ಅಕೌಂಟಿನ ಸಮಾಧಿ

ಸರಿಯಾಗಿ ಒಂದು ವರ್ಷದ ಹಿಂದೆ ನಡೆದದ್ದು. ಫೇಸ್‌ಬುಕ್ ಸ್ನೇಹಿತನೊಬ್ಬ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ. ಆದರೆ ಆತನ ಸಾವಿನ ಯಾವುದೇ ಮಾಹಿತಿಯಿಲ್ಲದ ನೂರಾರು ಸ್ನೇಹಿತರು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. ಈ ಅಪಘಾತಕ್ಕೆ ಸಾಕ್ಷಿಯಾಗಿದ್ದ ಹಾಗೂ ಆತನ ಪ್ರಾಣ ಸ್ನೇಹಿತೆಗೆ ಗೆಳೆಯನ ಸಾವಿನ ನೋವಲ್ಲಿ ಹುಟ್ಟುಹಬ್ಬದ ಶುಭಾಶಯ ಓದಿ ಬಿಕ್ಕುತ್ತಿದ್ದಳು. ಆಕೆಗೆ ಗೆಳೆಯನ ಫೇಸ್ ಮರೆಯಲಾಗದ ನೋವಲ್ಲಿ 'ಫೇಸ್‌ಬುಕ್' ಒಂದು ಗೋಳಾಗಿತ್ತು.
ನಮ್ಮ- ನಿಮ್ಮ ಫೇಸ್‌ಬುಕ್ ಫ್ರೆಂಡ್ ಲಿಸ್ಟ್‌ನಲ್ಲೂ ಇಂಥ ಹತ್ತಾರು ಮಂದಿ ಇರಬಹುದು. ಅಕೌಂಟ್ ಡಿಲೀಟ್ ಆಗಿರದೆ ಇರುವ ಸಾಧ್ಯತೆಯೂ ಇರುತ್ತದೆ. ಆದರೆ ಅದನ್ನು ಕೂಡಲೇ ಡಿಲೀಟ್ ಮಾಡಿಸುವ ಜವಾಬ್ದಾರಿಯನ್ನು ಸ್ನೇಹಿತರು ಅಥವಾ ಕುಟುಂಬ ಸದಸ್ಯರು ತೆಗೆದುಕೊಳ್ಳಬೇಕು. ಅದೇನೋ ದೊಡ್ಡ ಕ್ಲಿಷ್ಟ ಕೆಲಸವಲ್ಲ. ಫೇಸ್‌ಬುಕ್ ಹೆಲ್ಪ್ ಸೆಂಟರ್‌ಗೆ ಭೇಟಿ ನೀಡಿ ಒಂದೈದು ನಿಮಿಷ ವ್ಯಯಿಸಿದರೆ ನಿತ್ಯ ವ್ಯಥೆಪಡುವ ಪ್ರಸಂಗ ನಿಲ್ಲುತ್ತದೆ.
ಅದು ತುಂಬಾ ಸಿಂಪಲ್
ಫೇಸ್‌ಬುಕ್ ಹೆಲ್ಪ್ ಸೆಂಟರ್‌ಗೆ ಹೋದರೆ ಎಡಬದಿಯಲ್ಲಿ 17 ಅಂಶಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ಮೂರನೆಯ 'ಮ್ಯಾನೇಜ್ ಯುವರ್ ಅಕೌಂಟ್' ಎಂಬುದರ ಮೇಲೆ ಕ್ಲಿಕ್ ಮಾಡಿ. ಆಗ ಮತ್ತೆ ಎಡಬದಿಯಲ್ಲಿ 10 ಅಂಶಗಳಿರುವ ಮತ್ತೊಂದು ಪಟ್ಟಿ ಸಿಗುತ್ತದೆ. ಅಲ್ಲಿ ಡಿಆ್ಯಕ್ಟಿವೇಟಿಂಗ್, ಡಿಲೀಟಿಂಗ್ ಮತ್ತು ಮೆಮೋರಿಯಲೈಝಿಂಗ್ ಅಕೌಂಟ್ಸ್ ಎಂಬ ಮೂರು ಆಪ್ಷನ್‌ಗಳಿರುತ್ತವೆ.
ಇದರಲ್ಲಿ ಮೊದಲ ಅಂಶ ಡಿಆ್ಯಕ್ಟಿವೇಟಿಂಗ್ ಇರುವುದು ನಿಮ್ಮ ಸ್ವಂತ ಅಕೌಂಟ್‌ಗೆ ಸಂಬಂಧಿಸಿದ್ದು. ಎರಡನೆಯದರಲ್ಲಿ ಡಿಲೀಟಿಂಗ್ ಎಂದಿದೆ. ಈ ಆಪ್ಷನ್ ಕ್ಲಿಕ್ ಮಾಡುವ ಮುಂಚೆ ಒಂದು ಅಂಶವನ್ನು ಗಮನಿಸಿಕೊಳ್ಳಿ. ಇದನ್ನು ಕೇವಲ ಸತ್ತ ವ್ಯಕ್ತಿಗಳಿಗೆ ಮಾತ್ರ ಬಳಸಬೇಕೆಂದಿಲ್ಲ. ಬದಲಾಗಿ ಒಂದೊಮ್ಮೆ ಸ್ನೇಹಿತರು ಹಾಗೂ ಬಂಧುಗಳು ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಅಥವಾ ದೀರ್ಘಾವಧಿ ವೈದ್ಯ ಚಿಕಿತ್ಸೆ ಪಡೆಯುತ್ತಿದ್ದರೂ ಡಿಲೀಟ್ ಮಾಡಬಹುದು. ಆದರೆ ಸುಧಾರಿಸಿಕೊಳ್ಳುವ ಭರವಸೆಯಿದೆ ಎಂದಾದರೆ 'ಈಸ್ ದಿಸ್ ಪರ್ಸನ್ಸ್ ಕಂಡಿಷನ್ ರಿವರ್ಸಿಬಲ್' ಎನ್ನುವುದಕ್ಕೆ 'ಯೆಸ್' ಎಂದು ಕೊಟ್ಟುಬಿಡಿ. ಡಿಲೀಟ್ ಮಾಡುವ ಆಪ್ಷನ್ ಮೇಲೆ ಕ್ಲಿಕ್ಕಿಸಿದಾಗ 'ಫಾರ್ ಸಮ್‌ಒನ್ ಎಬೋವ್ 13' ಎಂದಿರುವಲ್ಲಿ 'ಸಬ್ಮಿಟ್ ಹೀಯರ್' ಎಂದು ಕ್ಲಿಕ್ ಮಾಡಿ. ಆಗ ಒಂದು ವಿಂಡೋ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಸ್ನೇಹಿತನ ಪೂರ್ಣ ಹೆಸರು (ಅಕೌಂಟ್‌ನಲ್ಲಿದ್ದ ಹಾಗೆ), ಟೈಮ್‌ಲೈನ್‌ನ ಯುಆರ್‌ಎಲ್, ಆತನೊಂದಿಗಿನ ನಿಮ್ಮ ಸಂಬಂಧ ದಾಖಲಿಸಬೇಕು.
ಇಲ್ಲವೇ ನಿಮ್ಮ ಸಂಬಂಧಿ ಅಥವಾ ಸ್ನೇಹಿತನ ಅಕೌಂಟ್‌ನನ್ನು ಸ್ಮರಣಾರ್ಥವಾಗಿ ಬಳಸುವ ಇರಾದೆಯಿದ್ದರೆ ಹಾಗೂ ಮಾಡಬಹುದು. ಮೆಮೋರಿಯಲೈಝಿಂಗ್ ಅಕೌಂಟ್ಸ್ ಎಂದು ಕ್ಲಿಕ್ ಮಾಡಿ 'ಕಾಂಟ್ಯಾಕ್ಟ್ ಅಸ್' ಎನ್ನುವುದಕ್ಕೆ ಹೋಗಬೇಕು. ಆಗ ಅಲ್ಲಿ ಕೇಳುವ ಕೆಲ ಮಾಹಿತಿಯನ್ನು ಚಾಚೂ ತಪ್ಪದೇ ನೀಡಬೇಕು. ಆಗ ಅಲ್ಲಿ ಆತನ ಮರಣ ಪ್ರಮಾಣಪತ್ರ, ಗುರುತಿನ ಚೀಟಿ ಆ್ಯಟಾಚ್ ಮಾಡಬೇಕಾಗುತ್ತದೆ. ಅಕೌಂಟ್ ರಿಮೂವಲ್‌ಗೂ ಇದೇ ಆಪ್ಷನ್ ಬಳಸಬೇಕು. ಆದರೆ ಕೊನೆಯಲ್ಲಿ ಮೆಮೋರಿಯಲೈಝಿಂಗ್ ದಿಸ್ ಅಕೌಂಟ್ ಅಥವಾ ರಿಮೂವಲ್ ಎನ್ನುವುದನ್ನು ನೀವೇ ನಿರ್ಧರಿಸಬೇಕು. ರಿಮೂವಲ್ ಎಂದು ಕೊಟ್ಟರೇ ಎಂದಿಗೂ ಆ ಪ್ರೊಫೈಲ್ ಸಿಗುವುದಿಲ್ಲ. ಆದರೆ ಮೆಮೋರಿಯಲೈಝಿಂಗ್ ಅಕೌಂಟ್ ಎಂದು ಕೊಟ್ಟರೆ ಯಾರೊಬ್ಬರೂ ಲಾಗ್ ಇನ್ ಮಾಡಲಾಗುವುದಿಲ್ಲ. ಬದಲಾಗಿ ಆ ವ್ಯಕ್ತಿಯ ಟೈಮ್‌ಲೈನ್‌ನ ಪ್ರಮುಖ ಮಾಹಿತಿಗಳೊಂದಿಗೆ ಆತನ ಸ್ನೇಹಿತ ವಲಯಕ್ಕೆ ಸಿಗುತ್ತಿರುತ್ತದೆ. ಅದರಲ್ಲಿ ಹುಟ್ಟಿದ ದಿನ, ವಿಳಾಸ ಹಾಗೂ ಇತರ ವಿವರಗಳು ಲಭ್ಯವಿರುವುದಿಲ್ಲ.
ಫೇಸ್‌ಬುಕ್‌ಗೆ ಮಾತ್ರ ಸೀಮಿತವಲ್ಲ
ಇದು ಫೇಸ್‌ಬುಕ್‌ಗೆ ಮಾತ್ರ ಸೀಮಿತವಲ್ಲ. ಬದಲಾಗಿ ಗೂಗಲ್, ಮೈಕ್ರೋಸಾಫ್ಟ್, ಸ್ಪ್ರೀಂಟ್, ಯಾಹೂ ಸೇರಿದಂತೆ ಎಲ್ಲ ಸಾಮಾ ಜಿಕ ತಾಣಗಳ ಅಕೌಂಟ್ ಅನ್ನು ಇದೇ ರೀತಿ ಡಿಲೀಟ್ ಮಾಡಬಹುದು. ನಿಮ್ಮ ಸ್ನೇಹಿತ ವಲಯ ಅಥವಾ ಕುಟುಂಬ ವಲಯದಲ್ಲಿ ಇಂಥ ಅಕೌಂಟ್‌ಗಳಿದ್ದರೆ ಬೇರೊಬ್ಬರು ಹ್ಯಾಕ್ ಮಾಡಿ ದುರುಪಯೋಗ ಮಾಡಿಕೊಳ್ಳುವ ಮೊದಲು ಡಿಲೀಟ್ ಮಾಡಿಬಿಡಿ.
ಫೇಸ್‌ಬುಕ್‌ಗೆ ಕಗ್ಗಂಟಾಗಿದ್ದು...
ಮರಣಾನಂತರ ಅಕೌಂಟ್ ಏನಾಗುತ್ತೆ ಎಂಬ ಪ್ರಶ್ನೆ ಫೇಸ್‌ಬುಕ್‌ಗೆ ಎದುರಾಗಿದ್ದು 2004ರಲ್ಲಿ. ಅದಿನ್ನೂ ಅಧಿಕೃತವಾಗಿ ಶುರುವಾಗಿರಲಿಲ್ಲ. ಆಗ ಫೇಸ್‌ಬುಕ್‌ನಲ್ಲಿ ಇದ್ದಿದ್ದು 40 ಸಿಬ್ಬಂದಿ ಅಷ್ಟೇ. ಅದರಲ್ಲಿ ಒಬ್ಬ ಇದ್ದಕ್ಕಿದ್ದಂತೆ ಸೈಕ್ಲಿಂಗ್‌ನ ಆಕ್ಸಿಡೆಂಟ್‌ನಲ್ಲಿ ಬುರುಡೆ ಒಡೆದುಕೊಂಡು ಸತ್ತುಹೋದ. ಮಾರ್ಕ್ ಝುಕರ್‌ಬರ್ಗ್‌ಗೆ ಆಗಲೇ ತಲೆನೋವಾಗಿದ್ದು. ಅಲ್ಲಿಂದ ಫೇಸ್‌ಬುಕ್‌ನಲ್ಲಿ ಡಿಲೀಟಿಂಗ್ ಆಪ್ಷನ್ ನೀಡಲಾಗಿದೆ.
= ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


