ಕ್ರೀಡೆ

ವಿಶ್ವಕಪ್: ದಕ್ಷಿಣ ಆಫ್ರಿಕಾಗೆ 308 ರನ್ ಟಾರ್ಗೆಟ್

ವಿಶ್ವಕಪ್ ಕ್ರಿಕೆಟ್ ನಿಮಿತ್ತ ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ದ.ಆಫ್ರಿಕಾಗೆ 308 ರನ್ ಟಾರ್ಗೆಟ್ ನೀಡಿದೆ..

ವಿಶ್ವಕಪ್: ದಕ್ಷಿಣ ಆಫ್ರಿಕಾಗೆ 308 ರನ್ ಟಾರ್ಗೆಟ್
ಶತಕ ಸಿಡಿಸಿದ ಶಿಖರ್ ಧವನ್ (ಸಂಗ್ರಹ ಚಿತ್ರ)
Published On :

ಮೆಲ್ಬರ್ನ್: ವಿಶ್ವಕಪ್ ಕ್ರಿಕೆಟ್ ನಿಮಿತ್ತ ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ದ.ಆಫ್ರಿಕಾಗೆ 308 ರನ್ ಟಾರ್ಗೆಟ್ ನೀಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ, ಆರಂಭಿಕ ಆಟಗಾರ ಶಿಖರ್ ಧವನ್ (132 ರನ್) ಮತ್ತು ಅಜಿಂಕ್ಯ ರಹಾನೆ (79 ರನ್ )ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 307 ರನ್ ಗಳನ್ನು ಕಲೆಹಾಕಿದರು.

ಭಾರತದ ಮೊತ್ತ 9 ರನ್‌ಗಳಾಗಿದ್ದ ವೇಳೆ ರೋಹಿತ್‌ ಶರ್ಮಾ ಅವರು ರನ್‌ ಔಟ್‌ಗೆ ಬಲಿಯಾಗುವ ಮೂಲಕ ತಂಡ ಆರಂಭಿಕ ಆಘಾತ ಎದುರಿಸುವಂತಾಯಿತು. ಆದರೆ ಆ ಬಳಿಕ ಜೊತೆಗೂಡಿದ ಶಿಖರ್‌ ಧವನ್‌ ಮತ್ತು ವಿರಾಟ್ ಕೊಹ್ಲಿ ಜೋಡಿ ತಾಳ್ಮೆಯ ಆಟವಾಡಿ ಭಾರತವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಮೋಘ ಶತಕದ ಜೊತೆಯಾಟ ಆಡಿದ ಈ ಜೋಡಿಯನ್ನು ದ.ಆಫ್ರಿಕಾದ ಇಮ್ರಾನ್ ತಾಹಿರ್ ಅವರು ಬೇರ್ಪಡಿಸಿದರು. 46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಕೊಹ್ಲಿ ಡುಪ್ಲಿಸಿಸ್ ಅವರಿಗೆ ಕ್ಯಾಚ್ ನೀಡಿ ಹೊರ  ನಡೆದರು.

ಬಳಿಕ ಕ್ರೀಸ್ ಗೆ ಆಗಮಿಸಿದ ರಹಾನೆ-ಶಿಖರ್ ಧವನ್ ಜೊತೆಗೂಡ ತಂಡದ ಮೊತ್ತವನ್ನು ಹಿಗ್ಗಿಸಿದರು. ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ನಿರ್ಧಾಕ್ಷೀಣ್ಯವಾಗಿ ದಂಡಿಸಿದ ಈ ಜೋಡಿ ಶತಕದ ಜೊತೆಯಾಟ ನೀಡಿತು. ಅಂತಿಮವಾಗಿ ಪಂದ್ಯದ 44ನೇ ಓವರ್ ನಲ್ಲಿ ಶತಕ ಸಿಡಿಸಿ ಆಟವಾಡುತ್ತಿದ್ದ ಶಿಖರ್ ಧವನ್ ಪಾರ್ನೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಬಳಿಕ ಬಂದ ಯಾವುದೇ ಆಟಗಾರರೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಟವಾಡಲಿಲ್ಲ. ಇನ್ನಿಂಗ್ಸ್ ಅಂತಿಮ ಓವರ್ ಗಳಾದ್ದರಿಂದ ಎಲ್ಲರೂ ಹೊಡಿಬಡಿ ಆಟಕ್ಕೆ ಮುಂದಾದರು. ಇದರಿಂದಾಗಿ ಭಾರತದ ಕೊನೆಯ ಕ್ರಮಾಂಕದ ಆಟಗಾರರು ಬೇಗ ಬೇಗನೇ ಪೆವಿಲಿಯನ್ ಸೇರಬೇಕಾಯಿತು.

ಧೋನಿ (18 ರನ್), ಸುರೇಶ್ ರೈನಾ (6 ರನ್), ರವೀಂದ್ರ ಜಡೇಜಾ (2 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲೇ 79 ರನ್ ಗಳಿಸಿದ್ದ ರಹಾನೆ ಕೂಡ ಸ್ಟೇಯ್ನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಅಂತಿಮವಾಗಿ ಭಾರತದ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 307 ರನ್ ಕಲೆಹಾಕಿತು.

ದಕ್ಷಿಣ ಆಫ್ರಿಕಾ ತಂಡದ ಪರ ಸ್ಟೇಯ್ನ್ 2 ವಿಕೆಟ್, ಮಾರ್ಕೆಲ್, ಇಮ್ರಾನ್ ತಾಹಿರ್ ಮತ್ತು ಪಾರ್ನೆಲ್ ತಲಾ ಒಂದು ವಿಕೆಟ್ ಕಬಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.