ಸರಣಿ ಸತ್ವಪರೀಕ್ಷೆಯಲ್ಲಿ ಧೋನಿ ಪಡೆ
ಪ್ರತಿಷ್ಠಿತ ಫ್ರೀಡಂ ಟ್ರೋಫಿ ಕ್ರಿಕೆಟ್ ಸರಣಿಯ ಪೇಟಿಎಂ ಏಕದಿನ ಸರಣಿಯನ್ನು ಉಳಿಸಿಕೊಳ್ಳಲು ಭಾರತದ ಪಾಲಿಗೆ ಅತಿ ಮಹತ್ವಪೂರ್ಣವೆನಿಸಿರುವ ಪ್ರವಾಸಿ...

ಚೆನ್ನೈ: ಪ್ರತಿಷ್ಠಿತ ಫ್ರೀಡಂ ಟ್ರೋಫಿ ಕ್ರಿಕೆಟ್ ಸರಣಿಯ ಪೇಟಿಎಂ ಏಕದಿನ ಸರಣಿಯನ್ನು ಉಳಿಸಿಕೊಳ್ಳಲು ಭಾರತದ ಪಾಲಿಗೆ ಅತಿ ಮಹತ್ವಪೂರ್ಣವೆನಿಸಿರುವ ಪ್ರವಾಸಿ ದ.ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವು ಗುರುವಾರ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಜರುಗಲಿದ್ದು, ಎಂ.ಎಸ್. ಧೋನಿ ಸಾರಥ್ಯದ ಭಾರತ ತಂಡಕ್ಕೆ ಸತ್ವಪರೀಕ್ಷೆ ಎದುರಾಗಿದೆ.
ಬ್ಯಾಟಿಂಗ್‍ನಲ್ಲಿ ಅಸ್ಥಿರ ಪ್ರದರ್ಶನದಿಂದ ಕಂಗೆಟ್ಟಿರುವ ಧೋನಿ ಪಡೆ ಒಂದೊಮ್ಮೆ ಈ ಪಂದ್ಯದಲ್ಲೇನಾದರೂ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡರೆ ಪ್ರವಾಸಿಗರು ಏಕದಿನ ಸರಣಿಯನ್ನೂ ತಮ್ಮ ಮಡಿಲಿಗೆ ಹಾಕಿಕೊಳ್ಳುವುದು ನಿಶ್ಚಯವಾಗಲಿದೆ. ಈಗಾಗಲೇ ಮೂರು ಟಿ20 ಪಂದ್ಯ ಸರಣಿಯನ್ನು 2-0 ಅಂತರದಿಂದ ಗೆದ್ದು ಬೀಗಿರುವ ಹರಿಣಗಳು ಇದೀಗ ಏಕದಿನ ಸರಣಿಯ ಮೇಲೂ ಕಣ್ಣಿಟ್ಟಿದೆ. ಭಾರತದ ವಿರುದ್ಧ ಈ ಪಂದ್ಯದಲ್ಲಿ ಜಯಿಸಿದ್ದೇ ಆದಲ್ಲಿ ದ.ಆಫ್ರಿಕಾ ಮೊಟ್ಟಮೊದಲ ಬಾರಿಗೆ ಭಾರತದ ವಿರುದ್ಧ ಭಾರತದ ನೆಲದಲ್ಲಿ ದ್ವಿಪಕ್ಷೀಯ ಸರಣಿಯನ್ನು ಗೆದ್ದಂತಾಗಲಿದೆ.
ಮೊದಲ ಪಂದ್ಯದಲ್ಲಿ 5 ರನ್ ಸೋಲುಂಡ ಭಾರತ, ಎರಡನೇ ಪಂದ್ಯದಲ್ಲಿ 22 ರನ್ ಗೆಲುವಿನೊಂದಿಗೆ ಪುಟಿದೆದ್ದು ನಿಂತಿತ್ತು. ಆದರೆ, ರಾಜ್ ಕೋಟ್‍ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮಾರ್ನಿ ಮಾರ್ಕೆಲ್ ಅವರ ಪ್ರಚಂಡ ಬೌಲಿಂಗ್ ದಾಳಿಯಿಂದಾಗಿ 18 ರನ್ ಸೋಲನುಭವಿಸಿದ ಧೋನಿ ಬಳಗ ಮತ್ತೆ ಒತ್ತಡಕ್ಕೆ ಸಿಲುಕಿಕೊಂಡಿದೆ.ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳೆರಡರಲ್ಲಿಯೂ ಸಮತೋಲಿತ ಪ್ರದರ್ಶನ ನೀಡುತ್ತಾ ಸಾಗಿರುವ ಎಬಿಡಿವಿಲಿಯರ್ಸ್ ಸಾರಥ್ಯದ ದ.ಆಫ್ರಿಕಾ ತಂಡ, ಮತ್ತೊಂದು ಗೆಲುವಿಗಾಗಿ ತಹತಹಿಸುತ್ತಿದೆ.
ಅಂದಹಾಗೆ ಭಾರತ ತಂಡದಲ್ಲಿ ಏಕೈಕ ಬದಲಾವಣೆಯಷ್ಟೇ ಆಗಿದೆ.ಉಮೇಶ್ ಯಾದವ್ ಬದಲಿಗೆ ಕನ್ನಡಿಗ ಎಸ್. ಅರವಿಂದ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು, ಒಂದೊಮ್ಮೆ ಅವರೇನಾದರೂ ಅಂತಿಮ ಇಲೆವೆನ್‍ನಲ್ಲಿ ಆಡುವಂತಾದರೆ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಕಾಲಿರಿಸಿದಂತಾಗಲಿದೆ.
ಈ ಮೈದಾನದಲ್ಲಿ ಭಾರತ ಕೊನೆಯ ಪಂದ್ಯವನ್ನಾಡಿದ್ದು 2012ರ ಡಿಸೆಂಬರ್ ನಲ್ಲಿ. ಅದೂ ತನ್ನ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಸೋಲನುಭವಿಸಿತ್ತು.
ದಿಗಿಲು ಹುಟ್ಟಿಸಿದ ಬ್ಯಾಟಿಂಗ್
ಕಳೆದ ಮೂರೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ವಿಜೃಂಭಿಸಿಲ್ಲ. ಪ್ರಮುಖವಾಗಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೊದಲೆರಡು ಪಂದ್ಯಗಳಲ್ಲಿ ದಯನೀಯ ಪ್ರದರ್ಶನ ನೀಡಿದ್ದರು. ಆದಾಗ್ಯೂ ರಾಜ್‍ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ 77 ರನ್ ದಾಖಲಿಸಿ ತಂಡದ ಪರ ಗರಿಷ್ಠ ಸ್ಕೋರ್‍ಧಾರಿ ಎನಿಸಿದ್ದರು. ಅವರು ಫಾರ್ಮ್ ಗೆ ಮರಳಿರುವುದು ಭಾರತದ ಪಾಲಿಗೆ ಆಶಾದಾಯಕ ಬೆಳವಣಿಗೆ ಎನಿಸಿದೆ. ಇನ್ನುಳಿದಂತೆ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ನಾಯಕ ಧೋನಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದರೂ, ಸುರೇಶ್ ರೈನಾ ಅವರ ವೈಫಲ್ಯ ಚಿಂತೆಗೀಡುಮಾಡಿದೆ.
ಇತ್ತ ಬೌಲಿಂಗ್‍ನಲ್ಲಿ ವೇಗಿ ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮಾ ಸಾಧ್ಯವಾದಷ್ಟೂ ಉತ್ತಮ ಪ್ರದರ್ಶನ ನೀಡಲು ಶ್ರಮಿಸುತ್ತಿದ್ದರೆ, ಹರ್ಭಜನ್ ಸಿಂಗ್ ಹಾಗೂ ಬೆಂಗಳೂರು ಪೊಲೀಸರಿಂದ ಗೆಳತಿಯ ಮೇಲಿನ ಹಲ್ಲೆಗಾಗಿ ನೋಟಿಸು ಪಡೆದಿರುವ ಅಮಿತ್ ಮಿಶ್ರಾ ಸ್ಪಿನ್ ವಲಯವನ್ನು ಬಲಿಷ್ಠಗೊಳಿಸಿದ್ದಾರೆ.
ಡುಮಿನಿ ಅಲಭ್ಯತೆ
ಈ ಮಧ್ಯೆ ಪ್ರವಾಸಿ ತಂಡ ಪ್ರಮುಖ ಆಟಗಾರನ ಅಲಭ್ಯತೆಯಲ್ಲಿ ಈ ಪಂದ್ಯದಲ್ಲಿ ಆಡಲು ಮುಂದಾಗಿದೆ. ಆಲ್‍ರೌಂಡ್ ಕ್ರಿಕೆಟಿಗ ಜೆಪಿ ಡುಮಿನಿ ಗಾಯದ ನಿಮಿತ್ತ ಕೊನೆಯ ಎರಡೂ ಪಂದ್ಯಕ್ಕೆ ಅಲಭ್ಯವಾಗಿರುವುದು ತಂಡದ ಚಿಂತೆಗೆ ಕಾರಣವಾಗಿದ್ದರೆ, ವೇಗಿ ಮಾರ್ನಿ ಮಾರ್ಕೆಲ್ ಕೂಡ ಗಾಯಕ್ಕೆ ಸಿಲುಕಿದ್ದಾರೆ. ಅವರು ಗುರುವಾರದ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದಂತೂ ಖಚಿತವಾಗಿಲ್ಲ. ಒಂದೊಮ್ಮೆ ಮಾರ್ಕೆಲ್ ದೈಹಿಕವಾಗಿ ಶೇ.100ರಷ್ಟು ಫಿಟ್ ಆಗದೆ ಹೋದರೆ ಅದು ತಂಡದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಾಶೀಂ ಆಮ್ಲಾಲ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವುದು ದ.ಆಫ್ರಿಕಾದ ಬ್ಯಾಟಿಂಗ್‍ನಲ್ಲಿನ ಅಲ್ಪಪ್ರಮಾಣದ ಏರಿಳಿತಕ್ಕೆ ಕಾರಣವಾಗಿದೆ.ಅಂತೆಯೇ ಮೊದಲ ಪಂದ್ಯವನ್ನು ಹೊರತುಪಡಿಸಿ ಕಳೆದೆರಡು ಪಂದ್ಯಗಳಲ್ಲಿಯೂ ಬೇಗೆನೆ ವಿಕೆಟ್ ಒಪ್ಪಿಸಿರುವ ಎಬಿ ಡಿವಿಲಿಯರ್ಸ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟುವುದರೊಂದಿಗೆ ಭಾರತಕ್ಕೆ ಭಾರೀ ಸವಾಲಾಗಲು ಸಜ್ಜಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


