ಐಪಿಎಲ್ ಫಿಕ್ಸಿಂಗ್ ತೀರ್ಪು: ಚೆನ್ನೈ, ರಾಜಸ್ಥಾನ ಪ್ರಾಂಚೈಸಿಗೆ ನಡುಕ ಶುರು
ಎರಡು ವರ್ಷಗಳ ಹಿಂದೆ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣಕ್ಕೆ ಸಂಬಧಿಸಿದಂತೆ ಮಂಗಳವಾರ ತೀರ್ಪು ಪ್ರಕಟವಾಗುತ್ತಿದ್ದು,..

ನವದೆಹಲಿ: ಎರಡು ವರ್ಷಗಳ ಹಿಂದೆ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣಕ್ಕೆ ಸಂಬಧಿಸಿದಂತೆ ಮಂಗಳವಾರ ತೀರ್ಪು ಪ್ರಕಟವಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸರ್ವೋಚ್ಚ ನ್ಯಾಯಾಲಯ ನೇಮಿತ, ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ (ಅಶೋಕ್ ಭಾನ್ ಮತ್ತು ಆರ್.ವಿ. ವೀಂದ್ರನ್ ಇನ್ನಿಬ್ಬರು ಸದಸ್ಯರು) ನಿಯೋಗ ನೀಡಲಿರುವ ತೀರ್ಪು ಐಪಿಎಲ್ ಭವಿಷ್ಯವನ್ನು ನಿರ್ಧರಿಸಲಿದೆ.
2013ರ ಐಪಿಎಲ್ ಆರನೇ ವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ನ ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚೌಹಾಣ್ ನಡೆಸಿದ ಸ್ಪಾಟ್ ಫಿಕ್ಸಿಂಗ್ ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಸ್ಫೋಟಗೊಂಡ ಬೆಟ್ಟಿಂಗ್ ಪ್ರಕರಣವು ದೇಶೀಯ ಕ್ರಿಕೆಟ್ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಪ್ರಕರಣದ ಕುರಿತು ಜನವರಿ ತಿಂಗಳಿನಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯ ಸಿಎಸ್ಕೆ ತಂಡದ ಮಾಜಿ ಪ್ರಾಂಶುಪಾಲ ಗುರುನಾಥ್ ಮೇಯಪ್ಪನ್ ಹಾಗೂ ರಾಯಲ್ ಚಾಲೆಂಜರ್ಸ್ ನ ಸಹ ಮಾಲೀಕ ರಾಜ್ ಕುಂದ್ರಾ ತಪ್ಪಿತಸ್ಥರೆಂದು ಹೇಳಿತ್ತು. ಜತೆಗೆ ಇದೇ ಸಂದರ್ಭದಲ್ಲಿ ತಪ್ಪಿತಸ್ಥರ ವಿರುದ್ಧ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೈತೃತ್ವದ ತ್ರಿಸದಸ್ಯ ನಿಯೋಗಕ್ಕೆ ನಿರ್ದೇಶಿಸಿತ್ತು.
ಮೂಲಗಳ ಪ್ರಕಾರ ಆರ್.ಎಂ. ಲೋಧಾ ನೇತೃತ್ವದ ನಿಯೋಗ ತಪ್ಪಿತಸ್ಥರ ವಿರುದ್ಧ ಕಠಿಣಕಾರಿ ತೀರ್ಪು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಜಸ್ಥಾನ ರಾಯಲ್ಸ್ ( ಆರ್ಎಲ್) ಫ್ರಾಂಚೈಸಿಗಳನ್ನು ಐಪಿಎಲ್ ಕೂಟದಿಂದ ಹೊರಗಿಡುವ ಸಾಧ್ಯತೆಗಳಿದ್ದರೂ, ಹಾಗೇನಾದರೂ ಮಾಡಿದರೆ ಅದು ಇಡೀ ಐಪಿಎಲ್ ಕೂಟವನ್ನೇ ಅಲುಗಾಡಿಸುವ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಮಾತ್ರ ಭಾರೀ ಪ್ರಮಾಣದ ದಂಡ ವಿಧಿಸುವ ಸಂಭವನೀಯತೆ ಇದೆ ಎಂದು ವರದಿಯಾಗಿದೆ. ಅಂದ್ಹಾಗೆ ಐಪಿಎಲ್ನಲ್ಲೇ ಅತಿ ಯಶಸ್ವಿ ತಂಡವೆನಿಸಿರುವ ಸಿಎಸ್ಕೆ 2010, 2011ರಲ್ಲಿ ಚಾಂಪಿಯನ್ ಆಗಿದ್ದರೆ, 2008, 2012, 2013 ಮತ್ತು 2015ರಂದು ರನ್ನರ್ಅಪ್ ಎನಿಸಿಕೊಂಡಿತ್ತು. ಇನ್ನು ರಾಜಸ್ಥಾನ ರಾಯಲ್ಸ್ 2008ರ ಐಪಿಎಲ್ನ ಚೊಚ್ಚಲ ಆವೃತ್ತಿಯಲ್ಲಿ ಜಯಭೇರಿ ಬಾರಿಸಿತ್ತು.
ದಿಗ್ಗಜರ ಎದೆಬಡಿತ ಜೋರು! ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ನಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ಪಾಲ್ಗೊಂಡಿದ್ದಾರೆ ಎಂಬ ಸ್ಫೋಟಕ ಸಂಗತಿಯನ್ನು ಇಡೀ ಹಗರಣದ ಆಮೂಲಾಗ್ರ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನಿಯೋಗ ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತ್ತು.
ಆದರೆ ಆಟಗಾರರ ಹೆಸರನ್ನು ಈ ಸಂದರ್ಭದಲ್ಲಿ ನ್ಯಾಯಾಲಯ ಬಹಿರಂಗಪಡಿಸಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಐಪಿಎಲ್ ನ ಉಚ್ಛಾಟಿತ ಆಯುಕ್ತ ಲಲಿತ್ ಮೋದಿ ಕೂಡ ಸಿಎಸ್ಕೆ ತಂಡದ ಆಟಗಾರರು ಕಳ್ಳಾಟದಲ್ಲಿ ಶಾಮೀಲಾಗಿದ್ದಾರೆ ಎಂದು ಇತ್ತೀಚೆಗಷ್ಟೇ ಆರೋಪಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಸೇರಿದಂತೆ ರಾಜಸ್ತಾನ ರಾಯಲ್ಸ್ ನ ಪ್ರಧಾನ ಸಲಹೆಗಾರ ಹಾಗೂ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆದಿಯಾಗಿ ಪ್ರತಿಯೊಬ್ಬರೂ ತೀರ್ಪಿಗಾಗಿ ಕಾದಿದ್ದು, ಒಟ್ಟಾರೆ ದಿಗ್ಗಜರ ಎದೆಬಡಿತವನ್ನು ಇದು ಜೋರಾಗಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


