ಕ್ರೀಡೆ

ಟಿ-20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ರೋಚಕ ಜಯ

ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿಯೂ ಭಾರತ ರೋಚಕ ಜಯ ದಾಖಲಿಸಿದ್ದು, 3-0 ಅಂತರಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ...

ಟಿ-20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ರೋಚಕ ಜಯ
ಗೆಲುವಿನ ಸಂಭ್ರಮದಲ್ಲಿ ರೈನಾ-ಯುವರಾಜ್ ಸಿಂಗ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
Published On :

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿಯೂ ಭಾರತ ರೋಚಕ ಜಯ ದಾಖಲಿಸಿದ್ದು, 3-0 ಅಂತರಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಆರಂಭಿಕರಾಗಿ ಇಳಿದ ಶೇನ್ ವಾಟ್ಸನ್ ಭಾರತೀಯ ಬೌಲರ್ ಗಳ ಬೆವರಿಳಿಸಿದರು. ಭರ್ಜರಿ ಶತಕ (124 ರನ್) ಸಿಡಿಸಿದ ವಾಟ್ಸನ್ ಆಸ್ಟ್ರೇಲಿಯಾದ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಅಂತಿಮ ಓವರ್ ಗಳಲ್ಲಿ ವಾಟ್ಸನ್ ಜೊತೆಗೂಡಿದ ಮ್ಯಾಥ್ಯೂ ಹೇಡ್ 26 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ 198 ರನ್ ಗಳಿಸಿತು.

ಆಸ್ಟ್ರೇಲಿಯಾದ ಬೃಹತ್ ಬೆನ್ನು ಹತ್ತಿದ ಭಾರತಕ್ಕೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್, ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್ ಗೆ ಈ ಜೋಡಿ ಭರ್ಜರಿ 46 ರನ್ ಗಳ ಜೊತೆಯಾಟ ನೀಡಿತು. ಆದರೆ ಈ ಹಂತದಲ್ಲಿ ಭಾರಿ ಹೊಡೆತಕ್ಕೆ ಕೈ ಹಾಕಿದ ಧವನ್ (26 ರನ್) ವಾಟ್ಸನ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಔಟಾದರು. ಬಳಿಕ ರೋಹಿತ್ ಶರ್ಮಾ ಜೊತೆಗೂಡಿದ ವಿರಾಟ್ ಕೊಹ್ಲಿ ಕೂಡ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ನೋಡನೋಡುತ್ತಿದ್ದಂತೆಯೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡಿದರು.

52 ರನ್ ಗಳಿಸಿ ಆಡುತ್ತಿದ್ದ ರೋಹಿತ್ ಶರ್ಮಾ ಇನ್ನಿಂಗ್ಸ್ 13ನೇ ಓವರ್ ನಲ್ಲಿ ಬೊಯ್ಸ್ ಅವರ ಎಸೆತವನ್ನು ತಪ್ಪಾಗಿ ಪರಿಗಣಿಸಿ ವಾಟ್ಸನ್ ಕ್ಯಾಚಿತ್ತು ಹೊರನಡೆದರು. ಆಗ ತಂಡದ ಮೊತ್ತ 124 ರನ್ ಗಳಾಗಿತ್ತು. ಬಳಿಕ ವಿರಾಟ್ ಕೊಹ್ಲಿ ಕೂಡ 50 ರನ್ ಗಳಿಸಿ ಮತ್ತದೇ ಬೊಯ್ಸ್ ಬೌಲಿಂಗ್ ನಲ್ಲಿ ವಿಕೆಟ್ ಕೈಚೆಲ್ಲಿದರು. ಬಳಿಕ ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಜೋಡಿ ಭರ್ಜರಿ ಆಟವಾಡುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು. ಭರ್ಜರಿ ಆಟವಾಡಿದ ರೈನಾ 49 ರನ್ ಗಳಿಸಿ ಅಜೇರಾಗಿ ಉಳಿದರೆ, ಯುವರಾಜ್ ಸಿಂಗ್ 15 ರನ್ ಗಳಿಸುವ ಮೂಲಕ ಗೆಲುವಿನ ಔಪಚಾರಿಕತೆ ಮುಗಿಸಿದರು. ಆಸ್ಟ್ರೇಲಿಯಾ ಪರ ಬೊಯ್ಸ್ 28 ರನ್ ನೀಡಿ 2 ವಿಕೆಟ್ ಗಳಿಸಿದರೆ, ವಾಟ್ಸನ್ 30 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು.

ಭರ್ಜರಿ 124ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣರಾಗಿ, ಬೌಲಿಂಗ್ ನಲ್ಲಿ 1 ವಿಕೆಟ್ ಕಬಳಿಸಿದ ಶೇನ್ ವಾಟ್ಸನ್ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಸರಣಿಯುದ್ದಕ್ಕೂ ಆಸಿಸ್ ಬೌಲರ್ ಗಳನ್ನು ಕಾಡಿದ ಭಾರತದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು.

ನಂಬರ್ 1 ಸ್ಥಾನಕ್ಕೇರಿದ ಭಾರತ
3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕೈವಶ ಮಾಡಿಕೊಂಡ ಭಾರತ ತಂಡ, ಅಂತಾರಾಷ್ಟ್ರೀಯ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಅಂಕಗಳನ್ನು 2032ಕ್ಕೆ ಏರಿಕೆ ಮಾಡಿಕೊಂಡಿತು. ಅಲ್ಲದೆ ಆಸ್ಟ್ರೇಲಿಯಾ ತಂಡವನ್ನು ವೈಟ್ ವಾಶ್ ಮಾಡುವ ಮೂಲಕ ತನ್ನ ರೇಟಿಂಗ್ ಅನ್ನು 120ಕ್ಕೇರಿಸಿಕೊಂಡ ಭಾರತ ಟಿ20ಯಲ್ಲಿ ಅಗ್ರಸ್ಥಾನಕ್ಕೇರಿದೆ. 118 ರೇಟಿಂಗ್ ಪಡೆದಿರುವ ವೆಸ್ಟ್ ಇಂಡೀಸ್ ತಂಡ 2ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ವಿರುದ್ಧ ಮೂರು ಪಂದ್ಯಗಳನ್ನು ಸೋಲುವ ಮೂಲಕ ತೀವ್ರ ನಿರಾಸೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡ ಬರೊಬ್ಬರಿ 8ನೇ ಸ್ಥಾನಕ್ಕೆ ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.