ಬಲಿಷ್ಠ ದ. ಆಫ್ರಿಕಾ ವಿರುದ್ಧ ಹಿಂದಡಿ ಇಡೆವು
ಕಳೆದ ಕೆಲ ತಿಂಗಳಲ್ಲಿ ಹಿರಿಯ ಆಟಗಾರರ ನಿವೃತ್ತಿ ನಂತರವೂ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದ್ದು, ಭಾರತ ಪ್ರವಾಸದಲ್ಲಿ ಆಕ್ರಮಣಕಾರಿ ಆಟವಾಡುವ ಸಾಮರ್ಥ್ಯ...

ಬೆಂಗಳೂರು: ಕಳೆದ ಕೆಲ ತಿಂಗಳಲ್ಲಿ ಹಿರಿಯ ಆಟಗಾರರ ನಿವೃತ್ತಿ ನಂತರವೂ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದ್ದು, ಭಾರತ ಪ್ರವಾಸದಲ್ಲಿ ಆಕ್ರಮಣಕಾರಿ ಆಟವಾಡುವ ಸಾಮರ್ಥ್ಯ ಹೊಂದಿದೆ. ಅಂದಮಾತ್ರಕ್ಕೆ ಭಾರತ ತಂಡ ಸರಣಿಯಲ್ಲಿ ಅದರ ವಿರುದ್ಧ ಹಿಂದಡಿ ಇಡುವ ಮಾತೇ ಇಲ್ಲ ಎಂದು ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಹರಿಣಗಳನ್ನು ಮುನ್ನೆಚ್ಚರಿಸಿದ್ದಾರೆ.
ಶುಕ್ರವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿದ ರವಿಶಾಸ್ತ್ರಿ, ದಕ್ಷಿಣ ಆಫ್ರಿಕಾ ತಂಡ ಹೇಗಿದೆ ಎಂದರೆ, ಸಚಿನ್, ಲಕ್ಷ್ಮಣ್ ಮತ್ತು ಅನಿಲ್ ಕುಂಬ್ಳೆ ಇಲ್ಲದ ಭಾರತ ತಂಡದಂಥ ಪರಿಸ್ಥಿತಿಯಲ್ಲಿದೆ. ತಂಡಕ್ಕೆ ಆಟಗಾರರು ಬರುತ್ತಾರೆ ಹೋಗುತ್ತಾರೆ. ಆದರೆ, ಆ ತಂಡವನ್ನು ಲಘುವಾಗಿ ಪರಿಗಣಿಸದೇ ಗೌರವಿಸಬೇಕು. ಹರಿಣಗಳ ತಂಡ ಪ್ರಬಲವಾಗಿದೆ.
ವಿಶ್ವದ ಇತರೆ ತಂಡಗಳಿಗಿಂತ ದಕ್ಷಿಣ ಆಫ್ರಿಕಾ ತಂಡ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಅದರ ಬಲಾಢ್ಯತೆಗೆ ಸಾಕ್ಷಿ. ಆ ತಂಡ ಇತರೆ ತಂಡಗಳಿಗಿಂತ ಹೆಚ್ಚು ವಿದೇಶಿ ಪ್ರವಾಸ ಮಾಡಿದ್ದು, ಅತ್ಯುತ್ತಮ ಫಲಿತಾಂಶ ಪಡೆದಿದೆ. ಇಷ್ಟೆಲ್ಲದರ ಮಧ್ಯೆಯೂ ಭಾರತ ತಂಡ ಸರಣಿಯಲ್ಲಿ ಅದಕ್ಕೆ ದಿಟ್ಟ ಉತ್ತರವನ್ನೇ ನೀಡುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧೋನಿ ಸಮರ್ಥ ನಾಯಕ
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋತ ನಂತರದ ಸರಣಿಗೆ ಅಣಿಯಾಗಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ, ಧೋನಿ ನಾಯಕತ್ವದಲ್ಲಿ ತಂಡ ಕಣಕ್ಕಿಳಿಯುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆತ ಒಬ್ಬ ದಂತಕತೆ, ಕೇವಲ ಭಾರತ ಮಾತ್ರವಲ್ಲ ವಿಶ್ವ ಕ್ರಿಕೆಟ್‍ನ ಸಾರ್ವಕಾಲಿಕ ಶ್ರೇಷ್ಠ ನಾಯಕರ ಪಟ್ಟಿಯಲ್ಲಿರುವ ಆಟಗಾರ. ಧೋನಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ವಿಶ್ವಕಪ್‍ನಲ್ಲಿ ಧೋನಿ ನಾಯಕತ್ವದಲ್ಲೇ ಭಾರತ ಕಣಕ್ಕಿಳಿಯಲಿದೆ'' ಎಂದು ಧೋನಿ ಪರ ಬ್ಯಾಟಿಂಗ್ ನಡೆಸಿದರು.
ಯಾರಿಗೂ ನಿಶ್ಚಿತ ಕ್ರಮಾಂಕವಿಲ್ಲ
ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವ ಆಟಗಾರನಿಗೂ ನಿರ್ದಿಷ್ಟ ಕ್ರಮಾಂಕ ಖಚಿತವಾಗಿಲ್ಲ. ತಂಡಕ್ಕೆ ಅಗತ್ಯ ಬಿದ್ದಾಗ ಎಲ್ಲ ಆಟಗಾರರು ಯಾವುದೇ ಕ್ರಮಾಂಕದಲ್ಲಾದರೂ ಆಡಲು ಸಿದ್ಧರಿರಬೇಕಿದೆ. ಈ ರೀತಿಯಾದಂತಹ ಪರಿಸ್ಥಿತಿಗಳು ಅನಿರೀಕ್ಷಿತವಾಗಿವೆ. ಇದಕ್ಕೆ ಆಟಗಾರರು ಸಿದ್ಧರಾಗಿದ್ದಾರೆ. ಇಲ್ಲವಾಗಿದ್ದರೆ, ವಿಜಯ್ ಹಾಗೂ ಧವನ್ ಗಾಯಗೊಂಡಾಗ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ'' ಎಂದರು. ಅಂತೆಯೇ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಿರ್ದೇಶಕ, ಪಂದ್ಯದ ದಿನ ಪರಿಸ್ಥಿತಿಗೆ ತಕ್ಕಂತೆ ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬ ನಿರ್ಧಾರವನ್ನು ನಾಯಕ ಧೋನಿ ತೆಗೆದುಕೊಳ್ಳಲಿದ್ದಾರೆ. ಅಲ್ಲದೆ ಧೋನಿ ಕ್ರಮಾಂಕದಲ್ಲಿ ಬಡ್ತಿ ಪಡೆಯುವುದನ್ನು ಅವರೇ ನಿರ್ಧರಿಸಲಿದ್ದಾರೆ'' ಎಂದರು.
ಪರಿಸ್ಥಿತಿಗೆ ತಕ್ಕ ತಂತ್ರಗಾರಿಕೆ: ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರ ಐವರು ಬೌಲರ್‍ಗಳ ತಂತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿರಾಟ್ ಕೊಹ್ಲಿ ಅವರ ತಂತ್ರಗಾರಿಕೆ ಶಾಶ್ವತ ನಿರ್ಧಾರವಲ್ಲ. ನಮ್ಮೆದುರಿನ ತಂಡದ ಬಲಾಬಲ ಹಾಗೂ ಸರಣಿಯಲ್ಲಿನ ವಾತಾವರಣ ಹಾಗೂ ತಂಡದ ಹೊಂದಾಣಿಕೆ ಆಧಾರದ ಮೇಲೆ ತಂತ್ರಗಾರಿಕೆ ಬದಲಾಗುತ್ತದೆ. ಕ್ರಿಕೆಟ್‍ನಂತಹ ಕ್ರೀಡೆಯಲ್ಲಿ ಇಂಥದ್ದೇ ತಂಡದೊಂದಿಗೆ ಕಣಕ್ಕಿಳಿಯುತ್ತೇನೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ಬದಲಾದಾಗ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ'' ಎಂದರು.
ಪ್ರತಿಭಾನ್ವೇಷಣೆಗೆ ದ್ರಾವಿಡ್ ಜತೆ ಚರ್ಚೆ
ಭಾರತ ತಂಡದ ಬೆಂಚ್ ಬಲವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿರುವುದಾಗಿ ಶಾಸ್ತ್ರಿ ಇದೇ ವೇಳೆ ತಿಳಿಸಿದರು. ನಮ್ಮಲ್ಲಿ ಉತ್ತಮ ಆಟಗಾರರಿದ್ದು ಬಲಿಷ್ಠ ಬೆಂಚ್ ಸ್ಟ್ರೆಂತ್ ಇದೆ. ಹಾಗಾಗಿ ಪ್ರತಿಭಾವಂತ ಆಟಗಾರರ ಬಗ್ಗೆ ರಾಹುಲ್ ದ್ರಾವಿಡ್ ಜತೆ ಶೀಘ್ರದಲ್ಲೇ ಚರ್ಚೆ ನಡೆಸುತ್ತೇನೆ. ಕೇವಲ ಹೆಚ್ಚಿನ ರನ್ ಮತ್ತು ವಿಕೆಟ್‍ಗಳಿಂದ ಆಟಗಾರರ ಸಾಮರ್ಥ್ಯವನ್ನು ಅಳೆಯಲಾಗದು. ಒಂದು ವೇಳೆ ಹೆಚ್ಚು ರನ್ ಹಾಗೂ ವಿಕೆಟ್ ಪಡೆಯದಿದ್ದರೂ ಉನ್ನತ ಮಟ್ಟದ ಕ್ರಿಕೆಟ್‍ಗೆ ಸಜ್ಜಾಗಿರುವ ಆಟಗಾರನ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ. ಕಳೆದ ಕೆಲ ಸಮಯದಿಂದ ದ್ರಾವಿಡ್ ತಂಡದೊಂದಿಗೆ ಇರುವುದರಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ'' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


