ಜೂನಿಯರ್ ಟಿಟಿ: ಭಾರತಕ್ಕೆ 4 ಚಿನ್ನ
ನಿರೀಕ್ಷೆಯಂತೆ ಭಾರತದ ಆಟಗಾರರು ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ..

ನವದೆಹಲಿ: ನಿರೀಕ್ಷೆಯಂತೆ ಭಾರತದ ಆಟಗಾರರು ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಪಂದ್ಯಾವಳಿಯ ಎರನಡೇ ದಿನವಾದ ಭಾನುವಾರ ತಂಡಗಳ ವಿಭಾಗದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಆಟಗಾರರು ಚಿನ್ನದ ಸಫಲತೆಯನ್ನು ತಂದುಕೊಟ್ಟರು. ದಿನದ ಸ್ಪರ್ಧೆಗಳಲ್ಲಿ ಬಂದ ಮೊದಲೆರಡು ಪದಕಗಳು ಜೂನಿಯರ್ ಬಾಯ್ಸ್ ವಿಭಾಗದಿಂದ ಬಂದರೆ, ಮತ್ತೆರಡು ಸ್ವರ್ಣ ಪದಕಗಳು ಡಬಲ್ಸ್ ವಿಭಾಗದಲ್ಲಿ ಜಯಶಾಲಿಯಾದ ಭಾರತ ತಂಡದಿಂದ ಬಂದವು.
ಭಾನುವಾರದ ಸ್ಪರ್ಧೆಗಳಲ್ಲಿ, ನಾಲ್ಕು ಸ್ವರ್ಣ ಪದಕಗಳನ್ನು ಗೆದ್ದ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, ನಾಲ್ಕು ಬೆಳ್ಳಿ ಪದಕ ಗೆದ್ದ ಶ್ರೀಲಂಕಾ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿತು. ಇನ್ನು, ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನ ತಂಡಗಳು ತಲಾ ಒಂದೊಂದು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.
ಆದರೆ, ತಂಡಗಳ ವಿಭಾಗದಲ್ಲಿ ಯಾವುದೇ ಪದಕ ಗೆಲ್ಲದ ಭೂತಾನ್ ಮಾತ್ರ ನಿರಾಸೆಯಲ್ಲೇ ದಿನದೂಡಬೇಕಾಯ್ತು.
ಕಳೆದ ಬಾರಿಯ ಪಂದ್ಯಾವಳಿಯಲ್ಲಿ ಮಾಡಿದ್ದ ಸಾಧನೆಯನ್ನೇ ಈ ಬಾರಿಯೂ ಪುನರಾವರ್ತಿಸಿದಭಾರತದ ಆಟಗಾರರು, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿದರು. ಜೂನಿಯರ್ ಬಾಯ್ಸ್ ವಿಭಾಗದಲ್ಲಿ ಸುಧಾಂಶು ಗ್ರೋವರ್ ಹಾಗೂ ಅಭಿಶೇಕ್ ಯಾದವ್ ಅವರು ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದು, ಎಲ್ಲರ ಗಮನ ಸೆಳೆಯಿತು.
ತಂಡಗಳ ವಿಭಾಗದ ಸ್ಪರ್ಧೆಗಳಲ್ಲಿ ಮೊದಲ ಪಂದ್ಯ ನಡೆದಿದ್ದು ಭಾರತ ಹಾಗೂ ನೇಪಾಳ ಆಟಗಾರರ ನಡುವೆ. ಈ ಪಂದ್ಯದಲ್ಲಿ ಭಾರತದ ಪರ ಸುಧಾಂಶು ಗ್ರೋವರ್ ಹಾಗೂ ನೇಪಾಳದ ಪರವಾಗಿ ಮಣಿ ಲಾಮಾ ಅವರು ಸೆಣೆಸಿದರು. ಮೊದಲ ಪಂದ್ಯದಲ್ಲಿ ಗ್ರೋವರ್ ಅವರು ಎದುರಾಳಿ ಲಾಮಾ ನೀಡಿದ ಉತ್ತಮ ಪೈಪೋಟಿಯ ಹೊರತಾಗಿಯೂ ಕೇವಲ ಮೂರು ಅಂಕಗಳ ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಆದರೆ, ನಂತರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲಾಮಾ ಅವರು ಗ್ರೋವರ್ಗಿಂತ ಉತ್ತಮವಾದ ಪ್ರದರ್ಶನ ನೀಡಿದರು. ಎರಡನೇ ಹಾಗೂ ಮೂರನೇ ಗೇಮ್ಗಳಲ್ಲಿ, ಗ್ರೋವರ್ ಮೇಲೆ ಒತ್ತಡ ಹೆಚ್ಚಿದ್ದರಿಂದ ಲಾಮಾ ಅವರು 2-1 ಅಂತರದ ಮುನ್ನಡೆ ಸಾಧಿಸುವಂತಾಯಿತು. ಆದರೆ, ನಾಲ್ಕನೇ ಗೇಮ್ನಲ್ಲಿ ಗ್ರೋವರ್ ಮತ್ತೆ ಪುಟೆದಿದ್ದರು. ಇದರಿಂದಾಗಿ, ಪಂದ್ಯದಲ್ಲಿ ಗ್ರೋವರ್ ಅವರು ಲಾಮಾ ವಿರುದ್ಧ 2-2ರ ಸಮಬಲ ಸಾಧಿಸುವಂತಾಯಿತು.
ಇನ್ನು, ಅಂತಿಮ ಪಂದ್ಯದಲ್ಲಿ ನೇಪಾಳದ ಆಟಗಾರ ಲಾಮಾ ಅವರು ಉತ್ತಮ ಪ್ರದರ್ಶನ ನೀಡಿದರಾದರೂ, ಪಂದ್ಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಲಿಲ್ಲ. ಅಂತಿಮ ಪಂದ್ಯದಲ್ಲೂ ಜಯ ಸಾಧಿಸಿದ ಗ್ರೋವರ್, ಚಿನ್ನದ ಗೌರವಕ್ಕೆ ಪಾತ್ರರಾದರು.
ಅಭಿಶೇಕ್ಗೆ ಸ್ವರ್ಣ: ಗ್ರೋವರ್ ಅವರಂತೆಯೇ ರೋಚಕವಾದ ಪಂದ್ಯಗಳನ್ನು ಗೆದ್ದು ಮತ್ತೊಂದು ಸುತ್ತಿನ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಮತ್ತೊಬ್ಬ ಆಟಗಾರ ಅಭಿಶೇಕ್ ಯಾದವ್, ತಮ್ಮ ಎದುರಾಳಿ ಶ್ರೀಲಂಕಾದ ಆಟಗಾರ ನಿರೋಶಾನಾ ಕಹಾವಾಥಾತಾ ವಿರುದ್ಧ ಉತ್ತಮವಾಗಿ ಸೆಣೆಸಿದರು. ಇವರಿಬ್ಬರ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು.
ಆರಂಭದ ಮೊದಲೆರಡು ಗೇಮ್ಗಳಲ್ಲಿ ಜಯ ಸಾಧಿಸಿದ್ದ ನಿರೋಶಾನಾ, ಭಾರತದ ಆಟಗಾರನನ್ನು ಸೋಲಿಸುವ ಎಲ್ಲಾ ರೀತಿಯ ಸೂಚನೆ ನೀಡಿದ್ದರು. ಆದರೆ, ನಂತರದ ಗೇಮ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭಿಶೇಕ್, ಪಂದ್ಯದಲ್ಲಿ ಜಯ ಸಾಧಿಸಿದರಲ್ಲದೇ, ಚಿನ್ನದ ಗೌರವಕ್ಕೆ ಪಾತ್ರರಾದರು.
ಡಬಲ್ಸ್ನಲ್ಲಿ ಚಿನ್ನ: ಇನ್ನು, ಡಬಲ್ಸ್ ವಿಭಾಗದಲ್ಲಿ, ಅಭಿಶೇಕ್ ಯಾದವ್ ಹಾಗೂ ರಾಜಶೇಖರ್ ಜೋಡಿ ಶ್ರೀಲಂಕಾದ ಜೋಡಿ ವಿರುದ್ಧ ಸೆಣೆಸಿ, ಜಯ ಸಾಧಿಸಿ, ಚಿನ್ನದ ಗೌರವವನ್ನು ಪಡೆಯಿತು.
ಇನ್ನು, ವನಿತೆಯರ ವಿಭಾಗದಲ್ಲಿ, ಜೂನಿಯರ್ ಹಾಗೂ ಕೆಡೆಟ್ ವಿಭಾಗಗಳಲ್ಲಿ ಭಾರತ ತಂಡ ಈಗಾಗಲೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅಲ್ಲದೇ, ವನಿತೆಯರ ವಿಭಾಗದಲ್ಲಿ ಭಾರತ ಮತ್ತಷ್ಟು ಪದಕಗಳನ್ನು ನಿರೀಕ್ಷಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


