ಭಾರತ-ವಿಂಡೀಸ್ ಸರಣಿಗೆ ಮರುಜೀವ
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಭಾರತ ಪ್ರವಾಸಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಜತೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್...

Published On :
ಆ್ಯಂಟಿಗುವಾ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಭಾರತ ಪ್ರವಾಸಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಜತೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ(ಡಬ್ಲ್ಯೂಐಸಿ ಬಿ) ಮಾಡಿಕೊಂಡಿದ್ದ ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ.
ಅದರಂತೆ, 2014ರಲ್ಲಿ ರದ್ದಾಗಿದ್ದ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಯನ್ನು 2016ರಲ್ಲಿ ಕೈಗೊಳ್ಳುವ ಬಗ್ಗೆ ಡಬ್ಲ್ಯೂಐಸಿಬಿ ಕೈಗೊಂಡಿದ್ದ ಯತ್ನ ಫಲ ನೀಡಿದ್ದು, ಸರಣಿ ನಡೆಸಲು ಬಿಸಿಸಿಐ ಸಹ ಸಮ್ಮತಿಸಿದೆ. ಆದರೆ, ಈ ಬಾರಿಯ ಸರಣಿ ವೆಸ್ಟ್ ಇಂಡೀಸ್‍ನಲ್ಲಿ ನಡೆಯಲಿದ್ದು, 2016ರಲ್ಲಿ ಟೀಂ ಇಂಡಿಯಾ ಕೆರಿಬಿಯನ್ ದ್ವೀಪಕ್ಕೆ ತೆರಳಲಿದೆ.
ತಪ್ಪೊಪ್ಪಿಕೊಂಡ ವಿಂಡಿಸ್ ಮಂಡಳಿ: 2014ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡದ ಆಡಳಿತ ಮಂಡಳಿ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗರ ಸಂಸ್ಥೆಯ ನಡುವೆ ಸಂಭಾವನೆ ವಿಚಾರದಲ್ಲಿ ಭುಗಿಲೆದ್ದ ವಿವಾದವು ವಿಂಡೀಸ್ ತಂಡದ ಭಾರತ ಪ್ರವಾಸ ಅರ್ಧ ದಲ್ಲೇ ಮೊಟಕುಗೊಳ್ಳುವಂತೆ ಮಾಡಿತ್ತು. ಇದು ಬಿಸಿಸಿಐಗೆ ಶಾಕ್ ನೀಡಿತ್ತಲ್ಲದೆ, ಡಬ್ಲ್ಯೂಐ ಸಿಬಿ ಜತೆಗೆ ವಿವಾದ ವೇರ್ಪಡಲೂ ಕಾರಣವಾಯಿತು.
ವೆಸ್ಟ್ ಇಂಡೀಸ್‍ನಿಂದಾಗಿ ರದ್ದಾದ ಸರಣಿಯ ಸ್ಥಾನ ವನ್ನು ತುಂಬಲು ಯತ್ನಿಸಿದ್ದ ಬಿಸಿಸಿಐ, ನೆರೆಯ ಶ್ರೀಲಂಕಾ ತಂಡವನ್ನು ಭಾರತಕ್ಕೆ ಆಮಂತ್ರಿಸಿ, ಏಕದಿನ ಸರಣಿಯನ್ನು ನಡೆಸಿತ್ತು. ಇದೀಗ, ಕಾಲ ಬದಲಾಗಿದೆ. ಡಬ್ಲ್ಯೂ ಐಸಿಬಿಯಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಭಾರತದೊಂದಿಗೆ ಸರಣಿ ನಡೆಸಲು ಅದು ಸನ್ನದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಸಿಐಗೆ ಪತ್ರದ ಮುಖೇನ ಕ್ಷಮೆ ಕೋರಿರುವ ಡಬ್ಲ್ಯೂಐಸಿಬಿ, 2016ರಲ್ಲಿ ಸರಣಿ ನಡೆಸು ವ ಇಂಗಿತವನ್ನು ವ್ಯಕ್ತಪಡಿಸಿದೆ. ಅಲ್ಲದೆ, ವಿಂಡೀಸ್ ಮಂಡಳಿಯ ಅಧ್ಯಕ್ಷ ಡೇವ್ ಕ್ಯಾಮೆರೂನ್ ಹಾಗೂ ಬಿಸಿಸಿಐ ಅಧ್ಯಕ್ಷ ಶಶಾಂಕ್ ಸಹ ಈಗಾಗಲೇ ಮಾತುಕತೆ ನಡೆಸಿದ್ದು, ಸರಣಿಗೆ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.
ಇನ್ನೂ ಅಂತಿಮಗೊಂಡಿಲ್ಲ: ಉಭಯ ದೇಶಗಳ ಸರಣಿಯ ಆಶಯ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಮಂಡಳಿಯ ಆಂತಿರಿಕ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗರ ಸಂಸ್ಥೆಯ ಅಭಿಪ್ರಾಯವನ್ನೂ ಕೇಳಲಾಗುವುದು. ಈ ಎರಡ ಕಡೆ ಸಕಾರಾತ್ಮಕ ಸ್ಪಂದನೆ ದೊರೆತಲ್ಲಿ ಸರಣಿ ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂದು ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನೂರಾರು ಕೋಟಿ ನಷ್ಟ ತಂದಿದ್ದ ಸರಣಿ!
2014ರ ಭಾರತ- ವೆಸ್ಟ್ ಇಂಡೀಸ್ ಸರಣಿಯ ಅಂಗವಾಗಿ 5 ಏಕದಿನ, ಒಂದು ಟಿ20 ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಮೊದಲು ಆರಂಭಗೊಂಡ ಏಕದಿನ ಸರಣಿಯಲ್ಲಿ 4 ಪಂದ್ಯಗಳಲ್ಲಷ್ಟೇ ವೆಸ್ಟ್ ಇಂಡೀಸ್ ತಂಡ ಭಾಗವಹಿಸಿದ್ದು. ಐದನೇ ಪಂದ್ಯಕ್ಕೂ ಮುನ್ನವೇ ಭಿನ್ನಮತದ ಕಾರಣದಿಂದಾಗಿ ತಂಡವು ಸ್ವದೇಶಕ್ಕೆ ಮರಳಿತ್ತು. ತಂಡವೊಂದು ಸರಣಿಯ ಮಧ್ಯದಲ್ಲೇ ಸ್ವದೇಶಕ್ಕೆ ಮರಳಿದ್ದು ಕ್ರಿಕೆಟ್ ಇತಿಹಾಸದಲ್ಲಿ ಅದೇ ಮೊದಲು. ಅರ್ಧದಲ್ಲೇ ನಿಂತ ಸರಣಿಯಿಂದಾಗಿ ಬಿಸಿಸಿಐಗೆ ನೂರಾರು ಕೋಟಿ ರು. ನಷ್ಟವಾಗಿತ್ತು. ಇದರಿಂದ
ಘಾಸಿಕೊಂಡ ಬಿಸಿಸಿಐ, ವೆಸ್ಟ್ ಇಂಡೀಸ್ ವಿರುದ್ಧ ಕಾನೂನು ಸಮರಕ್ಕೂ ಸಿದ್ಧವಾಗಿತ್ತಲ್ಲದೆ, ಆಗಿರುವ ನಷ್ಟದಲ್ಲಿ 65 ಮಿಲಿಯನ್ ಡಾಲರ್ (ರು. 429 ಕೋಟಿ ಹಣ)ವನ್ನಾದರೂ ತನಗೆ ಕೊಡಬೇಕೆಂದು ಪಟ್ಟು ಹಿಡಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


