ಸ್ಯಾಮ್ ವಿರುದ್ಧ ಸಮರ
ಸ್ಯಾಮ್ಸಂಗ್ಗೆ ಈಗ ಖೆಡ್ಡಾ ರೆಡಿ! ಗೂಗಲ್ ಹಾಗೂ ಚೈನೀಸ್ ಕಂಪನಿಗಳು ಜಂಟಿಯಾಗಿ ಸ್ಯಾಮ್ಸಂಗ್ ...

ಸ್ಯಾಮ್ಸಂಗ್ಗೆ ಈಗ ಖೆಡ್ಡಾ ರೆಡಿ! ಗೂಗಲ್ ಹಾಗೂ ಚೈನೀಸ್ ಕಂಪನಿಗಳು ಜಂಟಿಯಾಗಿ ಸ್ಯಾಮ್ಸಂಗ್ ಅನ್ನು ಹಳ್ಳ ಹಿಡಿಸಲು ಹೊರಟಿವೆ.
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ದು ಸಿಂಹಪಾಲು. ಮೊಬೈಲ್ ಸಂತೆಯಲ್ಲಿ ತನ್ನದೇ ಬ್ರಾಂಡ್ ವ್ಯಾಲ್ಯೂವನ್ನು ಸ್ಯಾಮ್ಸಂಗ್ ನಿರ್ಮಿಸಿಕೊಂಡಿದೆ. ಜಗತ್ತಿನಾದ್ಯಂತ ಸ್ಯಾಮ್ಸಂಗ್ ಅನ್ನು ಇನ್ನೈದು ವರ್ಷಗಳ ಕಾಲವಾದರೂ ಮುಟ್ಟಲು ಸಾಧ್ಯವಾಗದಂಥ ವಾತಾವರಣ ಸೃಷ್ಟಿಯಾಗಿದೆ. ಒಂದೊಮ್ಮೆ ಯುರೋಪ್ ಹಾಗೂ ಅಮೆರಿಕದಲ್ಲೂ ಆ್ಯಪಲ್ ಬಗೆಗೂ ಈ ರೀತಿಯ ಮಾರುಕಟ್ಟೆ ಅಂದಾಜಿತ್ತು. ಆದರೆ ಸ್ಯಾಮ್ಸಂಗ್ ಪ್ರವೇಶದಿಂದ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ ಎರಡನೇ ಸ್ಥಾನದಲ್ಲಿದೆ. ನೋಕಿಯಾದ ಅಧಿಪತ್ಯಕ್ಕೆ ಪೆಟ್ಟು ಬಿತ್ತು.
ಆದರೆ ಈಗ ಚೀನಾದ ಜಿಯೋನಿ, ಲೆನೆವೊ, ಕ್ಸಿಯೋವು, ಒಪ್ಪೊ, ಹುವೈ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುತ್ತಿವೆ. ಇದರೊಂದಿಗೆ ಭಾರತದಲ್ಲಿ ನಿಧಾನವಾಗಿ ಬೇರೂರುತ್ತಿರುವ ಕಾರ್ಬನ್ ಹಾಗೂ ಮೈಕ್ರೋಮ್ಯಾಕ್ಸ್ ಸ್ಯಾಮ್ಸಂಗ್ನ ನಿದ್ದೆಗೆಡಿಸಿದೆ. ಇವೆಲ್ಲ ಮೊಬೈಲ್ಗಳಿಗೆ ಅಂಥ ಬ್ರಾಂಡ್ ವ್ಯಾಲ್ಯೂ ಇಲ್ಲ ಎಂದು ಒಂದು ಕ್ಷಣಕ್ಕೆ ಸ್ಯಾಮ್ಸಂಗ್ ನಿಶ್ಚಿಂತೆಯಾಗಿಯೂ ಇರುವಂತಿಲ್ಲ. ಏಕೆಂದರೆ ಮೊಟೊ ಸೀರೀಸ್ನ ಎಕ್ಸ್, ಜಿ ಹಾಗೂ ಇ ಸ್ಮಾರ್ಟಿಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ಗೆ ಅನಿರೀಕ್ಷಿತ ಸ್ಪರ್ಧೆಯೊಡ್ಡಿವೆ.
ಇದರ ಬೆನ್ನಲ್ಲೇ ಗೂಗಲ್ ಸಂಸ್ಥೆ ಕೂಡ ಸ್ಯಾಮ್ಸಂಗ್ ಕಂಪನಿಯ ನಿದ್ದೆ ಹಾಳು ಮಾಡುವ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಭಾರತದಲ್ಲಿನ ಮೈಕ್ರೋಮ್ಯಾಕ್ಸ್, ಕಾರ್ಬನ್ ಹಾಗೂ ಲಾವಾ ಕಂಪನಿಗಳ ಆ್ಯಂಡ್ರಾಯ್ಡ್ ಸ್ಮಾರ್ಟಿಗಳ ಪ್ರಚಾರಕ್ಕೆ ಬರೋಬ್ಬರಿ ರು. 100 ಕೋಟಿ ನೆರವು ನೀಡುತ್ತಿದೆ. ಈ ಮೂಲಕ ಸ್ಯಾಮ್ಸಂಗ್ಗೆ ಎಲ್ಲರೂ ಸೇರಿಕೊಂಡು ವ್ಯೂಹ ರಚಿಲಾರಂಭಿಸಿದ್ದಾರೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಗೂಗಲ್ ಉತ್ಪಾದನೆಗಳ ಬ್ರಾಂಡ್ ವ್ಯಾಲ್ಯೂ ಕಡಿಮೆ ಮಾಡಲು ಸ್ಯಾಮ್ಸಂಗ್ ಸಂಸ್ಥೆಯು ತನ್ನ ದುಬಾರಿ ಮೊಬೈಲ್ಗಳಿಗೆ ಟೈಝನ್ ಆಪರೇಟಿಂಗ್ ಸಿಸ್ಟಮ್ ಅಳವಡಿಸಲು ಚಿಂತನೆ ನಡೆಸಿತು. ಮೊದಲ ಹಂತವಾಗಿ ಎರಡು ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡಲಾಯಿತು. ಈಗಾಗಲೇ ಅಂತಾರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬ್ರಾಂಡ್ ಆಗಿ ಹೊರಹೊಮ್ಮಿರುವ ಸ್ಯಾಮ್ಸಂಗ್ ಕಂಪನಿಯು ಸ್ವಂತ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಿ ಪ್ರಚಾರ ಮಾಡಿದರೆ ಭವಿಷ್ಯದಲ್ಲಿ ಸಮಸ್ಯೆಯಾಗುವುದು ಗೂಗಲ್ ಕಂಪನಿಗೆ. ಇದೇ ಕಾರಣದಿಂದ ಗೂಗಲ್ ಕಂಪನಿ ಸ್ಯಾಮ್ಸಂಗ್ಗೆ ಸೆಡ್ಡು ಹೊಡೆಯಲು ಮುಂದಾಯಿತು.
ಅಗ್ಗದ ಫೋನ್ಗಳ ವಿಭಾಗದಲ್ಲಿ ಈಗಾಗಲೇ ಮೈಕ್ರೋಮ್ಯಾಕ್ಸ್, ಕಾರ್ಬನ್ ಹಾಗೂ ಲಾವಾ ಫೋನ್ಗಳು ಭಾರತದಲ್ಲಿ ಅಲ್ಪಮಟ್ಟಿಗೆ ಸ್ಥಾನ ಪಡೆದಿವೆ. ಆದರೆ ವಿಶ್ವಾಸಾರ್ಹತೆ ವಿಚಾರ ಬಂದಾಗ ಈ ಬ್ರಾಂಡ್ಗಳು ಸ್ವಲ್ಪ ಹಿಂದುಳಿದಿವೆ. ಜತೆಗೆ ಈ ಫೋನ್ಗಳಿಗೆ ಪ್ರಚಾರದ ಕೊರತೆಯಿದೆ. ಇದೇ ಕಾರಣದಿಂದ ಪ್ರಚಾರ ಹಾಗೂ ಮಾರಾಟಕ್ಕೆ ನೆರವು ನೀಡಿದರೆ ಸಾಮಾನ್ಯವಾಗಿ ಈ 3 ಬ್ರಾಂಡ್ಗಳ ಫೋನ್ ಮಾರಾಟ ಹೆಚ್ಚಾಗುತ್ತದೆ. ಈ ಫೋನ್ಗಳು ಜನರ ಕೈನಲ್ಲಿ ಹೆಚ್ಚು ಓಡಾಡುತ್ತಿದ್ದಂತೆ ಅಂತಿಮ ಲಾಭವಾಗುವುದು ಗೂಗಲ್ಗೆ. ಏಕೆಂದರೆ ಅದರಲ್ಲಿರುವುದು ಆ್ಯಂಡ್ರಾಯ್ಡ್ ಓಎಸ್ ಇರುತ್ತದೆ. ಮೊಬೈಲ್ ಮಾರಾಟದ ನಂತರದ ಎಲ್ಲ ಲಾಭ ಗಳಿಸುವುದು ಇದೇ ಗೂಗಲ್ ಕಂಪನಿ. ಆ್ಯಂಡ್ರಾಯ್ಡ್ ಓಎಸ್ ಇರುವ ಮೊಬೈಲ್ಗಳ ಸಂಖ್ಯೆ ಹೆಚ್ಚಾದ ಹಾಗೆ ಗೂಗಲ್ಗೆ ಲಾಭ ಹೆಚ್ಚು. ಅದು ಯಾವುದೇ ಬ್ರಾಂಡ್ಗೆ ಸೇರಿದ್ದರೂ ಅವರಿಗೆ ತಲೆಬಿಸಿಯಿಲ್ಲ. ಇದರ ಜತೆಗೆ ಮೊಟೊ ಎಕ್ಸ್, ಜಿ ಹಾಗೂ ಇ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ವ್ಯಾಪಿಸುತ್ತಿದೆ. ಆನ್ನೈಲ್ನಲ್ಲಿ ವಾರಗಟ್ಟಲೆ ಕಾದು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗೂಗಲ್ನ ಈ ಕಿರಿಕ್ ಜತೆಗೆ ಚೈನೀಸ್ ಮೊಬೈಲ್ ಕಂಪನಿಗಳ ಸುನಾಮಿಯನ್ನು ಸ್ಯಾಮ್ಸಂಗ್ ಎದುರಿಸಬೇಕಿದೆ. ಈ ಮೊದಲೆಲ್ಲ ಕಡಿಮೆ ದರದಲ್ಲಿ ಸಾಮಾನ್ಯ ಫೀಚರ್ಗಳಿರುವ ಮೊಬೈಲ್ಗಳು ಮಾರುಕಟ್ಟೆಗೆ ಬಂದಿದ್ದವು. ಆದರೆ ಇವು ಸ್ಯಾಮ್ಸಂಗ್ನ ಬ್ರಾಂಡ್ ವ್ಯಾಲ್ಯೂ ಬದಲಿಸಲು ಸಾಧ್ಯವಾಗಿರಲಿಲ್ಲ. ಅದರಲ್ಲಿನ ಫೀಚರ್ಸ್ ಹಾಗೂ ಉತ್ಪನ್ನಗಳು ಅಷ್ಟು ಆಕರ್ಷಕವಾಗಿರಲಿಲ್ಲ. ಆದರೆ ಈಗ ಸ್ಯಾಮ್ಸಂಗ್ಗೆ ಸರಿಸಾಟಿಯಾಗಬಲ್ಲ ಫೀಚರ್ಸ್ ಹಾಗೂ ಅದಕ್ಕಿಂತಲೂ ಉತ್ತಮವಾಗಿರುವ ಅಂಶಗಳೊಂದಿಗೆ ಕ್ಸಿಯೋವು ಹಾಗೂ ಒಪ್ಪೊ ಮೊಬೈಲ್ಗಳು ಭಾರತೀಯ ಮಾರುಕಟ್ಟೆಗೆ ಬಂದಿವೆ. ಸ್ಯಾಮ್ಸಂಗ್ನ ಎಸ್4, ಎಸ್5 ಹಾಗೂ ನೋಟ್3ಯಲ್ಲಿನ ಪೀಚರ್ಸ್ಗಳು ಇವೆರಡು ಕಂಪನಿಗಳ ಮೊಬೈಲ್ಗಳಲ್ಲಿ ಲಭ್ಯವವಿವೆ. ಕ್ಸಿಯೋವು ಹಾಗೂ ಒಪ್ಪೊ ಕಂಪನಿಯು ಚೀನಾದ ಟಾಪ್-3 ಕಂಪನಿಗಳಾಗಿವೆ. ಇನ್ನು ಜಿಯೋನಿ ಈಗಾಗಲೇ ಭಾರತೀಯ ಮಾರುಕಟ್ಟೆಗೆ ಬಂದಿದೆ.
ಒಂದೊಮ್ಮೆ ಈ ಸ್ಮಾರ್ಟ್ಫೋನ್ಗಳು ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿಕೊಂಡರೆ ಸ್ಯಾಮ್ಸಂಗ್ಗೆ ದೊಡ್ಡ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ. ಕಡಿಮೆ ದರ, ಹೆಚ್ಚು ಫೀಚರ್ಸ್ ಇದ್ದು ನಂಬಿಕಸ್ಥ ಎಂದು ಸಾಬೀತಾದರೆ ಜನರು ಅಂತಹ ಬ್ರಾಂಡ್ಗಳತ್ತ ವಾಲುವುದು ಸಾಮಾನ್ಯ.
--ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


