ಕ್ರೀಡೆ

ಮುಂಬೈ ಇಂಡಿಯನ್ಸ್ ಗೆ ಜಯ

ಸ್ಫೋಟಕ ಬ್ಯಾಟ್ಸ್‍ಮನ್ ಎಬಿ ಡಿವಿಲಿಯರ್ಸ ಅವರ ಅಮೋಘ ಬ್ಯಾಟಿಂಗ್‍ನ ಹೊರತಾಗಿಯೂ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್...

ಮುಂಬೈ ಇಂಡಿಯನ್ಸ್ ಗೆ ಜಯ
ಮುಂಬೈ-ಬೆಂಗಳೂರು ನಡುವಿನ ಪಂದ್ಯ
Published On :

ಬೆಂಗಳೂರು: ಸ್ಫೋಟಕ ಬ್ಯಾಟ್ಸ್‍ಮನ್ ಎಬಿ ಡಿವಿಲಿಯರ್ಸ ಅವರ ಅಮೋಘ ಬ್ಯಾಟಿಂಗ್‍ನ ಹೊರತಾಗಿಯೂ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್ ತಂಡದೆದುರು 18 ರನ್ ಗಳ ಸೋಲು ಅನುಭವಿಸಿತು.

ಮೊದಲು ಬ್ಯಾಟ್ ಮಾಡಿದ್ದ ಮುಂಬೈ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ತಂಡ, 7 ವಿಕೆಟ್ ಕಳೆದುಕೊಂಡು 191 ರನ್ ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ, ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ತಂಡಕ್ಕೆ ಹಾಲಿ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲವು ಸಿಕ್ಕಿತು. ಮುಂಬೈ ತಂಡ ನೀಡಿದ್ದ ಬಹುದೊಡ್ಡ ಸವಾಲು ಮೆಟ್ಟಲು ಕ್ರೀಸ್‍ಗೆ ಇಳಿದ ಬೆಂಗಳೂರು ತಂಡದ ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಯ್ಲ್ ಹಾಗೂ ಮನ್ವಿಂದರ್ ಬಿಸ್ಲಾ ನಿಧಾನವಾಗಿ ರನ್ ಪೇರಿಸಲು ಆರಂಭಿಸಿದರು. ವಿಕೆಟ್ ಕಳೆದುಕೊಳ್ಳದೇ ಜಾಗರೂಕವಾಗಿ ಹೆಜ್ಜೆಯಿಡುವ ಅವರ ನಿರ್ಧಾರ ಅವರ ಆಟದಲ್ಲಿ ಎದ್ದು ಕಾಣುತ್ತಿತ್ತು.

ಆದರೆ, ತಂಡದ ಮೊತ್ತ 50 ರನ್ ಗಡಿಗೆ ದಾಟುವ ಮೊದಲೇ ಈ ಇಬ್ಬರೂ ವಿಕೆಟ್ ಒಪ್ಪಿಸಿ ಹೊರನಡೆದಿದ್ದು ತಂಡಕ್ಕೆ ಹೊಡೆತ ನೀಡಿತು. 6ನೇ ಓವರ್‍ನಲ್ಲಿ ಬಿಸ್ಲಾ ಹೊರನಡೆದರೆ, ಗೇಯ್ಲ್ 9ನೇ ಓವರ್‍ನಲ್ಲಿ ಪೆವಿಲಿಯನ್ ಹಾದಿಹಿಡಿದರು. ತಮಗೆ ಸಿಕ್ಕ ಎರಡು ಜೀವದಾನಗಳ ಲಾಭ ಪಡೆಯವಲ್ಲಿ ಗೇಯ್ಲ್ ಯಶಸ್ವಿಯಾಗಲಿಲ್ಲ. ಮೆಕ್ಲನಾಗನ್ ಮಾಡಿದ ಮೊದಲ ಓವರ್‍ನ ಎರಡನೇ ಎಸೆತದಲ್ಲೇ ಅವರು ನೀಡಿದ್ದ ಕ್ಯಾಚ್ ಅನ್ನು ಸಿಮನ್ಸ್ ಕೈಚೆಲ್ಲಿದರು. ನಂತರ, 8ನೇ ಓವರ್‍ನಲ್ಲೂ ಬುಮಾರ ಎಸೆತದಲ್ಲಿ ನೀಡಿದ್ದ ಕ್ಯಾಚನ್ನು ಮಾಲಿಂಗ ನೆಲಕ್ಕೆ ಹಾಕಿದರು. ಗೇಯ್ಲ್ ವಿಕೆಟ್ ಬೀಳುತ್ತಲೇ ಕ್ರೀಡಾಂಗಣದಲ್ಲಿದ್ದ ಬೆಂಗಳೂರು ತಂಡದ ಅಭಿಮಾನಿಗಳು ಗರ ಬಡಿದವರಂತೆ ನಿಂತುಬಿಟ್ಟರು.

ಈ ಹಂತದಲ್ಲಿ, ಅಭಿಮಾನಿಗಳಿಗೆ ಭರವಸೆಯ ಆಶಾಕಿರಣವಾಗಿದ್ದು ವಿರಾಟ್ ಕೊಹ್ಲಿ. 3ನೇ ವಿಕೆಟ್‍ಗೆ ದಿನೇಶ್ ಕಾರ್ತಿಕ್ ಜೊತೆಗೂಡಿ ಕುಸಿದಿದ್ದ ಇನಿಂಗ್ಸ್ ಮೇಲೆತ್ತಲು ಪ್ರಯತ್ನಿಸಿದರು. ಆದರೆ, ಅವರ ಆಟ ಹೆಚ್ಚು ನಡೆಯಲಿಲ್ಲ. ವೈಯಕ್ತಿಕವಾಗಿ ಕೇವಲ 18 ರನ್ ಗಳಿಸಿದ್ದ ಅವರು ಇನಿಂಗ್ಸ್‍ನ 11ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ ಕ್ರೀಸ್‍ಗೆ ಬಂದದ್ದು ಆಕ್ರಮಣಕಾರಿ ಬ್ಯಾಟ್ಸ್‍ಮನ್ ಎಬಿ ಡಿವಿಲಿಯರ್ಸ್.

ಬೆವರಿಳಿಸಿದ ವಿಲಿಯರ್ಸ್: ಸತತ ವಿಕೆಟ್ ಉರುಳಿದ್ದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಬೆಂಗಳೂರು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಎಬಿ ಡಿವಿಲಿಯರ್ಸ್. ಬರಬರುತ್ತಲೇ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಎತ್ತಿದ ಅವರು ಪ್ರೇಕ್ಷಕರಲ್ಲಿ ಮಿಂಚು ಹರಿಸಿದರು. ಕ್ರೀಸ್‍ನಲ್ಲಿರುವವರೆಗೂ ರನ್ ಹೊಳೆ ಹರಿಸಿದ ಅವರು, ಹೊಸ ಸಂಚಲನ ಸೃಷ್ಟಿಸಿದರು. ಆದರೆ, ಈ ಹಂತದಲ್ಲಿ ಡಿವಿಲಿಯರ್ಸ್‍ಗೆ ಉತ್ತಮ ಬೆಂಬಲವಾಗಿ ನಿಂತಿದ್ದ ದಿನೇಶ್ ಕಾರ್ತಿಕ್ ಹಾಗೂ ಅವರ ನಂತರ ಬಂದ ರಿಲೀ ರೊಸ್ಸೊ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ ಡಿವಿಲಿಯರ್ಸ್ (41 ರನ್, 11 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ವೀರೋಚಿತ ಹೋರಾಟ: ಇನಿಂಗ್ಸ್ ಮುಕ್ತಾಯವಾಗಲು ಕೊನೆಯ ಐದು ಓವರ್‍ಗಳಿದ್ದಾಗ ಜೊತೆಯಾದ ಡೇವಿಡ್ ವೈಸ್ ಹಾಗೂ ಇಕ್ಬಾಲ್ ಅಬ್ದುಲ್ಲಾ 7ನೇ ವಿಕೆಟ್‍ಗೆ ಉತ್ತಮ ಜೊತೆಯಾಟ ನೀಡಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸರ್ ಬಾರಿಸಿದ ಈ ಜೋಡಿ ಶತಾಯ ಗತಾಯ ಗೆಲ್ಲಲು ಪ್ರಯತ್ನಿಸಿತು. ಆದರೆ ಜಯದ ಗುರಿ ದೊಡ್ಡದಿದ್ದರಿಂದ ಈ ಹೋರಾಟ ವ್ಯರ್ಥವಾಯಿತು. ಅಂತಿಮ ಓವರ್ ನಲ್ಲಿ ಇಕ್ಬಾಲ್ ಅಬ್ದುಲ್ಲಾ ರನೌಟ್ ಆದರು. ನಂತರ ಡೇವಿಡ್‍ಗೆ ಜೊತೆಯಾದ 9ನೇ ಕ್ರಮಾಂಕದ ಅಹ್ಮದ್ ತಂಡದ ಮೊತ್ತವನ್ನು 191 ರನ್‍ಗಳಿಗೆ ತರುವಷ್ಟರಲ್ಲಿ ಇನಿಂಗ್ಸ್ ಮುಕ್ತಾಯವಾಯಿತು. ಕೊಹ್ಲಿ ಮಾಡಿದ ತಪ್ಪು: ತಮ್ಮ ತಂಡದ ಬ್ಯಾಟಿಂಗ್ ಲೈನಪ್ ಮೇಲಿನ ಅತಿಯಾದ ಆತ್ಮವಿಶ್ವಾಸವೋ ಏನೋ, ಟಾಸ್ ಗೆದ್ದಿದ್ದರೂ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿದರು.  

ಅದರಂತೆ ಕ್ರೀಸ್ ಗೆ ಇಳಿದ ಮುಂಬೈ ತಂಡ ಲೆಂಡ್ಲ್ ಸಿಮನ್ಸ್ ಹಾಗೂ ಪಾರ್ಥಿವ್ ಪಟೇಲ್ ಅವರಿಂದ ಉತ್ತಮ ಆರಂಭ ಪಡೆಯಿತು. ಪಾರ್ಥಿವ್ ಬೇಗನೇ ಔಟಾದರೂ, ನಂತರ ಕಾಲಿಟ್ಟ ಉನ್ಮುಕ್ತ್ ಚಾಂದ್ ಹಾಗೂ ಸಿಮನ್ಸ್, ಆರ್‍ಸಿಬಿ ಬೌಲರ್‍ಗಳ ಸಹನೆ ಪರೀಕ್ಷಿಸಿದರು. 2ನೇ ವಿಕೆಟ್‍ಗೆ ಈ ಜೋಡಿ 72 ರನ್ ಸೇರಿಸಿತು. ತಂಡದ ಮೊತ್ತ 119 ರನ್ ಆಗಿದ್ದಾಗ ಸಿಮನ್ಸ್ ವಿಕೆಟ್ ಒಪ್ಪಿಸಿದರು. ಇದಾದ ನಂತರ, ಚಾಂದ್ ಅವರನ್ನು ಸೇರಿಕೊಂಡಿದ್ದು ರೋಹಿತ್ ಶರ್ಮ. ಈ ಇಬ್ಬರ ಜೋಡಿ, ಕ್ರೀಡಾಂಗಣದಲ್ಲಿ ಅ„ಕ ಸಂಖ್ಯೆಯಲ್ಲಿ ಆಗಮಿಸಿದ್ದ ಮುಂಬೈ ತಂಡದ  ಅಭಿಮಾನಿಗಳನ್ನು ಅಕ್ಷರಶಃ ರಂಜಿಸಿತು.

ಆರ್‍ಸಿಬಿ ತಂಡದ ದುರ್ಬಲ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯ ಲಾಭ ಪಡೆದ ಈ ಇಬ್ಬರೂ, ಬೌಂಡರಿ, ಸಿಕ್ಸರ್‍ಗಳ ಮೂಲಕ ಕೇವಲ 25 ಎಸೆತಗಳಲ್ಲಿ 3ನೇ ವಿಕೆಟ್‍ಗೆ ಭರ್ಜರಿ 63 ರನ್
ಸೇರಿಸಿದರು. ಇವರಿಬ್ಬರ ಆಟದ ಸಹಾಯದಿಂದ ಮುಂಬೈ ತಂಡದ ಮೊತ್ತ 200 ರನ್ ಗಡಿ ದಾಟಿತು. ಅಂತಿಮವಾಗಿ ಪ್ರಸಕ್ತ ಸಾಲಿನಲ್ಲಿ ದೊಡ್ಡ ಮೊತ್ತ ಪೇರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್
(ಸನ್‍ರೈಸರ್ಸ್ ವಿರುದ್ಧ 209/4) ಸಾಧನೆಯನ್ನೂ ಮುಂಬೈ ಸರಿಗಟ್ಟಿತು. ಏತನ್ಮಧ್ಯೆ, ತಮ್ಮ ಟಿ20 ವೃತ್ತಿಜೀವನದ 100ನೇ ಪಂದ್ಯವಾಡಲು ಕ್ರೀಸ್‍ಗೆ ಇಳಿದ ಹರ್ಭಜನ್ ಸಿಂಗ್ ಡಕ್‍ಔಟ್ ಆಗಿ ಹೊರನಡೆದದ್ದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 209

ಸಿಮನ್ಸ್ ಸಿ ಅರುಣ್ ಬಿ ಚಾಹಲ್ 59 (44 ಎಸೆತ, 9 ಬೌಂಡರಿ, 2 ಸಿಕ್ಸರ್), ಪಾರ್ಥಿವ್ ಬಿ ವೈಸ್ 12 (13 ಎಸೆತ, 2 ಬೌಂಡರಿ), ಉನ್ಮುಕ್ತ್ ಸಿ ಕೊಹ್ಲಿ ಬಿ ಚಾಹಲ್ 58 (37 ಎಸೆತ, 8 ಬೌಂಡರಿ, 2  ಸಿಕ್ಸರ್), ರೋಹಿತ್ ಸಿ ಮತ್ತು ಬಿ ವೈಸ್ 42 (15 ಎಸೆತ, 3 ಬೌಂಡರಿ, 4 ಸಿಕ್ಸರ್), ಪೊಲಾರ್ಡ್ ಸಿ ಚಾಹಲ್ ಬಿ ವೈಸ್ 5 (3 ಎಸೆತ, 1 ಬೌಂಡರಿ), ರಾಯುಡು ಸಿ ಚಾಹಲ್ ಬಿ ವೈಸ್ 0 (1 ಎಸೆತ), ಹರ್ಭಜನ್ ರನೌಟ್ 0 (1 ಎಸೆತ). ಇತರೆ: (ಲೆಗ್ ಬೈ 4, ವೈಡ್ 13) 17.
ವಿಕೆಟ್ ಪತನ: 1--47, 2--119, 3--182, 4--188, 5--188, 6--192, 7--209.
ಬೌಲಿಂಗ್ ವಿವರ: ಅಬ್ದುಲ್ಲಾ 4-0-35-0, ವರುಣ್ 4-050-0, ಅಹ್ಮದ್
4-0-59-0, ವೈಸ್ 4-0-33-4, ಚಾಹಲ್ 4-028-2.

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‍ಗಳಲ್ಲಿ 7 ವಿಕೆಟ್‍ಗೆ 191
ಗೇಯ್ಲ್ ಬಿ ಹರ್ಭಜನ್ 10 (24 ಎಸೆತ), ಬಿಸ್ಲಾ ಬಿ ಹರ್ಭಜನ್ 20 (16 ಎಸೆತ 3 ಬೌಂಡರಿ, 1 ಸಿಕ್ಸರ್), ಕೊಹ್ಲಿ ಸಿ ರಾಯುಡು ಬಿ ಮೆಕ್ಲೆನಾಘನ್ 18 (18 ಎಸೆತ, 1 ಬೌಂಡರಿ, 1 ಸಿಕ್ಸರ್), ಕಾರ್ತಿಕ್ ಸಿ ಚಾಂದ್ ಬಿ ಮಾಲಿಂಗ 18 (11 ಎಸೆತ, 1 ಬೌಂಡರಿ, 1ಸಿಕ್ಸರ್), ಡಿವಿಲಿಯರ್ಸ್ ಸಿ ಪೊಲಾರ್ಡ್ ಬಿ ಬುಮಾರ 41 (11 ಎಸೆತ, 5 ಬೌಂಡರಿ, 3 ಸಿಕ್ಸರ್), ರೊಸೊ ಬಿ ಹರ್ಭಜನ್ 0 (1ಎಸೆತ), ವೈಸ್ ಅಜೇಯ 47 (25 ಎಸೆತ, 6 ಬೌಂಡರಿ, 2 ಸಿಕ್ಸರ್), ಅಬ್ದುಲ್ಲಾ ರನೌಟ್ 20 (15 ಎಸೆತ, 4 ಬೌಂಡರಿ), ಅಹ್ಮದ್ ಅಜೇಯ 1 (1 ಎಸೆತ). ಇತರೆ: (ಲೆಗ್ ಬೈ 1, ವೈಡ್ 13, ನೋಬಾಲ್ 2) 16.
ವಿಕೆಟ್ ಪತನ: 1--26, 2--48, 3--62, 4--97, 5-119, 6--125, 7--183.
ಬೌಲಿಂಗ್ ವಿವರ: ಮೆಕ್ಲೆನಾಘನ್ 4-0-43-1, ಮಾಲಿಂಗ 4-1-35-1, ಹರ್ಭಜನ್
4-0-27-3, ಬುಮಾರ 4-0-39-1, ಪಾಂಡ್ಯ 3-0-37-0, ಪೊಲಾರ್ಡ್ 1-0-9-0
ಪಂದ್ಯಶ್ರೇಷ್ಠ: ಹರ್ಭಜನ್ ಸಿಂಗ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.