ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ 2ನೇ ಪಂದ್ಯ: ಟಾಸ್ ಗೆದ್ದ ಭಾರತ ಬ್ಯಾಟಿಂಗ್, 6 ರನ್‌ಗೆ ಧವನ್ ಔಟ್

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ...

ಆಸ್ಟ್ರೇಲಿಯಾ ವಿರುದ್ಧ 2ನೇ ಪಂದ್ಯ: ಟಾಸ್ ಗೆದ್ದ ಭಾರತ ಬ್ಯಾಟಿಂಗ್, 6 ರನ್‌ಗೆ ಧವನ್ ಔಟ್
ಶಿಖರ್ ಧವನ್
Published On :

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಆಟಗಾರ ಶಿಖರ್ ಧವನ್ ಮತ್ತೆ ಒಂದಂಕ್ಕಿಗೆ ಔಟಾಗಿ ನಿರಾಶೆ ಮೂಡಿಸಿದರು. ಸದ್ಯ ರೋಹಿತ್ ಶರ್ಮಾ 51 ರನ್ ಹಾಗೂ ವಿರಾಟ್ ಕೊಹ್ಲಿ 40 ರನ್ ಗಳಿಸಿ ಆಟವಾಡುತ್ತಿದ್ದಾರೆ. 20 ಓವರ್ ಗಳ ಮುಕ್ತಾಯ 1 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.

ಆಸ್ಟ್ರೇಲಿಯಾ ಪರ ಪ್ಯಾರಿಸ್ 1 ವಿಕೆಟ್ ಪಡೆದಿದ್ದಾರೆ.

ಏಕದಿನ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಮೊದಲ ಏಕದಿನ ಪಂದ್ಯದಲ್ಲಿಯೂ ಅಮೋಘ ಬ್ಯಾಟಿಂಗ್ ನಡೆಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತಾದರೂ, ಬೌಲಿಂಗ್‍ನಲ್ಲಿ ಎಡವಿದ್ದರಿಂದ 5 ವಿಕೆಟ್ ಸೋಲು ಅನುಭವಿಸಿತ್ತು. ಇದಕ್ಕೆ ಪೂರಕವಾಗಿ ಎಂಬಂತೆ ಮೊದಲ ಪಂದ್ಯದಲ್ಲಿ ಭರ್ಜರಿ 171 ರನ್‍ಗಳನ್ನು ಸಿಡಿಸಿದ್ದ ಆರಂಭಿಕ ರೋಹಿತ್ ಶರ್ಮಾ, 'ಭಾರತ ತಂಡವು ಉತ್ತಮ ದರ್ಜೆಯ ಬೌಲರ್ಗಳನ್ನು ಹೊಂದಿದ್ದರೂ, ಇನಿಂಗ್ಸ್‍ನ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‍ಗಳನ್ನು ತ್ವರಿತವಾಗಿ ಪಡೆಯದೇ ಇರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ'' ಎಂದಿದ್ದಾರೆ.

ನಾಲ್ವರು ವೇಗಿಗಳಿಗೆ ಮಣೆ?: ಭಾರತ ತಂಡದ ನಾಯಕ ಎಂ. ಎಸ್. ಧೋನಿಗೆ ಬೌಲಿಂಗ್ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಅದನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಾರೆ ಎಂಬುದರ ಮೇಲೆ ಈ ಸರಣಿಯ ಫಲಿತಾಂಶ ನಿರ್ಧರಿತವಾಗಲಿದೆ. ಚೊಚ್ಚಲ ಪಂದ್ಯದಲ್ಲೇ ವೇಗಿ ಬರೀಂದರ್ ಸ್ರನ್ ತೋರಿದ ಮಿಂಚಿನ ಪ್ರದರ್ಶನವು ಚೇತೋಹಾರಿ ಎನಿಸಿದರೂ, ನಿರ್ಣಾಯಕ ಘಟ್ಟದಲ್ಲಿ ಸ್ಪಿನ್ನರ್‍ಗಳು ಎಡವಿದ್ದರು. 'ನಮ್ಮ ಸ್ಪಿನ್ನರ್‍ಗಳ ವೈಫಲ್ಯದಿಂದಲೇ ನಾವು ಪರ್ತ್ ಪಂದ್ಯವನ್ನು ಸೋಲಬೇಕಾಯಿತು'' ಎಂದು ಧೋನಿ ಕೂಡಾ ಪ್ರತಿಕ್ರಿಯಿಸಿದ್ದರು. ಹೀಗಾಗಿ ಇಶಾಂತ್ ಶರ್ಮಾ ನಾಲ್ವರು ವೇಗಿಗಳನ್ನು ಎರಡನೇ ಪಂದ್ಯಕ್ಕೆ ಬಳಸಿಕೊಳ್ಳಲು ಧೋನಿ ಚಿಂತಿಸುತ್ತಿದ್ದಾರೆ. ಹಾಗೇನಾದರೂ ಆದರೆ, ರಿಶಿ ಧವನ್ ಗೆ ಅಂತಿಮ ಇಲೆವೆನ್‍ನಲ್ಲಿ ಸ್ಥಾನ ಸಿಕ್ಕಿದರೂ ಅಚ್ಚರಿ ಪಡಬೇಕಿಲ್ಲ. ಈ ಮಧ್ಯೆ ಇಶಾಂತ್ ಶರ್ಮಾ ಚೇತರಿಕೆ ಕಂಡಿದ್ದು ಅವರು ಎರಡನೇ ಪಂದ್ಯಕ್ಕೆ ಲಭ್ಯವಾಗಿರುವುದು ಭಾರತ ಪಾಳಯದಲ್ಲಿ ತುಸು ಸಮಾಧಾನ ತರಿಸಿದೆ. ಇನ್ನು ಬ್ಯಾಟಿಂಗ್‍ನಲ್ಲಿ ಸದ್ಯ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಶಿಖರ್ ಧವನ್ ಫಾರ್ಮ್ ಗೆ ಮರಳಬೇಕಾಗಿದ್ದರೆ, ಮಧ್ಯಮ ಕ್ರಮಾಂಕದಲ್ಲಿಯೂ ದಿಟ್ಟ ಬ್ಯಾಟಿಂಗ್ ಹೊರಹೊಮ್ಮುವಂತೆ ನೋಡಿಕೊಳ್ಳಬೇಕಿದೆ.

ಖವಾಜಾಗೆ ಸ್ಥಾನ?: ಆರಂಭಿಕ ಡೇವಿಡ್ ವಾರ್ನರ್ ಅಲಭ್ಯತೆಯ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಆರಂಭಿಕ ಉಸ್ಮಾನ್ ಖವಾಜಾಗೆ ಆಸ್ಟ್ರೇಲಿಯಾದ ಅಂತಿಮ ಇಲೆವೆನ್ ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಉತ್ತಮ ಬ್ಯಾಟ್ಸ್ ಮನ್ ಆಗಿರುವ ಖವಾಜಾ ಭಾರತ ವಿರುದ್ಧ ಆಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರೆ, ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಏರಾನ್ ಫಿಂಚ್ ಎರಡನೇ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ನಾಯಕ ಸ್ಟೀವನ್ ಸ್ಮಿತ್ ಅಂತೂ ಇಡೀ ತಂಡದ ಹೊರೆಯನ್ನು ಒಬ್ಬಂಟಿಯಾಗಿ ಹೊತ್ತುಕೊಳ್ಳುವಷ್ಟು ಸಮರ್ಥರಿದ್ದು, ಇವರ ಜತೆಗೆ ಮತ್ತೆ ಬೇಯ್ಲಿ ಆರ್ಭಟಿಸಿದರೆ ಆಸ್ಟ್ರೇಲಿಯಾ ಬಲವಾದ ಇನ್ನಿಂಗ್ಸ್ ಕಟ್ಟಲು ಅಡ್ಡಿಯಾಗದು. ಆದರೆ, ಮಿಚೆಲ್ ಮಾರ್ಶ್ ಇತ್ತೀಚೆಗೆ ನಿವೃತ್ತಿಯಾಗಿದ್ದರೆ, ಮಿಚೆಲ್ ಸ್ಟಾರ್ಕ್ ಗಾಯಾಳುವಾಗಿ ಸರಣಿಗೆ ಅಲಭ್ಯವಾಗಿರುವುದು ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿದೆ. ಪ್ರವಾಸಿ ಭಾರತ ಇದರ ಸದುಪಯೋಗ ಪಡೆಯಬೇಕಷ್ಟೆ.

ಬ್ಯಾಟ್ಸ್ ಮನ್ ಸ್ನೇಹಿ ಪಿಚ್: ಗಾಬಾ ಪಿಚ್ ಸಹ ಬ್ಯಾಟ್ಸ್ಮನ್ ಸ್ನೇಹಿಯಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಜೇಮ್ಸ್ ಫಾಕ್ನರ್ ಹೇಳಿದ್ದಾರೆ. ಎರಡನೇ ಏಕದಿನ ಪಂದ್ಯಕ್ಕೂ ಮುನ್ನಾ ದಿನವಾದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಡ್ನಿಗಿಂತಲೂ ಈ ಪಿಚ್ ಹೆಚ್ಚು ಸಮತಟ್ಟಾಗಿರುವುದರಿಂದ ಎರಡೂ ತಂಡಗಳ ಬ್ಯಾಟ್ಸ್ಮನ್ಗಳಿಗೆ ರನ್ ಹೊಳೆ ಹರಿಸಲು ಅನುಕೂಲವಾಗು ತ್ತದೆ. ಮೊದಲು ಬ್ಯಾಟ್ ಮಾಡುವ ತಂಡಕ್ಕೆ 300ಕ್ಕೂ ಹೆಚ್ಚು ಮೊತ್ತ ದಾಖಲಿಸಲು ನೆರವಾಗಲಿದೆ'' ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.