ಐಪಿಎಲ್ 2015: ಮುಂಬೈಗೆ ಹ್ಯಾಟ್ರಿಕ್ ಸೋಲು, ರಾಯಲ್ಸ್‌ಗೆ ಹ್ಯಾಟ್ರಿಕ್ ಗೆಲುವು
ಆಟದ ಎಲ್ಲ ವಿಭಾಗಗಳಲ್ಲೂ ಕೆಚ್ಚೆದೆಯ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಎಂಟನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲವು ದಾಖಲಿಸಿದೆ.

ಅಹ್ಮದಾಬಾದ್: ಆಟದ ಎಲ್ಲ ವಿಭಾಗಗಳಲ್ಲೂ ಕೆಚ್ಚೆದೆಯ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಎಂಟನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲವು ದಾಖಲಿಸಿದೆ.
ಅಹ್ಮದಾಬಾದ್‍ನ ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್‍ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಸತತ ಮೂರನೇ ಆಘಾತ ಅನುಭವಿಸಿ ಸೋಲಿನ ಹಾದಿಯಲ್ಲೇ ಮುಂದುವರಿಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 19.1 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿತು.
ಪೊಲಾರ್ಡ್ ಅಬ್ಬರ: ಬೃಹತ್ ಮೊತ್ತವನ್ನು ಕಲೆ ಹಾಕುವ ನಿಟ್ಟಿನಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಮಟ್ಟದ ಆರಂಭ ಪಡೆಯಲಿಲ್ಲ. ಆದರೆ, ಇನಿಂಗ್ಸ್ ನ ಅಂತಿಮ ಘಟ್ಟದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಅವರ ಅಬ್ಬರದ ಆಟದ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗಕ್ಕೆ ಮುಂದಾದ ಪರಿಣಾಮ ಆರಂಭಿಕ ಎರಾನ್ ಫಿಂಚ್ ಜತೆಗೆ ಪಾರ್ಥಿವ್ ಪಟೇಲ್ ಇನಿಂಗ್ಸ್ ಆರಂಭಿಸಿದರು. ಆದರೆ ದುರಾದೃಷ್ಟವಶಾತ್ ಫಿಂಚ್ 10 ರನ್ ಗಳಿಸಿದ್ದಾಗ ಗಾಯಗೊಂಡು ಮೈದಾನದಿಂದ ಹೊರ ನಡೆದರು.
ನಂತರ ಬಂದ ಉನ್ಮುಕ್ತ ಚಾಂದ್ 12, ಪಾರ್ಥಿವ್ ಪಟೇಲ್ 16 ರನ್ ಗಳಿಸಿ ಔಟಾದರು. ಇನ್ನು ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್‍ಗೆ ಮರಳಿದರು. ಈ ಮೂಲಕ ತಂಡ 45 ರನ್ ಗಳಿಸುವಷ್ಟರಲ್ಲಿ 4 ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಈ ವೇಳೆ ಜತೆಯಾದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕೀರನ್ ಪೊಲಾರ್ಡ್ ಮತ್ತು ಕೋರಿ ಆ್ಯಂಡರ್ಸನ್ ತಮ್ಮ ಜೊತೆಯಾಟದಲ್ಲಿ ತಂಡಕ್ಕೆ 104 ರನ್‍ಗಳ ಕಾಣಿಕೆ ನೀಡುವ ಮೂಲಕ ಆಸರೆಯಾದರು.
ಆ್ಯಂಡರ್ಸನ್ ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 50 ರನ್ ದಾಖಲಿಸಿದರು. ಇನ್ನು ತಮ್ಮ ಅಬ್ಬರದ ಹೊಡೆತಗಳ ಮೂಲಕ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಕಳುಹಿಸಿದ ಪೊಲಾರ್ಡ್, ಕೇವಲ 34 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ನೆರವಿನಿಂದ 70 ರನ್ ದಾಖಲಿಸಿದರು. ಮುಂಬೈ ಇಂಡಿಯನ್ಸ್ 15 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 83 ರನ್‍ಗಳಿಸಿ ಸಾಧಾರಣ ಮೊತ್ತ ಗಳಿಸುವ ಸ್ಥಿತಿಯಲ್ಲಿತ್ತು. ಆದರೆ, ಅಂತಿಮ 5 ಓವರುಗಳಲ್ಲಿ 81 ರನ್ ಗಳಿಸಿದ್ದರಿಂದ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯಿತು.
ರಾಜಸ್ಥಾನ ರಾಯಲ್ಸ್ ತಂಡದ ಪರ ಟಿಮ್ ಸೌಥೀ, ಕ್ರಿಸ್ ಮೋರಿಸ್, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಪ್ರವೀಣ್ ತಾಂಬೆ ತಲಾ 1 ವಿಕೆಟ್ ಪಡೆದರು.
ಸಂಘಟಿತ ಬ್ಯಾಟಿಂಗ್
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾದ ಸಂಜು ಸ್ಯಾಮ್ಸನ್ (17) ಹಾಗೂ ಅಜಿಂಕ್ಯ ರಹಾನೆ (46) ಮೊದಲ ವಿಕೆಟ್‍ಗೆ 28 ರನ್‍ಗಳ ಸಾಧಾರಣ ಆರಂಭ ನೀಡಿದರು. ಸ್ಯಾಮ್ಸನ್ ನಿರ್ಗಮನದ ನಂತರ ಬಂದ ಸ್ಟೀವನ್ ಸ್ಮಿತ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಸ್ಮಿತ್ ಹಾಗೂ ರಹಾನೆ 2ನೇ ವಿಕೆಟ್‍ಗೆ 64 ರನ್‍ಗಳ ಜತೆಯಾಟ ನೀಡಿದರು. ಅರ್ಧಶತಕದ ಹೊಸ್ತಿಲಲ್ಲಿದ್ದ ರಹಾನೆಗೆ, ಶ್ರೇಯಸ್ ಗೋಪಾಲ್ ಪೆವಿಲಿಯನ್ ಹಾದಿ ತೋರಿದರು. ನಂತರ ಬಂದ ದೀಪಕ್ ಹೂಡಾ (12) ಎರಡು ಅಮೋಘ ಸಿಕ್ಸರ್ ಬಾರಿಸಿ ಬಂದ ವೇಗದಲ್ಲೇ ಹಿಂತಿರುಗಿದರು.
ಪಂದ್ಯದ ಮಹತ್ವದ ಹಂತದಲ್ಲಿ ಸ್ಮಿತ್ ಜತೆಗೂಡಿದ ಆಲ್ರೌಂಡರ್ ಜೇಮ್ಸ್ ಫಾಲ್ಕನರ್ ಜತೆಗೂಡಿ ಸಮಯೋಚಿತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲವಿನ ದಡ ಸೇರಿಸಿದರು. ಮುಂಬೈ ತಂಡದ ಪರ ವಿನಯ್, ಮಾಲಿಂಗ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


