ಸಿಂಕ್ಲೇರ್ ಪತ್ನಿ ಸೃಷ್ಟಿಸಿದ ಅವಾಂತರ
ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಸಿಂಕ್ಲೇರ್ ಕಾಣೆಯಾಗಿದ್ದಾರೆ.. ದಯವಿಟ್ಟು ಅವರನ್ನು ಹುಡುಕಿಕೊಡಿ...

ನೇಪಿಯರ್: `ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಸಿಂಕ್ಲೇರ್ ಕಾಣೆಯಾಗಿದ್ದಾರೆ.. ದಯವಿಟ್ಟು ಅವರನ್ನು ಹುಡುಕಿಕೊಡಿ...!' -- ದೂರವಾಣಿಯಲ್ಲಿ ಬಂದ ಈ ದೂರನ್ನು ಬೆನ್ನಟ್ಟಿದ
ಪೊಲೀಸರು ಸಿಂಕ್ಲೇರ್ಗಾಗಿ ಹುಡುಕಾಡಿದ ಪ್ರಕರಣ ಭಾನುವಾರ ನಡೆಯಿತು.
ಆ ಕಡೆಯಿಂದ ದೂರು ಕೊಟ್ಟಿದ್ದು ಬೇರ್ಯಾರೂ ಅಲ್ಲ.. ಖುದ್ದು ಸಿಂಕ್ಲೇರ್ ಅವರ ಪತ್ನಿ ಟೀನಾ. ಪೊಲೀಸರು ಸಿಕ್ಕಾಪಟ್ಟೆ ತೆಲೆಕೆಡಿಸಿಕೊಂಡು ನೇಪಿಯರ್ ನಗರದ ಗಲ್ಲಿಗಲ್ಲಿಗಳಲ್ಲಿ ಹುಡುಕಾಡಿದರು. ಸುಮಾರು ಒಂದೂವರೆ ಗಂಟೆಯ ಕಾರ್ಯಾಚರಣೆ ತರುವಾಯ, ರಸ್ತೆಯೊಂದರ ಬದಿಯಿದ್ದ ಫಾಸ್ಟ್ ಫುಡ್ ರೆಸ್ಟೋರೆಂಟ್ನಲ್ಲಿ ಸಿಂಕ್ಲೇರ್ ಸಿಕ್ಕರು. ತಮ್ಮೊಂದಿಗೆ ಇದ್ದ ಇಬ್ಬರು ಮಕ್ಕಳಿಗೆ ತಿಂಡಿ ತಿನ್ನಿಸುತ್ತಾ ಕೂತಿದ್ದರು.
ತಕ್ಷಣ ಧಾವಿಸಿದ ಪೊಲೀಸರು ಅವರಿಗೆ ನಡೆದುದೆಲ್ಲವನ್ನೂ ವಿವರಿಸಿ, ಇದ್ದಕ್ಕಿದ್ದಂತೆ ಕಾಣೆಯಾಗಿದ್ದರ ಬಗ್ಗೆ 30 ನಿಮಿಷಗಳ ಕಾಲ ವಿಚಾರಣೆ ನಡೆಸಿದರು. ಆಗಲೇ ಗೊತ್ತಾಗಿದ್ದು... ಇದು ಮನೆಯಲ್ಲಿನ ಕಿರಿಕ್ ಅಂತ! ಸಿಂಕ್ಲೇರ್ ಹಾಗೂ ಪತ್ನಿ ಟೀನಾ ವಿಚ್ಛೇದನ ಪಡೆಯಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಆಸ್ತಿ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿದೆ.
ಭಾನುವಾರವೂ ಪತ್ನಿ ಜೊತೆ ಜಗಳವಾಡಿದ್ದ ಸಿಂಕ್ಲೇರ್, ಏಕಾಏಕಿ ತಮ್ಮಿಬ್ಬರು ಮಕ್ಕಳಾದ ಲಿಯಾಮ್, ಹೋಲಿಯನ್ನು ಕಾರಿನಲ್ಲಿ ಕೂಡಿಸಿಕೊಂಡು ಹೊರಟೇಬಿಟ್ಟಿದ್ದಾರೆ. ಕೆಲವು ನಿಮಿಷಗಳ ತರುವಾಯ ಮಕ್ಕಳೊಂದಿಗೆ ಸಿಂಕ್ಲೇರ್ ಹೊರಹೋಗಿರುವುದನ್ನು ಅರಿತ ಟೀನಾ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಸತ್ಯಾಸತ್ಯತೆ ತಿಳಿದ ಮೇಲೆ ಪೊಲೀಸರು ಸಿಂಕ್ಲೇರ್ ಅವರನ್ನು ಅಲ್ಲೇಬಿಟ್ಟು ಹೊರಟುಹೋಗಿದ್ದಾರೆ. ಆದರೆ, ಸುಮ್ಮನೆ ತಮಗೆ ತಲೆಬಿಸಿ ತಂದಿದ್ದಕ್ಕಾಗಿ ಪತ್ನಿ ಟೀನಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. 1999ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಸಿಂಕ್ಲೇರ್ ಅವರು 214 ರನ್ ಗಳಿಸಿ, ದಿನಬೆಳಗಾಗುವುದರೊಳಗೆ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು. 2013ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


