ಕ್ರೀಡೆ

ಪ್ಯಾರಾಲಿಂಪಿಕ್ಸ್‌ಗೆ ತೆರಳಲಿರುವ ಯುಪಿ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್ ಹೊಸ ದಾಖಲೆ!

ಟೋಕಿಯೊ ಒಲಿಂಪಿಕ್ಸ್ ಗೆ ಇನ್ನೂ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಅದು ಮುಗಿದ ತಕ್ಷಣವೇ ಆಗಸ್ಟ್ 24 ರಿಂದ ಅಲ್ಲಿ ಪ್ಯಾರಾಲಿಂಪಿಕ್ಸ್ 2020 ನಡೆಯಲಿದೆ.

ಪ್ಯಾರಾಲಿಂಪಿಕ್ಸ್‌ಗೆ ತೆರಳಲಿರುವ ಯುಪಿ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್ ಹೊಸ ದಾಖಲೆ!
ಮುಖ್ಯಮಂತ್ರಿ ಯೋಗಿ ಜೊತೆಗೆ ಸುಹಾಸ್
Published On :

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಗೆ ಇನ್ನೂ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಅದು ಮುಗಿದ ತಕ್ಷಣವೇ ಆಗಸ್ಟ್ 24 ರಿಂದ ಅಲ್ಲಿ ಪ್ಯಾರಾಲಿಂಪಿಕ್ಸ್ 2020 ನಡೆಯಲಿದೆ.

ಪ್ಯಾರಾಲಿಂಪಿಕ್ಸ್‌ಗೆ ಭಾರತದಿಂದ ತೆರಳುವ ತಂಡದಲ್ಲಿ ಒಬ್ಬ ಐಎಎಸ್ ಅಧಿಕಾರಿಯೂ ಸೇರಿದ್ದಾರೆ. ಆದರೆ, ಅವರು ಯಾವುದೇ ಪಂದ್ಯದ ಅಧಿಕಾರಿಯಾಗಿ ಅಲ್ಲಿಗೆ ಹೋಗುತ್ತಿಲ್ಲ. ಬ್ಯಾಡ್ಮಿಂಟನ್‌ ಗೆ ಅರ್ಹತೆ  ಪಡೆದು, ಪದಕ ಸಾಧನೆಗಾಗಿ ತೆರಳುತ್ತಿದ್ದಾರೆ. ಅವರು ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್.

ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಪ್ರಸ್ತುತ ವಿಶ್ವದ 3 ನೇ ಸ್ಥಾನದಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಪ್ಯಾರಾಲಿಂಪಿಕ್ಸ್‌ಗೆ ಹೋಗಲು ನಿರ್ಧರಿಸಿದ್ದರು. ಅರ್ಹತೆ ಪಡೆಯಲು ಕಠಿಣವಾಗಿ  ಶ್ರಮಿಸಿದ್ದರು. ಒಂದು ಕಡೆ ಜಿಲ್ಲಾಧಿಕಾರಿ ಜವಾಬ್ದಾರಿಗಳು, ಮತ್ತೊಂದೆಡೆ ಕ್ರೀಡಾಪಟುವಾಗಿ ಪದಕ ಗೆಲ್ಲುವ ಆಶಯ. ಕಳೆದ ಒಂದೂವರೆ ವರ್ಷದಿಂದ ಅವರು ಹಗಲು ಜಿಲ್ಲಾಧಿಕಾರಿಯ ಕರ್ತವ್ಯಗಳನ್ನು ನಿರ್ವಹಿಸಿದರೆ, ರಾತ್ರಿ ಹೊತ್ತು  ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದರು. ಈ ಎರಡೂ ಅಂಶಗಳ ಕುರಿತ ಸಮರ್ಪಣೆ ಹಾಗೂ ಪ್ರೀತಿ ತಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ ಎಂದು ಸುಹಾಸ್ ಹೇಳುತ್ತಾರೆ.

ಎಲ್ಲಾ ಕ್ರೀಡಾಪಟುಗಳಂತೆ, ಮುಂಬರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಆಸೆಯೊಂದಿಗೆ  ಸುಹಾಸ್ ರಾತ್ರಿಯಿಡೀ ಶ್ರಮಿಸುತ್ತಿದ್ದಾರೆ. ಸೋಲು, ಗೆಲುವು  ನಡುವಣ ವ್ಯತ್ಯಾಸ ಅತ್ಯಂತ ತೆಳುವಾಗಿರುತ್ತದೆ. ಕೇವಲ ಒಂದು ಸೆಂಟಿಮೀಟರ್, ಮಿಲಿಮೀಟರ್‌ನಿಂದ ಅನೇಕ ಬಾರಿ ಸೋತಿದ್ದೇನೆ ಎಂದು ಸುಹಾಸ್ ಹೇಳುತ್ತಾರೆ.

2007 ರ ಬ್ಯಾಚ್ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಪ್ರಸ್ತುತ ಕೋವಿಡ್ ನಿಯಂತ್ರಣ ಸೇವೆಗಳಲ್ಲಿ ಬಿಡುವಿಲ್ಲದೆ ನಿರತರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ದೆಹಲಿಯ ಗಡಿಯಲ್ಲಿರುವ ಗೌತಮ್ ಬುದ್ಧ ನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕರ್ನಾಟಕದ ಹಾಸನ ಜಿಲ್ಲೆಯವರಾದ ಯತಿರಾಜ್ ಬಾಲ್ಯದಿಂದಲೂ ಕ್ರೀಡೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. 2016 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, BWF ಟರ್ಕಿಶ್ ಓಪನ್ ಚಾಂಪಿಯನ್‌ಶಿಪ್ 2017ರಲ್ಲಿ ಪುರುಷರ ಸಿಂಗಲ್ಸ್ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ವಾರಣಾಸಿಯಲ್ಲಿ ನಡೆದ 2018 ರ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು 2019 ರಲ್ಲಿ ನಡೆದ ಟರ್ಕಿಶ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು, ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಉತ್ತರ ಪ್ರದೇಶ ಅವರಿಗೆ ಯಶ್ ಭಾರತಿ ಪ್ರಶಸ್ತಿ ನೀಡಿ ಗೌರವಿಸಿದೆ.

ಕೋವಿಡ್ ಕಾರಣ ಪ್ಯಾರಾಲಿಂಪಿಕ್ಸ್ ಒಂದು ವರ್ಷ ಮುಂದೂಡಲಾಗಿತ್ತು. ಈ ಅವಧಿಯನ್ನು ಸಾರ್ವಜನಿಕ ಸೇವೆಯಲ್ಲಿ   ನಿರತರಾಗಿದ್ದಾಗಿ ಬ್ಯಾಡ್ಮಿಂಟನ್ ಅಭ್ಯಾಸವನ್ನು ಮಾತ್ರ ಬಿಡಲಿಲ್ಲ. ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಸುಹಾಸ್, ಖಂಡಿತವಾಗಿಯೂ ಉತ್ತಮ ಸಾಧನೆ ಮಾಡಿ ಪದಕ ಗೆಲ್ಲುವುದಾಗಿ ವಿಶ್ವಾಸದಿಂದ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.