ಚಾಂಪಿಯನ್ನರ ಹೀನಾಯ ಸೋಲು
ಕಿಂಗ್‌ಸ್ಟನ್: ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದ ಮತ್ತು ವಿಶ್ವ ಚಾಂಪಿಯನ್ ಭಾರತ ತಂಡ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 161 ರನ್‌ಗಳ ಭಾರೀ ಅಂತರದ ಹೀನಾಯ ಸೋಲನುಭವಿಸಿದೆ.
ಹೀಗಾಗಿ ಮೂರು ತಂಡಗಳು ಭಾಗವಹಿಸಿರುವ ಸರಣಿಯ ಅಂಕಪಟ್ಟಿಯಲ್ಲಿ ಭಾರತ ಕೊನೆಯ ಸ್ಥಾನ ಪಡೆದುಕೊಂಡಿದೆ.
ಇತ್ತೀಚೆಗಷ್ಟೇ ವಿಶ್ವದ ಬಲಿಷ್ಠ ತಂಡಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿದ್ದ ಭಾರತ ತ್ರಿಕೋನ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಲು ಕ್ರಿಕೆಟ್ ತಜ್ಞರು ತಮ್ಮದೇ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೈಕೊಟ್ಟ ಫೀಲ್ಡಿಂಗ್: ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಅಜೇಯವಾಗಿ ಪ್ರಶಸ್ತಿ ಗೆದ್ದಾಗ, ಅದರ ಫೀಲ್ಡಿಂಗ್ ಸಹ ಪ್ರಮುಖ ಪಾತ್ರವಹಿಸಿತ್ತು. ಪ್ರತಿಯೊಬ್ಬ ಕಾಮೆಂಟೇಟರ್ ಮತ್ತು ಪ್ರತಿಯೊಂದು ಅಂಕಣದಲ್ಲೂ ಟೀಂ ಇಂಡಿಯಾ ಫೀಲ್ಡಿಂಗ್ ಹಾಡಿ ಹೊಗಳಲಾಗಿತ್ತು. ಭಾರತದ ಯುವ ಪಡೆ ಪಂದ್ಯಾವಳಿಯಲ್ಲೇ ಅದ್ಭುತ ಫೀಲ್ಡಿಂಗ್ ಪ್ರದರ್ಶಿಸಿತು ಎಂದು ನಾಸೀರ್ ಹುಸೇನ್ ಸಹ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ, ಮಂಗಳವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರರು ತುಂಬಾ ಕಳಪೆ ಫೀಲ್ಡಿಂಗ್ ನಡೆಸಿದರು. 25 ರನ್ ಗಳಿಸಿದ್ದಾಗ ಮಹೇಲ ಜಯವರ್ಧನೆ ಅವರ ಕ್ಯಾಚ್ ಕೈಬಿಡಲಾಯಿತು. ಉಪಲ್ ತರಂಗಾ ಅವರು 2 ಮತ್ತು 91 ರನ್ ಗಳಿಸಿದ್ದಾಗ ಎರಡು ಬಾರಿ ಜೀವದಾನ ಪಡೆದರು.
ಕಳಪೆ ಬೌಲಿಂಗ್: ಇನ್ನು ತಂಡದ ಬೌಲಿಂಗ್ ಅನ್ನು ಒಂದು ಬಾರಿ ಅವಲೋಕನ ಮಾಡಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪರ ಬೌಲಿಂಗ್ ಮಾಡಿದ ಬೌಲರ್‌ಗಳು ಇವರೇನಾ ಎಂಬ ಸಂಶಯ ಕಾಡುತ್ತಿತ್ತು. ಪಂದ್ಯದಲ್ಲಿ ಪ್ರಮುಖ ಬೌಲರ್‌ಗಳಾದ ಶಮಿ ಅಹ್ಮದ್, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ 27 ಓವರ್‌ಗಳಲ್ಲಿ 200 ರನ್ ಸೊರಿಕೆ ಮಾಡಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಹೀಗಾಗಿ ತಂಡದ ಸೋಲಿನಲ್ಲಿ ಬೌಲರ್‌ಗಳ ದೌರ್ಬಲ್ಯ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು. ವೇಗಿಗಳಿಗೆ ನೆರವಾಗುವ ಆಂಗ್ಲರ ಪಿಚ್‌ಗಳಲ್ಲಿ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ್ದ ಉಮೇಶ್ ಯಾದವ್ ಮತ್ತು ಇಶಾಂತ್, ಯಾದವ್ ಸಹ ಮಿಂಚುವಲ್ಲಿ ವೈಫಲ್ಯ ಕಂಡರು.
ಇಂಗ್ಲೆಂಡ್‌ಗೆ ಹೋಲಿಸಿದರೆ ಭಿನ್ನವಾಗಿರುವ ಕಿಂಗ್‌ಸ್ಟನ್ ಪಿಚ್‌ಗಳಲ್ಲಿ ಭಾರತದ ಬೌಲರ್‌ಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಬೇಕಾಗಿತ್ತು. ಆದರೆ, ವಿಂಡೀಸ್ ವಿರುದ್ಧ ಒಂದು ಪಂದ್ಯದಲ್ಲಿ ಸೋತ ನಂತರವೂ ವೇಗಿಗಳು ತಮ್ಮ ತಪ್ಪನ್ನು ತಿದ್ದಿಕೊಂಡಿಲ್ಲ. ಅತಿಥೇಯ ತಂಡ ಉತ್ತಮ ಪ್ರದರ್ಶನ ತೋರುತ್ತಿದ್ದರೆ, ಶ್ರೀಲಂಕಾ ವೇಗಿಗಳೂ ಅಲ್ಲಿನ ಪಿಚ್‌ಗಳಿಗೆ ಹೊಂದಿಕೊಂಡು ಆಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಅಂತ್ಯದಲ್ಲಿ ಫಾರ್ಮ್ ಕಂಡುಕೊಂಡಿದ್ದ ಇಶಾಂತ್ ಇಲ್ಲಿ ವೈಫಲ್ಯ ಕಂಡರೆ, ಉಮೇಶ್ ಯಾದವ್ ಪ್ರತಿಯೊಂದು ಓವರ್‌ನಲ್ಲಿ ಎರಡು ಕೆಟ್ಟ ಎಸೆತಗಳನ್ನು ಎಸೆದರು. ಇದನ್ನು ಲಂಕಾ ಬ್ಯಾಟ್ಸ್‌ಮನ್‌ಗಳು ಸದುಪಯೋಗಪಡಿಸಿಕೊಂಡರು. ಇನ್ನು ಭುವನೇಶ್ವರ ಕುಮಾರ್ ಸ್ಥಾನದಲ್ಲಿ ಆಡಿದ ಶಮಿ ಅಹ್ಮದ್ ಸಹ ಯಾವುದೇ ರೀತಿಯ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಲಿಲ್ಲ. ಅಂತಿಮ ಓವರ್‌ಗಳಲ್ಲಿ ಅಹ್ಮದ್ ದುಬಾರಿ ಎನಿಸಿದರು.
ನಡೆಯದ ಸ್ಪಿನ್ ಮೋಡಿ: ಭಾರತ ತಂಡದಲ್ಲಿ ಹೊಸ ಸ್ಪಿನ್ ಮೋಡಿ ಮಾಡಿದ್ದ ರವಿಚಂದ್ರನ್ ಅಶ್ವಿನ್ ಮತ್ತು ರವಿಂದ್ರ ಜಡೇಜಾ ಜೋಡಿ ಕೆರಿಬಿಯನ್ ನಾಡಲ್ಲಿ ಕಂಗೆಟ್ಟಿದೆ. ಇಂಗ್ಲೆಂಡ್‌ನಲ್ಲಿ ಮಿಂಚಿದ್ದ ಈ ಜೋಡಿಗೆ, ವಿಕೆಟ್ ಪಡೆಯುವುದಿರಲಿ, ರನ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಒಟ್ಟು 19 ಓವರ್‌ಗಳ ಬೌಲಿಂಗ್ ಪ್ರದರ್ಶಿಸಿದ ಈ ಜೋಡಿ 122 ರನ್ ನೀಡಿ ಕೇವಲ 1 ವಿಕೆಟ್ ಕಬಳಿಸಿತು.
ಹೀಗಾಗಿ ಜಯವರ್ಧನೆ ಮತ್ತು ತರಂಗಾ ಭಾರತದ ಕಳಪೆ ಬೌಲಿಂಗ್ ಸದುಪಯೋಗ ಪಡೆದರು. ಆದರೆ, ಲಂಕಾ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಭುವನೇಶ್ವರ್‌ಗೆ ವಿರಾಮ ನೀಡಿದ್ದು:
ಮೊನಚಾದ ಬೌಲಿಂಗ್ ಪ್ರದರ್ಶಿಸುವ ಮೂಲಕ ಎದಾರಾಳಿ ತಂಡದಲ್ಲಿ ನಡುಕ ಹುಟ್ಟಿಸುತ್ತಿದ್ದ ಭುವನೇಶ್ವರ ಕುಮಾರ್ ಅವರಿಗೆ ವಿಶ್ರಾಂತಿ ನೀಡಿದ್ದು ತಂಡದ ಸೋಲಿಗೆ ಮತ್ತೊಂದು ಕಾರಣ ಎನ್ನಬಹುದು. ಭುವನೇಶ್ವರ ಸ್ಥಾನ ತುಂಬುವಲ್ಲಿ ಶಮಿ ಅಹ್ಮದ್ ವೈಫಲ್ಯ ಕಂಡರು. ಅಷ್ಟೇ ಅಂತಿಮ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಭುವನೇಶ್ವರ ಕುಮಾರ್ ಕೌಶಲ್ಯ ಅಹ್ಮದ್ ಅವರಿಗೆ ಇಲ್ಲ ಎಂಬುದು ಸ್ಪಷ್ಟವಾಗಿತ್ತು.
ಧೋನಿ ಅಲಭ್ಯತೆ: ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿ ಸಹ ತಂಡದ ಸೋಲಿಗೆ ಮೂಲಕ ಕಾರಣವೇ ಎನ್ನುವ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ನಾಯಕತ್ವ ನಿರ್ವಹಿಸಿರುವ ವಿರಾಟ್ ಕೊಹ್ಲಿ ಅವರಿಗೆ, ಭಾರತ ತಂಡವನ್ನು ನಿಭಾಯಿಸಲು, ಧೋನಿಯಂತೆ ಕಾರ್ಯತಂತ್ರ ಹೆಣೆಯಲು ಸಾಧ್ಯವಾಗುತ್ತಿಲ್ಲ. ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ತಂತ್ರಗಳ ಮೂಲಕ ಜಯದ ಹಾದಿಯನ್ನು ಹುಡುಕುತ್ತಾರೆ. ಆದರೆ, ಕೊಹ್ಲಿ ಆ ನಿಟ್ಟಿನಲ್ಲಿ ಇನ್ನೂ ಪಳಗಬೇಕಿದೆ.
22ನೇ ಏಕದಿನ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಮುನ್ನಡೆಸುವ ಅವಕಾಶ ದೊರಕಿತ್ತು. ದೊರಕಿದ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಮೆರೆಯಲು ಕೊಹ್ಲಿ ವಿಫಲವಾದರು.
20ನೇ ಓವರ್‌ವರೆಗೂ ಆರಂಭಿಕರ ವಿಕೆಟ್ ಕೀಳಲಾಗದಿದ್ದರೂ, ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿಲ್ಲ. ಇದೇ ಸಂದರ್ಭದಲ್ಲಿ ಧೋನಿ ಫೀಲ್ಡ್‌ಂಗ್‌ನಲ್ಲಿದ್ದರೆ, ವಿಭಿನ್ನವಾಗಿ ಯೋಚಿಸುತ್ತಿದ್ದರು. ಇದು ಈ ಇಬ್ಬರು ಆಟಗಾರರಲ್ಲಿರುವ ವ್ಯತ್ಯಾಸವನ್ನು ತೋರಿಸುತ್ತದೆ.
ಸ್ಕೋರ್ ಬೋರ್ಡ್
ಶ್ರೀಲಂಕಾ: 348/1 (50 ಓವರ್)
ತರಂಗಾ ಅಜೇಯ 174 (159), ಜಯವರ್ಧನೆ ಸಿ ಯಾದವ್ ಬಿ ಅಶ್ವಿನ್ 107 (112), ಮ್ಯಾಥ್ಯೂಸ್ ಅಜೇಯ 44 (29), ಇತರೆ 23
ವಿಕೆಟ್ ಪತನ: 1-213
ಬೌಲಿಂಗ್: ಶಮಿ ಅಹ್ಮದ್ 10-0-68-0, ಉಮೇಶ್ ಯಾದವ್ 8-0-64-0, ಇಶಾಂತ್ ಶರ್ಮಾ 9-0-68-0, ರವೀಂದ್ರ ಜಡೇಜಾ 9-0-55-0, ಅಶ್ವಿನ್ 10-0-66-1, ವಿರಾಟ್ ಕೊಹ್ಲಿ 2-0-9-0, ಸುರೇಶ್ ರೈನಾ 2-0-10-0
ಭಾರತ: 187/10 (44.5 ಓವರ್)
ರೋಹಿತ್ ಸಿ ಮ್ಯಾಥ್ಯೂಸ್ ಸಿ ಕುಲಸೇಕರ 5 (13), ಧವನ್ ಸಿ ತರಂಗಾ ಬಿ ಹೇರಾತ್ 24 (42), ವಿಜಯ್ ಬೌಲ್ಡ್ ಮಾಲಿಂಗ 30 (46), ಕೊಹ್ಲಿ ಸಿ ಮಾಲಿಂಗ ಬಿ ಮ್ಯಾಥ್ಯೂಸ್ 2 (5), ಕಾರ್ತಿಕ್ ಸ್ಟಂಪ್ ಸಂಗಕ್ಕಾರ ಬಿ ಹೆರಾತ್ 22 (41), ರೈನಾ ರನೌಟ್ 33 (33), ಜಡೇಜಾ ಅಜೇಯ 49 (62), ಅಶ್ವಿನ್ ಸಿ ಮಾಲಿಂಗ ಬಿ ಸೇನಾನಾಯಕೆ 4 (13), ಅಹ್ಮದ್ ಬೌಲ್ಡ್ ಸೇನಾನಾಯಕೆ 0 (1), ಇಶಾಂತ್ ಸಿ ಸಂಗಾಕ್ಕಾರ ಬಿ ಹೆರಾತ್ 2 (7), ಯಾದವ್ ಬೌಲ್ಡ್ ಮಾಲಿಂಗ 0 (6), ಇತರೆ 16.
ವಿಕೆಟ್ ಪತನ: 1-12, 2-52, 3-57, 4-65, 5-118, 6-142, 7-153, 8-153, 9-166, 10-187.
ಬೌಲಿಂಗ್: ಕುಲಸೇಕರ 9-0-37-1, ಮ್ಯಾಥ್ಯೂಸ್ 8-2-23-1, ಸೇನಾನಾಯಕೆ 10-0-46-2, ಹೆರಾತ್ 10-0-37-3, ಮಾಲಿಂಗ 7.5-0-40-2.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

