ವಿಜ್ಞಾನ-ತಂತ್ರಜ್ಞಾನ

ಮೊಬೈಲ್ ಕಳ್ಳರ ಪಿಕ್ ಪಾಕೆಟ್

ಮೊಬೈಲ್ ಕಳ್ಳರ ಪಿಕ್ ಪಾಕೆಟ್
Published On :

ಮೊಬೈಲ್ ಕಳ್ಳರಿಗೆ ಹಾರ್ಟ್ ಬ್ರೇಕಿಂಗ್ ಸುದ್ದಿ ಬಂದಿದೆ. ಇವರ 'ಸ್ಮಾರ್ಟ್‌' ವ್ಯವಹಾರಕ್ಕೆ ಇನ್ನು ತೆರೆ ಬೀಳಲಿದೆ. ಕಳ್ಳರ ಜೇಬಿಗೆ ಕತ್ತರಿ ಹಾಕಲು ಆಪರೇಟಿಂಗ್ ಸಿಸ್ಟಮ್ ಡೆವಲಪರ್ಸ್ ಮುಂದಾಗಿದ್ದಾರೆ.
ಇನ್ನು ಮುಂದೆ ಮೊಬೈಲ್ ಕಳೆದುಕೊಂಡರೆ ವಾಪಸ್ ಸಿಗದಿದ್ದರೂ, 'ವಿಘ್ನ ಸಂತೋಷಿ'ಗಳಾಗಲು ಅವಕಾಶವಿದೆ. ಈ ವರ್ಷಾಂತ್ಯದಲ್ಲಿ ವಿಂಡೋಸ್ ಹಾಗೂ ಗೂಗಲ್ ಸಂಸ್ಥೆಯು ಮಾರುಕಟ್ಟೆಗೆ ಬಿಡಲಿರುವ ನೂತನ ಆಪರೇಟಿಂಗ್ ಸಿಸ್ಟಮ್‌ನಲ್ಲಿ 'ಕಿಲ್ ಸ್ವಿಚ್‌' ಎಂಬ ಅಂಶವನ್ನು ಸೇರಿಸುತ್ತಿದ್ದಾರೆ. ಇದರಿಂದ ನಮ್ಮ ಸ್ಮಾರ್ಟಿ ಕಳೆದುಕೊಳ್ಳಬಹುದೇ ಹೊರತು, ಯಾರಾದರೂ ಕದಿಯುವ ಸಂಗತಿಗಳು ಕಡಿಮೆಯಾಗಬಹುದು. ಒಂದೊಮ್ಮೆ ಕದ್ದರೂ ಆ ಕಳ್ಳರಿಗೆ ಮೊಬೈಲ್ ಬಳಸಲೇ ಆಗದಂತೆ ಅವಕಾಶವನ್ನು ಆಪರೇಟಿಂಗ್ ಡೆವಲಪರ್ಸ್ ನೀಡುತ್ತಿದ್ದಾರೆ.
ಈಗಾಗಲೇ ಐ-ಫೋನ್ 5ಎಸ್‌ನಲ್ಲಿ 'ಕಿಲ್ ಸ್ವಿಚ್‌' ಆಪ್ಶನ್ ನೀಡಲಾಗಿತ್ತು. ಇದರಿಂದ ಮೊದಲ ವರ್ಷದಲ್ಲೇ ಮೊಬೈಲ್ ಕಳ್ಳತನದ ಪ್ರಮಾಣ ಶೇ.17ರಷ್ಟು ಇಳಿದಿದೆ. ಅಂದಹಾಗೆ ಅಮೆರಿಕದಂಥ ದೊಡ್ಡಣ್ಣನ ದೇಶದಲ್ಲೂ ಮೊಬೈಲ್ ಕಳವಾಗುತ್ತದೆ.
ಅಮೆರಿಕದ ಕೌನೂನು ತಜ್ಞರು ಹಾಗೂ ಪೊಲೀಸರ ಸಲಹೆಯ ಮೇರೆಗೆ ಆ್ಯಪಲ್ ಸಂಸ್ಥೆಯು ತನ್ನ ಹೊಸ ಆಪರೇಟಿಂಗ್ ಸಿಸ್ಟಮ್‌ನಲ್ಲಿ 'ಕಿಲ್ ಸ್ವಿಚ್‌' ಅಳವಡಿಸಲು ಮುಂದಾಗಿತ್ತು. ಇದೇ ಸಂದರ್ಭದಲ್ಲಿ ಗೂಗಲ್ ಹಾಗೂ ವಿಂಡೋಸ್‌ಗೂ ಅಮೆರಿಕ ಪೊಲೀಸರು ಸಲಹೆ ನೀಡಿದ್ದರು. ಕೆಲ ತಾಂತ್ರಿಕ ಕಾರಣಗಳಿಂದ ಇದು ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ ಆ್ಯಪಲ್ ಸಂಸ್ಥೆಯು ಇದನ್ನು ಮೊದಲ ಬಾರಿಗೆ ತನ್ನ ಓಎಸ್‌ನಲ್ಲಿ ಸೇರಿಸಿಕೊಳ್ಳುವುದರೊಂದಿಗೆ ಅಮೆರಿಕನ್ನರಿಗೆ ತಾನೇಕೆ ಇಷ್ಟ ಎಂಬುದನ್ನು ಸಮರ್ಥಿಸಿಕೊಂಡಿದೆ.
ಈಗ ಆ್ಯಪಲ್‌ನ ಫೂಟ್ ಪ್ರಿಂಟ್ ಅನ್ನು ಪಾಲಿಸಿಕೊಂಡು ಗೂಗಲ್ ಹಾಗೂ ವಿಂಡೋಸ್ ಸಾಗುತ್ತಿವೆ. ಇವೆರಡು ಸಂಸ್ಥೆಗಳ ಕೇಂದ್ರ ಕಚೇರಿಯ ಮಾಹಿತಿ ಪ್ರಕಾರ, ಇನ್ನು ಮುಂದೆ ಗೂಗಲ್ ಹಾಗೂ ವಿಂಡೋಸ್ ಬಿಡಲಿರುವ ಓಎಸ್‌ನಲ್ಲಿ 'ಕಿಲ್ ಸ್ವಿಚ್‌' ಅವಕಾಶವಿರಲಿದೆ. ಫೋನ್ ಖರೀದಿಸಿದ ಬಳಿಕ ಒಂದು ಅಕೌಂಟ್ ರಚಿಸಬೇಕು. ಒಂದೊಮ್ಮೆ ಮೊಬೈಲ್ ಕಳೆದರೆ ಕೂಡಲೇ ಗೂಗಲ್ ಅಥವಾ ವಿಂಡೋಸ್ ಅಕೌಂಟ್ ಮೂಲಕ ಲಾಗ್ ಇನ್ ಆಗಿ ಮೊಬೈಲ್‌ನ್ನು ಡಿಸೇಬಲ್ ಮಾಡಬಹುದು. ಒಂದೊಮ್ಮೆ ಪೊಲೀಸರು ಕರುಣಾಮಯಿಗಳಾಗಿ ಹುಡುಕಿಕೊಟ್ಟರೇ ಇದೇ ಅಕೌಂಟ್ ಮೂಲಕ ಎನೇಬಲ್ ಮಾಡಲು ಸಾಧ್ಯವಿದೆ. ಡಿಸೇಬಲ್ ಆದರೆ ಸಿಮ್ ಹಾಕದೇ ಕಳ್ಳನು ತನ್ನ ಮಕ್ಕಳಿಗೆ ಆಟಿಕೆಯನ್ನಾಗಿ ನೀಡಲು ಸಾಧ್ಯವಿಲ್ಲ.
ಭಾರತದಲ್ಲಿ ಒಂದು ದೊಡ್ಡ ದುರಂತವೆಂದರೆ ಮೊಬೈಲ್ ಕಳೆದರೇ ಅದರ ಆಸೆ ಬಿಡುವುದೇ ಒಳಿತು. ಬಹುತೇಕ ಸಂದರ್ಭದಲ್ಲಿ ಮೊಬೈಲ್ ಹುಡಿಕಿಕೊಡುವ ಪ್ರಮೇಯ ಕಡಿಮೆ ಇರುತ್ತದೆ. ದುಬಾರಿ ಸ್ಮಾರ್ಟಿಯಾಗಿದ್ದರೆ ಹಗಲು ರಾತ್ರಿ 'ನನ್ನ ಪ್ರೀತಿಯ ಈ ಸ್ಮಾರ್ಟಿ ಯಾರ ಕೈನಲ್ಲಿದ್ದಾಳೋ' ಎಂದು ಸಂಕಟವಾಗುತ್ತಿರುತ್ತದೆ. ಇಂಥ ಆಪ್ಶನ್‌ಗಳು ಬಂದಾಗ ಸ್ಮಾರ್ಟಿ ನನ್ನ ಜತೆಯಲ್ಲಂತೂ ಇಲ್ಲ, ಆ ಕಳ್ಳನ ಕೈನಲ್ಲೂ ಇರುವುದು ಬೇಡ ಎಂಬ ತೃಪ್ತಭಾವದಲ್ಲಿರಬಹುದು.
ಇಷ್ಟಕ್ಕೂ 'ಕಿಲ್ ಸ್ವಿಚ್‌' ಎನ್ನುವುದು ಮೊಬೈಲ್ ಜಗತ್ತಿಗೆ ಹೊಸತಲ್ಲ. ಓಎಸ್‌ಗಳು ಹುಟ್ಟಿದ ದಿನದಿಂದಲೇ ಆ್ಯಂಟಿ ಥೆಪ್ಟ್ ಅಪ್ಲಿಕೇಷನ್‌ಗಳು ನೂರಾರು ಸಂಖ್ಯೆಯಲ್ಲಿ ಪ್ಲೇ ಸ್ಟೋರ್ಸ್‌ಗೆ ದಾಳಿ ಇಟ್ಟಿವೆ. ಇದರಲ್ಲಿ ಕೆಲವು ನಂಬಲು ಅರ್ಹವಾಗಿಯೂ ಇವೆ. ಆದರೆ ಸಾಫ್ಟ್‌ವೇರ್ ಬದಲಿಸಿದರೆ ಮತ್ತೆ ಮೊಬೈಲ್ ಅನ್‌ಲಾಕ್ ಮಾಡಬಹುದು ಎಂದು ತಂತ್ರಜ್ಞರು ಹೇಳುತ್ತಾರೆ. ಆದ್ದರಿಂದ ಆ್ಯಂಟಿ ಥೆಪ್ಟ್ ಅಪ್ಲಿಕೇಷನ್‌ಗಳಿಂದ ಮೊಬೈಲ್ ಸಂಪೂರ್ಣ ಸುರಕ್ಷಿತ ಎನ್ನುವಂತಿರಲಿಲ್ಲ. ಮತ್ತೊಂದೆಡೆ ಪ್ರಸ್ತುತ ಆ್ಯಂಟಿ ಥೆಪ್ಟ್ ಆ್ಯಪ್ ಕಾರ್ಯನಿರ್ವಹಿಸಲು ಅನಿವಾರ್ಯವಾಗಿ ಆ ಮೊಬೈಲ್ ಇಂಟರ್ನೆಟ್ ಸಂಪರ್ಕಕ್ಕೆ ಬರಲೇಬೇಕಾಗಿತ್ತು. ಇದಲ್ಲದೇ ಕೆಲವು ಆ್ಯಪ್‌ಗಳು ಸುರಕ್ಷಿತವಲ್ಲ ಎಂದು ಗೂಗಲ್ ಕಪ್ಪು ಪಟ್ಟಿಗೂ ಸೇರಿಸಿತ್ತು.
ಪ್ರತಿ ವರ್ಷ ಅಮೆರಿಕ, ಯುರೋಪ್, ಚೀನಾ, ಆಫ್ರಿಕದ ಪ್ರಮುಖ ದೇಶಗಳು ಹಾಗೂ ಭಾರತದಲ್ಲಿ 6 ಕೋಟಿಗೂ ಅಧಿಕ ಸ್ಮಾರ್ಟ್‌ಫೋನ್‌ಗಳು ಕಾಣೆಯಾಗುತ್ತಿವೆ. ಆದ್ದರಿಂದ ಸ್ಮಾರ್ಟಿಗೆ 'ಕಿಲ್ ಸ್ವಿಚ್‌' ಎಷ್ಟು ಅನಿವಾರ್ಯ ಎನ್ನುವುದು ತಿಳಿಯುತ್ತದೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.