ಆಸಿಸ್ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ರಿಚಿ ಬೆನಾಡ್ ನಿಧನ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರಿಚಿ ಬೆನಾಡ್ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು....

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರಿಚಿ ಬೆನಾಡ್ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಕ್ರಿಕೆಟ್ ಕ್ಷೇತ್ರದ ಪ್ರಮುಖ ವೀಕ್ಷಕ ವಿವರಣೆಗಾರರಲ್ಲಿ ಓರ್ವರಾದ ರಿಚಿ ಬೆನಾಡ್ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ ಎಂದು ಚಾನೆಲ್-9 ವರದಿ ಮಾಡಿದೆ. ರಿಚಿ ಬೆನಾಡ್ ಚರ್ಮದ ಕ್ಯಾನ್ಸರ್ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು 2013ರಲ್ಲಿ ನಡೆದ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ. 1930ರಲ್ಲಿ ಜನಿಸಿದ ರಿಚಿ ಬೆನಾಡ್ ಆಸ್ಟ್ರೇಲಿಯಾ ಪರ 63 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ಸಾವಿರ ರನ್ ಮತ್ತು 200 ವಿಕೆಟ್ ಗಳನ್ನು ಗಳಿಸಿದ ಮೊದಲ ಆಸಿಸ್ ಆಟಗಾರ ಎಂಬ ಖ್ಯಾತಿ ಗಳಿಸಿದ್ದರು.
ಬೆನಾಡ್ 27.03 ಸರಾಸರಿಯಲ್ಲಿ ಒಟ್ಟು 248 ವಿಕೆಟ್ ಗಳನ್ನು ಕಬಳಿಸಿದ್ದು, 16 ಬಾರಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೆ ಉತ್ತಮ ಆಲ್ ರೌಂಡರ್ ಆಗಿದ್ದ ಅವರು, ಬ್ಯಾಟಿಂಗ್ ನಲ್ಲಿಯೂ ತಮ್ಮ ಚಮತ್ಕಾರ ಪ್ರದರ್ಶನ ಮಾಡಿದ್ದು, 122 ರನ್ ಅವರ ಇನ್ನಿಂಗ್ಸ್ ಅತ್ಯಧಿಕ ಮೊತ್ತವಾಗಿದೆ.
ಅಂತೆಯೇ 28 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿರುವ ರಿಚಿ ಬೆನಾಡ್, ಅಜೇಯ ದಾಖಲೆ ಹೊಂದಿದ್ದಾರೆ. 1970ರಲ್ಲಿ ಕೆರ್ರಿಪಾಕರ್ಸ್ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಿಚಿ ಬೆನಾಡ್ ಬಳಿಕ ಚಾನೆಲ್-9 ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸಿದ್ದರು. 1964ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ರಿತಿ ಬೆನಾಡ್, ವೀಕ್ಷಕ ವಿವರಣೆದಾರರಾಗಿ ಮಿಂಚಿದರು. ಮೊದಲ ಬಾರಿಗೆ ಬಿಬಿಸಿ ಇಂಗ್ಲೆಂಡ್ ವಾಹಿನಿಯಲ್ಲಿ ವೀಕ್ಷಕ ವಿವರಣೆದಾರರಾಗಿ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸಿದ ರಿಚಿ ಬೆನಾಡ್ ಬಳಿಕ ಕಮೆಂಟೇಟರ್ ರಿಚಿ ಬೆನಾಡ್ ಎಂದೇ ಖ್ಯಾತಿ ಗಳಿಸಿದ್ದರು.
ತಮ್ಮ ಆಕರ್ಷಕ ವೀಕ್ಷಕ ವಿವರಣೆಯಿಂದಾಗಿ ವಿಶ್ವಾದ್ಯಂತ ಖ್ಯಾತಿಗಳಿಸಿದ್ದ ರಿಚಿ, "ವಾಯ್ಸ್ ಆಫ್ ಕ್ರಿಕೆಟ್"' ಎಂದೇ ಖ್ಯಾತಿಗಳಿಸಿದ್ದರು. ರಿಚಿ ವೀಕ್ಷಕ ವಿವರಣೆಗಾೇರರಾಗಿ ಎಷ್ಟು ಖ್ಯಾತಿ ಗಳಿಸಿದ್ದರು ಎಂದರೆ ಕ್ರಿಕೆಟ್ ಪಂದ್ಯದ ವೇಳೆ ಅವರು ಹೇಳುವ "ಮಾರ್ವೆಲಸ್ ಶಾಟ್" ಎಂಬ ಪದದಿಂದಾಗಿಯೇ ಕಮೆಂಟರಿ ಮಾಡುತ್ತಿರುವುದು ರಿಚಿ ಎಂದು ಪ್ರೇಕ್ಷಕರಿಗೆ ಅರ್ಥವಾಗಿಬಿಡುತ್ತಿತ್ತು. ಅಷ್ಟರ ಮಟ್ಟಿಗೆ ರಿಚಿ ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಭಾಷೆಯ ಮೂಲಕ ವೀಕ್ಷಕ ವಿವರಣೆ ನೀಡುತ್ತಿದ್ದರು. 2014 ನವೆಂಬರ್ ನಲ್ಲಿ ರಿಚಿ ಅವರಿಗೆ ಚರ್ಮದ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಕ್ರಮೇಣ ಅವರು ಕ್ರಿಕೆಟ್ ನಿಂದ ದೂರವುಳಿದರು.
ರಿಚಿ ಬೆನಾಡ್ ಅವರ ಸಾವಿನ ಸುದ್ದಿಯಿಂದಾಗಿ ಕ್ರಿಕೆಟ್ ಕ್ಷೇತ್ರ ಆಘಾತಕ್ಕೊಳಗಾಗಿದ್ದು, ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಾಟ್, ಆಸ್ಟ್ರೇಲಿಯಾ ತಂಡದ ಕ್ರಿಕೆಟಿಗ ಮೈಕಲ್ ಕ್ಲಾರ್ಕ್, ಅವರೊಂದಿಗೆ ಕಮೆಂಟರಿ ಮಾಡುತ್ತಿದ್ದ ಜಿಮ್ ಮ್ಯಾಕ್ಸ್ ವೆಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


