ವಿಶ್ವಕಪ್ ಗುಂಗಿನಲ್ಲಿ ಚುಟುಕು ಕಾದಾಟ
ಪ್ರತಿಷ್ಠಿತ ಗಾಂಧಿ-ಮಂಡೇಲಾ ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ನಡೆಯಲಿರುವ ಮೊದಲ ಚುಟುಕು ಪಂದ್ಯ...

ಧರ್ಮಶಾಲಾ: ಪ್ರತಿಷ್ಠಿತ ಗಾಂಧಿ-ಮಂಡೇಲಾ ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ನಡೆಯಲಿರುವ ಮೊದಲ ಚುಟುಕು ಪಂದ್ಯದೊಂದಿಗೆ ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಸುದೀರ್ಘ ಕ್ರಿಕೆಟ್ ಸರಣಿಗೆ ಚಾಲನೆ ಸಿಗಲಿದೆ.
ಮುಂದಿನ 72 ದಿನಗಳ ಸುದೀರ್ಘ ಕಾಲದ ಕ್ರಿಕೆಟ್ ಪಂದ್ಯಾವಳಿಗೆ ನಯನ ಮನೋಹರದಿಂದ ಕೂಡಿರುವ ಹಿಮಚ್ಛಾದಿತ ತಾಣ ಮುನ್ನಡಿ ಬರೆಯಲಿದೆ. ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯವು ಉಭಯರ ಪಾಲಿಗೆ ಮಹತ್ವಪೂರ್ಣವೆನಿಸಿದೆ.
ಮುಂದಿನ ವರ್ಷ ಮಾರ್ಚ್ -ಏಫ್ರಿಲ್ ತಿಂಗಳಿನಲ್ಲಿ ಟಿ-20 ಪಂದ್ಯಾವಳಿಯ ದಿಸೆಯಲ್ಲಿ ಸರಣಿಯಲ್ಲಿ ಶುಭಾರಂಭಗೈಯಲು ಉಭಯರೂ ಪಣತೊಟ್ಟಿದ್ದಾರೆ. ಮಂಗಳವಾರವಷ್ಟೇ ನಡೆದ ಏಕೈಕ ಅಭ್ಯಾಸ ಪಂದ್ಯದಲ್ಲಿ 8 ವಿಕೆಟ್ ಸೋಲನುಭವಿಸಿದ ಪ್ರವಾಸಿಗರು ಗೆಲುವಿನ ಹಳಿಗೆ ಮರಳಲು ಮುಂದಾಗಿದ್ದಾರೆ. ಚುಟುಕು ಮಾದರಿಯಲ್ಲಿ ದ.ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಫಫ್ ಡು ಪ್ಲೆಸಿಸ್ ಸರಣಿಯಲ್ಲಿ ಶುಭಾರಂಭ ಮಾಡುವ ಗುರಿ ಹೊತ್ತಿದ್ದಾರೆ.
ದ. ಆಫ್ರಿಕಾದ ತಂಡದಲ್ಲಿನ 10 ಮಂದಿ ಆಟಗಾರರು ಐಪಿಎಲ್ನಲ್ಲಿ ಗುರುತಿಸಿಕೊಂಡಿರುವ ನಿಮಿತ್ತ ಭಾರತದ ಪಿಚ್ನ ಸ್ಥಿತಿಗತಿಯನ್ನು ಚೆನ್ನಾಗಿಯೇ ಅರಿತಿದ್ದಾರೆ. ಒಟ್ಟು 8 ಪಂದ್ಯಗಳ ಮುಖಾಮುಖಿಯಲ್ಲಿ ಭಾರತ ಕೇವಲ 2 ಪಂದ್ಯಗಳಲ್ಲಷ್ಟೇ ಸೋತಿರುವುದು ಹರಿಣಗಳ ವಿರುದ್ಧ ಅದರ ಪ್ರಭುತ್ವಕ್ಕೆ ಕನ್ನಡಿ ಹಿಡಿದಿದೆ. ಹಾಗಾಗಿ, ಸಹಜವಾಗಿಯೇ ಧೋನಿ ಪಡೆ ವಿಶ್ವಾಸದಲ್ಲಿದೆ.
ಇತ್ತಂಡಗಳ ನಡುವಿನ ಟಿ20 ಪಂದ್ಯ ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ. ಆತ್ಮವಿಶ್ವಾಸಕ್ಕೆ ಇದೂ ಒಂದು ಕಾರಣ. ಆದರೆ, ವಿವಿಧ ತಂಡಗಳ ವಿರುದ್ಧ ತವರಿನಲ್ಲಿ ಆಡಿರುವ 11 ಪಂದ್ಯಗಳ ಪೈಕಿ ಧೋನಿ ಪಡೆ 5ರಲ್ಲಿ ಮುಗ್ಗರಿಸಿದ್ದರೆ, 5ರಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಪಂದ್ಯ ಫಲಿತಾಂಶ ಕಾಣದಾಗಿದೆ. ಹೀಗಾಗಿ ಹರಿಣಗಳ ವಿರುದ್ಧ ಎಚ್ಚರಿಕೆ ಅತ್ಯಗತ್ಯ.
ಪಂದ್ಯದ ಮುನ್ನಾ ದಿನ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡುಪ್ಲೆಸಿಸ್, ``ಭಾರತದ ಪಿಚ್ಗೆ ಅನುಗುಣವಾಗುವಂಥ ಸಮರ್ಥ ಸ್ಪಿನ್ನರ್ಗಳು ನಮ್ಮಲ್ಲಿದ್ದು, ಪಂದ್ಯವನ್ನು ಗೆಲ್ಲಿಸಿ ಕೊಡುವಷ್ಟು ಪ್ರತಿಭೆ ಹೊಂದಿದ್ದಾರೆ' ಎಂದರು. ಇತ್ತ ಬಾಂಗ್ಲಾದೇಶ ಪ್ರವಾಸದ ಬಳಿಕ ಸುದೀರ್ಘ ವಿಶ್ರಾಂತಿಯಲ್ಲಿದ್ದ ಎಂ.ಎಸ್. ಧೋನಿ ಮತ್ತೊಮ್ಮೆ ಸೀಮಿತ ಓವರ್ಗಳಲ್ಲಿ ತಂಡದ ಸಾರಥ್ಯ ಹೊತ್ತಿದ್ದು, ಇನ್ನೊಮ್ಮೆ ತನ್ನ ಛಾಪು ಮೂಡಿಸಲು ಸನ್ನದ್ಧವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


