ಬೆಂಗಳೂರಿನ ಅತ್ಯಂತ ಭಯಾನಕ ಪ್ರದೇಶಗಳಿವು..!
ಹೌದು. ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಆದರೆ ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನಲ್ಲಿ ರಾತ್ರಿಯಾದರೆ ಒಂದೇ ಒಂದು ನರ ಪ್ರಾಣಿ ಕೂಡ ಸುಳಿಯದ ಸಾಕಷ್ಟು ಭಯಾನಕ ಪ್ರದೇಶಗಳಿವೆ...

Published On :
ದೇವರು ಮತ್ತು ದೆವ್ವ ಎಂಬ ನಂಬಿಕೆಗಳು ಆಯಾ ವ್ಯಕ್ತಿಗನುಗುಣವಾಗಿ ಭಿನ್ನವಾಗಿರುತ್ತವೆ. ಕೆಲವರು ದೇವರನ್ನು ನಂಬಿದರೆ, ಕೆಲವರು ದೆವ್ವಗಳ ಆಸ್ತಿತ್ವವನ್ನು ನಂಬುತ್ತಾರೆ. ಆದರೆ ದೇವರು- ದೆವ್ವಗಳ ಇರುವಿಕೆ ಅಥವಾ ಮಾನವಾತೀತ ಶಕ್ತಿಗಳ ಅಸ್ತಿತ್ವವನ್ನು ಕಡೆಗಣಿಸಲು ಸಾಧ್ಯವಿಲ್ಲ. ನೀವು ನಂಬಿದರೆ, ನಂಬಿ ಬಿಟ್ಟರೆ ಬಿಡಿ. ಕೆಲ ವಿವರಿಸಲಾಗದ ವಿದ್ಯಮಾನಗಳು ನಿಮ್ಮ ಆಸಕ್ತಿ ಕಸಿಯಲು ಪ್ರಯತ್ನಿಸುತ್ತಿರುತ್ತವೆ. ಇಂತಹ ವಿದ್ಯಮಾನಗಳ ಹಿಂದೆ ಇದೇ ಮಾನವಾತೀತ ಶಕ್ತಿಗಳ ಕೈವಾಡವಿರುತ್ತದೆ ಎಂಬುದು ಹಲವರ ನಂಬಿಕೆ.
ಕೆಲವರು ಹೇಳುತ್ತಾರೆ ದೆವ್ವ, ಭೂತ-ಪ್ರೇತ ಶಕ್ತಿಗಳನ್ನು ಮಾಟಗಾರರು ಅಥವಾ ಮಾಟಗಾತಿಯರು ಹಣಕ್ಕಾಗಿಯೋ ಅಥವಾ ಮತ್ತೊಬ್ಬರ ಮೇಲಿನ ಧ್ವೇಷಕ್ಕಾಗಿಯೋ ಇನ್ನೊಬ್ಬರ ಮೇಲೆ ಪ್ರಯೋಗಿಸುತ್ತಾರೆ. ಇಂತಹ ಅತೀತಶಕ್ತಿಗಳು ಪ್ರಯೋಗಕ್ಕೆ ಒಳಗಾದ ವ್ಯಕ್ತಿಯ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆಯಾದರೂ, ಸ್ಪಷ್ಟ ಪುರಾವೆಗಳು ದೊರೆಯದೇ ಇಂತಹ ಪ್ರಕರಣಗಳು ನೂರು ಮತ್ತೊಂದು ಎನ್ನುವಂತಾಗುತ್ತದೆ.
ಇನ್ನು ನಮ್ಮ ಬೆಂಗಳೂರಿನ ವಿಚಾರಕ್ಕೆ ಬರುವುದಾದರೆ ಅಂದಿನ ಬೆಂದಕಾಳೂರು ಇಂದು ಬೆಂಗಳೂರಾಗಿ ವಿಶ್ವಾದ್ಯಂತ ಸಿಲಿಕಾನ್ ಸಿಟಿಯಾಗಿ ಖ್ಯಾತಿ ಗಳಿಸುತ್ತಿದೆ. ಐಟಿ ಸಂಸ್ಥೆಗಳು ಬೆಂಗಳೂರನ್ನು ಸಿಲಿಕಾನ್ ಸಿಟಿ ಖ್ಯಾತಿಗೆ ಒಳಗಾಗುವಂತೆ ಮಾಡಿವೆ. ಬೃಹತ್ ಉದ್ದಿಮೆಗಳು, ಬೃಹತ್ ಕಟ್ಟಡಗಳು ಬೆಂಗಳೂರನ್ನು ಪ್ರತಿನಿತ್ಯ ಬದಲಾಗುವಂತೆ ಮಾಡುತ್ತಿವೆ. ಆದರೆ ಇಂತಹ ನಿತ್ಯ ಸುಂದರಿ ಬೆಂಗಳೂರಲ್ಲಿಯೂ ಕೂಡ ಕೋಟಿ ಕೊಟ್ಟರೂ ಬೇಡ ಎನ್ನುವ ಭಯಾನಕ ಸ್ಥಳಗಳಿವೆ ಎಂದರೆ ನೀವು ನಂಬುವಿರಾ..?
ಹೌದು. ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಆದರೆ ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನಲ್ಲಿ ರಾತ್ರಿಯಾದರೆ ಒಂದೇ ಒಂದು ನರ ಪ್ರಾಣಿ ಕೂಡ ಸುಳಿಯದ ಸಾಕಷ್ಟು ಭಯಾನಕ ಪ್ರದೇಶಗಳಿವೆ. ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲಿ ಓಡಾಡುವ ಜನ ರಾತ್ರಿಯಾದರೆ ಅತ್ತ ಮುಖಕೂಡ ಹಾಕಿ ಮಲಗುವುದಿಲ್ಲ.
1. ಹಳೇ ಮದ್ರಾಸ್ ರಸ್ತೆಯ ಕ್ರಿಶ್ಚಿಯನ್ ಸ್ಮಶಾನ

ಸ್ಮಶನಾಗಳು ಭಯಾನಕ ಪ್ರದೇಶಗಳು ಎಂದು ತಿಳಿದಿದೆಯಾದರೂ, ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿರುವ ಈ ಸ್ಮಶಾನ ಕೊಂಚ ಭಿನ್ನ ಮತ್ತು ಅತಿ ಭಯಾನಕ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ. ಇನ್ನು ರಾತ್ರಿ ವೇಳೆ ಇಲ್ಲಿ ಓಡಾಡಿದ ಕೆಲ ಮಂದಿ ಸಮಾಧಿಗಳ ನಡುವೆ ಬಿಳಿ ಶವಗಳು ಹರಿದಾಡಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ. ರಾತ್ರಿಯಾಗುತ್ತಲೇ ಸ್ಮಶಾನದಿಂದ ವಿಚಿತ್ರ ಶಬ್ದಗಳು ಮತ್ತು ಕಿರುಚಾಟಗಳು ಕೇಳಿಬರುತ್ತವೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
2.ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರಿನ ಕೆಆರ್ ಮಾರುಕಟ್ಟೆ ಬಳಿ ಇರುವ ವಿಕ್ಟೋರಿಯಾ ಆಸ್ಪತ್ರೆ ಶತಮಾನಗಳಷ್ಟು ಇತಿಹಾಸ ಹೊಂದಿದೆ. ಭವ್ಯ ಮತ್ತು ಸುಂದರ ಕಟ್ಟಡವಾಗಿರುವ ವಿಕ್ಟೋರಿಯಾ ಆಸ್ಪತ್ರೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಭಯಾನಕ ಎಂದೂ ಕೂಡ ಹೇಳಲಾಗುತ್ತದೆ. ಶತಮಾನಗಳಿಂದಲೂ ಈ ಕಟ್ಟಡ ಸಾಕಷ್ಟು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ. ಇಲ್ಲಿ ಕೆಲಸ ಮಾಡುವ ಹಲವು ಸಿಬ್ಬಂದಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಈ ಕಟ್ಟಡದ ಆಸುಪಾಸಿನಲ್ಲಿ ದೆವ್ವಗಳನ್ನು ನೋಡಿರುವುದಾಗಿ ಮತ್ತು ಅಂತಹ ಅನುಭವವಾದ ಕುರಿತು ಹೇಳಿದ್ದಾರೆ. ಕೆಲವರಿಗೆ ವಿಚಿತ್ರ ಆಕೃತಿಗಳ ಮೂಲಕ ಕಾಣಿಸಿಕೊಂಡರೆ, ಮತ್ತೆ ಕೆಲವರಿಗೆ ವಿಚಿತ್ರ ಘಟನೆಗಳ ಅನುಭವವಾಗಿದೆ. ಪ್ರಮುಖವಾಗಿ ಇಲ್ಲಿನ ಪ್ರಸವ ವಿಭಾಗ ಅಥವಾ ಹೆರಿಗೆ ವಿಭಾಗ (Maternity Section) ಮತ್ತು ಶವಾಗಾರದ ಆಸುಪಾಸಿನಲ್ಲಿ ಇಂತಹ ಘಟನೆಗಳು ವರದಿಯಾಗಿದೆ.
3.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರಿನ ಅತ್ಯಂತ ಭಯಾನಕ ಪ್ರದೇಶಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾದ ಪ್ರದೇಶ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವಾಗಿ ರಾತ್ರಿ ವೇಳೆ ಪ್ರಯಾಣ ಮಾಡಿರುವ ಪ್ರಯಾಣಿಕರಿ ಇಲ್ಲಿ ಕಹಿ ಅನುಭವಗಳಾಗಿರುವ ಕುರಿತು ಮಾಹಿತಿ ದೊರೆತಿವೆ. ಪ್ರಮುಖವಾಗಿ ಇಲ್ಲಿನ ರನ್ ವೇ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಮತ್ತು ವಿಮಾನದ ಪೈಲಟ್ ಗಳು ಹೇಳಿರುವಂತೆ ರನ್ ವೇನಲ್ಲಿ ಕೆಲ ವಿಚಿತ್ರ ವ್ಯಕ್ತಿಗಳು ಸಂಚರಿಸುತ್ತಾರಂತೆ. ಶ್ವೇತ ವರ್ಣದ ವಸ್ತ್ರಧಾರಿಗಳಾದ ಇವರು ರನ್ ವೇ ಮೇಲೆ ಏಕಾಂಗಿಯಾಗಿ ಸಂಚರಿಸುತ್ತಾರಂತೆ. ಸಾಕಷ್ಚು ಬಾರಿ ವಿಮಾನ ಪೈಲಟ್ ಗಳು ಮತ್ತು ಸಿಬ್ಬಂದಿಗಳು ಇವರನ್ನು ಮನುಷ್ಯರು ಎಂದು ತಿಳಿದು ಎಚ್ಚರಿಸುವ ಕಾರ್ಯಕ್ಕೆ ಮುಂದಾಗಿ ಅವರ ಬಳಿ ಹೋಗುತ್ತಲೇ ಅವರು ನಾಪತ್ತೆಯಾಗಿರುತ್ತಾರಂತೆ. ಇಂತಹ ಸಾಕಷ್ಟು ಪ್ರಕರಣಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿವೆ ಎನ್ನಲಾಗುತ್ತಿದೆ.
4.ಟೆರ್ರಾವೆರಾ ಮನೆ (ಸೆಂಟ್ ಮಾರ್ಕ್ಸ್ ರಸ್ತೆ)

ಬೆಂಗಳೂರಿನ ಜನನಿಬಿಡ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಸಂಚರಿಸುವವರಿಗೆ ಈ ವಿಚಿತ್ರ ಮನೆಯ ಕುರಿತು ತಿಳಿದೇ ಇರುತ್ತದೆ. ದಶಕಗಳಷ್ಟು ಹಳೆಯದಾದ ಈ ಮನೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ವಿಚಿತ್ರ ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ಈ ಸುಂದರ ಮನೆಯಲ್ಲಿ ಇಬ್ಬರು ಸಹೋದರಿಯರು ವಾಸವಾಗಿದ್ದರು. 2002ರಲ್ಲಿ ಡಾಲ್ಸ್ ವ್ಯಾಜ್ ಎಂಬ ಸಹೋದರಿಯನ್ನು ಗುರುತು ತಿಳಿಯದ ವ್ಯಕ್ತಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ್ದ. ಆ ಬಳಿಕವೇ ಈ ಮನೆಯಲ್ಲಿ ಭಯಾನಕತೆ ಆವರಿಸಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸಹೋದರಿ ಕೊಲೆ ಬಳಿಕ ಈ ಮನೆಯಲ್ಲಿ ವಾಸವಿದ್ದ ಮತ್ತೋರ್ವ ಮಹಿಳೆ ಇಲ್ಲಿನ ವಿಚಿತ್ರ ಘಟನೆಗಳಿಂದ ಹೆದರಿ ಈ ಮನೆಯನ್ನು ತೊರೆದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಬೇಸಿಗೆ ಕಾಲದಲ್ಲಿಯೂ ಈ ಮನೆಯಲ್ಲಿ ಅತಿಯಾದ ಚಳಿ ಆವರಿಸುವುದು ಸೇರಿದಂತೆ, ವಿಚಿತ್ರ ರೀತಿಯ ಕಿರುಚಾಟ, ಇದ್ದಕ್ಕಿದ್ದಂತೆಯೇ ಮನೆಯಲ್ಲಿರುವ ವಸ್ತುಗಳ ಸ್ಥಾನಪಲ್ಲಟವಾಗುವಂತಹ ಹಲವು ವಿಚಿತ್ರ ಘಟನೆಗಳು ನಡೆಯುತ್ತವೆ ಎಂದು ಇಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಹೇಳಿದ್ದಾರೆ.
5.ಎಂಜಿ ರಸ್ತೆ

ನೀವು ಬೆಂಗಳೂರಿಗರಾಗಿದ್ದು, ಎಂಜಿ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದು ಪ್ರಮುಖವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಈ ಬಗ್ಗೆ ಕೇಳಿರಬಹುದು ಅಥವಾ ಸ್ವತಃ ಅನುಭವ ಪಡೆದಿರಬಹುದು. ಎಂಜಿ ರಸ್ತೆಯಲ್ಲಿ ಸಾಕಷ್ಟು ಹಳೆಯ ಕಟ್ಟಡಗಳಿದ್ದು, ದಿನದ ಸುಮಾರು 20 ಗಂಟೆಗಳ ಸಮಯ ಜನಜಂಗುಳಿಯಿಂದ ಕೂಡಿರುತ್ತದೆ. ಇಂತಹ ಸದಾಕಾಲ ಜನರಿಂದ ತುಂಬಿ ತುಳುಕುವ ರಸ್ತೆಯಲ್ಲಿಯೂ ಜನರಿಗೆ ಭೀತಿ ಹುಟ್ಟಿಸುವ ಪ್ರದೇಶವೊಂದಿದೆ. ಎಂಜಿ ರಸ್ತೆಯಲ್ಲಿರುವ ಕಾಲ್ ಸೆಂಟರ್ ಬಳಿ ಇರುವ ಮುಖ್ಯರಸ್ತೆಯಲ್ಲಿ ಈಗ್ಗೆ ಕೆಲ ವರ್ಷಗಳ ಹಿಂದೆ ಅಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಅಪಘಾತಕ್ಕೀಡಾದಿ ಸಾವನ್ನಪ್ಪಿದ್ದರು. ರಸ್ತೆ ದಾಟುತ್ತಿದ್ದ ವೇಳೆ ಕಾರು ಚಾಲಕನೋರ್ವ ವೇಗವಾಗಿ ಬಂದು ಆಕೆಗೆ ಗುದ್ದಿದ್ದ. ಅಲ್ಲದೆ ವಾಹನ ನಿಲ್ಲಿಸದೇಯೇ ಹೊರಟು ಹೋಗಿದ್ದ. ಅಂದಿನಿಂದ ಪ್ರತೀ ವರ್ಷ ಅದೇ ದಿನಾಂಕದ ರಾತ್ರಿ ವೇಳೆ ಆ ರಸ್ತೆಯಲ್ಲಿ ಮಹಿಳೆಯೊಬ್ಬಳ ಕೂಗು ಕೇಳುತ್ತದೆ ಎಂದು ಕೆಲ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
6.ರಾಷ್ಟ್ರೀಯ ಹೆದ್ದಾರಿ 4 ಮತ್ತು 7

ಬೆಂಗಳೂರಿನ ಮತ್ತೊಂದು ಭಯಾನಕ ಪ್ರದೇಶಗಳೆಂದರೆ ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು. ಪ್ರಮುಖವಾಗಿ ಬೆಳಗಾವಿ, ಪುಣೆ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4 ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಲ ಅನೈಸರ್ಗಿಕ ಘಟನೆಗಳು ನಡೆದ ಕುರಿತು ಮಾಹಿತಿಗಳು ಕೇಳಿಬಂದಿವೆ. ಪ್ರಮುಖವಾಗಿ ಚಾಲಕ ವರ್ಗದಿಂದ ಆ ಮಾತುಗಳು ಕೇಳಿಬಂದಿದ್ದು, ರಾತ್ರಿ ವೇಳೆ ಈ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಕೆಲ ಅಹಿತಕರ ಘಟನೆಗಳು ನಡೆದಿವೆಯಂತೆ. ದಾರಿ ಮಧ್ಯೆ ಬಿಳಿ ವಸ್ತ್ರವನ್ನು ತೊಟ್ಟ ಯುವತಿ ಡ್ರಾಪ್ ಕೇಳುವುದು. ಆಕೆಗಾಗಿ ವಾಹನ ನಿಲ್ಲಿಸಿದಾಗ ಆಕೆ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗುವುದು. ವೇಗವಾಗಿ ಬರುವ ವಾಹನಗಳಿಗೆ ಅಪರಿಚತರು ದಿಢೀರನೇ ಅಡ್ಡಿ ಬರುವುದು, ಇನ್ನೇನು ವಾಹನ ಅವರಿಗೆ ಗುದ್ದೇ ಬಿಟ್ಟಿತು ಎನ್ನುವಾಗ ಅವರು ನಾಪತ್ತೆಯಾಗುವುದು. ಇಂತಹ ಹಲವು ಘಟನೆಗಳನ್ನು ಕೆಲ ಚಾಲಕರು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bangaloreಬೆಂಗಳೂರುvictoria hospitalವಿಕ್ಟೋರಿಯಾ ಆಸ್ಪತ್ರೆHaunted PlacesBengaluru International Airportಭಯಾನಕ ಪ್ರದೇಶಗಳುಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


