಹಿಂದೆ ವಿಸೆಂಟೆ ಡೆಲ್ ಬೋಸ್ಕೆ ಅವರ ತಂಡ ಸಾಧಿಸಿದ್ದ ವಿಶ್ವಕಪ್ ವಿಜಯವನ್ನು ಮರುಕಳಿಸುವ ಗುರಿಯಲ್ಲಿದೆ. ಟೆಕ್ಸಾಸ್‌ನ ಸೋಲು, ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ಫ್ರಾನ್ಸ್‌ಗೆ ದೊಡ್ಡ ನಿರಾಸೆಯಾಗಿದೆ.

ಫ್ರಾನ್ಸ್ ಕಳೆದ ಎರಡು ವಿಶ್ವಕಪ್‌ಗಳ ಫೈನಲ್ ಪ್ರವೇಶಿಸಿತ್ತು. 2018ರಲ್ಲಿ ರಷ್ಯಾದಲ್ಲಿ ಪ್ರಶಸ್ತಿ ಗೆದ್ದಿದ್ದರೆ, 2022ರಲ್ಲಿ ಕತಾರ್‌ನಲ್ಲಿ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಸೋತಿತ್ತು. ಆ ಫೈನಲ್‌ನಲ್ಲಿ ಕಿಲಿಯನ್ ಎಂಬಾಪೆ ಹ್ಯಾಟ್ರಿಕ್ ದಾಖಲಿಸಿದ್ದರೂ ಫ್ರಾನ್ಸ್‌ಗೆ ಸೋಲು ತಪ್ಪಿರಲಿಲ್ಲ.

ರಿಯಲ್ ಮ್ಯಾಡ್ರಿಡ್‌ನ ಸ್ಟ್ರೈಕರ್ ಎಂಬಾಪೆ ಜೊತೆಗೆ ಬ್ಯಾಲನ್ ಡಿ'ಓರ್ ವಿಜೇತ ಉಸ್ಮಾನ್ ಡೆಂಬೆಲೆ ಮತ್ತು ಮೈಕಲ್ ಒಲೀಸ್ ಕೂಡ ಫ್ರಾನ್ಸ್‌ನ ಬಲಿಷ್ಠ ದಾಳಿಯ ಭಾಗವಾಗಿದ್ದರು.

ಈ ಸೋಲಿನೊಂದಿಗೆ 14 ವರ್ಷಗಳ ಕಾಲ ಫ್ರಾನ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ಡಿಡಿಯರ್ ಡೆಶಾಂಪ್ಸ್ ಅವರಿಗೆ ಈಗ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯ ಮಾತ್ರ ಉಳಿದಿದೆ. ಟೂರ್ನಿಯ ಬಳಿಕ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಇಂದು ಇಂಗ್ಲೆಂಡ್–ಅರ್ಜೆಂಟೀನಾ ಸೆಮಿಫೈನಲ್

ಅಟ್ಲಾಂಟಾದಲ್ಲಿ ನಡೆಯಲಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ಮುಖಾಮುಖಿಯಾಗಲಿವೆ. ವಿಶ್ವ ಫುಟ್‌ಬಾಲ್‌ನ ಅತ್ಯಂತ ಐತಿಹಾಸಿಕ ಪೈಪೋಟಿಗಳಲ್ಲೊಂದಾದ ಈ ಪಂದ್ಯ ಮತ್ತೊಮ್ಮೆ ಕುತೂಹಲ ಮೂಡಿಸಿದೆ.

ಫಾಕ್‌ಲ್ಯಾಂಡ್ (ಮಾಲ್ವಿನಾಸ್) ದ್ವೀಪಗಳ ಸಾರ್ವಭೌಮತ್ವದ ವಿವಾದದ ಹಿನ್ನೆಲೆಯಲ್ಲಿಯೂ ಈ ಎರಡು ರಾಷ್ಟ್ರಗಳ ನಡುವಿನ ಪಂದ್ಯಗಳಿಗೆ ವಿಶೇಷ ಮಹತ್ವವಿದೆ.

1986ರ ಮೆಕ್ಸಿಕೊ ವಿಶ್ವಕಪ್‌ನಲ್ಲಿ ಡಿಯೆಗೋ ಮರಡೋನಾ ದಾಖಲಿಸಿದ್ದ ಕುಖ್ಯಾತ 'ಹ್ಯಾಂಡ್ ಆಫ್ ಗಾಡ್' ಗೋಲಿನ 40 ವರ್ಷಗಳ ಬಳಿಕ ಈ ಮುಖಾಮುಖಿ ನಡೆಯುತ್ತಿದೆ. ಆ ಪಂದ್ಯದಲ್ಲಿ ಅರ್ಜೆಂಟೀನಾ 2-1 ಅಂತರದಲ್ಲಿ ಗೆದ್ದಿತ್ತು.

ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಮೆಸ್ಸಿ ಮತ್ತು ಎಂಬಾಪೆ ಜೊತೆ ಪೈಪೋಟಿ ನಡೆಸುತ್ತಿರುವ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್, ಈ ಪಂದ್ಯದ ಭಾವನಾತ್ಮಕ ಹಿನ್ನೆಲೆ ತಮ್ಮ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.