ಸ್ವೀಡನ್ ನಲ್ಲಿ ಪ್ರಪ್ರಥಮ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಆರಂಭ
ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ನಲ್ಲಿ ಉದ್ಘಾಟನೆಯಾಗಿದ್ದು, ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆಯನ್ನಿರಿಸಿದೆ.

ಸ್ಟಾಕ್ ಹೋಮ್: ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ನಲ್ಲಿ ಉದ್ಘಾಟನೆಯಾಗಿದ್ದು, ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆಯನ್ನಿರಿಸಿದೆ.
ಸ್ವೀಡನ್ ನ ಗಾವ್ಲೆ ನಗರದಲ್ಲಿ ಜಗತ್ತಿನ ಮೊದಲ ವಿದ್ಯುತ್ ಚಾಲಿತ ಟ್ರಕ್ ಗಳ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಭಾರಿ ಗಾತ್ರದ ವಿದ್ಯುತ್ ಚಾಲಿತ ಟ್ರಕ್ ಗಳು ಸುಗಮವಾಗಿ ಚಲಿಸುವ ಮೂಲಕ ಯಶಸ್ವಿಯಾಗಿವೆ. ಗಾವ್ಲೆಯ ಇ16 ರಸ್ತೆಯಲ್ಲಿ ಈ ವಿಶೇಷ ವ್ಯವಸ್ಯೆಯ ರಸ್ತೆಯನ್ನು ನಿರ್ಮಿಸಲಾಗಿದ್ದು, ರಸ್ತೆಯ ಮೇಲ್ಬದಿಯಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಅಳವಡಿಸಿ ಅವುಗಳ ಮೂಲಕ ವಿದ್ಯುತ್ ಚಾಲಿತ ಟ್ರಕ್ ಗಳನ್ನು ಚಲಾಯಿಸಲಾಗಿದೆ.
ಸ್ವೀಡನ್ ನ ಖ್ಯಾತ ಟ್ರಕ್ ಹಾಗೂ ಲಾರಿ ತಯಾರಿಕಾ ಸಂಸ್ಥೆ ಸ್ಕಾನಿಯಾ, ಈ ವಿಶೇಷ ಟ್ರಕ್ ಗಳನ್ನು ತಯಾರಿಸಿದೆ. ಇನ್ನು ಈ ವಿಶೇಷ ಟ್ರಕ್ ಗಳಿಗೆಂದೇ ಗಾವ್ಲೆಯ ಇ16 ರಸ್ತೆಯಲ್ಲಿ ಸುಮಾರು 2ಕಿ.ಮೀ ಉದ್ದ ಹೈ ವೋಲ್ಟೇಜ್ ವಿದ್ಯುತ್ ತಂತಿ ಅಳವಡಿಸಲಾಗಿದೆ. ಇನ್ನು ವಿಶ್ವದ ನಾನಾ ಭಾಗಗಳಲ್ಲಿ ವಿದ್ಯುತ್ ಚಾಲಿತ ರಸ್ತೆ ಮಾರ್ಗಗಳಿವೆಯಾದರೂ ಅವು ಪ್ರಯಾಣಿಕ ಮಾರ್ಗಗಳಾಗಿವೆ. ಆದರೆ ಇದೇ ಮೊದಲ ಬಾರಿಗೆ ಸರಕು ಸಾಗಣಾ ಮಾರ್ಗವನ್ನು ಪ್ರಯೋಗಾರ್ಥವಾಗಿ ಸ್ವೀಡನ್ ನಲ್ಲಿ ಉದ್ಘಾಟನೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಅಮೆರಿಕ ಮೂಲದ ಪರಿಸರ ಅಧ್ಯಯನ ಸಂಸ್ಥೆ ಹೆಚ್ಚಾಗುತ್ತಿರುವ ಕಾರ್ಬನ್ ಡೈ ಆಕ್ಸೈಡ್ ನಿಂದಾಗಿ ಹಸಿರುಮನೆ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಸ್ವೀಡನ್ ಹೊಗೆರಹಿತ ಸರಕು ಸಾಗಣಾ ಮಾದರಿಯನ್ನು ವಿಶ್ವಕ್ಕೇ ಪರಿಚಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


