ಕ್ರೀಡೆ

ಹದಗೆಟ್ಟಿದೆ ಟೀಂ ಇಂಡಿಯಾ ಡ್ರೆಸಿಂಗ್ ರೂಂ ವಾತಾವರಣ!

ನೆರೆಯ ಬಾಂಗ್ಲಾದೇಶದಲ್ಲಿ ಏಕದಿನ ಸರಣಿ ಸೋತ ಬೆನ್ನಲ್ಲೇ ಟೀಂ ಇಂಡಿಯಾದೊಳಗಿನ ಅಸಮಾಧಾನಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿವೆ.

ಹದಗೆಟ್ಟಿದೆ ಟೀಂ ಇಂಡಿಯಾ ಡ್ರೆಸಿಂಗ್ ರೂಂ ವಾತಾವರಣ!
ಟೀಂ ಇಂಡಿಯಾ
Published On :

ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಏಕದಿನ ಸರಣಿ ಸೋತ ಬೆನ್ನಲ್ಲೇ ಟೀಂ ಇಂಡಿಯಾದೊಳಗಿನ ಅಸಮಾಧಾನಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿವೆ.

ಸರಣಿ ಸೋಲಿನ ಹಿನ್ನೆಲೆಯಲ್ಲಿ ನಾಯಕತ್ವ ಪಟ್ಟ ಬಿಡಲು ಸಿದ್ಧ ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಅವರ ಹಾಗೂ ವಿರಾಟ್ ಕೊಹ್ಲಿಯ ಖಾಸಗಿ ತರಬೇತುದಾರರು, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿನ ವಾತಾವರಣ ಸರಿಯಿಲ್ಲ ಎಂಬ ಸತ್ಯವನ್ನು ಕೆಲ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಖಾಸಗಿ ಆಂಗ್ಲ ಪತ್ರಿಕೆ ವರದಿ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯವರ ಖಾಸಗಿ ಕೋಚ್‍ಗಳು ಪ್ರತ್ಯೇಕವಾಗಿ ಖಾಸಗಿ ವಾಹಿನಿಗಳು ಹಾಗೂ ಪತ್ರಿಕೆಗಳಿಗೆ ಸಂದರ್ಶನ  ನೀಡಿದ್ದಾರೆ. ಖಾಸಗಿ ಟಿವಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಧೋನಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ಅವರು, ``ಇತ್ತೀಚಿನ ದಿನಗಳಲ್ಲಿ ಧೋನಿ ಸಾಕಷ್ಟು  ಒತ್ತಡದಲ್ಲಿದ್ದಾರೆ. ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿನ ವಾತಾವರಣ ಅವರನ್ನು ತುಸು ಘಾಸಿಗೊಳಿಸಿದೆ. ಹಾಗಾಗಿ, ಅವರು ಪಂದ್ಯದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ'' ಎಂದಿದ್ದಾರೆ.

ಚಂಚಲ್ ಅವರ ಸಂದರ್ಶನ ಪ್ರಸಾರವಾದ ಕೇವಲ ಕೆಲವೇ ಗಂಟೆಗಳಲ್ಲಿ ವಿರಾಟ್ ಕೊಹ್ಲಿಯವರ ತರಬೇತುದಾರ ರಾಜ್‍ಕುಮಾರ್ ಅವರ ಸಂದರ್ಶನ ಬೇರೊಂದು ಖಾಸಗಿ ವಾಹಿನಿಯಲ್ಲಿ  ಪ್ರಸಾರವಾಗಿದ್ದು, ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಸೋಲನ್ನು `ಅತ್ಯಂತ ಹೀನಾಯ' ಎಂದು ಬಣ್ಣಿಸಿದ್ದಾರೆ. ಭಾನುವಾರದ ಈ ಪಂದ್ಯವನ್ನು `ಬ್ಲಾಕ್ ಸಂಡೇ' ಎಂದಿರುವ ಅವರು, ಈ  ಸೋಲನ್ನು ಮರೆಯಲು ಸಾಧ್ಯವಿಲ್ಲ'' ಎಂದೂ ಹೇಳಿದ್ದಾರೆ.

ಆದರೆ, ಅವರು ಧೋನಿಯವರ ನಾಯಕತ್ವದ ವಿರುದ್ಧ ಚಕಾರವೆತ್ತಿಲ್ಲ. ಇದೇ ವೇಳೆ ಕೆಲವು ಕ್ರೀಡಾ ವಿಶ್ಲೇಷಕರ ದೃಷ್ಟಿಕೋನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮೈದಾನದಲ್ಲಿ ಧೋನಿ ಹಾಗೂ ಕೊಹ್ಲಿ ನಡುವಿನ ಪೈಪೋಟಿಯು ಕೇವಲ ಅವರಿಬ್ಬರ ಪೈಪೋಟಿಯಲ್ಲ. ಬದಲಾಗಿ, ಅದು ಅವರಿಬ್ಬರ ವೈಯಕ್ತಿಕ  ಕೋಚ್‍ಗಳ ಪೈಪೋಟಿ ಎಂದು ಕೆಲವು ಕ್ರೀಡಾ ವಿಶ್ಲೇಷಕರು ಬಣ್ಣಿಸುತ್ತಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಅದೇನೇ ಇರಲಿ, ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದ ವಿಚಾರ. ಸರಣಿ  ನಡೆಯುತ್ತಿದ್ದಾಗಲೇ ಮಹೇಂದ್ರ ಸಿಂಗ್ ಧೋನಿ ಏಕಾಏಕಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಮೂಲಕ  ಸರಣಿಯ ಕೊನೆಯ ಟೆಸ್ಟ್ ಪಂದ್ಯದಿಂದ ದೂರವುಳಿದಿದ್ದರು.

ಆಸೀಸ್ ನೆಲದಲ್ಲಿ ಸರಣಿ  ನಡೆಯುತ್ತಿದ್ದಾಗಲೇ, ಅಲ್ಲಿನ ಪ್ರಧಾನಿ ಟೋನಿ ಅಬ್ಬಾಟ್ ಅವರು ಟೀಂ ಇಂಡಿಯಾ ಆಟಗಾರರಿಗೆ ಏರ್ಪಡಿಸಿದ್ದ ಚಹಾ ಕೂಟಕ್ಕೆ ಧೋನಿ ಗೈರು ಹಾಜಗಾರಿದ್ದು ಈಎಲ್ಲವೂ ತಂಡದಲ್ಲಿನ ಕೆಲ  ಬಿರುಕುಗಳನ್ನು ಪರೋಕ್ಷವಾಗಿ ಹೊಮ್ಮಿಸಿದ್ದವು. ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿ ಸೋತ ನಂತರ, ಕೆಸರೆರಾಚಾಟ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಯಾವ ಸ್ವರೂಪ  ಪಡೆಯಲಿದೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.