ದೇವೇಂದ್ರಗೆ ಚಿನ್ನ ಗೆಲ್ಲಲು ಆರು ವರ್ಷದ ಮಗಳ ಮಾತು ಪ್ರೇರಣೆ
'' ನಾನು ನನ್ನ ಯುಕೆಜಿ ಪರೀಕ್ಷೆಯಲ್ಲಿ ತರಗತಿಗೆ ಫಸ್ಟ್ ಬಂದಿದ್ದೇನೆ, ಇದೀಗ ನಿನ್ನ ಸರದಿ, ನೀನು ಕೂಡ...

ಚೆನ್ನೈ: '' ನಾನು ನನ್ನ ಯುಕೆಜಿ ಪರೀಕ್ಷೆಯಲ್ಲಿ ತರಗತಿಗೆ ಫಸ್ಟ್ ಬಂದಿದ್ದೇನೆ, ಇದೀಗ ನಿನ್ನ ಸರದಿ, ನೀನು ಕೂಡ ಟಾಪರ್ ಆಗಿ ಬರಬೇಕು'' ಎಂದು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ದೇವೇಂದ್ರ ಜಾಜ್ಹಾರಿಯಾಗೆ ಅವರ ಆರು ವರ್ಷದ ಮಗಳು ಜಿಯಾ ಹೇಳಿದ್ದಳಂತೆ. ಮಗಳ ಕನಸನ್ನುಈಡೇರಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ, ಅದರಂತೆ ಚಿನ್ನದ ಪದಕ ಗೆದ್ದುಕೊಂಡಿದ್ದೇನೆ ಎಂದು ಖುಷಿಯಿಂದ ಹೇಳುತ್ತಾ ಬೀಗುತ್ತಾರೆ ದೇವೇಂದ್ರ ಜಾಜ್ಹಾರಿಯಾ.
ಅದು ಬೆಳಗಿನ ಜಾವ 5 ಗಂಟೆಯ ಸಮಯ, ಸ್ಥಳ, ಬ್ರೆಝಿಲ್ ನ ರಿಯೊ ಡಿ ಜನೈರೊ. ದೇವೇಂದ್ರ ಜಾಜ್ಹಾರಿಯಾ ಒಂದು ಚೂರೂ ನಿದ್ದೆ ಮಾಡಿರಲಿಲ್ಲ.ಶುಭಾಶಯಗಳ ಸುರಿಮಳೆ ಕೇಳಿಬರುತ್ತಲೇ ಇತ್ತು. ದೇಶದ ರಾಷ್ಟ್ರಗೀತೆ ಮೊಳಗುತ್ತಲೇ ಇತ್ತು.ಅಂದು ಕ್ರೀಡಾಂಗಣದಲ್ಲಿ 35 ವರ್ಷದ ದೇವೇಂದ್ರ ತಮ್ಮದೇ ವಿಶ್ವ ದಾಖಲೆಯನ್ನು ಮುರಿದಿದ್ದರು. ಒಲಿಂಪಿಕ್ ಸ್ಟೇಡಿಯಂನಲ್ಲಿ ಎಫ್ 46 ಜಾವೆಲಿನ್ ಥ್ರೋನಲ್ಲಿ ಭಾಗವಹಿಸಿದ ದೇವೇಂದ್ರ ಜಾವೆಲಿನ್ ನ್ನು 63.97 ಮೀಟರ್ ದೂರಕ್ಕೆ ಎಸೆದು ಚಿನ್ನದ ಪದಕ ಸಂಪಾದಿಸಿದರು. ಅಥೆನ್ಸ್ ನಲ್ಲಿ 2004ರಲ್ಲಿ ನಡೆದ ಪಾರಾಲಂಪಿಕ್ಸ್ ಗೇಮ್ ನಲ್ಲಿ 62.15 ಮೀಟರ್ ವರೆಗೆ ಎಸೆದು ಚಿನ್ನ ಸಂಪಾದಿಸಿದ್ದ ದೇವೇಂದ್ರ ನಿನ್ನೆ ತಮ್ಮದೇ ದಾಖಲೆಗಳನ್ನು ಮುರಿದರು.
'' ನನಗೆ ಇಂದು ಬಹಳ ಸಂತೋಷವಾಗುತ್ತಿದೆ. ನನ್ನ ಗೆಲುವನ್ನು ನಾನು ಇಡೀ ದೇಶಕ್ಕೆ ಅರ್ಪಿಸುತ್ತೇನೆ. ನನ್ನ ಸಾಧನೆ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಅವರು ರಿಯೊದಿಂದ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಸ್ತಾನದ ಚುರು ಜಿಲ್ಲೆಯವರಾದ ದೇವೇಂದ್ರ 8ನೇ ವರ್ಷದ ಬಾಲಕನಾಗಿದ್ದಾಗಲೇ ಅಪಘಾತವೊಂದರಲ್ಲಿ ಎಡಗೈಯನ್ನು ಕಳೆದುಕೊಂಡಿದ್ದರು. ''1989ರಲ್ಲಿ ನನ್ನ ಸ್ನೇಹಿತರ ಜೊತೆ ಸೇರಿ ಆಟವಾಡುತ್ತಿದ್ದೆ. ಮರ ಹತ್ತುವುದು ನಮ್ಮ ಹವ್ಯಾಸವಾಗಿತ್ತು. ಹೀಗಿರುವಾಗ ಒಂದು ದಿನ ಸ್ನೇಹಿತರ ಜೊತೆ ಆಟವಾಡುತ್ತಿದ್ದಾಗ ವಿದ್ಯುತ್ ವಯರ್ ಮರದ ಕೊಂಬೆಗೆ ತಾಗುತ್ತಿತ್ತು, ಅದನ್ನು ನಾನು ಗಮನಿಸಿರಲಿಲ್ಲ. ನನ್ನ ಎಡಗೈ ಅದಕ್ಕೆ ಮುಟ್ಟಿ ಕೆಳಗೆ ಬಿದ್ದೆ. ಎಲ್ಲರೂ ನಾನು ಮೃತಪಟ್ಟೆ ಎಂದೇ ಭಾವಿಸಿದ್ದರು. ಆದರೆ ಪುಣ್ಯವಶಾತ್ ನಾನು ಬದುಕಿದೆ. ಬಿದಿರಿನ ಜಾವೆನಿಲ್ ನಿಂದ ಅಭ್ಯಾಸ ಮಾಡತೊಡಗಿದೆ. ಆರಂಭದಲ್ಲಿ ಎಲ್ಲರೂ ನನ್ನನ್ನು ತಮಾಷೆ ಮಾಡುತ್ತಿದ್ದರು. ಆದರೆ ಅದ್ಯಾವುದೂ ನನ್ನನ್ನು ಅಡ್ಡಿಪಡಿಸಲಿಲ್ಲ, ಇನ್ನಷ್ಟು ಗಟ್ಟಿ ಮಾಡಿದವು. ಈ ಸಂದರ್ಭದಲ್ಲಿ ನನ್ನ ಸಾಧನೆಗೆ ಬೆನ್ನುಲುಬಾಗಿ ತಾಯಿ ಮತ್ತು ಪತ್ನಿಯ ಬೆಂಬಲವೇ ಕಾರಣ ಎಂದು ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ದೇವೇಂದ್ರ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


