ಕ್ರೀಡೆ

ಫ್ರೆಂಚ್ ಓಪನ್: ಭಾರತದ ಸಾತ್ವಿಕ್ -ಚಿರಾಗ್ ಶೆಟ್ಟಿ ಜೋಡಿಗೆ ಡಬಲ್ಸ್ ಪ್ರಶಸ್ತಿ

ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸಿದ್ದಾರೆ.

ಫ್ರೆಂಚ್ ಓಪನ್: ಭಾರತದ ಸಾತ್ವಿಕ್ -ಚಿರಾಗ್ ಶೆಟ್ಟಿ ಜೋಡಿಗೆ ಡಬಲ್ಸ್ ಪ್ರಶಸ್ತಿ
ಸಾತ್ವಿಕ್ -ಚಿರಾಗ್ ಶೆಟ್ಟಿ
Published On :

ಪ್ಯಾರಿಸ್:  ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವುದರೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ.

ವಿಶ್ವದ 8ನೇ ಶ್ರೇಯಾಂಕಿತ ಭಾರತದ ಜೋಡಿಯಾದ ಸಾತ್ವಿಕ್ ಹಾಗೂ ಚಿರಾಗ್ ಜೋಡಿಯು, 25ನೇ ಶ್ರೇಯಾಂಕಿತ ಲು ಹಾಗೂ ಯಂಗ್ ಜೋಡಿ ವಿರುದ್ದ 21-13, 21-19 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೇವಲ 48 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಭಾರತದ ಜೋಡಿ ಯಶಸ್ವಿಯಾಗಿದೆ.

ಇದರೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ ತಮ್ಮ ಮೊದಲ ಸೂಪರ್ 750 ಮತ್ತು ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದರು. ಇದು ಅವರ ನಾಲ್ಕನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಹೈದರಾಬಾದ್ ಓಪನ್ 2018, ಥೈಲ್ಯಾಂಡ್ ಓಪನ್ 2019 ಮತ್ತು ಇಂಡಿಯಾ ಓಪನ್ 2022 ಗಳಲ್ಲಿ ಈ ಜೋಡಿ ಗೆಲುವು ಸಾಧಿಸಿತ್ತು.

ಇವರಿಬ್ಬರು 2019 ರ ಫ್ರೆಂಚ್ ಓಪನ್ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಇಂಡೋನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ವಿರುದ್ಧ ಸೋಲನುಭವಿಸಿದ್ದರು.

1983 ರಲ್ಲಿ ಪಾರ್ಥೋ ಗಂಗೂಲಿ ಮತ್ತು ವಿಕ್ರಮ್ ಸಿಂಗ್ ಅವರ ವಿಜಯದ ನಂತರ ಭಾರತೀಯ ಪುರುಷರ ಡಬಲ್ಸ್ ಜೋಡಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಇದೇ ಮೊದಲು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.