ವಿಜ್ಞಾನ-ತಂತ್ರಜ್ಞಾನ

ಇಸ್ರೋದ ಮಹತ್ವದ ಚಂದ್ರಯಾನ-2ಗೆ ರಷ್ಯಾ ತಂತ್ರಜ್ಞಾನ!

ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಚಂದ್ರಯಾನ-2 ಯೋಜನೆಗೆ ಸಿದ್ಧತೆ ನಡೆಸಿದೆ.

ಇಸ್ರೋದ ಮಹತ್ವದ ಚಂದ್ರಯಾನ-2ಗೆ ರಷ್ಯಾ ತಂತ್ರಜ್ಞಾನ!
ಚಂದ್ರಯಾನ-2 (ಸಂಗ್ರಹ ಚಿತ್ರ)
Published On :

ನವದೆಹಲಿ: ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಚಂದ್ರಯಾನ-2 ಯೋಜನೆಗೆ ಸಿದ್ಧತೆ  ನಡೆಸಿದೆ.

ಚಂದ್ರಯಾನ-1 ಯೋಜನೆ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ಚಂದ್ರನ ಅಂಗಳಕ್ಕೆ ಉಪಗ್ರಹ ರವಾನೆ ಮಾಡಿ ಇಡೀ ಜಗತ್ತಿನ ಅಚ್ಚರಿಗೆ ಕಾರಣವಾಗಿದ್ದ ಇಸ್ರೋ ಇದೀಗ ಅದರ ಮುಂದುವರಿದ ಭಾಗ ಚಂದ್ರಯಾನ-2ಗೆ ಶೀಘ್ರದಲ್ಲೇ  ಚಾಲನೆ ನೀಡಲಿದೆ. ಈ ಮಹತ್ವದ ಯೋಜನೆಗೆ ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಳು ಹಾಗೂ ಮಣ್ಣಿನ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ  ಮಾಡಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ರಷ್ಯಾ ಮೂಲದ ಐಸೋಟೇಪ್ ಸಂಸ್ಥೆ ರೆಡಿಯೋನ್ಯೂಕ್ಲೈಡ್ ಕ್ಯೂರಿಯಂ ಆಲ್ಫಾ ಎಮಿಟ್ಟರ್ (Cm-244) ವ್ಯವಸ್ಥೆಯನ್ನು ಇಸ್ರೋಗೆ ನೀಡಲಿದ್ದು, ಸಂಸ್ಥೆಯ ತಜ್ಞರು ಮತ್ತು ಇಸ್ರೋ ವಿಜ್ಞಾನಿಗಳು ಅಹ್ಮದಾಬಾದ್ ನಲ್ಲಿರುವ  ಲ್ಯಾಬೋರೇಟರಿಯಲ್ಲಿ ಕುಳಿತು ಇದನ್ನು ನಿಯಂತ್ರಿಸಲಿದ್ದಾರೆ. ಈ ತಂತ್ರಜ್ಞಾನದ ನೆರವಿನಿಂದಾಗಿ ಚಂದ್ರನ ಮೇಲ್ಮೈನಲ್ಲಿರುವ ಬಂಡೆಗಳು ಮತ್ತು ಮಣ್ಣಿನ ಸಂಯೋಜನೆ ಮತ್ತು ಗುಣವನ್ನು ಅಧ್ಯಯನ ಮಾಡಬಹುದಾಗಿದೆ ಎಂದು  ರಷ್ಯಾದ ಪರಮಾಣು ಸಂಶೋಧನಾ ಮತ್ತು ವೈಜ್ಞಾನಿಕ ಕೇಂದ್ರ (ROSATOM)ದ ದಕ್ಷಿಣ ಏಷ್ಯಾ ವಕ್ತಾರ ಅಲೆಕ್ಸಾಂಡರ್ ಅಂಟಿಪಿನ್ ತಿಳಿಸಿದ್ದಾರೆ.

ಈ ಆಲ್ಫಾ ಎಮಿಟ್ಟರ್ ಅನ್ನು ರಷ್ಯಾದ ಪರಮಾಣು ಸಂಶೋಧನಾ ಮತ್ತು ವೈಜ್ಞಾನಿಕ ಕೇಂದ್ರ ಸಂಸ್ಥೆ ತಯಾರಿಸಿದ್ದು, ಈ ವ್ಯವಸ್ಥೆಯನ್ನು ಚಂದ್ರಯಾನ-2 ನೌಕೆಯ ಆಲ್ಫಾ ಪ್ರೋಟಾನ್ ಎಕ್ಸ್ ರೇ ಸ್ಪೆಕ್ಟ್ರೋಮೀಟರ್ ನಲ್ಲಿ  ಅಳವಡಿಸಲಾಗುತ್ತದೆ. ಚಂದ್ರನ ಮೇಲ್ಮೈ ಅಧ್ಯಯನ ಮಾಡುವ ಇಸ್ರೋದ ಇಡೀ ಚಂದ್ರಯಾನ-2 ಯೋಜನೆಯಲ್ಲಿ ಈ ಅಲ್ಫಾ ಎಮಿಟರ್ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭಾರತಕ್ಕೆ ನೀಡಿರುವಂತೆಯೇ ಈ ಹಿಂದೆಯೂ ರಷ್ಯಾ ಅಮೆರಿಕದ ನಾಸಾ ಸಂಸ್ಥೆಗೆ ವಿವಿಧ ಬಗೆಯ ಆಲ್ಫಾ ಎಮಿಟರ್ ಗಳನ್ನು ನೀಡಿತ್ತು. ನಾಸಾದ ಮಾರ್ಸ್ ಪಾತ್ ಫೈಂಡರ್ (1997), ಆಪರ್ಚುನಿಟಿ (2004) ಮತ್ತು ಕ್ಯೂರಿಯಾಸಿಟಿ  (2012) ಯೋಜನೆಗೆ ರಷ್ಯಾ ತನ್ನ ಅಲ್ಫಾ ಎಮಿಟರ್ ತಂತ್ರಜ್ಞಾನವನ್ನು ನೀಡಿತ್ತು. ಅಲ್ಫಾ ಎಮಿಟ್ಟರ್ (Cm-244) ಭೂಮಿಗೆ ತನ್ನ ನಿಖರವಾದ ದತ್ತಾಂಶವನ್ನು ರವಾನಿಸುತ್ತದೆ ಎಂದು ಅಲೆಕ್ಸಾಂಡರ್ ಅಂಟಿಪಿನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.