ಭಾರತ ಟಿ20 ತಂಡ ವಿಶ್ವದ ಯಾವುದೇ ದೇಶದಲ್ಲಿ ಆಡಲು ಸಮರ್ಥ: ಧೋನಿ
ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ ವಿಶ್ವದ ಯಾವುದೇ ದೇಶದಲ್ಲಿ ಕ್ರಿಕೆಟ್ ಆಡಲು ಸಮರ್ಥವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ...

ಮೀರ್ ಪುರ: ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ ವಿಶ್ವದ ಯಾವುದೇ ದೇಶದಲ್ಲಿ ಕ್ರಿಕೆಟ್ ಆಡಲು ಸಮರ್ಥವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಮೀರ್ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಪ್ರಸ್ತುತ ಭಾರತ ಟಿ20 ತಂಡ ಸಮತೋಲಿತವಾಗಿದ್ದು, ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗಗಳಲ್ಲಿಯೂ ಸಮರ್ಥವಾಗಿದೆ. ಈಗ ನಾವು ವಿಶ್ವದ ಯಾವುದೇ ತಂಡವನ್ನು ಯಾವುದೇ ದೇಶದಲ್ಲಿ ಎದುರಿಸಲು ಸಿದ್ಧವಿದ್ದೇವೆ ಎಂದು ಹೇಳಿದರು.
ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಪ್ರಸಕ್ತ ವರ್ಷ ಭಾರತಕ್ಕೆ ಹರ್ಷದಾಯಕವಾಗಿದ್ದು, ಕಳೆದ 10 ಪಂದ್ಯಗಳ ಪೈಕಿ ಭಾರತ ತಂಡ 9 ಪಂದ್ಯಗಳನ್ನು ಗೆದ್ದಿದೆ. ಪ್ರಸ್ತುತವಿರುವ ಭಾರತ ತಂಡ ಯಾವುದೇ ಪರಿಸ್ಥಿತಿಯ ಪಿಚ್ ನಲ್ಲಿ ಆಡಲು ಸಿದ್ಧವಿದೆ. ಆದರೆ ಇದು ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಅನ್ವಯಿಸುವುದಿಲ್ಲ. ಈಗ ನಮ್ಮಲ್ಲಿ ಮೂವರು ಪ್ರಮುಖ ವೇಗಿಗಳಿದ್ದು, ಇಬ್ಬರು ಸ್ಪಿನ್ನರ್ ಗಳಿದ್ದಾರೆ. ಅವಶ್ಯಕತೆ ಇದ್ದಾಗ ಬಳಸಿಕೊಳ್ಳಲು ಪಾರ್ಟ್ ಟೈಮ್ ಬೌಲರ್ ಗಳು ಕೂಡ ಇದ್ದಾರೆ. ನನ್ನ ಪ್ರಕಾರ ಇದೊಂದು ಉತ್ತಮ ತಂಡ ಸಂಯೋಜನೆಯಾಗಿದೆ. ಇನ್ನು ಬ್ಯಾಟಿಂಗ್ ವಿಭಾಗಕ್ಕೆ ಬಂದರೆ 8ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ಹೀಗಾಗಿ ಬೌಲಿಂಗ್ ನಲ್ಲಿ ಒಂದಷ್ಟು ಎಕ್ಸ್ ಟ್ರಾ ರನ್ ಗಳು ಹರಿದರೂ, ಬ್ಯಾಟಿಂಗ್ ನಲ್ಲಿ ಅದನ್ನು ಸರಿದೂಗಿಸಿಕೊಳ್ಳಬಹುದು ಎಂದು ಧೋನಿ ಹೇಳಿದರು.
ಇನ್ನು ಏಷ್ಯಾಕಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ ಧೋನಿ, ನಿಜಕ್ಕೂ ಬಾಂಗ್ಲಾದೇಶದ ಎದುರಿಗಿನ ಫೈನಲ್ ಪಂದ್ಯ ಕಠಿಣವಾಗಿರಲಿದೆ. ಸರಣಿಯಲ್ಲಿ ಬಾಂಗ್ಲಾದೇಶ ನಿಜಕ್ಕೂ ಚೆನ್ನಾಗಿ ಆಡಿದೆ. ಬಾಂಗ್ಲಾದೇಶಕ್ಕೆ ತವರಿನ ಬೆಂಬಲದೊಂದಿಗೆ ಪಿಚ್ ನ ಗುಣ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರ ನೆಲದಲ್ಲಿ ಅವರನ್ನು ಸೋಲಿಸುವುದು ಕಠಿಣ. ನಾವು ಕಠಿಣ ಪರಿಶ್ರಮ ಹಾಕದ ಹೊರತು ಬಾಂಗ್ಲಾದೇಶವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿಲ್ಲ. ಮೊದಲಿಗೆ ಬಾಂಗ್ಲಾದೇಶದ ಪ್ರಬಲ ಬ್ಯಾಟಿಂಗ್ ಅನ್ನು ನಾವು ತಡೆಯಬೇಕು. ಪ್ರಮುಖ ಬ್ಯಾಟ್ಸಮನ್ ಗಳ ರನ್ ಪ್ರವಾಹಕ್ಕೆ ಬ್ರೇಕ್ ಹಾಕಬೇಕು. ಬಳಿಕ ಬಲಿಷ್ಠ ಬೌಲಿಂಗ್ ಪಡೆಯ ವಿರುದ್ಧ ಸಮರ್ಥವಾಗಿ ಬ್ಯಾಟ್ ಬೀಸಬೇಕು. ಆಗ ಮಾತ್ರ ಗೆಲುವು ಸಾಧ್ಯ ಎಂದು ಧೋನಿ ಹೇಳಿದ್ದಾರೆ.
ಒಟ್ಟಾರೆ ಬಲಿಷ್ಠ ತಂಡಗಳಾದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳನ್ನೇ ಹೊರಹಾಕಿ ಫೈನಲ್ ಗೆ ಲಗ್ಗೆ ಇಟ್ಟಿರುವ ಬಾಂಗ್ಲಾದೇಶ ತಂಡ ಭಾರತಕ್ಕೆ ಕಠಿಣ ಸಾವಾಲೆಸೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


