ರೋಚಕ ಹಾಕಿ ಕದನಕ್ಕೆ ಅಖಾಡ ಸಿದ್ಧ?
ತಂಡಗಳಲ್ಲಿನ ಗಣನೀಯ ಬದಲಾವಣೆ, ನೂತನ ಸ್ಕೋರಿಂಗ್ ನಿಯಮ ಸೇರಿದಂತೆ ಕೆಲವಾರು ವೈಶಿಷ್ಟ್ಯಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ನಾಲ್ಕನೇ...

ಭುವನೇಶ್ವರ್: ತಂಡಗಳಲ್ಲಿನ ಗಣನೀಯ ಬದಲಾವಣೆ, ನೂತನ ಸ್ಕೋರಿಂಗ್ ನಿಯಮ ಸೇರಿದಂತೆ ಕೆಲವಾರು ವೈಶಿಷ್ಟ್ಯಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ನಾಲ್ಕನೇ ಆವೃತ್ತಿಯು ಜ. 18ರಿಂದ ಆರಂಭವಾಗಲಿದ್ದು, ಫೆಬ್ರವರಿ 21ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳುತ್ತಿವೆ.
ಭುವನೇಶ್ವರದ ಕಳಿಂಗಾ ಕ್ರೀಡಾಂಗಣ ದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕಳಿಂಗಾ ಲ್ಯಾನ್ಸರ್ಸ್ ಹಾಗೂ ಉತ್ತರ ಪ್ರದೇಶ ವಿಜರ್ಡ್ಸ್ ಮುಖಾಮುಖಿಯಾಗಲಿವೆ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಈ ಬಾರಿಯ ಟೂರ್ನಿಯು ಆಟಗಾರರಿಗೆ ಹೆಚ್ಚು ಸವಾಲಿನದ್ದಾಗಿರುತ್ತದೆ ಎಂಬುದು ಹಾಕಿ ಪಂಡಿತರ ಅಂಬೋಣ. ಅದರಲ್ಲೂ ಇದೇ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ಗಾಗಿ ತಯಾರಿ ನಡೆಸುತ್ತಿ ರುವ ಆಟಗಾರರಿಗೆ ಈ ಟೂರ್ನಿ ಹೆಚ್ಚಿನ ಮಹತ್ವದ್ದಾ ಗಿದೆ. ಇನ್ನು, ಮೂರು ಆವೃತ್ತಿಗಳ ನಂತರ, ನಾಲ್ಕನೇ ಆವೃತ್ತಿಗಾಗಿ ಆಟಗಾರರ ಮರು ಹರಾಜು ನಡೆದಿದ್ದು, ತಂಡಗಳಲ್ಲಿನ ಆಟಗಾರರ ಸಂಯೋಜನೆ ಬದಲಾಗಿದೆ.
ಅದರಂತೆ, ಸ್ಟಾರ್ ಆಟಗಾರ ಸರ್ದಾರ್ ಸಿಂಗ್ ಅವರು, ಡೆಲ್ಲಿ ವೇವ್ರೈಡರ್ಸ್ ತಂಡದಿಂದ ಪಂಜಾಬ್ ವಾರಿಯರ್ಸ್ ತಂಡಕ್ಕೆ ಆಗಮಿಸಿದ್ದಾರೆ. ಕಳೆದ ವರ್ಷ ಟೂರ್ನಿಯಿಂದ ಹೊರಗಿದ್ದ ಮೊರಿತ್ಸ್ ಫ್ಯುಯೆರ್ಸ್ಟೆ ಈ ವರ್ಷ ಲಭ್ಯರಾಗಿದ್ದು ಕಳಿಂಗಾ ಲ್ಯಾನ್ಸರ್ಸ್‍ನಲ್ಲಿ ಆಡಲಿದ್ದಾರೆ. ಅಲ್ಲದೆ, ಈ ಬಾರಿಯ ಆಟಗಾರರ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರನಾಗಿಯೂ ಅವರು ಹೊರಹೊಮ್ಮಿದ್ದಾರೆ.
ನೂತನ ನಿಯಮ: ಈ ಬಾರಿಯ ಆವೃತ್ತಿಗೆ ನೂತನ ಸ್ಕೋರಿಂಗ್ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಪ್ರತಿಯೋಂದು ಫೀಲ್ಡ್ ಗೋಲ್ ಎರಡು ಗೋಲುಗಳೆಂದು ದಾಖಲಿಸಲಾಗುತ್ತದೆ. ಹಾಕಿ ಟೂರ್ನಿಗಳಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ನಿಯಮವನ್ನು ಜಾರಿಗೊಳಿಸಲಾಗಿದ್ದು, ಇದು ಆಟಗಾರರಲ್ಲಿ ಹಾಗೂ ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚಿಸುತ್ತದಲ್ಲದೆ, ಪಂದ್ಯದ ರೋಚಕತೆಯನ್ನೂ ಇಮ್ಮಡಿಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಪುರಸ್ಕಾರದಲ್ಲೂ ಏರಿಕೆ: ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ, ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಳುಗಳಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರದ ಮೊತ್ತವನ್ನೂ ಹೆಚ್ಚಿಸಲಾಗಿದೆ. ಹಾಗಾಗಿ, ಈ ಬಾರಿಯ ಎಚ್ಐಎಲ್ ಟೂರ್ನಿಯು ಒಟ್ಟಾರೆ ಬಹುಮಾನ ಮೊತ್ತ ರು. 5.7 ಕೋಟಿಯಷ್ಟಾಗಿದೆ. ಇದಲ್ಲದೆ, ಸರಣಿ ಶ್ರೇಷ್ಠ, ಪಂದ್ಯಶ್ರೇಷ್ಠ ಮುಂತಾದ ಪ್ರಶಸ್ತಿಗಳಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರವೂ ಹೆಚ್ಚಾಗಿದೆ.
ಪ್ರಾಯೋಜಕತ್ವ ಬದಲು: ಪಂದ್ಯಾವಳಿಯ ಮೊದಲ ಮೂರು ಆವೃತ್ತಿಗೆ ಹೀರೋ ಕಂಪನಿ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಈ ಬಾರಿಯ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಕೋಲ್ ಇಂಡಿಯಾ ಲಿಮಿಟೆಡ್‍ಗೆ ಸಿಕ್ಕಿದೆ. ಹೀಗಾಗಿ, ಹೀರೋ ಹಾಕಿ ಇಂಡಿಯಾ ಲೀಗ್ ಎಂದಿದ್ದ ಟೂರ್ನಿಯ ಹೆಸರು ಈಗ ಕೋಲ್ ಇಂಡಿಯಾ ಹಾಕಿ ಇಂಡಿಯಾ ಲೀಗ್ ಎಂದು ಬದಲಾಗಿದೆ.
ಹಾಲಿ ಚಾಂಪಿಯನ್ ರಾಂಚಿ ರೇಸ್: ಕಳೆದ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ವಾರಿಯರ್ಸ್ ತಂಡವನ್ನು ಮಣಿಸುವ ಮೂಲಕ ರಾಂಚಿ ರೇಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು. ಅಂದಹಾಗೆ, ಇದು ಆ ತಂಡದ 2ನೇ ಚಾಂಪಿಯನ್ ಪಟ್ಟ. 2013ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲೇ ಆ ತಂಡ ಚಾಂಪಿಯನ್ ಪಟ್ಟ ಗಳಿಸಿತ್ತು. ಭಾರತೀಯ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈ ತಂಡದ ಸಹ ಮಾಲೀಕರಾಗಿರುವುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


