ಕ್ರೀಡೆ

ಕಿವೀಸ್ ವನಿತೆಯರಿಗೆ ಸರಣಿ ಸಂಭ್ರಮ

ಬ್ಯಾಟಿಂಗ್‍ನಲ್ಲಿ ದುರ್ಬಲವೆನಿಸಿದರೂ, ಕರಾರುವಾಕ್ ಬೌಲಿಂಗ್‍ನ ಸಹಾಯದಿಂದಾಗಿ ಆತಿಥೇಯ ಭಾರತ ವನಿತೆಯ ತಂಡ, ನ್ಯೂಜಿಲೆಂಡ್ ವಿರುದ್ಧದ ಕೊನೆಯ...

ಕಿವೀಸ್ ವನಿತೆಯರಿಗೆ ಸರಣಿ ಸಂಭ್ರಮ
ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಗೆದ್ದ ನ್ಯೂಜಿಲೆಂಡ್ ವನಿತೆಯರು ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ
Published On :

ಬೆಂಗಳೂರು: ಬ್ಯಾಟಿಂಗ್‍ನಲ್ಲಿ ದುರ್ಬಲವೆನಿಸಿದರೂ, ಕರಾರುವಾಕ್ ಬೌಲಿಂಗ್‍ನ ಸಹಾಯದಿಂದಾಗಿ ಆತಿಥೇಯ ಭಾರತ ವನಿತೆಯ ತಂಡ, ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 3 ವಿಕೆಟ್‍ಗಳ ಜಯ ಸಾಧಿಸಿ ಸಮಾಧಾನದ ನಿಟ್ಟುಸಿರಿಟ್ಟಿತಲ್ಲದೆ, ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‍ಸ್ವೀಪ್ ಮಾಡುವ ಆತಿಥೇಯರ ಹವಣಿಕೆಯನ್ನು ವಿಫಲಗೊಳಿಸಿತು. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 126 ರನ್‍ಗಳ ಸಾಧಾರಣ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 19 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿ ಜಯದ ನಗೆ ಬೀರಿತು.
ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರ ಲೆಕ್ಕಾಚಾರ ತಲೆಕೆಳಗಾಗಲಿಲ್ಲ. ಬೌಲರ್‍ಗಳಾದ ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್ ಹಾಗೂ ಏಕ್ತಾ ಬಿಶ್ತ್ ಅವರು ನ್ಯೂಜಿಲೆಂಡ್ ತಂಡದ ದೊಡ್ಡ ಮೊತ್ತದಾಸೆಗೆ ತಣ್ಣೀರೆರಚುವಲ್ಲಿ ಯಶಸ್ವಿಯಾದರು. ನ್ಯೂಜಿಲೆಂಡ್ ತಂಡದ ಮೊತ್ತ ಕೇವಲ 14 ರನ್ ಆಗಿದ್ದಾಗ ಆರಂಭಿಕ ಆಟಗಾರ್ತಿ ರ್ಯಾಚೆಲ್ ಪ್ರೀಸ್ಟ್ ಅವರನ್ನು ಪೆವಿಲಿಯನ್‍ಗೆ ಅಟ್ಟುವಲ್ಲಿ ಯಶಸ್ವಿಯಾದ ಬಿಶ್ತ್, ಭಾರತಕ್ಕೆ ಮೊದಲ ಯಶ ತಂದಿತ್ತರು. ನಂತರ ದಾಳಿಗಿಳಿದ ರಾಜೇಶ್ವರಿ, ಪ್ರೀಸ್ಟ್ ನಂತರ ಬಂದಿದ್ದ ನಾಯಕಿ ಸೋಫಿಯಾ ಡಿವೈನ್ ಅವರನ್ನು ಹೊರಹಾಕಿದರು. ಬಳಿಕ ಕ್ರೀಸ್‍ಗೆ ಆಗಮಿಸಿದ್ದು ನಟಾಲಿ ಡೋಡ್. ಇವರು, ಆರಂಭಿಕ ಆಟಗಾರ್ತಿ ಸುಜಿ ಬೇಟ್ಸ್ ಜೊತೆಗೂಡಿ ತಂಡದ ಮೊತ್ತಕ್ಕೆ ಕೇವಲ 17 ರನ್ ಸೇರಿಸುವಷ್ಟರಲ್ಲಿ ದಾಳಿ ನಡೆಸಿದ ಪೂನಮ್ ಯಾದವ್, ಬೇಟ್ಸ್ ಅವರ ವಿಕೆಟ್ ಉರುಳಿಸಿದರು. 27 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 34 ರನ್ ಗಳಿಸಿದ್ದ ಬೇಟ್ಸ್ ಅವರನ್ನು ಹೊರಹಾಕಿದ್ದು ಭಾರತದ ಪಾಲಿಗೆ ಮಹತ್ವದ ವಿಕೆಟ್ ಎನಿಸಿತು. ಇಲ್ಲಿಂದ ಮುಂದಕ್ಕೆ ನ್ಯೂಜಿಲೆಂಡ್‍ನ ಬ್ಯಾಟಿಂಗ್ ಲೈನಪ್ ತೀವ್ರ ಕುಸಿತ ಕಂಡಿತು. ಮಧ್ಯಮ ಹಾಗೂ ಅಂತಿಮ ಕ್ರಮಾಂಕದ ಯಾವೊಬ್ಬ ಆಟಗಾರ್ತಿಯರೂ 15 ರನ್‍ಗಳಿಗಿಂತ ಹೆಚ್ಚು ಆಡಲಿಲ್ಲ. ಅದರಲ್ಲೂ ಸ್ಟಾಟರ್ತ್‍ವೇಟ್, ಪರ್ಕಿನ್ಸ್ ಹಾಗೂ ಕ್ಯಾಸ್ಪೆರ್ಕ್ ಅವರ ಒಂದಂಕಿ ದಾಖಲಿಸಿ ನಿರಾಸೆ ಮೂಡಿಸಿದರು. ಬೇಟ್ಸ್ ಹೊರನಡೆದ ಮೇಲೆ ಕ್ರೀಸ್‍ಗೆ ಆಗಮಿಸಿದ್ದ ಸ್ಟಾಟೆತ್ರ್ ವೆಯ್ಟ್ ಪೂನಮ್ ಅವರಿಗೆ ಬಲಿಯಾದರೆ, ಪರ್ಕಿನ್ಸ್ ಅವರು ಬಿಶ್ತ್ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು, ಕ್ಯಾಸ್ಪೆರೆಕ್ ರನೌಟ್ ಆದರು. ಹೀಗೆ, ನ್ಯೂಜಿಲೆಂಡ್ 100 ರನ್ ಗಡಿ ದಾಟುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿತು. ಇದಾದ ಮೇಲೆ, ಮತ್ತೆ ಮಿಂಚಿದ ರಾಜೇಶ್ವರಿ ಮ್ಯಾಡಿ ಗ್ರೀನ್ ಅವರ ವಿಕೆಟ್ ಕೆಡವಿದರು. ಇನ್ನು, ಅಂತಿಮ ಹಂತದಲ್ಲಿ ಜೊತೆಯಾದ ಬ್ರಾಡ್‍ಮೋರ್ ಹಾಗೂ ರೋವೆ ಅವರು ತಂಡದ ಮೊತ್ತವನ್ನು 126ಕ್ಕೆ ತಂದು ನಿಲ್ಲಿಸಿದರು.
ಎಡವಿದ ಬ್ಯಾಟಿಂಗ್
ಎದುರಾಳಿಗಳನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರೂ, ಭಾರತ ತಂಡದ ಬ್ಯಾಟಿಂಗ್ ಮುಗ್ಗರಿಸಿತು. ಆರಂಭಿಕ ಆಟಗಾರ್ತಿ ವನಿತಾ (28 ರನ್, 22 ಎಸೆತ, 4 ಬೌಂಡರಿ, 1 ಸಿಕ್ಸರ್), ಮಧ್ಯಮ ಕ್ರಮಾಂಕದ ಅನುಜಾ ಪಾಟೀಲ್ (22 ರನ್, 23 ಎಸೆತ, 3 ಬೌಂಡರಿ), ವೇದಾ ಕೃಷ್ಣಮೂರ್ತಿ (34 ರನ್, 19 ಎಸೆತ, 6 ಬೌಂಡರಿ) ಅವರು ಬಿಟ್ಟರೆ, ಮಿಕ್ಕವರ್ಯಾರೂ 20 ರನ್ ಗಡಿ ದಾಟಲಿಲ್ಲ. ಲತಿಕಾ ಕುಮಾರಿ (15), ಹರ್ಮನ್‍ಪ್ರೀತ್ ಕೌರ್ (4), ಜೂಲನ್ ಗೋಸ್ವಾಮಿ (8) ಅಲ್ಪ ಮೊತ್ತಕ್ಕೆ ಔಟಾದರು. ಹೀಗೆ, ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಎದುರಾಳಿಗಳು ಸಾಧಾರಣ ಮೊತ್ತ ನೀಡಿದ್ದರಿಂದ ತಂಡಕ್ಕೆ ಹೆಚ್ಚು ಹೊರೆಯಾಗಲಿಲ್ಲ. ಅಂತಿಮವಾಗಿ, ಭಾರತ 19 ಓವರ್‍ಗಳಲ್ಲಿ 128 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 20 ಓವರ್‍ಗಳಲ್ಲಿ 126ಕ್ಕೆ 8
(ಬೇಟ್ಸ್ 34, ಡಿವೈನ್ 18; ಗಾಯಕ್ವಾಡ್ 17ಕ್ಕೆ 3, ಪೂನಮ್ 16ಕ್ಕೆ 2)
ಭಾರತ 19 ಓವರ್‍ಗಳಲ್ಲಿ 128ಕ್ಕೆ 7
(ವೇದಾ 34, ವನಿತಾ 28; ಡಿವೈನ್ 13ಕ್ಕೆ 2, ಕ್ಯಾಸ್ಪೆರೆಕ್ 20ಕ್ಕೆ 2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.