ಲಂಕಾ ಮೇಲೆ ಭಾರತದ ಹಿಡಿತ
ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಶನಿವಾರ ದಿನಾಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಪಡೆ...

ಕೊಲಂಬೊ: ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಶನಿವಾರ ದಿನಾಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಪಡೆ, ಭಾನುವಾರದ ದಿನದಾಟದಲ್ಲಿ ಅಜಿಂಕ್ಯ ರಹಾನೆಯವರ ಆಕರ್ಷಕ ಶತಕದ ಸಹಾಯದಿಂದ 325 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ಈ ಮೂಲಕ, ಪಂದ್ಯ ಗೆಲ್ಲಲು 413 ರನ್ ಗುರಿ ಪಡೆದ ಭಾರತ, ದಿನಾಂತ್ಯದ ಹೊತ್ತಿಗೆ 72 ರನ್ ಪೇರಿಸುವಷ್ಟರಲ್ಲಿ ಎರಡು ಮಹತ್ವದ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಶನಿವಾರ ದಿನಾಂತ್ಯಕ್ಕೆ 70 ರನ್ ಮೊತ್ತಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡದ 2ನೇ ಇನಿಂಗ್ಸ್ ಅನ್ನು ಆರಂಭಿಕ ಮುರಳಿ ವಿಜಯ್ ಹಾಗೂ ಮೂರನೇ ಕ್ರಮಾಂಕದ ಅಜಿಂಕ್ಯ ರಹಾನೆ ಮುಂದುವರಿಸಿದರು. 2ನೇ ವಿಕೆಟ್‍ಗೆ ಈ ಜೋಡಿ 140 ರನ್‍ಗಳ ಜೊತೆಯಾಟ ನೀಡುವ ಮೂಲಕ ಇನಿಂಗ್ಸ್‍ಗೆ ಶಕ್ತಿ ತುಂಬಿತು. ಎದುರಾಳಿ ಬೌಲರ್‍ಗಳನ್ನು ಸಮರ್ಥವಾಗಿ ದಂಡಿಸಿದ ಈ ಇಬ್ಬರೂ ರನ್ ಗತಿಯನ್ನು ಗಣನೀಯವಾಗಿ ಏರಿಸಿದ್ದು ತಂಡಕ್ಕೆ ನೆರವಾಯಿತು.
ತಂಡದ ಮೊತ್ತ 143 ರನ್ ಆಗಿದ್ದಾಗ ಮುರಳಿ ವಿಜಯ್ ಅವರನ್ನು ಕೌಶಲ್ ಪೆವಿಲಿಯನ್‍ಗೆ ಅಟ್ಟುವಲ್ಲಿ ಯಶಸ್ವಿಯಾದರು. ಮುರಳಿ ಹೊರನಡೆದ ಮೇಲೆ ಭಾರತೀಯ ಇನಿಂಗ್ಸ್ ಕೊಂಚ ಆತಂಕಕ್ಕೆ ಸಿಲುಕಿತು. ನಿಗದಿತ ಅಂತರದಲ್ಲಿ ಒಂದರ ಹಿಂದೊಂದರಂತೆ ವಿಕೆಟ್‍ಗಳು ಉದುರಲಾರಂಭಿಸಿದರು. ರೋಹಿತ್ ಶರ್ಮಾ(34ರನ್) ಬಿಟ್ಟರೆಮಿಕ್ಕವರ್ಯಾರೂ ಗಟ್ಟಿಯಾಗಿ ನಿಂತು ಆಡಲಿಲ್ಲ. ನಾಯಕ ವಿರಾಟ್ ಕೊಹ್ಲ ಸಹ ಕೇವಲ 10 ರನ್ ಗಳಿಸಿ ಔಟಾದರು.
ದಿಟ್ಟ ಹೋರಾಟ
ಆದರೆ, ವಿಕೆಟ್‍ನ ಮತ್ತೊಂದು ತುದಿ ಯಲ್ಲಿ ಅಜೇಯರಾಗುಳಿದಿದ್ದ ಅಜಿಂಕ್ಯ ರಹಾನೆ ಮಾತ್ರ ಭಾರತದ ಪಾಲಿಗೆ ಏಕೈಕ ಆಶಾಕಿರಣವಾದರು. ತಮ್ಮ ದಿಟ್ಟ ಹೋರಾಟ ಮುಂದುವರಿಸಿದ ಅವರು, ತಮ್ಮ ವೃತ್ತಿಜೀವನದ ನಾಲ್ಕನೇ ಶತಕ ಸಿಡಿಸಿದರು. ಅವರ ಈ ಶತಕದಿಂದ, ಭಾರತ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ತಂಡದ ಮೊತ್ತ 262 ರನ್ ಆಗಿದ್ದಾಗ ಅಜಿಂಕ್ಯ ವಿಕೆಟ್ ಒಪ್ಪಿಸಿ ಹೊರನಡೆದರು. ಆನಂತರ, ಮಧ್ಯಮ ಹಾಗೂ ಕೆಳಹಂತದ ಬ್ಯಾಟ್ಸ್‍ಮನ್‍ಗಳು ನೀಡಿದ ಅಲ್ಪ ಕಾಣಿಕೆಗಳ ಸಹಾಯದಿಂದಾಗಿ, ಭಾರತ ತಂಡ ಸಂಜೆಯ ಹೊತ್ತಿಗೆ 8 ವಿಕೆಟ್ ನಷ್ಟಕ್ಕೆ 325 ರನ್ ಪೇರಿಸಿತು.
ಅಷ್ಟರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಅಂತೂ ಇಂತೂ ದಿನದಾಟದಲ್ಲಿ ಭಾರತ ತಂಡದ ದ್ವಿತೀಯ ಇನಿಂಗ್ಸ್ ಅನ್ನು 300 ರನ್ ಒಳಗೇ ಕಟ್ಟಿಹಾಕುವ ಇರಾದೆ ಹೊಂದಿದ್ದ ಶ್ರೀಲಂಕಾ ಆಟಗಾರರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದು ಅಜಿಂಕ್ಯ ರಹಾನೆ. ಅವರ ಶತಕದಿಂದಾಗಿ, ಭಾರತ ತಂಡ ಪಂದ್ಯದಲ್ಲಿ ಲಂಕಾ ಮೇಲೆ ಹಿಡಿತ ಸಾಧಿಸಲು ಕಾರಣವಾಯಿತು.
ಆರಂಭಿಕ ಪೆಟ್ಟು
ಭಾರತ ತನ್ನ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಮೇಲೆ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡು ಆಘಾತಗಳನ್ನು ನೀಡಿದರು. ಇನಿಂಗ್ಸ್ ಮೊತ್ತ ಕೇವಲ 8 ರನ್ ಆಗಿದ್ದಾಗಲೇ ಆರಂಭಿಕ ಕೌಶಲ್ ಸಿಲ್ವಾ ವಿಕೆಟ್ ಉರುಳಿಸಿದ ಅವರು, ಆನಂತರ ವಿದಾಯದ ಪಂದ್ಯವನ್ನಾಡುತ್ತಿರುವ ಲಂಕಾದ ದೈತ್ಯ ಪ್ರತಿಭೆ ಕುಮಾರ ಸಂಗಕ್ಕಾರ ಅವರ ವಿಕೆಟನ್ನೂ ಕಬಳಿಸಿದರು. ದಿನಾಂತ್ಯದ ಹೊತ್ತಿಗೆ, ಶ್ರೀಲಂಕಾ ತಂಡ ತನ್ನ ಎರಡನೇ ಇನಿಂಗ್ಸ್‍ನಲ್ಲಿ ಎರಡು ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದೆ. ಅಜೇಯರಾಗುಳಿದಿರುವ ಆರಂಭಿಕ ಕರುಣಾರತ್ನೆ ಹಾಗೂ ನಾಯಕ ಏಂಜೆಲೊ ಮ್ಯಾಥ್ಯೂಸ್ ಸೋಮವಾರ ಇನಿಂಗ್ಸ್ ಮುಂದುವರಿಸಲಿದ್ದಾರೆ.
ನಿರಾಸೆಯ ವಿದಾಯ
ಶ್ರೀಲಂಕಾ ಕ್ರಿಕೆಟ್ ಕಂಡ ದೈತ್ಯ ಪ್ರತಿಭೆ ಕುಮಾರ ಸಂಗಕ್ಕಾರ ತಮ್ಮ ವಿದಾಯದ ಪಂದ್ಯವಾದ ಕೊನೆಯ ಟೆಸ್ಟ್ ಪಂದ್ಯದಲ್ಲಿ 50 ರನ್ ಗಳಿಸಿದ್ದಾರೆ. ಈ ಮೂಲಕ, ಭರ್ಜರಿ ಪ್ರದರ್ಶನದ ಮೂಲಕ ತಮ್ಮ ವೃತ್ತಿಜೀವನಕ್ಕೆ ಸಂಗಕ್ಕಾರ ವಿದಾಯ ಹೇಳಲಿದ್ದಾರೆಂಬ ಅವರ ಅವರ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಆತಿಥೇಯ ತಂಡದ ಮೊದಲ ಇನಿಂಗ್ಸ್‍ನಲ್ಲಿ 38 ರನ್ ಗಳಿಸಿ ಔಟಾಗಿದ್ದ ಅವರು, ಭಾನುವಾರ ನಡೆದ ಎರಡನೇ ಇನಿಂಗ್ಸ್‍ನಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಎರಡೂ ಬಾರಿ ಅವರು ಔಟಾಗಿರುವುದು ಅಶ್ವಿನ್ ಅವರಿಗೇ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


