ಕ್ರೀಡೆ

ಯುಎಇ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ 129 ರನ್ ಗಳ ಜಯ

ನೇಪಿಯರ್ ನಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯ ಬುಧವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಭರ್ಜರಿ 129 ರನ್‌ಗಳ ಗೆಲುವು ಸಾಧಿಸಿದೆ...

ಯುಎಇ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ 129 ರನ್ ಗಳ ಜಯ
ಪಾಕಿಸ್ತಾನ ಕ್ರಿಕೆಟ್ ತಂಡ
Published On :

ನೇಪಿಯರ್‌: ನೇಪಿಯರ್ ನಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯ ಬುಧವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಭರ್ಜರಿ 129 ರನ್‌ಗಳ ಗೆಲುವು ಸಾಧಿಸಿದೆ.

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಶೆಹಜಾದ್‌ (93 ರನ್), ಹ್ಯಾರಿಸ್‌ ಸೊಹೈಲ್‌ (70 ರನ್) ,ಮಕ್ಸೂದ್‌ (45 ರನ್ ) ಮತ್ತು ನಾಯಕ ಮಿಸ್ಬಾ ಉಲ್ ಹಕ್ ಅವರ (65 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು ಭರ್ಜರಿ 339ರನ್ ಕಲೆಹಾಕಿತು. ಯುಎಇ ಪರ ಬೌಲಿಂಗ್‌ನಲ್ಲಿ ಮಂಜುಳಾ ಗುರು 4 ವಿಕೆಟ್‌ ಪಡೆದು ಗಮನ ಸೆಳೆದರು.

ಪಾಕಿಸ್ತಾನ ನೀಡಿದ ಬೃಹತ್ 340 ರನ್ ಗಳ ಗುರಿಯನ್ನು ಬೆನ್ನತ್ತಿದ ಯುಎಇ ತಂಡ 210 ರನ್ ಗಳಿಗೆ 8 ವಿಕೆಟ್ ಗಳನ್ನು ಕಳೆದುಕೊಂಡು 129 ರನ್ ಗಳ ಅಂತರದಲ್ಲಿ ಪಾಕಿಸ್ತಾನಕ್ಕೆ ಶರಣಾಯಿತು.ಆರಂಭದಿಂದಲೂ ಪಾಕಿಸ್ತಾನ ತಂಡದ ಪ್ರಭಾವಿ ಬೌಲರ್ ಗಳು ಯುಎಇ ತಂಡ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ಮಾಡ ತೊಡಗಿದರು. ತಂಡದ ಮೊತ್ತ 25 ರನ್ ಗಳಾಗುವಷ್ಟರಲ್ಲಿಯೇ ಯುಎಇ ತಂಡದ ಪ್ರಮುಖ 3 ವಿಕೆಟ್ ಗಳು ಪತನವಾಯಿತು. ಇದು ತಂಡಕ್ಕೆ ಆರಂಭಿಕ ಆಘಾತ ನೀಡಿತು.

ಖುರ್ರಮ್ ಖಾನ್ (43 ರನ್) ಮತ್ತು ಶೈಮಾನ್ ಅನ್ವರ್ (62 ರನ್) ಅವರು ತಂಡವನ್ನು ದಿಢೀರ್ ಕುಸಿತದಿಂದ ರಕ್ಷಿಸಿದರು. ಈ ಜೋಡಿಯನ್ನು ಹೊರತುಪಡಿಸಿದರೆ ಯುಎಇ ತಂಡದ ಪರವಾಗಿ ಅಂತಹ ಹೇಳಿಕೊಳ್ಳುವಂತಹ ಪ್ರಭಾವಿ ಜೊತೆಯಾಟ ಕಂಡುಬರಲಿಲ್ಲ. ಅಂತಿಮವಾಗಿ ಯುಎಇ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 210 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ ಪಾಕಿಸ್ತಾನ 129 ರನ್ ಗಳ ಭಾರಿ ಅಂತರದ ಗೆಲುವು ಸಾಧಿಸಿತು.

ಪಾಕಿಸ್ತಾನದ ಪರ ಸೊಹೈಲ್ ಖಾನ್, ವಹಾಬ್ ರಿಯಾಜ್ ಮತ್ತು ಶಾಹಿದ್ ಆಫ್ರಿದಿ ತಲಾ 2 ವಿಕೆಟ್ ಪಡೆದರೆ, ರಾಹತ್ ಅಲಿ, ಸೊಹೆಬ್ ಮಕ್ಸೂದ್ ತಲಾ 1 ವಿಕೆಟ್ ಕಬಳಿಸಿದರು. ಪಾಕಿಸ್ತಾನ ತಂಡಕ್ಕೆ ಭರ್ಜರಿ 93 ರನ್ ಗಳಿಸುವ ಮೂಲಕ ಪಾಕಿಸ್ತಾನ ಬೃಹತ್ ಮೊತ್ತ ಪೇರಿಸಲು ನೆರವಾದ ಅಹಮದ್ ಶೆಹಜಾದ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಒಟ್ಟು ನಾಲ್ಕು ಪಂದ್ಯಗಳನ್ನಾಡಿದ್ದು, 2 ಸೋಲು ಮತ್ತು 2 ಗೆಲುವಿನೊಂದಿಗೆ ಒಟ್ಟು 4 ಅಂಕಗಳನ್ನು ಗಳಿಸಿಕೊಂಡಿದೆ. ಆ ಮೂಲಕ ಕ್ವಾರ್ಟರ್‌ ಫೈನಲ್‌ಗೇರುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.