ಭಾರತ- ದ. ಆಫ್ರಿಕಾ ಟೆಸ್ಟ್: ಮತ್ತದೇ ಸ್ಪಿನ್ ಮೋಡಿಯ ಉರುಳು
ನಿರೀಕ್ಷೆಯಂತೆಯೇ ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಮೂರನೇ ಟೆಸ್ಟ್ ಪಂದ್ಯ ಕೂಡ ಸ್ಪಿನ್ ಮಯವಾಗಿ ಪರಿವರ್ತಿತವಾಗಿರುವುದು ಮೊದಲ ದಿನದಂದೇ ನಿರೂಪಿತವಾಗಿದೆ.

ನಾಗ್ಪುರ: ನಿರೀಕ್ಷೆಯಂತೆಯೇ ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾ ನಡುವಣದ ಮೂರನೇ ಟೆಸ್ಟ್ ಪಂದ್ಯ ಕೂಡ ಸ್ಪಿನ್ ಮಯವಾಗಿ ಪರಿವರ್ತಿತವಾಗಿರುವುದು ಮೊದಲ ದಿನದಂದೇ ನಿರೂಪಿತವಾಗಿದೆ.
ಆತಿಥೇಯರನ್ನು ಕೇವಲ 215 ರನ್‍ಗಳಿಗೆ ಕಟ್ಟಿಹಾಕಿದೆವೆಂಬ ಖುಷಿಯಲ್ಲಿಯೇ ಬ್ಯಾಟಿಂಗ್‍ಗೆ ಇಳಿದ ದ.ಆಫ್ರಿಕಾ ಮತ್ತೆ ಭಾರತದ ಸ್ಪಿನ್‍ದ್ವಯರ (ಅಶ್ವಿನ್-ಜಡೇಜಾ) ದಾಳಿಗೆ ಸಿಲುಕಿ ತತ್ತರಿಸಿದೆ. ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲ ದಿನದ ಗೌರವಕ್ಕೆ ಮೇಲ್ನೋಟಕ್ಕೆ ದ.ಆಫ್ರಿಕಾ ಭಾಜನವಾಯಿತೆಂದು ಕಂಡುಬಂದರೂ, ದಿನಾಂತ್ಯದಲ್ಲಿ ಕೇವಲ 11 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಭಾರತ ತಿರುಗೇಟು ನೀಡಿ ಪುಟಿದೆದ್ದಿತು. ಮೊಹಾಲಿ ಟೆಸ್ಟ್‍ನ ಮೊದಲ ದಿನದಂದು ನಡೆದ ನಾಟಕೀಯ ತಿರುವುಗಳೇ ಮೇಳೈಸಿದ್ದು, ಇದೇನಾದರೂ ಎರಡನೇ ದಿನವೂ ಪುನರಾವರ್ತನೆಯಾದರೆ ಈ ಪಂದ್ಯ ಕೂಡ ಮೂರೇ ದಿನಕ್ಕೆ ಮುಗಿಯುವ ಸಾಧ್ಯತೆ ಇದೆ. ಆದರಿದು ತನ್ನ ಪಾಲಿಗೆ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಹರಿಣಗಳು ಎಷ್ಟರಮಟ್ಟಿಗೆ ಎದಿರೇಟು ನೀಡುತ್ತವೆ ಎಂಬುದರ ಮೇಲೆ ನಿರ್ಧರಿತವಾಗಲಿದೆ.
ಮೊದಲ ದಿನದಾಟ ನಿಂತಾಗ ದ.ಆಫ್ರಿಕಾ ಪರ ಡೀನ್ ಎಲ್ಗರ್ (7) ಜತೆಗೆ ಆಗಷ್ಟೇ ಆಟಕ್ಕಿಳಿದ ಹಾಶೀಂ ಆಮ್ಲಾ ಐದು ಎಸೆತಗಳಲ್ಲಿ ಯಾವುದೇ ರನ್ ಕಲೆಹಾಕದೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಆರಂಬಿsಕ ಸ್ಟಿಯಾನ್ ವಾನ್ ಜಿಲ್ (0) ಅಶ್ವಿನ್ ಬೌಲಿಂಗ್‍ನಲ್ಲಿ ರಹಾನೆಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಇಮ್ರಾನ್ ತಾಹಿರ್ ಅವರನ್ನು ಜಡೇಜಾ ಬೌಲ್ಡ್ ಮಾಡಿದರು.
ಮಾರ್ಕೆಲ್, ಹಾರ್ಮರ್ ಮಿಂಚು: ಇನ್ನು, ಇಂದು ಬೆಳಿಗ್ಗೆ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅವರ ಈ ನಿರ್ಧಾರವನ್ನು ಸಮರ್ಥಿಸುವಂತೆ ಆರಂಭಿಕರಾದ ಮುರಳಿ ವಿಜಯ್ ಮತ್ತು ಶಿಖರ್ ಧವನ್ ಉತ್ತಮ ಜತೆಯಾಟ ಪ್ರದರ್ಶಿಸುತ್ತಾ ಸೊಗಸಾದ ಇನ್ನಿಂಗ್ಸ್ ಕಟ್ಟುವ ಕುರುಹು ತೋರಿದರು. ಆದರೆ, ಉತ್ತಮ ಆರಂಭದ ಹೊರತಾಗಿಯೂ ಭಾರತ ಎಡವಿತು. ಇನ್ನಿಂಗ್ಸ್‍ನ 14ನೇ ಓವರ್‍ನ ಕೊನೇ ಎಸೆತದಲ್ಲಿ ಶಿಖರ್ ಧವನ್ (12) ಡೀನ್ ಎಲ್ಗರ್ ಬೌಲಿಂಗ್‍ನಲ್ಲಿ ಅವರಿಗೇ ಕ್ಯಾಚಿತ್ತು ಕ್ರೀಸ್ ತೊರೆದದ್ದು 50 ರನ್‍ಗಳ ಜತೆಯಾಟಕ್ಕೆ ತಡೆ ಹಾಕಿತು. ಬಳಿಕ ಬಂದ ಚೇತೇಶ್ವರ ಪೂಜಾರ ಜತೆಗೂಡಿದ ಮುರಳಿ ವಿಜಯ್ ದ.ಆಫ್ರಿಕಾ ಬೌಲರ್‍ಗಳಿಗೆ ದಿಟ್ಟ ಉತ್ತರ ನೀಡಲು ಮುಂದಾದರು. ಕ್ರೀಸ್‍ಗೆ ಕಚ್ಚಿನಿಂತಿದ್ದ ಅವರನ್ನು 22ನೇ ಓವರ್‍ನ ಎರಡನೇ ಎಸೆತದಲ್ಲಿ ಮಾರ್ನಿ ಮಾರ್ಕೆಲ್ ಎಲ್‍ಬಿ ಬಲೆಗೆ ಕೆಡವಿ ಭಾರತಕ್ಕೆ ಮತ್ತೊಂದು ಹೊಡೆತ ನೀಡಿದರು. 84 ಎಸೆತಗಳಲ್ಲಿ ವಿಜಯ್ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 40 ರನ್ ಮಾಡಿ ಔಟಾದರು. ಭೋಜನ ವಿರಾಮದ ಹೊತ್ತಿಗೆ ಭಾರತ 27 ಓವರ್‍ಗಳಲ್ಲಿ 2 ವಿಕೆಟ್‍ಗೆ 85 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತಕ್ಕೆ ಮಾರ್ಕೆಲ್ ಮತ್ತೆ ಮಾರಕರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


