ಒತ್ತಡ ಮೆಟ್ಟಿ ನಿಲ್ಲುವುದೇ ಟೀಮ್ ಇಂಡಿಯಾ?
ದ.ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಏಕದಿನ ಪಂದ್ಯವು ಬುಧವಾರ ನಡೆಯಲಿದ್ದು, ಸತತ ಮೂರು ಪಂದ್ಯಗಳ ಸೋಲಿನ ಒತ್ತಡವನ್ನು ಟೀಂ ಇಂಡಿಯಾ ಮೆಟ್ಟಿನಿಲ್ಲುವುದೋ ಎಂಬ ಪ್ರಶ್ನೆ ಉದ್ಭವವಾಗಿದೆ...

ನಾಯಕ ಮಹೇಂದ್ರ ಸಿಂಗ್ ವೃತ್ತಿಬದುಕಿನ ಮತ್ತೊಂದು ಸಂದಿಗ್ಧ ಕಾಲದಂತಿರುವ ಪ್ರವಾಸಿ ದ.ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಏಕದಿನ ಪಂದ್ಯವು ಬುಧವಾರ ನಡೆಯಲಿದ್ದು, ಸತತ ಮೂರು ಪಂದ್ಯಗಳ ಸೋಲಿನ ಒತ್ತಡವನ್ನು ಟೀಂ ಇಂಡಿಯಾ ಮೆಟ್ಟಿನಿಲ್ಲುವುದೋ ಎಂಬ ಪ್ರಶ್ನೆ ಉದ್ಭವವಾಗಿದೆ.
ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಆತಿಥೇಯ ಭಾರತ ತಂಡದ ಪಾಲಿಗೆ ಮತ್ತೊಂದು ಬಗೆಯಲ್ಲಿ ಅಗ್ನಿಪರೀಕ್ಷೆಯಂತಿದೆ. ಅದಾಗ್ಯೂ ಈ ಮೈದಾನದಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಭಾರತ ತಂಡ, ಮತ್ತೊಂದು ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದರೂ, ಪ್ರಚಂಡ ಫಾರ್ಮ್ ನಲ್ಲಿರುವ ದ.ಆಫ್ರಿಕಾ ಧೋನಿ ಪಡೆಯ ಆತ್ಮವಿಶ್ವಾಸವನ್ನು ಕೆಣಕಲು ಸನ್ನದ್ಧವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ತೀವ್ರವಾಗಿ ಗಾಯಗೊಂಡು ಸರಣಿಯಿಂದಲೇ ಹೊರಗುಳಿದಿರುವ ಆರ್. ಅಶ್ವಿನ್ ಅವರ ಅನುಪಸ್ಥಿತಿಯು ಕೂಡ ಭಾರತ ತಂಡದ ಈ ಸಂಕಷ್ಟಕರ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿತೆಂಬ ದಿಗಿಲನ್ನೂ ಸೃಷ್ಟಿಸಿದೆ.
ಈ ಮಧ್ಯೆ ಉಪನಾಯಕ ವಿರಾಟ್ ಕೊಹ್ಲಿ ಮತ್ತು ಧೋನಿ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ತಂಡದ ಸಾಂಘಿಕ ಪ್ರದರ್ಶನದ ಮೇಲೆ ಗಂಬೀರ ಸ್ವರೂಪದ ಪರಿಣಾಮ ಬೀರುತ್ತಿದೆ ಎಂಬ ಮಾತೂ ವ್ಯಕ್ತವಾಗಿದೆ. ಈಗಾಗಲೇ ಟಿ-20 ಪಂದ್ಯದಲ್ಲಿ 2-0 ಅಂತರದಿಂದ ಕೈವಶಮಾಡಿಕೊಂಡಿರುವ ದ. ಆಫ್ರಿಕಾ, ಕಾನ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 5 ರನ್ ರೋಚಕ ಗೆಲುವಿನೊಂದಿಗೆ 5 ಪಂದ್ಯ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ನಾಯಕ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ರೋಹಿತ್ ಶರ್ಮಾ ಸಿಡಿಸಿದ ಶತಕವನ್ನೂ ಮಂಕಾಗಿಸಿತ್ತು.
ಒಂದು ದಿನದ ಕ್ರಿಕೆಟ್‍ನಲ್ಲಿಯಾಗಲಿ ಇಲ್ಲವೇ ಚುಟುಕು ಕ್ರಿಕೆಟ್‍ನಲ್ಲಿಯಾಗಲೀ ಗ್ರೇಟ್ ಫಿನಿಶರ್ ಎಂದೇ ವ್ಯಾಖ್ಯಾನಿಸಲ್ಪಡುತ್ತಿದ್ದ ನಾಯಕ ಧೋನಿ, ಕಾನ್ಪುರ ಪಂದ್ಯದಲ್ಲಿ ಎಡವಿದ್ದು ಅವರ ಸಾಮಥ್ರ್ಯ ಕುಸಿದಿದೆಯೋ ಎಂಬ ಆತಂಕ ತರಿಸಿದೆ. ಆರಂಭಿಕನಾಗಿ ರೋಹಿತ್ ಶರ್ಮಾ ತೋರುತ್ತಿರುವ ಪ್ರದರ್ಶನ ತಂಡದ ಪಾಲಿಗೆ ಆಶಾದಾಯಕವಾಗಿದ್ದರೂ, ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತಿತರರ ಆಟದಿಂದ, ವಿಜಯದ ಗುರಿ ಬೆನ್ನಟ್ಟುವ ಹಾದಿಯಲ್ಲಿ ಭಾರತ ಎಡವುವಂತೆ ಮಾಡಿದೆ. ಈ ಮಧ್ಯೆ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್ಮನ್ ಸುರೇಶ್ ರೈನಾ ರನ್ ಔಟ್ ಆಗುತ್ತಿರುವುದು ಭಾರತದ ಚಿಂತೆ ಹೆಚ್ಚಿಸಿದೆ. ಇದರೊಂದಿಗೆ ಆಲ್‍ರೌಂಡರ್ ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್‍ನಲ್ಲಾಗಲೀ ಇಲ್ಲವೇ ಬೌಲಿಂಗ್‍ನಲ್ಲಾಗಲೀ ನಿರೀಕ್ಷಿತ ಪ್ರದರ್ಶನ ನೀಡದಿರುವುದು ಕೂಡ ತಂಡದ ಬಾಧೆಗಳಲ್ಲಿ ಒಂದಾಗಿದೆ.
ಇಂದಿನ ಬೌಲಿಂಗ್ ವಿಭಾಗದಲ್ಲಿ ಆರ್. ಅಶ್ವಿನ್ ಅಲಭ್ಯತೆಯಂತೂ ಭಾರೀ ಪೆಟ್ಟು ನೀಡಿದೆ. ಅವರ ಬಲಿಷ್ಠ ಸ್ಥಾನಕ್ಕೆ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಸ್ಪಿನ್ ವಲಯವನ್ನು ಸದೃಢಗೊಳಿಸಲು ಕಾರ್ಯೋನ್ಮುಖರಾಗಿದ್ದಾರೆ. ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿರುವ ಅಮಿತ್ ಮಿಶ್ರಾ ಭಾರತಕ್ಕೆ ಎಷ್ಟರಮಟ್ಟಿಗೆ ನೆರವಿಗೆ ಬರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.ಕಾನ್ಪುರ ಪಂದ್ಯದಲ್ಲಿ ಮೊಣಕಾಲು ನೋವಿನಿಂದ ಮೈದಾನ ತ್ಯಜಿಸಿದ ಡು ಪ್ಲೆಸಿಸ್ ಒಂದೊಮ್ಮೆ ದೈಹಿಕವಾಗಿ ಕ್ಷಮತೆ ಹೊಂದಿಲ್ಲದಿದ್ದರೆ,
ಅವರ ಸ್ಥಾನದಲ್ಲಿ ಡೇವಿಡ್ ಮಿಲ್ಲರ್ ಸ್ಥಾನ ಪಕ್ಕಾ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


