ಮರೆಯಲಾಗದ 10 ಘಟನೆಗಳು
ಕಳೆದ 10 ವಿಶ್ವಕಪ್‌ಗಳಲ್ಲಿ ಹಲವಾರು ರೋಚಕ ಘಟನೆಗಳು ನಡೆದಿವೆ. ಮೈದಾನದೊಳಗಿನ ಅಥವಾ...

ಮರೆಯಲಾಗದ 10 ಘಟನೆಗಳು
ಕಳೆದ 10 ವಿಶ್ವಕಪ್‌ಗಳಲ್ಲಿ ಹಲವಾರು ರೋಚಕ ಘಟನೆಗಳು ನಡೆದಿವೆ. ಮೈದಾನದೊಳಗಿನ ಅಥವಾ ಮೈದಾನದ ಹೊರಗಿನ ಘಟನೆಗಳಲ್ಲಿ ಆಟಗಾರರು, ತಂಡಗಳು ಹೆಚ್ಚು ಪ್ರಚಾರ ಪಡೆದಿದ್ದಾರೆ. ಸದಾ ಮೆಲುಕು ಹಾಕುವಂಥ ಕೆಲ ಘಟನೆಗಳ ಝಲಕ್ ಇಲ್ಲಿದೆ...
ಆಂಗ್ಲರನ್ನು ಸೋಲಿಸಿದ್ದ ಐರಿಷ್ ಆಟಗಾರ!
2011ರ ವಿಶ್ವಕಪ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ತನಗಿಂತಲೂ ಬಲಿಷ್ಠವಾಗಿದ್ದ ಇಂಗ್ಲೆಂಡ್ ತಂಡವನ್ನು ಐರ್ಲೆಂಡ್ ಸೋಲಿಸಿದ್ದು ಅಚ್ಚರಿಗಳಲ್ಲೇ ದೊಡ್ಡ ಅಚ್ಚರಿ. 63 ಎಸೆತಗಳಲ್ಲಿ 113 ರನ್ ಚಚ್ಚಿ ಐರ್ಲೆಂಡ್ ಗೆಲವಲ್ಲಿ ಮಹತ್ವದ ಪಾತ್ರ ವಹಿಸಿದ ಕೆವಿನ್ ಒಬ್ರಿಯಾನ್ ವಿಶ್ವಕಪ್‌ನಲ್ಲಿ ವೇಗದ ಶತಕ ಗಳಿಸಿದ ಹೆಗ್ಗಳಿಕೆಗೂ ಪಾತ್ರರಾದರು.
ದಕ್ಷಿಣ ಆಫ್ರಿಕಾದ ಹತಾಶೆ
1992ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಹರಿಣಗಳ ಪಡೆ ಅನುಭವಿಸಿದ ಯಾತನೆಯಿದು. ಗೆಲವಿಗೆ 13 ಎಸೆತಗಳಲ್ಲಿ 22 ರನ್ ಪೇರಿಸಬೇಕಿದ್ದ ಆಫ್ರಿಕಾ ಪಡೆಗೆ ಮಳೆರಾಯ ವಿಲನ್ ಆದ. ಬದಲಾದ ನಿಯಮಗಳ ಪ್ರಕಾರ, 1 ಎಸೆತಕ್ಕೆ 22 ರನ್ ಗಳಿಸುವ ಅಸಾಧ್ಯ ಗುರಿ ಹರಿಣಗಳಿಗೆ ಸಿಕ್ಕಿತು. ಗೆಲ್ಲಬೇಕಿದ್ದ ಹರಿಣಗಳಿಗೆ ಇದು ಅನಿರೀಕ್ಷಿತ ಸೋಲು.
ಅಮಲು ತಂದ ಆಪತ್ತು
2007ರ ವಿಶ್ವಕಪ್‌ನಲ್ಲಿ ತನ್ನ ಆರಂಭಿಕ ಪಂದ್ಯವನ್ನು ಇಂಗ್ಲೆಂಡ್ ಸೋತ ನಂತರ, ತಂಡದ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅಂದು ಸಂಜೆ ಕುಡಿದು ಕುಣಿದರು. ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿ ಸಿಕ್ಕಿಬಿದ್ದರು. ಅವರನ್ನು ಒಂದು ಪಂದ್ಯದ ಮಟ್ಟಿಗೆ ಅಮಾನತುಗೊಳಿಸಲಾಗಿತ್ತು.
ಕಪಿಲ್ ಹಿಡಿದ ಆ ಕ್ಯಾಚು!
1883ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ದೈತ್ಯ ವಿವಿಯನ್ ರಿಚರ್ಡ್ ಅವರ ಕ್ಯಾಚ್ ಹಿಡಿದ್ದು ಮರೆಯಲಾಗದ್ದು, ಕಪಿನ್ ಹಿಡಿದ ಆ ಕ್ಯಾಚು ಪಂದ್ಯದ ದಿಕ್ಕನ್ನನ್ನೇ ಬದಲಿಸಿ, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿತ್ತು.
ಶೇನ್... ಶೇಮ್ ಶೇಮ್!
ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು 2003ರ ವಿಶ್ವಕಪ್ ಸಂದರ್ಭದಲ್ಲಿ ಉದ್ದೀಪನಾ ಪರೀಕ್ಷೆಯಲ್ಲಿ ನಪಾಸಾಗಿದ್ದು ಕೇವಲ ಅವರ ಅಭಿಮಾನಿಗಳನ್ನಷ್ಟೇ ಅಲ್ಲ, ಇಡೀ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗಿಸಿತ್ತು. ಇದೇ ಕಾರಣಕ್ಕಾಗಿ ಶೇನ್ ಆ ಬಾರಿಯ ವಿಶ್ವಕಪ್ ಆಡಲಿಲ್ಲ.
ದಿಗ್ಬ್ರಮೆಗೊಳಿಸಿದ ಬಾಬ್ ವೂಲ್ಮರ್ ಸಾವು
2007ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ, ಐರ್ಲೆಂಡ್‌ನಂಥ ದುರ್ಬಲ ತಂಡದೆದುರು ಸೋಲನುಭವಿಸಿತ್ತು. ಆದರೆ, ಅದರಮರುದಿನವೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಬಾಬ್ ವೂಲ್ಮರ್ ಜಮೈಕಾದ ಹೋಟೆಲ್ ರೂಮ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇದು ವಿಶ್ವಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು.
ಮುಗಾಬೆ ವಿರುದ್ಧ ಮುಗಿಬಿದ್ದವರು!
2003ರ ವಿಶ್ವಕಪ್ ಪಂದ್ಯಾವಳಿಯ ವೇಳೆ ನಡೆದ ಘಟನೆಯಿದು. ಜಿಂಬಾಬ್ವೆ ತಂಡದ ಸ್ಟಾರ್ ಆಟಗಾರರಾದ ಆ್ಯಂಡಿ ಫ್ಲವರ್, ಹೆನ್ರಿ ಒಲಾಂಗಾ ಇಬ್ಬರೂ ತಮ್ಮ ದೇಶದ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ಆಡಳಿತದ ವಿರುದ್ಧ ದನಿಯೆತ್ತಿದರು. ಪ್ರತಿಭಟನಾ ಸೂಚಕವಾಗಿ 2003ರ ವಿಶ್ವಕಪ್‌ನ ಅಂಗವಾಗಿ ತಮ್ಮ ನೆಲದಲ್ಲಿ ತಾವಾಡಬೇಕಿದ್ದ ತಮ್ಮ ಪ್ರಥಮ ಪಂದ್ಯದ ವೇಳೆ, ಬಲಗೈ ತೋಳಿಗೆ ಕಪ್ಪು ಬೆಲ್ಟ್ ಧರಿಸಿ ಕಣಕ್ಕಿಳಿದಿದ್ದರು. ಈ ನಡೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೂ ಅಂತ್ಯ ಹಾಡಿತು.
ಸಿಹಿ ತಂದ ಅರವಿಂದ
ಆಂತರಿಕ ಸಂಘರ್ಷದಿಂದ ಜರ್ಝರಿತವಾಗಿದ್ದ ಶ್ರೀಲಂಕಾ ರಾಷ್ಟ್ರಕ್ಕೆ ವಿಶ್ವಕಪ್ ಸಂಭ್ರಮವನ್ನು ತಂದಿತ್ತರು ಅರವಿಂದ ಡಿಸಿಲ್ವಾ, ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮಾರ್ಕ್ ಟೇಲರ್, ಪಾಂಟಿಂಗ್ ಹಾಗೂ ಇಯಾನ್ ಹೆಲಿ ಅವರಂಥ ಘಟಾನುಟಿಗಳ ವಿಕೆಟ್ ಕೆಡವಿದ್ದ ಅವರು, ಬ್ಯಾಟಿಂಗ್‌ನಲ್ಲಿ ಅಜೇಯ 107 ರನ್ ಗಳಿಸಿ ಅಂಕನ್ನರ ವಿಶ್ವಕಪ್ ಕನಸನ್ನು ನನಸಾಗಿಸಿದರು.
ಗಮನ ಸೆಳದ ಬರ್ಮುಡಾದ ಪ್ರತಿಭೆ
2007 ವಿಶ್ವಕಪ್ ಪಂದ್ಯಾವಳಿಯಲ್ಲಿ ಬರ್ಮುಡಾ ತಂಡ ಪಾಲ್ಗೊಂಡಿತ್ತು. ಭಾರತ ವಿರುದ್ಧದ ಪಂದ್ಯದಲ್ಲಿ ಆ ತಂಡದ ಡ್ವೈನ್ ಲೆವೆರಾಕ್ ಅವರು ರಾಬಿನ್ ಉತ್ತಪ್ಪ ಅವರ ಕ್ಯಾಚ್ ಹಿಡಿದಿದ್ದು ಅದ್ಭುತವಾಗಿತ್ತು. ಬೌಂಡರಿ ಲೈನ್ ಬಳಿ ನಿಂತಿದ್ದ ದಢೂತಿ ಕಾಯದ ಡ್ವೈನ್, ತಮ್ಮ ಬಲಭಾಗಕ್ಕೆ ಹಾರಿ ಒಂದೇ ಕೈಯ್ಯಲ್ಲಿ ಹಿಡಿದ ಕ್ಯಾಚು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


