ಐಸಿಸಿಯಲ್ಲಿ ಕುರ್ಚಿ ಭದ್ರ ಮಾಡಿಕೊಂಡ ಶ್ರೀನಿವಾಸನ್
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಖ್ಯಸ್ಥ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ತಮ್ಮ ವಿರುದ್ಧ ಎದ್ದಿದ್ದ ಭಿನ್ನಮತ...

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಖ್ಯಸ್ಥ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ತಮ್ಮ ವಿರುದ್ಧ ಎದ್ದಿದ್ದ ಭಿನ್ನಮತ ಶಮನಗೊಳಿಸಿದ್ದು, ಐಸಿಸಿ ಮುಖ್ಯಸ್ಥರಾಗಿ ಮತ್ತೊಂದು ವರ್ಷದವರೆಗೆ ಮುಂದುವರಿಯಲಿದ್ದಾರೆಂದು `ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇತ್ತೀಚೆಗೆ, ಶ್ರೀನಿವಾಸನ್ ಹಾಗೂ ಬಿಸಿಸಿಐನ ಹಾಲಿ ಕಾರ್ಯದರ್ಶಿ ಅನುರಾಗ್ ಠಾಕೂರ್ ನಡುವೆ ಆಂತರಿಕ ಸಂಘರ್ಷ ಏರ್ಪಟ್ಟಿತ್ತು. ನೀತಿ ಸಂಹಿತೆ ಪಾಲನೆ ಬಗ್ಗೆ ಪರಸ್ಪರ ಟೀಕಾಸ್ತ್ರಗಳನ್ನು ಸುರಿಸಿದ್ದರು. ಈ ವಿಚಾರ ಯಾವ ಮಟ್ಟಿಗೆ ಬೆಳೆದಿತ್ತೆಂದರೆ ಠಾಕೂರ್ ಜೊತೆಗಿನ ವಿರಸ ಐಸಿಸಿಯಲ್ಲಿ ಶ್ರೀನಿವಾಸನ್ ಅವರು ಅಲಂಕರಿಸಿರುವ ಹುದ್ದೆಗೆ ಮುಳುವಾಗುವ ಸಾಧ್ಯತೆಗಳಿದ್ದವು. ಈ ವರ್ಷ ಶ್ರೀನಿವಾಸನ್ ಅವರ ಅಧಿಕಾರವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ , ಅವರ ಸ್ಥಾನಕ್ಕೆ ಬೇರೊಬ್ಬರನ್ನು ತಂದು ನೇಮಿಸುವ ಊಹಾಪೋಹಾಗಳೂ ಎದ್ದಿದ್ದವು. ಆದರೆ ಶ್ರೀನಿವಾಸನ್ ಅವರಿಗೆ ಇದು ಇಷ್ಟವಿರಲಿಲ್ಲ. ಮತ್ತೊಂದು ವರ್ಷಕ್ಕೆ ತಾವು ಐಸಿಸಿ ಮುಖ್ಯಸ್ಥರಾಗಿ ಮುಂದುವರಿಯುವ ಬಗ್ಗೆ ಅವರು ಆಸಕ್ತಿ ವಹಿಸಿದ್ದರು. ಅದಕ್ಕೆ ಬಿಸಿಸಿಐ ಬೆಂಬಲ ಅವರಿಗೆ ಬೇಕೇಬೇಕಿತ್ತು.
ಇದರಿಂದಾಗಿ ಎಚ್ಚೆತ್ತ ಶ್ರೀನಿವಾಸನ್ ಅವರು, ಕಳೆದ ತಿಂಗಳು ಬಾರ್ಬಡೋಸ್ ನಲ್ಲಿ ನಡೆದ ಮಹಾಧಿವೇಶನದ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಈ ಮಾತುಕತೆ ಸಫಲವಾಗಿದ್ದು ,ಇದೇ ವರ್ಷ ಸೆಪ್ಟಂಬರ್ ನಲ್ಲಿ ನಡೆಯುವ
ಬಿಸಿಸಿಐ ವಾರ್ಷಿಕ ಅಧಿವೇಶನದಲ್ಲಿ ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಶ್ರೀನಿವಾಸನ್ ಅವರ ಹೆಸರನ್ನೇ ಶಿಫಾರಸು ಮಾಡಲು ಅನುರಾಗ್ ಠಾಗೂರ್ ಭರವಸೆ ನೀಡಿದ್ದಾರೆಂದು ಹೇಳಲಾಗಿದೆ.
ತೀರ್ಪಿನಿಂದ ಸಂಕಟ: ಇದೇ ತಿಂಗಳ 14 ರಂದು 2013 ರ ಐಪಿಎಲ್ ಆವೃತ್ತಿಯಲ್ಲಿ ನಡೆದಿದ್ದ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರ ಬೀಳಲಿದೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಆರ್. ಎಂ ಲೋಧಾ ನೇತೃತ್ವದ ಸಮಿತಿಯು ಬೆಟ್ಟಿಂಗ್ ಹಗರಣದಲ್ಲಿ ಆರೋಪಿಗಳಾಗಿರುವ ಶ್ರೀನಿ ಅಳಿಯ ಗುರುನಾಥನ್ ಆರ್ ಆರ್ ಸಹ ಮಾಲೀಕ ರಾಜ್ ಕುಂದ್ರಾ ಐಪಿಎಲ್ ಸಿಒಒ ಸುಂದರ್ ರಾಮನ್ ಶಿಕ್ಷೆಯ ಪ್ರಮಾಣ ತಿಳಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


