ದಾಖಲೆಗಳಿಂದ ಜಿಂಬಾಬ್ವೆ ಜಾಲಾಡಿದ ಗೇಯ್ಲ್
ವೆಸ್ಟ್ ಇಂಡೀಸ್‍ನ ದೈತ್ಯ ಕ್ರಿಸ್ ಗೇಯ್, ತಮ್ಮ ಬ್ಯಾಟಿಂಗ್ ಆರ್ಭಟದ ಮೂಲಕ ವಿಶ್ವಕಪ್ ಅಷ್ಟೇ ಅಲ್ಲ ಜಾಗತಿಕ ಕ್ರಿಕೆಟ್‍ನಲ್ಲೇ ಹಲವು ಹೊಸ ಇತಿಹಾಸಗಳ ಸೃಷ್ಟಿಕರ್ತರಾಗಿದ್ದಾರೆ.

ಕ್ಯಾನ್ ಬೆರಾ: ವೆಸ್ಟ್ ಇಂಡೀಸ್‍ನ ದೈತ್ಯ ಕ್ರಿಸ್ ಗೇಯ್, ತಮ್ಮ ಬ್ಯಾಟಿಂಗ್ ಆರ್ಭಟದ ಮೂಲಕ ವಿಶ್ವಕಪ್ ಅಷ್ಟೇ ಅಲ್ಲ ಜಾಗತಿಕ ಕ್ರಿಕೆಟ್‍ನಲ್ಲೇ ಹಲವು ಹೊಸ ಇತಿಹಾಸಗಳ ಸೃಷ್ಟಿಕರ್ತರಾಗಿದ್ದಾರೆ.
ಮನುಕಾ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ `ಬಿ' ಗುಂಪಿನ ಪಂದ್ಯದಲ್ಲಿ ಕ್ರಿಸ್ ಗೇಯ್ ಹರಿಸಿದ ರನ್ ಹೊಳೆಯಲ್ಲಿ ಜಿಂಬಾಬ್ವೆ ಆಟಗಾರರು ಕೊಚ್ಚಿಹೋದರು. ಗುಡುಗು-ಸಿಡಿಲಿನಿಂದ ಕೂಡಿದ ಗೇಯ್ ರ ಬ್ಯಾಟಿಂಗ್ ಅಬ್ಬರದ ಮುಂದೆ ಜಿಂಬಾಬ್ವೆ ಪಡೆಗೆ ದಿಕ್ಕೇ ತೋಚದಂತಾಯಿತು.
ವಿಶ್ವಕಪ್‍ನಲ್ಲಿ ಮೊದಲ ದ್ವಿಶತಕ ದಾಖಲಿಸಿದ ಆಟಗಾರ, ಅತಿ ಹೆಚ್ಚು ಸಿಕ್ಸರ್ ಗಳಿಸಿದ ದಾಖಲೆಗೆ ಸಮವೇಗದ ದ್ವಿಶತಕ, ಅತ್ಯುತ್ತಮ ಜೊತೆಯಾಟದ ಸಾಧನೆ, ಸೀಮಿತ ಓವರುಗಳಲ್ಲಿ ವೆಸ್ಟ್ ಇಂಡೀಸ್ ಗರಿಷ್ಠ ಮೊತ್ತ ಸಂಪಾದನೆಗೆ ಕಾರಣನಾದುದು... ಹೀಗೆ ಅನೇಕ ದಾಖಲೆಗಳಿಗೆ ಭಾಜನನಾದ ಗೇಯ್ ರ ಬ್ಯಾಟಿಂಗ್ ಕ್ರಾಂತಿ ವಿಶ್ವವನ್ನೇ ಬೆರಗಾಗಿಸಿತು.
ಗೇಯ್ ರ ಈ ಸಾಧನೆಗೆ ಮತ್ತೊಂದು ತುದಿಯಲ್ಲಿ ಪ್ರತ್ಯಕ್ಷ ಸಾಕ್ಷಿ ರೂಪದಲ್ಲಿ ನಿಂತಿದ್ದ ಮರ್ಲಾನ್ ಸ್ಯಾಮುಯಿಲ್ಸ್ ಕೂಡ ಶತಕದ ಮೂಲಕ ಅಬ್ಬರಿಸಿದರು. ಗೇಯ್ ಮತ್ತು ಸ್ಯಾಮುಯಿಲ್ಸ್ ರ ಜುಗಲ್‍ಬಂಧಿ ವೆಸ್ಟ್ ಇಂಡೀಸ್ ತಂಡಕ್ಕೆ ಎದುರಾಳಿ ಜಿಂಬಾಬ್ವೆ ವಿರುದಟಛಿ ಡಕ್‍ವರ್ತ್ ಲೂಯಿಸ್ ನಿಯಮದನ್ವಯ 73 ರನ್‍ಗಳ ಅಭೂತಪೂರ್ವ ಗೆಲವು ತಂದುಕೊಟ್ಟಿತು.
ವೆಸ್ಟ್ ಇಂಡೀಸ್ ಒಡ್ಡಿದ್ದ 373 ರನ್‍ಗಳ ಗುರಿ ತಲುಪಬೇಕಿದ್ದ ಜಿಂಬಾಬ್ವೆ 2.3 ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 18 ರನ್‍ಗಳಿಸಿದಾಗ ಮಳೆ ಸುರಿಯಲಾರಂಭಿಸಿ ಕೆಲ ನಿಮಿಷಗಳ ಆಟಕ್ಕೆ ಅಡ್ಡಿಉಂಟು ಮಾಡಿತು. ಮತ್ತೆ ಪಂದ್ಯ ಆರಂಭಗೊಂಡಾಗ ನಿಗದಿತ ಓವರುಗಳಲ್ಲಿ 2 ಓವರುಗಳ ಕಡಿವಾಗಿ ಗುರಿಯಲ್ಲೂ ಸಹ 10 ರನ್ ಕಡಿಮೆ ಮಾಡಲಾಯಿತು. ಹಾಗಾಗಿ, ಜಿಂಬಾಬ್ವೆ ಗೆಲ್ಲಲು 48 ಓವರುಗಳಲ್ಲಿ 363 ರನ್ ಗಳಿಸಬೇಕಾಯಿತು.
ವಿಂಡೀಸ್‍ನ ಈ ಬೃಹತ್ ಮೊತ್ತದೆಡೆಗೆ ಸಾಗುವುದು ಜಿಂಬಾಬ್ವೆಗೆ ಸುಲಭವಾಗಿರಲಿಲ್ಲ. ಗುರಿಯತ್ತ ಸಾಗುವ ಭರದಲ್ಲಿ ಆರಂಭದಿಂದಲೇ ವಿಕೆಟ್ ಗಳನ್ನು ಕಳೆದು ಕೊಳ್ಳತೊಡಗಿತು. ಅಂತಿಮವಾಗಿ ಜಿಂಬಾಬ್ವೆ 44.3 ಓವರುಗಳಲ್ಲಿ 289 ರನ್‍ಗಳಿಸಲಷ್ಟೇ ಶಕ್ತವಾಯಿತು.
ಮಧ್ಯಮ ಹಂತದಲ್ಲಿ ಸೀನ್ ವಿಲಿಯಮ್ಸ್ ಮತ್ತು ಕ್ರೇಗ್ ಎರ್ವಿನ್ ಹೋರಾಟದ ಅರ್ಧಶತಕ ಗಳಿಸಿದರೂ ಸಹ ತಮ್ಮ ತಂಡದ ಪಾಳಯದಲ್ಲಿ ಗೆಲವಿನ ಆಸೆ ಚಿಗುರಿಸಲು ಯಾರಿಗೂ ಸಾಧ್ಯವಾಗಲಿಲ್ಲ. ವಿಂಡೀಸ್ ದಾಳಿಕಾರರಾದ ಟೇಲರ್ ಮತ್ತು ಹೋಲ್ಡರ್ ತಲಾ 3 ವಿಕೆಟ್ ಕಬಳಿಸಿದರು. ಬೌಲಿಂಗ್ ನಲ್ಲೂ ಸೈ ಎನಿಸಿದ ಗೇಯ್ 2 ವಿಕೆಟ್ ಉರುಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


