ಸ್ಕ್ರೀನ್ ರೆವೊಲ್ಯುಶನ್
ಕೇವಲ 4 ವರ್ಷಗಳ ಹಿಂದೆ ಮೊಬೈಲ್ ಸ್ಕ್ರೀನ್ 4 ಇಂಚು ದಾಟುತ್ತಿರಲಿಲ್ಲ. ಈಗ 5 ಇಂಚಿಗಿಂತ ಕೆಳಗಿಳಿಯುತ್ತಿಲ್ಲ...

ಕೇವಲ 4 ವರ್ಷಗಳ ಹಿಂದೆ ಮೊಬೈಲ್ ಸ್ಕ್ರೀನ್ 4 ಇಂಚು ದಾಟುತ್ತಿರಲಿಲ್ಲ. ಈಗ 5 ಇಂಚಿಗಿಂತ ಕೆಳಗಿಳಿಯುತ್ತಿಲ್ಲ! ಈಗ ಹೆಚ್ಚು ಕಡಿಮೆ 4 ಇಂಚು ಸ್ಕ್ರೀನ್ನ ಮೊಬೈಲ್ಗಳು ಮಾರುಕಟ್ಟೆಗೆ ಬರುವುದೇ ನಿಂತುಹೋಗಿದೆ. ಇದು ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಸೀಮಿತವಾಗಿಲ್ಲ. ಅಷ್ಟೇನೂ ಹೆಸರು ಮಾಡದ, ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರದ ಕಂಪನಿಗಳೂ 5 ಇಂಚಿಗಿಂತ ದೊಡ್ಡ ಗಾತ್ರದ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಇಂದು ಬಹುಶಃ ರು. 5-6 ಸಾವಿರದಿಂದ ಆರಂಭಿಸಿ ರು. 50,000ದವರೆಗೆ 5 ಇಂಚು ಮತ್ತು ಅದಕ್ಕಿಂತ ಹೆಚ್ಚಿನ ಗಾತ್ರದ ಸ್ಮಾರ್ಟ್ಫೋನ್ಗಳು ಲಭ್ಯ ಇವೆ.
ಸ್ಮಾರ್ಟ್ಫೋನ್ಗಳ ಸ್ಕ್ರೀನ್ಗಳು ಈ ಪರಿ ದೊಡ್ಡದಾಗುತ್ತಿರಲು ಕಾರಣವೇನು? ಮೊಬೈಲ್ಗೂ ಫ್ಯಾಬ್ಲೆಟ್ಗು, ಫ್ಯಾಬ್ಲೆಟ್ಗೂ ಟ್ಯಾಬ್ಲೆಟ್ಗು, ಟ್ಯಾಬ್ಲೆಟ್ಗೂ ಲ್ಯಾಪ್ಟಾಪ್ಗು ವ್ಯತ್ಯಾಸ ಹೆಚ್ಚು ಕಡಿಮೆಯಾಗುತ್ತಿದೆ. ಮೊಬೈಲ್ ಇಂದು ಕೇವಲ ಮೊಬೈಲಾಗಿ ಉಳಿದಿಲ್ಲ. ಅದು ಆಲ್ಇನ್ ಒನ್ ಆಗುತ್ತಿದೆ. ಮೊಬೈಲ್ ಮಾರುಕಟ್ಟೆಯಿಂದಾಗಿ ಡೆಸ್ಕ್ಟಾಪ್ ಮಾರುಕಟ್ಟೆ ಮಲಗಿಬಿಟ್ಟಿದೆ. ಲ್ಯಾಪ್ಟಾಪ್ಗಳ ಮಾರುಕಟ್ಟೆ ಕುಸಿದಿದೆ.
ಇದಕ್ಕೆಲ್ಲ ಕಾರಣ ಮೊಬೈಲ್ಗಳ ದೊಡ್ಡ ಸ್ಕ್ರೀನ್ ಮತ್ತು ಟ್ಯಾಬ್ಲೆಟ್ಗಳು. ಮಾರುಕಟ್ಟೆಯಲ್ಲಿ 4.3, 4.7ನಿಂದ ಆರಂಭಿಸಿ 12 ಇಂಚಿನವರೆಗೆ ಫ್ಯಾಬ್ಲೆಟ್ ಮತ್ತು ಟ್ಯಾಬ್ಲೆಟ್ಗಳು ಸಿಗುತ್ತಿವೆ. ಇದಕ್ಕೆ ಮೊದಲ ಕಾರಣ ತಂತ್ರಜ್ಞಾನ. 2010ರವರೆಗೆ ಟಚ್ಸ್ಕ್ರೀನ್ ತಂತ್ರಜ್ಞಾನದಲ್ಲಿ ಭಾರಿ ಬೆಳವಣಿಗೆ ಆಗಿರಲಿಲ್ಲ. ಅದಕ್ಕಿಂತ ಹೆಟ್ಟಾಗಿ ದೊಡ್ಡ ಸ್ಕ್ರೀನ್ನಲ್ಲಿ ಹೆಚ್ಚು ಪಿಕ್ಸೆಲ್ಗಳನ್ನು ಅಳವಡಿಸುವ ತಂತ್ರಜ್ಞಾನ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ದೊಡ್ಡ ಸ್ಕ್ರೀನ್ ಮೊಬೈಲ್ಗಳು ಬ್ಯಾಟರಿ ಚಾರ್ಜ್ ನುಂಗಿಹಾಕುತ್ತಿದ್ದವು. ದೊಡ್ಡ ಸ್ಕ್ರೀನ್ಗಳನ್ನು ಬೆಂಬಲಿಸುವಂಥ ಬ್ಯಾಟರಿಗಳೇ ಇರಲಿಲ್ಲ. ಬ್ಯಾಟರಿ ತಂತ್ರಜ್ಞಾನ ಹಾಗೂ ಸ್ಕ್ರೀನ್ಗಳಲ್ಲಿ ಹೆಚ್ಚು ಪಿಕ್ಸೆಲ್ಗಳನ್ನು ಅಳವಡಿಸುವ ತಂತ್ರಜ್ಞಾನ ಜತೆಜತೆಗೇ ಬೆಳೆಯಿತು. ಅದರಲ್ಲೂ ಮುಖ್ಯವಾಗಿ ಲೀಥಿಯಂ ಇಯಾನ್ ತಂತ್ರಜ್ಞಾನ ಇದಕ್ಕೆ ಹೆಚ್ಚು ಒತ್ತು ನೀಡಿತು. ಈಗ ಬಂದಿರುವ ಲೀಥಿಯಂ ಪಾಲಿಮರ್ ತಂತ್ರಜ್ಞಾನ ದೊಡ್ಡ ಸ್ಕ್ರೀನ್ ಮೊಬೈಲ್ಗಳ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದೆ. ಲೀಥಿಯಂ ಇಯಾನ್ ತಂತ್ರಜ್ಞಾನದ ಬ್ಯಾಟರಿಗಳಿಗಿಂತ ಲೀಥಿಯಂ ಪಾಲಿಮರ್ ತಂತ್ರಜ್ಞಾನದ ಬ್ಯಾಟರಿಗಳು ಹೆಚ್ಚು ಬ್ಯಾಕಪ್ ನೀಡಲು ಸಮರ್ಥವಾಗಿವೆ.
ದೊಡ್ಡದು ಒಳ್ಳೇದು!
ಎಲ್ಲ ವಿಷಯದಲ್ಲಿ ಅಲ್ಲದಿದ್ದರೂ ಮೊಬೈಲ್ ಸ್ಕ್ರೀನ್ ವಿಷಯದಲ್ಲಿ ಗ್ರಾಹಕ ಈಗ ಸದ್ಯಕ್ಕೆ ಹೀಗೇ ವಿಚಾರ ಮಾಡುತ್ತಿದ್ದಾನೆ. ಆದ್ದರಿಂದಲೇ 'ಕಾಮನ್ ಸೆನ್ಸ್ ಹೊಂದಿರುವವರ ಡಿಸ್ಪ್ಲೇ' ಎಂದು ಹೇಳಿಕೊಳ್ಳುತ್ತಿದ್ದ ಆ್ಯಪಲ್ನಂಥ ಕಂಪನಿಯೂ ಸ್ಕ್ರೀನ್ ಸೈಜ್ ಬದಲಾಯಿಸಿದೆ. ಇದಕ್ಕೆ ಇತರ ಕಂಪನಿಗಳ ಪೈಪೋಟಿ ಮತ್ತು ಗ್ರಾಹಕರ ಮನಸ್ಥಿತಿಯೇ ಕಾರಣ.
ಬದಲಾದ ಬಳಕೆ ಆಲ್ಇನ್ ಒನ್
ಆರಂಭದಲ್ಲಿ ಮೊಬೈಲ್ ಕೇವಲ ಮಾತು ಮತ್ತು ಎಸ್ಎಂಎಸ್ಗೆ ಸೀಮಿತವಾಗಿತ್ತು. ಅದರ ನಂತರ ಹಾಡು ಕೇಳುವಂತಾಯಿತು. ನಂತರ ನಿಧಾನಕ್ಕೆ ಗೇಮ್ ಬಂತು. ಇಂಟರ್ನೆಟ್ ಬಂತು. ಈಗ ಯಾವುದೂ ಮೊಬೈಲ್ನಲ್ಲಿ ಇಲ್ಲವೆಂದಿಲ್ಲ. ಬ್ಯಾಂಕಿಂಗ್, ಶಾಪಿಂಗ್ತನಕ ಎಲ್ಲವನ್ನೂ ಮೊಬೈಲ್ನಲ್ಲೇ ಮಾಡಿಮುಗಿಸಬಹುದು. ಮೊಬೈಲ್ ಒಂದು ಇದ್ದುಬಿಟ್ಟರೆ ಪ್ರಪಂಚವೇ ಕೈಯಲ್ಲಿರುವಂತೆ!
ಇಂಟರ್ನೆಟ್ ವೇಗ ಹೆಚ್ಚಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ವಿಡಿಯೊಗಳು ಮೊಬೈಲ್ನಲ್ಲಿ ಓಡಾಡುತ್ತಿವೆ.
ಇದೆಲ್ಲ ಬರುತ್ತಿದ್ದಂತೆ ಮೊಬೈಲ್ ಬಳಕೆ ಹೆಚ್ಚಾಯಿತು. ಬಳಕೆಯ ವೈವಿಧ್ಯ ಹೆಚ್ಚಿತು. ಆಗ ದೊಡ್ಡ ಸ್ಕ್ರೀನ್ನ ಅಗತ್ಯ ಕಾಣಿಸಿಕೊಳ್ಳತೊಡಗಿತು. ಕರೆ ಮತ್ತು ಎಸ್ಎಂಎಸ್ಗೆ ಸಣ್ಣ ಸ್ಕ್ರೀನ್ ಸಾಕಾಗುತ್ತಿತ್ತು. ಆದರೆ ಇಂಟರ್ನೆಟ್ ಸೇರಿದಂತೆ ಬೇರೆ ಬೇರೆ ಉದ್ದೇಶಗಳ ಬಳಕೆಗೆ ದೊಡ್ಡ ಸ್ಕ್ರೀನ್ ಉಪಯುಕ್ತ. ದೊಡ್ಡ ಸ್ಕ್ರೀನ್ಗಳಿಂದಾಗಿಯೇ ಇಂದು ಡೆಸ್ಕ್ಟಾಪ್ಗೆ ಪರ್ಯಾಯವಾಗಿ ಮೊಬೈಲ್ ರೂಪುಗೊಳ್ಳುತ್ತಿದೆ. ದೊಡ್ಡ ಸ್ಕ್ರೀನ್ನ ಮೊಬೈಲ್ ಅಥವಾ ಟ್ಯಾಬ್ಲೆಟ್ ಇದ್ದರೆ ಜನರಿಗೆ ಡೆಸ್ಕ್ಟಾಪ್ ಅಗತ್ಯ ಕಾಣುತ್ತಿಲ್ಲ. ಕಾರಣ ಇಂದು ಫೋನು ಕೇವಲ ಫೋನಾಗಿ ಉಳಿದಿಲ್ಲ. ಅಂದು ಹಾಡು ಕೇಳುವ, ಅಂತರ್ಜಾಲ ತಡಕಾಡುವ, ವಿಡಿಯೋ ನೋಡುವ, ಸಾಮಾಜಿಕ ತಾಣಗಳಲ್ಲಿ ಅಲೆದಾಡುವ, ಹತ್ತು ಹಲವು ವಿಷಯಗಳನ್ನು ತಿಳಿಸಿಕೊಡುವ ಸಾಧನವಾಗಿ ಮಾರ್ಪಟ್ಟಿದೆ. ಇದರಿಂದಾಗಿಯೇ ಇಂದು ಎಲ್ಲರೂ ದೊಡ್ಡ ಸ್ಕ್ರೀನ್ನ ಮೊಬೈಲ್ ಬಯಸುತ್ತಿದ್ದಾರೆ. ಗ್ರಾಹಕರ ಆಸಕ್ತಿ, ಆಯ್ಕೆಗೆ ತಕ್ಕಂತೆ ಕಂಪನಿಗಳು ದೊಡ್ಡ ಸ್ಕ್ರೀನ್ನ ಮೊಬೈಲ್ ಉತ್ಪಾದನೆಯಲ್ಲಿ ತೊಡಗಿವೆ.
-ವಕ್ರದಂತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


