ಸ್ಯಾಮ್‌ಥಿಂಕ್ ಡಿಫರೆಂಟ್!

ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಖರೀದಿಸದೇ ಕೈ ಹಿಸುಕಿಕೊಳ್ಳುತ್ತಿರುವ ಸ್ಯಾಮ್‌ಸಂಗ್ ಈಗ ಹೊಸ ಅವತಾರದಲ್ಲಿ ಬರಲು ಸಿದ್ಧವಾಗುತ್ತಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆ್ಯಂಡ್ರಾಯ್ಡ್ ಓಎಸ್ ಮೂಲಕ ಆವರಿಸಿಕೊಂಡಿದ್ದ ಸ್ಯಾಮ್‌ಸಂಗ್ ತನ್ನ ಗೂಗಲ್ ದೋಸ್ತಿಯಿಂದ ನಿಧಾನವಾಗಿ ದೂರವಾಗಲು ಹೆಜ್ಜೆ ಇಡುತ್ತಿದೆ.
ಸುಮಾರು ಒಂದು ವರ್ಷಗಳ ಹಿಂದೆಯೇ ಘೋಷಣೆಯಾದಂತೆ ಟೈಝನ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೊನೆಗೂ ಮಾರುಕಟ್ಟೆಗೆ ಬರಲು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸಿದ್ಧವಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಸ್ಯಾಮ್‌ಸಂಗ್‌ನ ಎರಡು ದುಬಾರಿ ಮೊಬೈಲ್‌ಗಳು ಟೈಝನ್ ಓಎಸ್‌ನಲ್ಲಿ ಬರಲಿವೆ. ಟೈಝನ್ ಅಸೋಸಿಯೇಷನ್, ಲಿನಕ್ಸ್ ಫೌಂಡೇಷನ್ ಹಾಗೂ ಇಂಟೆಲ್ ಜತೆ ಸೇರಿ ಈ ನೂತನ ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸುತ್ತಿದೆ. ಸ್ಯಾಮ್‌ಸಂಗ್‌ನ ಈ ಪ್ರಯೋಗ ಯಶಸ್ವಿಯಾದರೆ, ಬಿಲಿಯನ್‌ಗಟ್ಟಲೇ ಸ್ಯಾಮ್‌ಸಂಗ್ ಗ್ರಾಹಕರಿಗೆ ಖುಷಿ ನೀಡಿದರೆ ಮಾರುಕಟ್ಟೆಯನ್ನು ಆಳುತ್ತಿರುವ ಗೂಗಲ್ ಆ್ಯಂಡ್ರಾಯ್ಡ್‌ಗೆ ದೊಡ್ಡ ಪೆಟ್ಟು ಬೀಳಲಿದೆ. ಮತ್ತೊಂದೆಡೆ ಐಓಎಸ್ ಹಾಗೂ ವಿಂಡೋಸ್‌ಗಳಿಗೂ ಎಚ್ಚರಿಕೆ ಗಂಟೆಯಾಗಲಿದೆ.
ಸ್ಯಾಮ್‌ಸಂಗ್ ಸಂಸ್ಥೆಯಿಂದ ಲೀಕ್ ಆದ ಕೆಲ ಮಾಹಿತಿಗಳ ಪ್ರಕಾರ, ಆರಂಭಿಕ ಹಂತದಲ್ಲಿ ದುಬಾರಿ ಮೊಬೈಲ್ ಡಿವೈಸ್‌ಗಳಿಗೆ ಮಾತ್ರ ಈ ಆಪರೇಟಿಂಗ್ ಸಿಸ್ಟಮ್ ಅನ್ನು ತರಲಾಗುತ್ತಿದೆ. ಗ್ರಾಹಕರಿಂದ ಇದಕ್ಕೆ ಬರುವ ಪ್ರತಿಕ್ರಿಯೆ ಆಧರಿಸಿ ನಂತರದ ಉತ್ಪನ್ನಗಳಲ್ಲೂ ಟೈಝನ್ ಓಎಸ್ ಅನ್ನು ಅಳವಡಿಸುವ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಆದರೆ ಇನ್ನು ಮೂರು ವರ್ಷಗಳಲ್ಲಿ ಆ್ಯಂಡ್ರಾಯ್ಡ್‌ನಿಂದ ಸಂಪೂರ್ಣ ದೂರವಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಯಾಮ್‌ಸಂಗ್‌ನ ಈ ಕ್ರಮವು ಮೊಬೈಲ್ ಮಾರುಕಟ್ಟೆಯಲ್ಲಿನ ಲೆಕ್ಕಾಚಾರವನ್ನು ಎಷ್ಟು ಬುಡಮೇಲು ಮಾಡುತ್ತದೆ ಎಂದು ಕಾದುನೋಡಬೇಕಿದೆ. ಅಷ್ಟಕ್ಕೂ ಈ ಆಪರೇಟಿಂಗ್ ಸಿಸ್ಟಮ್‌ನ ವಿಚಾರ ಹೊಸತೇನಲ್ಲ. ಕಳೆದ 2013ರ ಮೇನಲ್ಲೇ ಟೈಝನ್ ಆಪರೇಟಿಂಗ್ ಸಿಸ್ಟಮ್ ಮೂಲಕ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬರುವ ವಿಚಾರ ಖಾತ್ರಿಯಾಗಿತ್ತು. ಆದರೆ ಸುಮಾರು ಒಂದೂವರೆ ವರ್ಷಗಳ ಸುದೀರ್ಘ ವಿಳಂಬದ ನಂತರ ಸ್ಯಾಮ್‌ಸಂಗ್ ಡಿವೈಸ್‌ನಲ್ಲಿ ಈ ಓಎಸ್ ಕಾಣುವುದು ಪಕ್ಕಾ ಆಗಿದೆ. ಸ್ಯಾಮ್‌ಸಂಗ್ ಸ್ಮಾರ್ಟಿಯ ಇಂಟರ್‌ಫೇಸ್, ಐಕಾನ್, ಸ್ಟಾರ್ಟ್‌ಅಪ್ ಬಟನ್ ಹಾಗೂ ಪರ್ಸನಲೈಸೇಷನ್ ಸಾಕಷ್ಟು ಬದಲಾವಣೆಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತಿದೆ.
ಲಿನಕ್ಸ್ ಆಧಾರದ ಮೇಲೆ ಈ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಗೊಳ್ಳುತ್ತಿದ್ದು ಎಚ್‌ಟಿಎಂಎಲ್5 ಆಧಾರಿತ ಅಪ್ಲಿಕೇಷನ್‌ಗಳು ಇದರಲ್ಲಿ ಕಾರ್ಯನಿರ್ವಹಿಸುತ್ತವೆ. ಟೈಝನ್ ಡೆವಲಪರ್ಸ್‌ಗಳ ಪ್ರಕಾರ, ಇದರಲ್ಲಿ ಆ್ಯಂಡ್ರಾಯ್ಡ್‌ಗಿಂತಲೂ ಹೆಚ್ಚು ಮೊಬೈಲ್ ಪರ್ಸನಲೈಸೇಷನ್‌ಗೆ ಅವಕಾಶವಿದೆ. ಸ್ಟಾರ್ಟಪ್ ಸ್ಕ್ರೀನ್ ಹಾಗೂ ಸ್ಕ್ರೀನ್ ಸೇವರ್‌ಗಳ ರೂಪದಲ್ಲಿ ಬದಲಾವಣೆಯಾಗಲಿದೆ. ಆ್ಯಂಡ್ರಾಯ್ಡ್ ಆಧಾರದ ಮೇಲೆಯೇ ಅಭಿವೃದ್ಧಿಯಾಗಿರುವ ಅಮಿಗೋ ಆಪರೇಟಿಂಗ್ ಸಿಸ್ಟಮ್‌ನಲ್ಲಿರುವಂತೆ ಡಬಲ್ ಟಚ್‌ಸ್ಕ್ರೀನ್ ಆನ್‌ನಂಥ ಅಂಶಗಳು ಸೇರಲಿವೆ. ಇದಲ್ಲದೇ ಯಾವುದೇ ಸ್ಕ್ರೀನ್ ಅಥವಾ ಫೋಟೋ ಝೂಮ್ ಮಾಡಲು ಕೂಡ ಡಬಲ್ ಟಚ್ ಮಾಡಿದರೆ ಸಾಕು. ಇನ್ನು ಮೊಬೈಲ್‌ನ ಕ್ಷಮತೆ ಕೂಡ ಹೆಚ್ಚಲಿದ್ದು, ಆಪರೇಟಿಂಗ್ ಸಿಸ್ಟಮ್‌ಗಾಗಿ ರ್ಯಾಮ್‌ನ ಹೆಚ್ಚು ಸ್ಪೇಸ್ ಆವರಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಇದಲ್ಲದೇ ಈಗಾಗಲೇ ಸ್ಯಾಮ್‌ಸಂಗ್‌ನ ಕೆಲ ಮೊಬೈಲ್‌ಗಳಲ್ಲಿರುವ ಮಲ್ಟಿಟಾಸ್ಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಾಗುತ್ತಿದೆ. ಸ್ಪ್ಲಿಟ್ ಸ್ಕ್ರೀನ್ ಹಾಗೂ ಮಲ್ಟಿ ಟಾಸ್ಕಿಂಗ್ ಅನ್ನು ಆದಷ್ಟು ಹೆಚ್ಚಿಸಿ ಸ್ಮಾರ್ಟ್‌ಫೋನ್‌ನ ಬಳಕೆಯ ವೈಖರಿಯನ್ನೇ ಬದಲಿಸಲು ಪ್ರಯತ್ನಿಸಲಾಗುತ್ತಿದೆ. ಇದೇ ಕಾರಣದಿಂದ ದೊಡ್ಡ ಸ್ಕ್ರೀನ್‌ನ ದುಬಾರಿ ಫೋನ್ ಮೂಲಕ ಮಾರುಕಟ್ಟೆಗೆ ಕಾಲಿಡಲು ಸ್ಯಾಮ್‌ಸಂಗ್ ನಿರ್ಧರಿಸಿದೆ. ಟೈಝನ್‌ಗಾಗಿ ರೂಪಿಸಿದ ಅಪ್ಲಿಕೇಷನ್‌ಗಳ ಸಣ್ಣ ಬದಲಾವಣೆ ಮಾಡಿದರೆ ಆ್ಯಂಡ್ರಾಯ್ಡ್ ಹಾಗೂ ಐಓಎಸ್‌ನಲ್ಲೂ ರನ್ ಮಾಡಬಹುದು ಎಂದು ಡೆವಲಪರ್ಸ್‌ಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಆಪರೇಟಿಂಗ್ ಸಿಸ್ಟಮ್‌ಗೆ ಅಪ್ಲಿಕೇಷನ್‌ಗಳ ಕೊರತೆಯಾಗುವುದಿಲ್ಲ. ಆದರೆ ಟೈಝನ್ ಅನ್ನು ಮೊಬೈಲ್‌ಗೆ ಬಿಡುವ ಮುಂಚೆ ಕೆಲವು ಪರ್ಸನಲೈಸ್ ಹಾಗೂ ಟೈಝಾನ್ ಬ್ರಾಂಡ್ ಅಪ್ಲಿಕೇಷನ್‌ಗಳನ್ನು ತಯಾರಿಸಲು ಡೆವಲಪರ್ಸ್‌ಗಳು ಹವಣಿಸುತ್ತಿದ್ದಾರೆ. ಇದೇ ಕಾರಣದಿಂದ ಟೈಝನ್ ಓಎಸ್ ಆಧಾರಿತ ಸ್ಮಾರ್ಟಿಯು ಮಾರುಕಟ್ಟೆಗೆ ಬರಲು ತಡವಾಗುತ್ತಿದೆ.
2005ರಲ್ಲಿ ಆ್ಯಂಡ್ರಾಯ್ಡ್ ಕಂಪನಿಯನ್ನು ಕೊಳ್ಳಲು ಹಿಂದೇಟು ಹಾಕಿದ್ದ ಸ್ಯಾಮ್‌ಸಂಗ್, ಆ್ಯಂಡ್ರಾಯ್ಡ್‌ನ 5 ಜನರ ತಂತ್ರಜ್ಞರ ತಂಡದ ಬಗ್ಗೆ ನಗೆಪಾಟಲು ಮಾಡಿತ್ತಂತೆ. ಅದಾದ ಎರಡೇ ವಾರದ ಬಳಿಕ ಗೂಗಲ್ ಕಂಪನಿಯು 50 ಮಿಲಿಯನ್ ಡಾಲರ್‌ಗೆ ಆ್ಯಂಡ್ರಾಯ್ಡ್ ತಂಡವನ್ನೇ ಖರೀದಿಸಿತ್ತು. ಗೂಗಲ್‌ಗಿದ್ದ ದೂರದೃಷ್ಟಿ ಸ್ಯಾಮ್‌ಸಂಗ್‌ಗೆ ಇರದ ಕಾರಣದಿಂದ ಇಂದು ಆ್ಯಂಡ್ರಾಯ್ಡ್‌ನ ರಾಯಲ್ಟಿ ರೂಪದಲ್ಲಿ ಬಿಲಯನ್ ಡಾಲರ್‌ಗಟ್ಟಲೇ ರಾಯಲ್ಟಿ ನೀಡಬೇಕಾಗಿದೆ. ಆದರೆ, ಈಗ ಈ ಟೈಝನ್ ಎಂಬ ಅಸ್ತ್ರವು ಎಷ್ಟರ ಮಟ್ಟಿಗೆ ಸ್ಯಾಮ್‌ಸಂಗ್‌ಗೆ ವರವಾಗುತ್ತದೆ ಎಂದು ನೋಡಬೇಕು.
- ರಾಜೀವ ಹೆಗಡೆ
meet.hegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


