ಹರಿಣಗಳ ಒತ್ತಡ ಅಬಾಧಿತ: ಮುರಳಿ
ಸೀಮಿತ ಓವರ್ಗಳ ಸರಣಿಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿದ್ದ ಪ್ರವಾಸಿ ದ.ಆಫ್ರಿಕಾ ತಂಡವನ್ನು ಸಂಪೂರ್ಣವಾಗಿ ಒತ್ತಡಕ್ಕೆ ಗುರಿಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ.

ನಾಗ್ಪುರ: ಸೀಮಿತ ಓವರ್ಗಳ ಸರಣಿಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಸಂಪೂರ್ಣವಾಗಿ ಒತ್ತಡಕ್ಕೆ ಗುರಿಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಭರ್ಜರಿ ಫಾರ್ಮ್ ನಲ್ಲಿರುವ ಭಾರತದ ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್ ಹೇಳಿದ್ದಾರೆ.
"ಆತ್ಮವಿಶ್ವಾಸದಿಂದ ಕೂಡಿದ್ದ ಹರಿಣಗಳನ್ನು ನಿಸ್ಸಂಶಯವಾಗಿಯೂ ಒತ್ತಡದಲ್ಲಿ ಸಿಲುಕಿಸಿದ್ದೇವೆ ಎಂದು ಖಚಿತವಾಗಿ ಹೇಳಬಹುದು. ನಿಜವಾಗಿಯೂ ಇದೊಂದು ಬೆಕ್ಕು-ಇಲಿಯ ಆಟದಂತಾಗಿದೆ. ಪ್ರತಿಯೊಬ್ಬರೂ ಒತ್ತಡವನ್ನು ಮೆಟ್ಟಿನಿಲ್ಲಲು ಯತ್ನಿಸುತ್ತಿದ್ದಾರೆ. ಇದರ ಜತೆಗೆ ನಮ್ಮ ಬೌಲರ್ ಗಳೂ ಮೊನಚಿನ ಪ್ರದರ್ಶನ ನೀಡುತ್ತಿರುವುದು ನಮ್ಮ ಪಾಲಿನ ಯಶಸ್ಸಿಗೆ ಸಹಕಾರಿಯಾಗಿದೆ'' ಎಂದು ಪಿಟಿಐಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ವಿಜಯ್ ತಿಳಿಸಿದರು. "ಮೊದಲ ಪಂದ್ಯದಲ್ಲಿ 109 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ ಬೆಂಗಳೂರು ಟೆಸ್ಟ್ನಲ್ಲಿ ಪ್ರವಾಸಿ ತಂಡವನ್ನು 214 ರನ್ಗಳಿಗೆ ನಿಯಂತ್ರಿಸಿದ್ದು ಮತ್ತೊಮ್ಮೆ ಹರಿಣಗಳ ಮೇಲೆ ನಾವು ಭರಪೂರ ಒತ್ತಡ ಹಾಕಿದ್ದನ್ನು ಸ್ಫುಟಪಡಿಸಿದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ದ.ಆಫ್ರಿಕಾ ಬ್ಯಾಟ್ಸ್ಮನ್ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ.
ಹೀಗಾಗಿ ಮೂರನೇ ಟೆಸ್ಟ್ ಪಂದ್ಯಕ್ಕೆ ನಾವು ಆತ್ಮವಿಶ್ವಾಸದೊಂದಿಗೆ ಅಣಿಯಾಗಿದ್ದೇವೆ. ಇನ್ನು ನಮ್ಮ ಬ್ಯಾಟಿಂಗ್ ದುರ್ಬಲವಾಗಿದೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ಬೃಹತ್ ಇನ್ನಿಂಗ್ಸ್ ಕಟ್ಟಲು ಕಾತರದಿಂದ ತುಡಿಯುತ್ತಿದ್ದು, ಬಹುತೇಕ ಈ ಪಂದ್ಯವು ಅದಕ್ಕೆ ವೇದಿಕೆಯಾಗಬಹುದು'' ಎಂದೂ ಮುರಳಿ ಅಭಿಪ್ರಾಯಿಸಿದರು.
"ನಾನು ತಂಡವನ್ನು ಸುಸ್ಥಿತಿಯಲ್ಲಿ ಇರಿಸಲು ಪ್ರಯತ್ನಿಸುತ್ತಿದ್ದೇನೆ. ಕಳೆದ ಪಂದ್ಯಗಳಲ್ಲಿ ನಾನು ಈ ದಿಸೆಯಲ್ಲಿ ಹೆಜ್ಜೆ ಇಟ್ಟಿರುವುದು ಖುಷಿ ಕೊಟ್ಟಿದೆ. ಇನ್ನು 2008ರಲ್ಲಿ ಇದೇ ಮೈದಾನದಲ್ಲಿ ವಿರೇಂದ್ರ ಸೆಹ್ವಾಗ್ ಜತೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದೆ. ಇದೀಗ ಮತ್ತೊಮ್ಮೆ ಈ ಕ್ರೀಡಾಂಗಣದ ಡ್ರೆಸ್ಸಿಂಗ್ ರೂಂ ಹೊಕ್ಕಿರುವುದು ಸಂತಸ ನೀಡುತ್ತಿದೆ'' ಎಂದು ವಿಜಯ್ ನುಡಿದರು. ಅಂದಹಾಗೆ ನಾಲ್ಕು ಟೆಸ್ಟ್ ಪಂದ್ಯ ಸರಣಿಯಲ್ಲಿ ಈಗಾಗಲೇ 0-1ರಿಂದ ಹಿನ್ನಡೆ ಅನುಭವಿಸಿರುವ ದ.ಆಫ್ರಿಕಾ, ಬುಧವಾರ (ನ.25)ದಿಂದ ಶುರುವಾಗುತ್ತಿರುವ ಈ ಮೂರನೇ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಸ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಸರಣಿಯನ್ನು ಜೀವಂತವಾಗಿಡಲು ಅದಕ್ಕಿರುವ ಏಕೈಕ ಮಾರ್ಗ ಈ ಪಂದ್ಯವನ್ನು ಗೆಲ್ಲುವುದೇ ಆಗಿರುವುದರಿಂದ ಹಾಶೀಂ ಆಮ್ಲಾ ಪಡೆಗೆ ಮತ್ತೊಂದು ಸುತ್ತಿನ ಅಗ್ನಿಪರೀಕ್ಷೆ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


