ಮನಮೆಚ್ಚಿದ ಮೊಬೈಲು
ಒಂದು ಪುಟಾಣಿ ಮನೆಯನ್ನು ಕಟ್ಟುವಾಗಲೂ ಮನೆಯ ಇಂಚಿಂಚು ಜಾಗದ ಸೌಂದರ್ಯದ ಬಗ್ಗೆ ಗಮನ ನೀಡುತ್ತೇವೆ. ನೆಲ ಹಾಸಿಗೆ ..

ಒಂದು ಪುಟಾಣಿ ಮನೆಯನ್ನು ಕಟ್ಟುವಾಗಲೂ ಮನೆಯ ಇಂಚಿಂಚು ಜಾಗದ ಸೌಂದರ್ಯದ ಬಗ್ಗೆ ಗಮನ ನೀಡುತ್ತೇವೆ. ನೆಲ ಹಾಸಿಗೆ ಯಾವ ಗ್ರಾನೈಟ್ ಬಳಸಬೇಕು, ಎದುರಿನ ಗೋಡೆಗೆ ಯಾವ ಬಣ್ಣ ಬಳಿದರೆ ಚೆಂದ ಕಾಣುತ್ತದೆ, ಅಕ್ಕ ಪಕ್ಕದ ಗೋಡೆಗೆ ಎಂತಹ ಬಣ್ಣವಿದ್ದರೆ ಕಣ್ಣಿಗೆ ತಂಪಾಗುತ್ತದೆ, ಮೇಲ್ಛಾವಣಿಯ ವಿನ್ಯಾಸ ಹೇಗಿದ್ದರೆ ಮನೆಯ ಲುಕ್ ಹೆಚ್ಚುತ್ತದೆ, ಗೋಡೆಗೆ ಎಂತಹ ದೀಪವನ್ನು ತೂಗು ಹಾಕಬೇಕು, ಮತ್ಯಾವ ಹೊಸ ಫ್ಯಾನ್‌ಗಳನ್ನು ತಿರುಗಿಸಬೇಕು ಎಂದು ತಿಂಗಳು ಪೂರ್ತಿ ಗಂಡ-ಹೆಂಡತಿ ತಲೆ ಚಚ್ಚಿಕೊಳ್ಳುತ್ತಾರೆ. ಅಕ್ಕಪಕ್ಕದ ಮನೆ, ಅಂತರ್ಜಾಲಗಳಲ್ಲಿ ಹಗಲು ರಾತ್ರಿ ಇದರ ಬಗ್ಗೆ ಜಾಲಾಡುತ್ತಾರೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ ನಮ್ಮ ಜೇಬು, ಕೈನಲ್ಲಿ ಹೆಂಡತಿ ಅಥವಾ ಗರ್ಲ್‌ಫ್ರೆಂಡ್‌ಗಿಂತ ಹೆಚ್ಚು ಹೊತ್ತು ಇರುವಂತಹ ಮೊಬೈಲ್ ಕೂಡ ನಮ್ಮಿಷ್ಟದಂತೆ ರೊಮ್ಯಾಂಟಿಕ್ ಆಗಿರಬಾರದೇಕೆ? ನಮ್ಮಿಷ್ಟದ ವಿನ್ಯಾಸದಲ್ಲಿ ಈ ಮೊಬೈಲ್‌ಗಳು ನಮ್ಮ ಕೈನಲ್ಲಿ ರಾರಾಜಿಸಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ? ಮೂವತ್ತು-ನಲವತ್ತು ಸಾವಿರ ರುಪಾಯಿ ಕೊಟ್ಟು ಮೊಬೈಲ್ ಖರೀದಿಸುವಾಗ ಆ್ಯಪಲ್, ಸ್ಯಾಮ್‌ಸಂಗ್, ಎಲ್‌ಜಿ, ಗೂಗಲ್ ಅಥವಾ ಮತ್ಯಾವುದೋ ಕಂಪನಿ ರೂಪಿಸಿದ ವಿನ್ಯಾಸವನ್ನು ಇಷ್ಟಪಟ್ಟು ಕೊಂಡುಕೊಳ್ಳಬೇಕಾದ ಅನಿವಾರ್ಯತೆ ನಮಗೇಕೆ?
ಇಂದು ಸ್ಮಾರ್ಟ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಫೋನ್‌ಗಳಲ್ಲಿ ನಮಗೊಂದಿಷ್ಟು ಮೊಬೈಲ್‌ಗಳು ಅದರ ವಿನ್ಯಾಸ, ಕಾನ್ಫಿಗರೇಷನ್‌ಗಳ ಕಾರಣದಿಂದ ಇಷ್ಟವಾಗಿರುತ್ತದೆ. ಆಗ ಸ್ಯಾಮ್‌ಸಂಗ್ ಎಸ್4, ಎಲ್‌ಜಿ ಜಿಫ್ಲೆಕ್ಸ್, ನೆಕ್ಸಸ್, ವಿನ್ಯಾಸ ಹೊರತುಪಡಿಸಿ ಉಳಿದ ಕಾರಣಕ್ಕೆ ಆ್ಯಪಲ್ ಇಷ್ಟವಾಗುತ್ತದೆ. ಆದರೆ ಮನೆಗೆ ತಂದ ಮರುದಿನವೇ ಮೇಲೆ ಮೊಬೈಲ್‌ನ ಹಿಂದಿನ ಪ್ಯಾನಲ್ ಬಣ್ಣ ತುಸು ಡಾರ್ಕ್ ಇದ್ದರೆ ಚೆಂದವಿತ್ತು, ಎದುರಿನ ಪ್ಯಾನಲ್‌ನ ಬಣ್ಣವನ್ನು ಇನ್ನಷ್ಟು ಬದಲಿಸಿದ್ದರೆ ಇವರಪ್ಪನ ಗಂಟೇನು ಹೋಗುತ್ತಿತ್ತು, ಹಿಂದಿನ ಪ್ಯಾನಲ್ ಹಾಗೂ ಮುಂದಿನದಕ್ಕೂ ಸಂಬಂಧವೇ ಇಲ್ಲದ ಹಾಗೆ ಮಾಡಿದ್ದಾರೆ, ಈವಯ್ಯನಿಗೆ ಟೇಸ್ಟೆ ಇಲ್ಲ ಎಂದು ಗೆಳೆಯರ ವಲಯದಲ್ಲಿ ಗೊಣಗಲು ಆರಂಭಿಸುತ್ತೇವೆ. ಆದರೆ ದಿನದ 12 ಗಂಟೆಯಾದರೂ ನಿಮ್ಮ ಕೈನಲ್ಲಿ, ಕಿಸೆಯಲ್ಲಿ ಅಥವಾ ನಿಮ್ಮೆದುರಿನ ಟೇಬಲ್ ಮೇಲೆ ಮೊಬೈಲ್ ಇರುವಾಗ ಇಂತಹ ಫೀಲಿಂಗ್‌ಗಳು ಮನಸ್ಸಿಗೆ ಬಂದರೆ ಆದಷ್ಟು ಬೇಗ ಈ ಮೊಬೈಲ್‌ಗೆ ಡೈವರ್ಸ್ ಕೊಟ್ಟುಬಿಡೋಣ ಅನಿಸುತ್ತೆ. ಆದರೆ ನೀವೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿ, ನಿಮಗೆ ಬೇಕಾದ ವಿನ್ಯಾಸ ಹಾಗೂ ಬಣ್ಣದಲ್ಲಿ ಮೊಬೈಲ್‌ನ್ನು ತಯಾರಿಸಿಕೊಂಡಿದ್ದರೆ, ಆಹಾ... ಮೊಬೈಲ್ ಜತೆಗಿನ ಆ ಸರಸವೇ ಅದ್ಭುತವಾಗಿರುತ್ತದೆ. ಕೈನಲ್ಲಿರುವ ಮೊಬೈಲ್‌ನ್ನು ನೋಡಿದಾಗಲೆಲ್ಲ ಸಿಗುವ ಖುಷಿಯೇ ಬೇರೆ.
ಇದೇ ವಿಚಾರಧಾರೆಯನ್ನು ಇರಿಸಿಕೊಂಡು ಅಮೆರಿಕದಲ್ಲಿ ಹೆಸರು ಮಾಡಿರುವ ಮೋಟೊರೊಲೊ ಕಂಪನಿ ಹೊಸ ಪ್ರಯೋಗ ಆರಂಭಿಸಿದೆ. ಮೋಟೊ-ಎಕ್ಸ್ ಎಂಬ ಹೊಸ ಮೊಬೈಲ್‌ನ್ನು ಗ್ರಾಹಕರು ತಮ್ಮಿಷ್ಟದಂತೆ ಆನ್‌ಲೈನ್‌ಲ್ಲಿ ರೂಪಿಸಿಕೊಳ್ಳಬಹುದು. ಮೊಬೈಲ್ ಬ್ಯಾಕ್ ಪ್ಯಾನಲ್‌ಗೆ ಬರೋಬ್ಬರಿ 31 ಕಲರ್‌ಗಳನ್ನು ನೀಡಲಾಗಿದೆ. ಇದರಲ್ಲಿ ನ್ಯಾಚುರಲ್, ಕೂಲ್, ವಾರ್ಮ ಮತ್ತು ನ್ಯೂಟ್ರಲ್ ಎಂಬ ನಾಲ್ಕು ಆಪ್ಶನ್‌ಗಳನ್ನು ನೀಡಲಾಗಿದೆ. ಇನ್ನು ಎದುರಿನ ಪ್ಯಾನಲ್ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ದೊರೆಯುತ್ತದೆ. ಇದರ ಜತೆಗೆ ಮೊಬೈಲ್‌ನಲ್ಲಿ ಬರುವ ವಾಲ್ಯೂಮ್, ಸ್ವಿಚ್ ಬಟನ್ ಹಾಗೂ ಕ್ಯಾಮರಾ ಕೇಸ್‌ಗಳಿಗೂ ಸುಮಾರು 10 ಬಣ್ಣದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್ ಜತೆಗೆ ನಮ್ಮಿಷ್ಟದ ಕೇಸ್ ಕವರ್‌ನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.
ಇನ್ನು ಮೊಬೈಲ್ ಮೆಮೊರಿಯನ್ನು ಆಯ್ಕೆ ಗ್ರಾಹಕರೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸದ್ಯಕ್ಕೆ ಕೇವಲ 16 ಮತ್ತು 32 ಜಿಬಿ ಮಾತ್ರ ಲಭ್ಯವಿದೆ. ನಿಮಗಿಷ್ಟವಾದ ಬಣ್ಣದ ಹೆಡ್‌ಫೋನ್ ಮತ್ತು ಚಾರ್ಜರ್‌ಗಳನ್ನು ಆಯ್ಕೆ ಮಾಡುವ ಅವಕಾಶವೂ ಇದೆ.
ಇದೆಲ್ಲದಕ್ಕಿಂತ ಇಷ್ಟವಾಗುವುದು ನಾವು ಬಳಸುವ ಫೋನ್ ಹಿಂದಿನ ಪ್ಯಾನಲ್‌ನಲ್ಲಿ ನಮ್ಮಿಷ್ಟದ ಹೆಸರು ಅಥವಾ ಶಬ್ದವನ್ನು ಅಚ್ಚಿಸಿಕೊಳ್ಳಬಹುದು, ಜತೆಗೆ ಮೊಬೈಲ್ ಸ್ವಿಚ್ ಆನ್ ಆಗುವಾಗಲೂ ನಮ್ಮಿಷ್ಟದ ಹೆಸರು ಬರುವಂತೆ ಪರ್ಸನಲೈಸ್ ಮಾಡಬಹುದು.
ಮೊಬೈಲ್ ಮಟ್ಟಿಗೆ ಪರ್ಸನಲೈಸ್ ಕಸ್ಟಮೈಸೇಷನ್ ಹೊಸ ಪ್ರಯೋಗ. ಆನ್‌ಲೈನ್‌ನಲ್ಲಿ ಕಸ್ಟಮೈಸ್ ಮಾಡಿ ಅಲ್ಲಿಯೇ ಆರ್ಡರ್ ಮಾಡಬಹುದು. ಆದರೆ ಈ ಪ್ರಯತ್ನವು ಮಾರುಕಟ್ಟೆಯಲ್ಲಿ ಹೊಸದೊಂದು ಸಂಚಲನಕ್ಕೆ ಕಾರಣವಾಗಬಹುದು. ಗ್ರಾಹಕನ ಅಭಿಲಾಷೆಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ. ಅನಿವಾರ್ಯವಾಗಿ ಉಳಿದ ಕಂಪನಿಗಳು ಈ ಸಾಲಿಗೆ ಸೇರಬೇಕಾದ ಅನಿವಾರ್ಯ ಬಂದರೂ ಅಚ್ಚರಿಪಡಬೇಕಿಲ್ಲ. ಇಂದು ಹಾರ್ಡ್‌ವೇರ್‌ಗೆ ಹೆಚ್ಚಾಗಿ ಈ ಕಸ್ಟಮೈಸ್‌ಗೆ ಅವಕಾಶ ನೀಡಲಾಗಿದೆ. ಇನ್ನು ಭವಿಷ್ಯದಲ್ಲಿ ರ್ಯಾಮ್, ಮೆಮೋರಿ, ಸ್ಕ್ರೀನ್ ರೆಸಲ್ಯೂಷನ್, ಗ್ಲಾಸ್ ಹಾಗೂ ವಿನ್ಯಾಸದ ಇತರ ಮಜಲುಗಳಿಗೂ ಕಸ್ಟಮೈಸ್ ಬಂದರೆ ಆಶ್ಚರ್ಯಪಡಬೇಕಿಲ್ಲ. ಆಗ ದರದಲ್ಲಿ ಏರುಪೇರಾಗಬಹುದು. ಆದರೆ ಗ್ರಾಹಕನನ್ನು ಮೊಬೈಲ್ ಕಂಪನಿಗಳು ಸಂತೃಪ್ತಗೊಳಿಸಲು ಇದೊಂದು ಉತ್ತಮ ವೇದಿಕೆಯಾದೀತು.
ಗಂಡ ಅಥವಾ ಹೆಂಡತಿಯ ಬಗೆಗೂ ಹೀಗೆ ಅನಿಸಬಹುದು, ಆದರೆ ಅದನ್ನು ಹಾಗೆಯೇ ಅನುಭವಿಸುವುದು ಎಲ್ಲರ ಕರ್ಮ, ರೂಪ ಬದಲಿಸಲು ಅಥವಾ ನಮ್ಮಿಷ್ಟದಂತೆ ನೋಡಲು ಕಷ್ಟಸಾಧ್ಯ!
- ರಾಜೀವ ಹೆಗಡೆ
meet.hegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


