ಕ್ರೀಡೆ

ಹಂಗೇರಿಯನ್ ಜಿಪಿ: ಸೆಬಾಸ್ಟಿಯನ್ ವೆಟಲ್ ಚಾಂಪಿಯನ್

ರೋಚಕವಾಗಿ ನಡೆದ ಹಂಗೇರಿಯನ್ ಗ್ರ್ಯಾನ್ ಫ್ರೀ ರೇಸ್ ನಲ್ಲಿ ಫೆರಾರಿ ತಂಡದ ಸೆಬಾಸ್ಟಿಯನ್ ವೆಟ್ಟಲ್, ಅಚ್ಚರಿಯ ಗೆಲವು ಕಂಡರು...

ಹಂಗೇರಿಯನ್ ಜಿಪಿ: ಸೆಬಾಸ್ಟಿಯನ್ ವೆಟಲ್ ಚಾಂಪಿಯನ್
ಸೆಬಾಸ್ಟಿಯನ್‍
Published On :

ಬುಡಾಫೆಸ್ಟ್: ರೋಚಕವಾಗಿ ನಡೆದ ಹಂಗೇರಿಯನ್ ಗ್ರ್ಯಾನ್ ಫ್ರೀ ರೇಸ್ ನಲ್ಲಿ ಫೆರಾರಿ ತಂಡದ ಸೆಬಾಸ್ಟಿಯನ್ ವೆಟ್ಟಲ್, ಅಚ್ಚರಿಯ ಗೆಲವು ಕಂಡರು. ಈ ವರ್ಷದ ರೇಸ್ ಋತುವಿನಲ್ಲಿ ಐದು ಬಾರಿ ಚಾಂಪಿಯನ್‍ಶಿಪ್ ಪಟ್ಟ ಗಳಿಸಿರುವ ಮರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರು, 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇದೇ ವರ್ಷ ಮಾ.29ರಂದು ನಡೆದಿದ್ದ ಮಲೇಷಿಯಾ ಜಿಪಿಯಲ್ಲಿ ಚಾಂಪಿಯನ್ ಆಗಿದ್ದ ಮಾಜಿ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್‍ಗೆ ಇದು ಈ ವರ್ಷದ ರೇಸ್ ಋತುವಿನಲ್ಲಿ 2ನೇ ಜಯವಾಗಿದೆ. ರೆಡ್ ಬುಲ್ ತಂಡದ ಡ್ಯಾನಿಲ್ ಕೆವಿಯಟ್ ಅವರು ದ್ವಿತೀಯ ಸ್ಥಾನ ಗಳಿಸಿದರೆ, ಅದೇ ತಂಡದ ಡೇನಿಯಲ್ ರಿಕಿಯಾರ್ಡೊ ಅವರು 3ನೇ ಸ್ಥಾನ ಗಳಿಸಿ ಪೊಡಿಯಂ ಫಿನಿಶ್ ಕಂಡರು.

ರೇಸ್ ನ ಮೊದಲ ಸುತ್ತಿನಲ್ಲೇ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿದ ಸೆಬಾಸ್ಟಿಯನ್ ವೆಟ್ಟಲ್, ಅಲ್ಲಿಂದ ಮುಂದಕ್ಕೆ ಒಬ್ಬೊಬ್ಬರನ್ನಾಗಿ ಹಿಂದಿಕ್ಕುತ್ತಾ ಸಾಗಿದರು. ಒಂದು ಹಂತದಲ್ಲಿ ಅವರಿಗೆ ತೀವ್ರ ಪೈಪೋಟಿ ನೀಡಿದ ರೆಡ್‍ಬುಲ್ ತಂಡದ ಡ್ಯಾನಿಲ್ ಕೆವಿಯಟ್ ಕೆಲವೊಂದು ಲ್ಯಾಪ್ ಗಳಲ್ಲಿ ಸೆಬಾಸ್ಟಿಯನ್ ಅವರನ್ನು ಹಿಂದಿಕ್ಕಿದರಾ ದರೂ, ರೇಸ್‍ನಲ್ಲಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ತಳ್ಳಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ  ಜಯ ಸೆಬಾಸ್ಟಿನ್ ಅವರಿಗೆ ಒಲಿಯಿತು . ಆದರೂ, ಉತ್ತಮ ಪೈಪೋಟಿ ನೀಡಿದ ಡ್ಯಾನಿಲ್ ಕೆವಿಯಟ್ ಅವರು, 2ನೇ ಸ್ಥಾನ ಗಳಿಸಿ, ಇದೇ ಮೊದಲ ಬಾರಿಗೆ ಫೋಡಿಯಂ ನಲ್ಲಿ ಕಾಣಿಸಿಕೊಂಡ ಸಾಧನೆ ಮಾಡಿದರು. ದಿನದ ರೇಸ್‍ನಲ್ಲಿ ಭಾರಿ ನಿರಾಸೆ ಅನುಭವಿಸಿದ್ದು ಮರ್ಸಿಡಿಸ್ ತಂಡ. ಇದೇ ತಿಂಗಳ ಆರಂಭದಲ್ಲಿ ನಡೆದಿದ್ದ ಬ್ರಿಟನ್ ಜಿಪಿ ರೇಸ್ ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಮರ್ಸಿಡಿಸ್ ತಂಡ  ಕಾಣಿಸಿಕೊಂಡಿತ್ತು. ಚಾಂಪಿಯನ್ ಆಗಿ ಆ ತಂಡದ ಪ್ರಮುಖ ಆಟಗಾರ ಲೂಯಿಸ್ ಹ್ಯಾಮಿಲ್ಟನ್ ಹೊರಹೊಮ್ಮಿದ್ದರೆ, ಅದೇ ತಂಡದ ನಿಕೋ ರೋಸ್‍ಬರ್ಗ್ ಅವರು, ದ್ವಿತೀಯ ಸ್ಥಾನ ಗಳಿಸಿದ್ದರು. ಆದರೆ, ಅಂಥದ್ದೊಂದು ಮ್ಯಾಜಿಕ್ ಈ ಬಾರಿ ನಡೆಯಲಿಲ್ಲ. ರೇಸ್‍ನ ಆರಂಭದಿಂದಲೇ ತುಸು ನಿಧಾನವಾಗಿಯೇ ಚಲಿಸಿದ ಹ್ಯಾಮಿಲ್ಟನ್ ಹಲವಾರು ಲ್ಯಾಪ್‍ಗಳಲ್ಲಿ ವೇಗವಾಗಿ ಸಾಗದೇ ಹಿಂದುಳಿದರು.

ಅತ್ತ,ಮರ್ಸಿಡೀಸ್ ತಂಡದ ಮತ್ತೊಬ್ಬ ಆಟಗಾರ ನಿಕೋ ರೋಸ್‍ಬರ್ಗ್ ಅವರ ಕಾರು ಕೆಲ ನಿಮಿಷಗಳ ಕಾಲ  ತೊಂದರೆಗೊಳಗಾಗಿದ್ದರಿಂದ ಅವರೂ ಹಲವಾರು ಲ್ಯಾಪ್‍ಗಳಲ್ಲಿ ಹಿಂದುಳಿಯಬೇಕಾಯ್ತು. ಅಂತಿಮವಾಗಿ, ಈ ಇಬ್ಬರೂ ಕ್ರಮವಾಗಿ 6ನೇ ಹಾಗೂ 8ನೇ ಸ್ಥಾನಗಳಿಸಿದರು. ಇನ್ನೂ ಕಡಿಮೆ ಸ್ಥಾನಗಳಲ್ಲಿ ಕಾಣಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿದ್ದ  ಲೂಯಿಸ್ 6ನ್ ಸ್ಥಾನ ಗಳಿಸಿದ್ದು ಕೊಂಚ ಸಮಾಧಾನ ತಂದರೂ, ರೇಸ್‍ನ ಕೆಲವೊಂದು ಹಂತಗಳಲ್ಲಿ 2ನೇ ಸ್ಥಾನ, ಐದನೇಯವರಾಗಿ ಕಾಣಿಸಿಕೊಂಡಿದ್ದ ರೋಸ್‍ಬರ್ಗ್ ಅವರು 8ನೇ ಸ್ಥಾನ ಅಲಂಕರಿಸಿದ್ದು ಮರ್ಸಿಡಿಸ್ ಗೆ ಕೊಂಚ ನಿರಾಸೆ ತಂದಿತು.
ಬಿಯಾಂಚಿಗೆ ಶ್ರದ್ದಾಂಜಲಿ
ಹಂಗೇರಿಯನ್ ರೇಸ್ ಆರಂಭಕ್ಕೂ ಮುನ್ನ ಇತ್ತೀಚೆಗಷ್ಟೇ ನಿಧನರಾದ ಎಫ್ 1 ಆಟಗಾರ ಜೂಲ್ಸ್ ಬಿಯಾಂಚಿ ಅವರಿಗೆ ಎಫ್ 1 ಚಾಲಕರು ಶ್ರದ್ದಾಂಜಲಿ ಸಲ್ಲಿಸಿದರು. ಬಿಯಾಂಚಿ ಉಪಯೋಗಿಸುತ್ತಿದ್ದ ರೇಸ್ ಹೆಲ್ಮೆಟ್‍ಗಳನ್ನು ಒಟ್ಟಾಗಿ ಒಂದೆಡೆ ಪೇರಿಸಲಾಗಿತ್ತು. ಅದನ್ನು ಸುತ್ತುವರಿದ ಎಲ್ಲಾ ಎಫ್  ಚಾಲಕರು, ಪರಸ್ಪರ ಹೆಗಲುಗಳ ಮೇಲೆ ಕೈಯ್ಯನ್ನಿರಿಸಿ ಸರಪಳ  ರೂಪದಲ್ಲಿ ಸುತ್ತುವರೆದು ನಿಂತು ಒಂದು ನಿಮಿಷ ಮೌನ ಆಚರಿಸಿ ಬಿಯಾಂಚಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಯಾಂಚಿ ಅವರ ತಂದೆ ಫಿಲಿಪೆ, ತಾಯಿ ಕ್ರಿಸ್ಟಿನ್ ಹಾಗೂ ಇತರ ಸಂಬಂಧಿಗಳು ಹಾಜರಿದ್ದರು. ಇದಲ್ಲದೆ, ಕೆಲವು ಆಟಗಾರರು ತಮ್ಮ ಹೆಲ್ಮೆಟ್‍ಗಳ ಮೇಲೆ `17ಬಿಯಾಂಚಿ' ಎಂದು ನಮೂದಿಸಿಕೊಂಡು ರೇಸ್‍ಗೆ ಇಳಿದರು. ಬಿಯಾಂಚಿ ಗೌರವಾರ್ಥ ಅಂತಾರಾಷ್ಟ್ರೀಯ ಮೋಟಾಸ್ ಕ್ರೀಡೆಗಳ ಸಂಸ್ಥೆಯ ನೀಡಿರುವ ಆದೇಶದಂತೆ, ಬಿಯಾಂಚಿ ಉಪಯೋಗಿಸುತ್ತಿದ್ದ 17ನೇ ಸಂಖ್ಯೆಯ ಕಾರುಗಳಿಗೆ ಸಂಪೂರ್ಣವಾಗಿ ವಿಶ್ರಾಂತಿ ನೀಡಲಾಗಿದೆ. 17ನೇ ಸಂಖ್ಯೆಯ ಕಾರು ಇಲ್ಲದೆ ನಡೆದ ಮೊದಲ ರೇಸ್ ಆಗಿ ಹಂಗೇರಿಯನ್ ಜಿಪಿ ಜರುಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.