ಶಿಕಾರಿಪುರ: 92 ವರ್ಷದ ವೃದ್ಧೆ ಸೇರಿ ಒಂದೇ ಕುಟುಂಬದ 11 ಮಂದಿ ಕೊರೋನಾ ಗೆದ್ದು ಇತರರಿಗೆ ಮಾದರಿ!
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದ್ದು, ಹೆಮ್ಮಾರಿ ವೈರಸ್'ಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಇದರ ನಡುವೆಯೇ ಅದೃಷ್ಟಶಾಲಿಗಳೆಂಬಂತೆ ವೈರಸ್ ವಿರುದ್ಧ ಹೋರಾಡಿ ಜಯಿಸುತ್ತಿರುವವರ ಸಂಖ್ಯೆ ಕೂಡ ದೊಡ್ಡದಾಗಿಯೇ ಬೆಳೆಯುತ್ತಿದೆ.

ಶಿವಮೊಗ್ಗ: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದ್ದು, ಹೆಮ್ಮಾರಿ ವೈರಸ್'ಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಇದರ ನಡುವೆಯೇ ಅದೃಷ್ಟಶಾಲಿಗಳೆಂಬಂತೆ ವೈರಸ್ ವಿರುದ್ಧ ಹೋರಾಡಿ ಜಯಿಸುತ್ತಿರುವವರ ಸಂಖ್ಯೆ ಕೂಡ ದೊಡ್ಡದಾಗಿಯೇ ಬೆಳೆಯುತ್ತಿದೆ.
ಶಿಕಾರಿಪುರದಲ್ಲಿ 92 ವರ್ಷದ ವೃದ್ಧೆ ಸೇರಿ ಒಂದೇ ಕುಟುಂಬದ 11 ಮಂದಿ ಕೊರೋನಾ ಗೆದ್ದಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾಗಿ ಆತಂಕಕ್ಕೊಳಗಾಗಿರುವವರಿಗೆ ಹೊಸ ಆಶಾಭಾವನೆ ಮೂಡಿಸಿದ್ದಾರೆ.
ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ತಾಳಗುಂದ ಹೋಬಳಿ ಮಾಳಗೊಂಡನಕೊಪ್ಪ ಗ್ರಾಮದ ಹಿರಿಯಜ್ಜಿ ಇಂದಿರಾ ಬಾಯಿ ಅವರ ಇಡೀ ಕುಟುಂಬವೇ ಕೊರೋನಾ ಸೋಂಕಿಗೊಳಗಾಗಿತ್ತು.
ಇದೀಗ ಕುಟುಂಬದ 92 ವರ್ಷದ ಅಜ್ಜಿ ಇಂದಿರಾಬಾಯಿ, 70 ವರ್ಷದ ಪುತ್ರ ಸುಶೀಲೇಂದ್ರರಾವ್, ಮೊಮ್ಮಗ ನವೀನ್ ಕುಲಕರ್ಣಿ, ವಿಜಯ್ ಕುಲಕರ್ಣಿ ಸೇರಿ ಕುಟುಂಬದ ಎಲ್ಲಾ 11 ಮಂದಿಯೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಏಪ್ರಿಲ್ 10 ರಂದು ನವೀನ್ ಕುಲಕರ್ಣಿ ಹಾಗೂ ಅವರ ಸಹೋದರನ ಪತ್ನಿ ಜ್ವರದಿಂದ ಬಳಲುತ್ತಿದ್ದು, ಸ್ಥಳೀಯ ವೈದ್ಯರ ಬಳಿ ಹೋಗಿದ್ದಾರೆ. ಈ ವೇಳೆ ಔಷಧಿ ನೀಡಿದ ವೈದ್ಯರೂ. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಇಬ್ಬರೂ ಕೊರೋನಾ ಪರೀಕ್ಷೆ ನಡೆಸಿದ್ದಾರೆ. 7 ದಿನಗಳ ಬಳಿಕ ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ವೈದ್ಯಕೀಯ ಪರೀಕ್ಷಾ ವರದಿ ಬರುವವರೆಗೂ ನಾವು ವೈದ್ಯರು ನೀಡಿದ್ದ ಔಷಧಿಗಳನ್ನೇ ತೆಗೆದುಕೊಳ್ಳುತ್ತಿದ್ದೆವು. ಪಾಸಿಟಿವ್ ಬಂದ ಕೂಡಲೇ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದೆವು ಎಂದು ನವೀನ್ ಹೇಳಿದ್ದಾರೆ.
ಬಳಿಕ ವೈದ್ಯರು ಕುಟುಂಬದ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸುವಂತೆ ತಿಳಿಸಿದ್ದರು. ಏಪ್ರಿಲ್ 17 ರಂದು ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಬಳಿಕ ಎಲ್ಲರಿಗೂ ಪಾಸಿಟಿವ್ ಬಂದಿತ್ತು. ಎಲ್ಲರನ್ನೂ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 21 ಮತ್ತು 24 ಮಧ್ಯೆಯೇ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾದೆವು ಎಂದು ತಿಳಿಸಿದ್ದಾರೆ.
ಈ ದೊಡ್ಡ ಕುಟುಂಬದಲ್ಲಿ ಕೆಲವರು ಏ.4 ರಂದು ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಹಾಗೂ ಅದೇ ದಿನ ದಾವಣಗೆರೆಯಲ್ಲಿ ನಡೆದ ಸಂಬಂಧಿಕರ ಸಮಾರಂಭದಲ್ಲಿ ಇನ್ನು ಕೆಲವರು ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾದ ಬಳಿಕ ಕುಟುಂಬ ಸದಸ್ಯರಲ್ಲಿ ಕೊರೋನಾ ಲಕ್ಷಣಗೆಳು ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಎಲ್ಲಿಂದ ಸೋಂಕು ಹರಡಿತು ಎಂಬುದು ನಮಗೂ ಖಚಿತಾಗಿ ತಿಳಿಯುತ್ತಿಲ್ಲ. ಆದರೆ, ದೇವರ ದಯೆ ಹಾಗೂ ಸೂಕ್ತ ಸಮಯಕ್ಕೆ ವೈದ್ಯರೂ ನೀಡಿದ ಚಿಕಿತ್ಸೆಯಿಂದ ಗುಣಮುಖರಾಗಿದ್ದೇವೆ. ಇದೀಗ ಇಡೀ ಕುಟುಂಬ 8-10 ದಿನ ಹೋಮ್ ಐಸೋಲೇಷನ್ ನಲ್ಲಿ ಇರಲಿದ್ದೇವೆಂದು ನವೀನ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನಗೇನು ಭಯವಾಗಲಿಲ್ಲ. ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸಾಕಷ್ಟು ಬೆಂಬಲ ನೀಡುತ್ತಿದ್ದರು. ಇದಲ್ಲದೆ, ನನ್ನ ಕುಟುಂಬ ಸದಸ್ಯರೇ ನನ್ನ ಜೊತೆಗಿದ್ದರು. ಹೀಗಾಗಿ ನನಗೇನೂ ಭಯವಾಗಲಿಲ್ಲ ಎಂದು ನವೀನ್ ಕುಲಕರ್ಣಿಯವರ ಮೊಮ್ಮಗಳು ಶ್ರಾವಣಿ (9) ಹೇಳಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


