ನಿಷೇಧ ತೆರವಿಗೆ ಬಿಸಿಸಿಐ ನಕಾರ: ಶ್ರೀಶಾಂತ್‍ಗೆ ಹೆಚ್ಚಿದ ದುಗುಡ
ಆರನೇ ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೆ ಗುರಿಯಾಗಿ, ಇತ್ತೀಚೆಗಷ್ಟೇ ನ್ಯಾಯಾಲಯದಿಂದ ದೋಷಮುಕ್ತರಾಗಿರುವ ರಾಜಸ್ಥಾನದ...

ನವದೆಹಲಿ: ಆರನೇ ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೆ ಗುರಿಯಾಗಿ, ಇತ್ತೀಚೆಗಷ್ಟೇ ನ್ಯಾಯಾಲಯದಿಂದ ದೋಷಮುಕ್ತರಾಗಿರುವ ರಾಜಸ್ಥಾನದ ಮೂವರು ಕ್ರಿಕೆಟಿಗರ ಮೇಲಿನ ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪುನರುಚ್ಚರಿಸಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಮೂವರು ಕ್ರಿಕೆಟಿಗರಾದ ಎಸ್. ಶ್ರೀಶಾಂತ್, ಅಂಕಿತ್ ಚೌಹಾಣ್ ಹಾಗೂ ಅಜಿತ್ ಚಾಂಡಿಲಾ ಸೇರಿ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದ ಎಲ್ಲಾ 36 ಮಂದಿಯನ್ನೂ ಪಟಿಯಾಲ ಉಚ್ಚ ನ್ಯಾಯಾಲಯ ಇತ್ತೀಚೆಗಷ್ಟೇ ಖುಲಾಸೆಗೊಳಿಸಿತ್ತು. 'ಸ್ಪಾಟ್ ಫಿಕ್ಸಿಂಗ್ ಹಗರಣ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಆಗ ಬಿಸಿಸಿಐನ ಶಿಸ್ತು ಸಮಿತಿ ಈ ಮೂವರು ಕ್ರಿಕೆಟಿಗರ ಮೇಲೆ ವಿಧಿಸಿದ್ದ ನಿಷೇಧ ಮುಂದುವರೆಯಲಿದೆ. ಅದನ್ನು ಹಿಂಪಡೆಯುವ ಇಲ್ಲವೇ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ'' ಎಂದು ಬುಧವಾರ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದರು.
ಶಿಸ್ತುಸಮಿತಿಯ ವಿಚಾರಣೆ ಹಾಗೂ ನ್ಯಾಯ ತೀರ್ಮಾನ ಅದರಲ್ಲೂ ಅಪರಾಧಿ ಕೃತ್ಯಕ್ಕೆ ಸಂಬಂಧಿಸಿದ ತೀರ್ಮಾನ ಭಿನ್ನವಾಗಿರುತ್ತದೆ. ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕ ಸಲ್ಲಿಸಿದ್ದ ವರದಿಯ ಮೇರೆಗೆ ಆಟಗಾರರು ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಶಿಸ್ತುಸಮಿತಿ ತೀರ್ಮಾನಿಸಿ ಆಜೀವ ಶಿಕ್ಷೆಯ ನಿರ್ಧಾರ ಕೈಗೊಂಡಿದೆ. ಹೀಗಾಗಿ ಆಟಗಾರರ ಮೇಲಿನ ಈ ನಿಷೇಧ ಮುಂದುವರೆಯಲಿದೆ'' ಎಂದು ಠಾಕೂರ್ ಪುನರ್ನುಡಿದರು.
ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎಲ್ಲ ಮೂವರು ಕ್ರಿಕೆಟಿಗರೂ ಸೆರೆವಾಸ ಅನುಭವಿಸಿದ್ದಾರೆ. ಈ ಮೂವರ ಪೈಕಿ ಶ್ರೀಶಾಂತ್ ಹಾಗೂ ಚೌವಾಣ್ ಆಜೀವ ನಿಷೇಧಕ್ಕೆ ಗುರಿಯಾಗಿದ್ದರೆ, ಚಾಂಡಿಲಾ ವಿರುದ್ಧ ವಿಚಾರಣೆ ಇನ್ನೂ ಬಾಕಿ ಇದೆ. ಅಂದಹಾಗೆ ದೆಹಲಿ ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆಂಯೇ ಮೂವರು ಕ್ರಿಕೆಟಿಗರೂ ಅದರಲ್ಲೂ ಭಾರತ ತಂಡದ ಮಾಜಿ ಬೌಲರ್ ಶ್ರೀಶಾಂತ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಲು ತುಡಿಯುತ್ತಿದ್ದರು. ಆದರೀಗ ಬಿಸಿಸಿಐನ ಕಟ್ಟುನಿಟ್ಟಿನ ನಿಲುವಿನಿಂದ ಆ ತುಡಿತಕ್ಕೆ ತಡೆ ಬಿದ್ದಂತಾಗಿದೆ.
ಆ.2ರಂದು ಚವಾಣ್ ಮೇಲ್ಮನವಿ ಚರ್ಚೆ
ಏತನ್ಮಧ್ಯೆ ಮುಂಬೈ ಕ್ರಿಕೆಟ್ ಸಂಸ್ಥೆಯು ಅಂಕಿತ್ ಚವಾಣ್ ಸಲ್ಲಿಸಿರುವ ನಿಷೇಧ ತೆರವಿನ ಮೇಲ್ಮನವಿ ಕುರಿತು ಚರ್ಚಿಸಿ ನಿರ್ಧಾರ ತಳೆಯಲು ಮುಂದಾಗಿದೆ. ನ್ಯಾಯಾಲಯದಿಂದ ದೋಷಮುಕ್ತವಾಗಿರುವ ಅಂಕಿತ್ ಚವಾಣ್ ತನ್ನ ಮೇಲಿನ ನಿಷೇಧವನ್ನು ತೆರವುಗೊಳಿಸುವ ವಿಚಾರ ಆಗಸ್ಟ್ 2ರಂದು ನಡೆಯಲಿರುವ ಸಭೆಯಲ್ಲಿ ಎಂಸಿಎ ಅಧ್ಯಕ್ಷ ಶರದ್ ಪವಾರ್ ಹಾಗೂ ನಿರ್ವಹಣಾ ಸಮಿತಿ ಮುಂದೆ ಬರಲಿದ್ದು ಸಭೆಯ ತೀರ್ಮಾನವೇ ಅಂತಿಮವಾಗಲಿದೆ'' ಎಂದು ಎಂಸಿಎ ಜಂಟಿ ಕಾರ್ಯದರ್ಶಿ ಡಾ. ಪಿ.ವಿ. ಶೆಟ್ಟಿ ತಿಳಿಸಿದ್ದಾರೆ.
ಹಿತಾಸಕ್ತಿ ಒಪ್ಪಂದಕ್ಕೆ ಅಡ್ಡಿಯಿಲ್ಲ: ಸೌರವ್ ಗಂಗೂಲಿ
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ತಲೆದೋರಿ ಅದು ಆಟಕ್ಕೆ ಪಿಡುಗಾಗಿ ಪರಿಣಮಿಸದಂತೆ ಬಿಸಿಸಿಐ ತಂದಿರುವ ಒಪ್ಪಂದದ ಸಂಘರ್ಷ'ಕ್ಕೆ ಸಹಿ ಹಾಕಲು ತನಗಾವ ಗೊಂದಲವೂ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬಿಸಿಸಿಐನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ ಬಿಸಿಸಿಐ ಈ ಹೊಸ ನಿಯಮದ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಕೊನೆಹಾಡಲು ನಿರ್ಧರಿಸಿದ್ದು, ಇದಕ್ಕೆ ಬಿಸಿಸಿಐ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಗಂಗೂಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


