ವಿಜ್ಞಾನ-ತಂತ್ರಜ್ಞಾನ

ಪ್ರಾಣಿಗಳಿಗೆ ಭೂಕಂಪನದ ಮಾಹಿತಿ ಮೊದಲೇ ಹೇಗೆ ತಿಳಿಯುತ್ತದೆ..?

ಪ್ರಾಣಿಗಳು ವಾತಾವರಣದಲ್ಲಿ ಸಂಭವಿಸುವ ಸೂಕ್ಷ್ಮ ಬದಲಾವಣೆಗಳನ್ನು ಅತಿ ವೇಗವಾಗಿ ಗ್ರಹಿಸಿ ಅವು ಸುರಕ್ಷಿತ ಪ್ರದೇಶಗಳತ್ತ ಧಾವಿಸುತ್ತವೆ...

ಪ್ರಾಣಿಗಳಿಗೆ ಭೂಕಂಪನದ ಮಾಹಿತಿ ಮೊದಲೇ ಹೇಗೆ ತಿಳಿಯುತ್ತದೆ..?
ಅರಣ್ಯ ಪ್ರಾಣಿಗಳು
Published On :

ಮಾನವ ತನ್ನ ಚಾಣಾಕ್ಷ ಬುದ್ಧಿಯಿಂದ ಎಷ್ಟೇ ಬೆಳೆದರೂ, ಪ್ರಕೃತಿ ಮುಂದೆ ಆತ ಶೂನ್ಯ ಎನ್ನಬಹುದು. ಏಕೆಂದರೆ ತನ್ನ ಬುದ್ದಿ ಸಾಮರ್ಥ್ಯದಿಂದ ಸಾಕಷ್ಟು ಸಂಶೋಧನೆಗಳನ್ನು ಮಾಡಿ ಅದ್ಭುತ ಎನ್ನುವಂತಹ ವಸ್ತುಗಳನ್ನು ಸೃಷ್ಟಿಸಿದ್ದರೂ ಪ್ರಕೃತಿ ವಿಕೋಪದಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದರಲ್ಲಿ ಅಥವಾ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನವ ವಿಫಲನಾಗುತ್ತಲೇ ಇದ್ದಾನೆ. ಹೀಗಾಗಿ ನೈಸರ್ಗಿಕ ವಿಕೋಪಗಳಾದರೆ ಪ್ರಾಣಿ ಅಥವಾ ಪಕ್ಷಿಗಳಿಗಿಂತ ಹೆಚ್ಚಾಗಿ ಮನುಷ್ಯರೇ ಸಂಕಷ್ಟ ಅನುಭವಿಸುತ್ತಾರೆ. ಆದರೆ ಪ್ರಾಣಿಗಳು ಮತ್ತು ಪಕ್ಷಿಗಳು ಮಾತ್ರ  ಇದಕ್ಕೆ ಅಪವಾದವಾಗಿದ್ದು, ವಾತಾವರಣದಲ್ಲಿ ಸಂಭವಿಸುವ ಸೂಕ್ಷ್ಮ ಬದಲಾವಣೆಗಳನ್ನು ಅತಿ ವೇಗವಾಗಿ ಗ್ರಹಿಸಿ ಅವು ಸುರಕ್ಷಿತ ಪ್ರದೇಶಗಳತ್ತ ಧಾವಿಸುತ್ತವೆ.

ದುರಂತ ನಡೆಯುವ 23 ದಿನಗಳ ಮೊದಲೇ ಮಾಹಿತಿ
ಇನ್ನು ಇತ್ತೀಚೆಗಷ್ಟೇ ಇದೇ ಅನುಮಾನದ ಮೇಲೆ ವಿಜ್ಞಾನಿಗಳ ತಂಡವೊಂದು ಪೆರುವಿನಲ್ಲಿ ಸಂಶೋಧನೆಯೊಂದನ್ನು ನಡೆಸಿತ್ತು. ಪೆರುವಿನ ಯಣಚಗ ನ್ಯಾಷನಲ್ ಪಾರ್ಕ್ ಅನ್ನು ವಿಜ್ಞಾನಿಗಳು ತಮ್ಮ ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದ್ದರು.  ಯಣಚಗ ನ್ಯಾಷನಲ್ ಪಾರ್ಕ್ ನಲ್ಲಿರುವ ಪ್ರಾಣಿಗಳ ಮೇಲೆ ನಿಗಾವಹಿಸಲು ವಿಜ್ಞಾನಿಗಳು ಕ್ಯಾಮೆರಾಗಳನ್ನು ಅಳವಡಿಸಿ, ಆಗ್ಗಿಂದ್ದಾಗ್ಗೆ ಅದರ ಪರೀಕ್ಷೆ ಕೂಡ ಮಾಡುತ್ತಿದ್ದರು. ಆರಂಭದಲ್ಲಿ ಎಲ್ಲವೂ ಸಾಮಾನ್ಯ ಎಂಬಂತೆ ಕಂಡುಬಂದಿತಾದರೂ ಭೂಕಂಪನಕ್ಕೆ 23 ದಿನಗಳು ಬಾಕಿ ಇರುವಂತೆಯೇ ಪ್ರಾಣಿ ಪಕ್ಷಿಗಳಲ್ಲಿನ ಚಲನವಲನಗಳಲ್ಲಿ ಕೆಲ ಬದಲಾವಣೆಗಳಾಗುತ್ತಿರುವುದನ್ನು ವಿಜ್ಞಾನಿಗಳು ಕಂಡುಕೊಂಡರು. ಮತ್ತೊಂದು ಪ್ರಮುಖ ವಿಚಾರವೆಂದರೆ ಭೂಕಂಪನ ಸಂಭವಿಸಲು ಇನ್ನು 7 ದಿನಗಳಿದ್ದಂತೆಯೇ ಕಾಡಿನಲ್ಲಿದ್ದ ಬಹುತೇಕ ಪ್ರಾಣಿ ಪಕ್ಷಿಗಳು ತಮ್ಮ ಸ್ಥಾನಪಲ್ಲಟ ಮಾಡಿರುವುದು ಬೆಳಕಿಗೆ ಬಂದಿತ್ತು.

Story image



ಯಣಚಗ ನ್ಯಾಷನಲ್ ಪಾರ್ಕ್ ಸಮುದ್ರ ಮಟ್ಟದಿಂದ ಸುಮಾರು 320 ಕಿಲೋಮೀಟರ್ ಎತ್ತರದಲ್ಲಿದ್ದು, ಭೂಕಂಪನದ ಮಾಹಿತಿ ಅರಿತುಕೊಂಡಿದ್ದ ಪ್ರಾಣಿ ಪಕ್ಷಿಗಳು ಪಾರ್ಕಿನಲ್ಲಿರುವ ಎತ್ತರದ ಪ್ರದೇಶಗಳಿಗೆ ತಮ್ಮ ತಮ್ಮ ಸ್ಥಾನಪಲ್ಲಟ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ನಡೆದ ಕೆಲ ಸೂಕ್ಷ್ಮ ಸಂಶೋಧನೆಗಳಿಂದ ಪ್ರಾಣಿಗಳ ಈ ದಿಢೀರ್ ಸ್ಥಾನಪಲ್ಲಟನೆಗೆ ಕಾರಣ ತಿಳಿಯಿತು. ಮುಂದಾಗಲಿದ್ದ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರಾಣಿಗಳು ತಮ್ಮ ಸ್ಥಾನಪಲ್ಲಟ ಮಾಡಿದ್ದವು ಎಂದು ವಿಜ್ಞಾನಿಗಳು ತಿಳಿದುಕೊಂಡರು. ಕಾಡಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರೀಕ್ಷಿಸಿದ ವಿಜ್ಞಾನಿಗಳು ಕೂಡ ಇದೇ ತರ್ಕಕ್ಕೆ ಬದ್ಧರಾಗಿದ್ದರು. ಏಕೆಂದರೆ ಅಷ್ಟೂದಿನ ಕ್ಯಾಮೆರಾಗಳಲ್ಲಿ ಪ್ರಾಣಿಗಳ ಚಲನವಲ ದಾಖಲಾಗುತ್ತಿತ್ತು. ಆದರೆ ಭೂಕಂಪನ ನಡೆಯುವ ಕೆಲವೇ ದಿನಗಳ ಮೊದಲು ಕ್ಯಾಮೆರಾಗಳ ಚಿತ್ರೀಕರಣದಲ್ಲಿ ಯಾವುದೇ ಪ್ರಾಣಿಗಳು ಕೂಡ ಕಾಣಿಸಿಕೊಂಡಿರಲಿಲ್ಲ. ಇದು ವಿಜ್ಞಾನಿಗಳ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿತು. ಅಂತೆಯೇ ಪ್ರಾಣಿಗಳು ಗಾಳಿಯಲ್ಲಿರುವ ವಿದ್ಯುತ್ ಸಂವೇದನೆಯನ್ನು ಗ್ರಹಿಸಿ ಅದರ ಮೂಲಕ ಭೂಕಂಪನ ಮಾಹಿತಿ ಪಡೆದಿರಬಹುದು ಎಂಬ ವಾದ ಕೂಡ ಈ ವೇಳೆ ಬಲವಾಗಿ ಕೇಳಿಬಂದಿತ್ತು.

ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ ವಿಜ್ಞಾನಿಗಳಿಗೆ ಒಂದಷ್ಟು ಮಾಹಿತಿ ದೊರೆಯುತ್ತದೆ. ಅದೇನೆಂದರೆ ಪ್ರಾಣಿಗಳು ವಾಸಿಸುವ ಅಯಾನುಗೋಳದಲ್ಲಿ ಯಾವುದೇ ರೀತಿಯ ದಿಢೀರ್ ಬದಲಾವಣೆಗಳು ಕಂಡುಬಂದರೆ ಅವು ತಮ್ಮ ಸ್ಥಾನಪಲ್ಲಟನೆ ಮಾಡುತ್ತವೆ. ಭೂಕಂಪನ ಸಂಭವಿಸುವ 2 ವಾರಗಳ ಮೊದಲು ವಾತಾವರಣದಲ್ಲಿರುವ ವಿದ್ಯುತ್ ಪದರ ಚಾರ್ಜ್ ಗೊಂಡು ಪ್ರಾಣಿ ಮತ್ತು ಪಕ್ಷಿಗಳಿಗೆ ಅಪಾಯದ ಮುನ್ಸೂಚನೆ ನೀಡುತ್ತವಂತೆ. ಈ ವೇಳೆ ಅಲ್ಲಿರುವ ಒಟ್ಟಾರೆ ಪ್ರಾಣಿಗಳ ಪೈಕಿ ಶೇ.15-20ರಷ್ಟು ಪ್ರಾಣಿ-ಪಕ್ಷಿಗಳು ಸುರಕ್ಷಿತ ಪ್ರದೇಶಗಳತ್ತ ಧಾವಿಸುತ್ತವಂತೆ. ಇನ್ನು ಭೂಕಂಪನಕ್ಕೆ 8 ದಿನಗಳು ಬಾಕಿ ಇರುವಾಗ ಉಂಟಾಗುವ ವಿದ್ಯುತ್ ಸಂವೇದನೆಯನ್ನು ಗ್ರಹಿಸಿದ ಮೇಲೆ ಬಹುತೇಕ ಪ್ರಾಣಿಗಳು ದಿಢೀರನೆ ತಮ್ಮ ಸ್ಥಾನಪಲ್ಲಟ ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Story image



ಒಟ್ಟಾರೆ ಆಧುನಿಕತೆಯ ಹೆಸರಲ್ಲಿ ಪ್ರಕೃತಿ ನಾಶ ಮಾಡುತ್ತಿರುವ ನಾವು ಪರೋಕ್ಷವಾಗಿ ನಮ್ಮ ವಿನಾಶಕ್ಕೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ. ಪ್ರಾಣಿ ಮತ್ತು ಪಕ್ಷಿಗಳಲ್ಲಿರುವ ಗ್ರಾಹ್ಯ ಸಾಮರ್ಥ್ಯ ಹಿಂದೆ ಮಾನವರಲ್ಲಿಯೂ ಇತ್ತು. ಆದರೆ ನಾವು ಅಭಿವೃದ್ಧಿ, ಅಧುನಿಕತೆ ಮತ್ತು ಐಶಾರಾಮಿ ಜೀವನಕ್ಕೆ ದಾಸರಾಗಿ ಪ್ರಕೃತಿ ದತ್ತವಾಗಿ ಬಂದಿದ್ದ ವಿಷಯ ಗ್ರಾಹ್ಯ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ.

- ಶ್ರೀನಿವಾಸ ಮೂರ್ತಿ ವಿಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.