ಫೈನಲ್ ಪ್ರವೇಶಿದ ಗಂಭೀರ್ ಪಡೆ
ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಉನ್ಮುಕ್ತ್ ಚಾಂದ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ದೆಹಲಿ ತಂಡ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯ...

ಬೆಂಗಳೂರು: ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಉನ್ಮುಕ್ತ್ ಚಾಂದ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ದೆಹಲಿ ತಂಡ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ತಂಡ 6 ವಿಕೆಟ್‍ಗಳ ಅಂತರದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಗೆಲವು ದಾಖಲಿಸಿತು.
ಟಾಸ್ ಗೆದ್ದ ದೆಹಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‍ಗೆ ಇಳಿದ ಹಿಮಾಚಲ ಪ್ರದೇಶ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್‍ಗೆ 200 ರನ್ ದಾಖಲಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡ 41.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು.
ಹಿಮಾಚಲಕ್ಕೆ ಬಿಪುಲ್ ಆಸರೆ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಹಿಮಾಚಲ ಪ್ರದೇಶ ತಂಡ, ದೆಹಲಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಆರಂಭಿಕ ಅಂಕುಶ್ ಬೈನ್ಸ್ (6), ಪ್ರಶಾಂತ್ ಚೋಪ್ರಾ (33), ರಾಬಿನ್ ಬಿಷ್ತ್ (6), ಬೇಗನೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಬಿಪುಲ್ ಶರ್ಮಾ(51) ಆಕರ್ಷಕ ಅರ್ಧಶತಕ ದಾಖಲಿಸಿ ಹಿಮಾಚಲ ಪ್ರದೇಶ ತಂಡದ ಇನ್ನಿಂಗ್ಸ್ ಗೆ ಜೀವ ತುಂಬಿದರು. ದೆಹಲಿ ತಂಡದ ಪರ ಸುಬೋದ್ ಭಾಟಿ, ಪವನ್ ನೇಗಿ ಮತ್ತು ನಿತೀಶ್ ರಾಣಾ ತಲಾ 2 ವಿಕೆಟ್ ಪಡೆದರೆ, ಇಶಾಂತ್ ಮತ್ತು ನವ್‍ದೀಪ್ ತಲಾ 1 ವಿಕೆಟ್ ಪಡೆದರು.
ಜಯ ತಂದ ಉನ್ಮುಕ್ತ್: ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ದೆಹಲಿ ತಂಡಕ್ಕೆ ಮೂರನೇ ಕ್ರಮಾಂಕದ ಬ್ಯಾಟ್ಸ್‍ಮನ್ ಉನ್ಮುಕ್ತ್ ಚಾಂದ್ (ಅಜೇಯ 80) ಆಕರ್ಷಕ ಪ್ರದರ್ಶನ ನೀಡಿ ನೆರವಾದರು. ಆರಂಭಿಕರಾಗಿ ಕಣಕ್ಕಿಳಿದ ರಿಶಬ್ ಪಂತ್ (18), ಶಿಖರ್ ಧವನ್(39) ಜೋಡಿಯು ಕೇವಲ 32 ರನ್‍ಗಳ ಆರಂಭ ನೀಡಿತು. ಆ ಮೂಲಕ ತಂಡ ಆರಂಭದಲ್ಲಿ ಆಘಾತ ಅನುಭವಿಸಿತು.
ಈ ವೇಳೆ ಕಣಕ್ಕಿಳಿದ ಉನ್ಮುಕ್ತ್ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿದರು. ಹಿಮಾಚಲ ಪ್ರದೇಶ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಚಾಂದ್ ದೆಹಲಿ ತಂಡದ ರನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳುವಂತೆ ನೋಡಿಕೊಂಡರು. ನಂತರ ಬಂದ ನಾಯಕ ಗಂಭೀರ್ (16), ಮಿಲಿಂದ್ (10), ರಾಣಾ (ಅಜೇಯ 19) ತಂಡ ಜಯದತ್ತ ಸಾಗಲು ನೆರವಾದರು. ಹಿಮಾಚಲ ಪ್ರದೇಶ ತಂಡದ ಪರ ರೋನಿತ್ ಮೊರೆ, ಬಿಪುಲ್ ಶರ್ಮಾ ಮತ್ತು ನಿಖಿಲ್ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


