ಸ್ಮಾರ್ಟ್ ರಿಮೋಟ್
ರಜನೀಕಾಂತ್ ಅಭಿನಯದ 'ಎಂಧಿರನ್' ಚಿತ್ರದ ಸೀನ್ ಒಂದನ್ನು ನೆನಪಿಸಿಕೊಳ್ಳಿ. ಮರುದಿನದ ಪರೀಕ್ಷೆಗೆ ಐಶ್ವರ್ಯಾ ರೈ ತಯಾರಿ...

ರಜನೀಕಾಂತ್ ಅಭಿನಯದ 'ಎಂಧಿರನ್' ಚಿತ್ರದ ಸೀನ್ ಒಂದನ್ನು ನೆನಪಿಸಿಕೊಳ್ಳಿ.
ಮರುದಿನದ ಪರೀಕ್ಷೆಗೆ ಐಶ್ವರ್ಯಾ ರೈ ತಯಾರಿ ನಡೆಸುತ್ತಿರುತ್ತಾಳೆ. ಪಕ್ಕದ ಮನೆಯ ಪೋಕರಿಗಳು ದೊಡ್ಡದಾಗಿ ಹಾಡು ಹಾಕಿಕೊಂಡು ಮಜಾ ಉಡಾಯಿಸುತ್ತಿರುತ್ತಾರೆ. ಅಲ್ಲೇ ಮತ್ತೊಂದು ಪಕ್ಕದ ಓಣಿಯಲ್ಲಿ ರೌಡಿಗಳು ಉತ್ಸವದ ನೆಪದಲ್ಲಿ 'ಸಂಗೀತದ ಚೀರಾಟ' ನಡೆಸುತ್ತಿರುತ್ತಾರೆ. ಆಗ ಅಲ್ಲಿಗೆ ಎಂಟ್ರಿ ಕೊಡುವ ಚಿಟ್ಟಿ ಅಲಿಯಾಸ್ ರಜನೀಕಾಂತ್ ಎಲ್ಲ ರೌಡಿಗಳನ್ನು ಚಿಂದಿ ಮಾಡಿ ಮ್ಯೂಸಿಕ್ ಸಿಸ್ಟಮ್‌ಗಳನ್ನು ಮತ್ತೆ ಆನ್ ಮಾಡಲಾಗದ ಪರಿಸ್ಥಿತಿಗೆ ತರುತ್ತಾರೆ. ಇವೆರಡು ಸಿಸ್ಟಮ್‌ಗಳನ್ನು ಬಂದ್ ಮಾಡಲು ಚಿಟ್ಟಿ ಮೈಕೈ ನೋವು ಮಾಡಿಕೊಳ್ಳಲು ಹೆಣಗಾಡಬೇಕಾಯಿತು.
ಆದರೆ, ನೀವು ತುಸು 'ಸ್ಮಾರ್ಟ್' ಆಗಿದ್ದರೆ ಮನೆಯಲ್ಲೇ ಕುಳಿತು ಎಲ್ಲರ 'ಸದ್ದು' ಅಡಗಿಸಬಹುದು! ನಿಮ್ಮ ಸ್ಮಾರ್ಟ್‌ಪೋನ್ ಅನ್ನೇ ರಿಮೋಟ್ ಆಗಿ ಪರಿವರ್ತಿಸಿಕೊಳ್ಳಬಹುದು. ನೀವು ಆಲೋಚಿಸಬಹುದು, ಒಂದು ಸಾವಿರ ರುಪಾಯಿಯೊಳಗೆ ಸಿಗುವ ರಿಮೋಟ್‌ಗಾಗಿ ಹತ್ತಾರು ಸಾವಿರ ರುಪಾಯಿ ತೊಡಗಿಸಿ ಸ್ಮಾರ್ಟ್‌ಫೋನ್ ಖರೀದಿಸಬೇಕೆ ಎಂದು. ಆದರೆ ನಿಮ್ಮ ಕೈನಲ್ಲಿರುವ ಸಾಧಾರಣ ಸ್ಮಾರ್ಟ್‌ಫೋನ್‌ನಿಂದಲೇ ನೀವು ಮತ್ತಷ್ಟು ಸ್ಮಾರ್ಟ್ ಆಗಲು ಸಾಧ್ಯವಿದೆ.
ಸ್ಯಾಮ್‌ಸಂಗ್, ಎಲ್‌ಜಿ, ಸೋನಿ ಹಾಗೂ ಆ್ಯಪಲ್ ಫೋನ್‌ಗಳು ಈಗಾಗಲೇ 'ಸ್ಮಾರ್ಟ್ ರಿಮೋಟ್'ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಅದರಲ್ಲೂ ಎಲ್‌ಜಿ ಜಿ ಪ್ರೋ ಹಾಗೂ ಸ್ಯಾಮ್‌ಸಂಗ್ ಎಸ್-4ನಲ್ಲಿ ಇನ್‌ಬಿಲ್ಟ್ ಆಗಿಯೇ ಈ ಅಪ್ಲಿಕೇಷನ್‌ಗಳನ್ನು ನೀಡಲಾಗಿದೆ. ಈ ಅಪ್ಲಿಕೇಷನ್‌ಗಳು ತುಸು ಮಜವಾಗಿಯೂ, ಸ್ಮಾರ್ಟ್ ಹಾಗೂ ತರಲೆಯಾಗಿಯೂ ಇವೆ.
ಎಲ್ಲಾ ಇದೆ!
'ಕಳೆದವಾರ ಎಲ್‌ಜಿ ಜಿ ಪ್ರೋ ಕೈನಲ್ಲಿ ಹಿಡಿದು ಹೋಟೆಲ್‌ಗೆ ದಾಳಿ ಇಟ್ಟಿದ್ದೆವು. ಊಟಕ್ಕೆ ಆರ್ಡರ್ ಮಾಡಿ ಕುಳಿತಾಗ ತುಸು ಸೆಖೆ ಶುರುವಾಯಿತು. ಎಸಿ ಆನ್ ಮಾಡಲು ಹೇಳಿದರೆ 'ರಿಮೋಟ್ ಕಾಣುತ್ತಿಲ್ಲ ಸಾರ್...' ಎಂಬ ಕುಂಟು ನೆಪ ಹೇಳಿದರು. ಆಗ ಎಲ್‌ಜಿಯಲ್ಲಿನ 'ಕ್ವಿಕ್ ರಿಮೋಟ್' ಅಪ್ಲಿಕೇಷನ್ ಮೂಲಕ ಆತ ರಿಮೋಟ್ ಹುಡುಕುವುದರೊಳಗೆ ಆನ್ ಮಾಡಿಯಾಗಿತ್ತು. ಇದಲ್ಲದೇ ಬರುವಾಗ ಸ್ವಲ್ಪ ತರಲೆ ಬುದ್ಧಿ ಉಪಯೋಗಿಸಿ ಎಲ್ಲ ಎಸಿಗಳನ್ನು ಆನ್ ಮಾಡಿ ಬಂದಿದ್ದೆವು.'
ಅಂದರೆ, ಈ ರಿಮೋಟ್‌ಗಳ ಮೂಲಕ ನಿಮ್ಮ ಮನೆಯಲ್ಲಿನ ಟಿವಿ ಮಾತ್ರವಲ್ಲದೇ ಎಸಿ, ಪ್ರಾಜೆಕ್ಟರ್, ಆಡಿಯೋ ಸಿಸ್ಟಮ್, ಡಿವಿಡಿ ಮತ್ತು ಬ್ಲ್ಯೂ ರೇ ಪ್ಲೇಯರ್, ಆಡಿಯೋ ಪ್ಲೇಯರ್ ಹಾಗೂ ಸೆಟ್ ಅಪ್ ಬಾಕ್ಸ್‌ಗಳನ್ನು ನಿಯಂತ್ರಿಸಬಹುದು.
ಪಕ್ಕದ ಮನೆಯವರು ರಾತ್ರಿಯೆಲ್ಲ ಟಿವಿ ಆನ್ ಮಾಡಿಕೊಂಡು ದೊಡ್ಡ ಶಬ್ದ ಮಾಡುತ್ತಿದ್ದರೆ ಮನೆಗೆ ಹೋಗಿ ಗದರಿಸುವ ಅಗತ್ಯವಿಲ್ಲ. ನಿಮ್ಮ ಕಾಂಪೌಂಡ್‌ನಲ್ಲೇ ನಿಂತು ಟಿವಿ, ಡಿವಿಡಿ ಪ್ಲೇಯರ್ ಅಥವಾ ಸೆಟ್ ಅಪ್ ಬಾಕ್ಸ್‌ನ ಕಂಪನಿ ತಿಳಿದುಕೊಂಡು ಶಬ್ದವನ್ನು ಕಡಿಮೆ ಮಾಡಬಹುದು ಇಲ್ಲವೇ ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು. ಒಂದೊಮ್ಮೆ ಈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದಿದ್ದರೇ ಆತ 'ಭೂತ ಚೇಷ್ಟೆ' ಎಂದು ಹೆದರಿ ಎಲ್ಲವನ್ನೂ ಆರಿಸಿ ನಿದ್ದೆಗೆ ಜಾರಬಹುದು!
ಫೋನ್‌ನಲ್ಲಿರುವ ಇನ್ಫ್ರಾರೆಡ್ ಕಿರಣಗಳ ಮೂಲಕ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. ಒಂದು ಸ್ಮಾರ್ಟ್‌ಫೋನ್ ಮೂಲಕ ನೂರಕ್ಕೂ ಅಧಿಕ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ನಿಯಂತ್ರಿಸಬಹುದು. ತಂತ್ರಜ್ಞರ ಪ್ರಕಾರ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಅಪ್ಲಿಕೇಷನ್‌ಗಳಲ್ಲಿ ಎಲ್‌ಜಿಯಲ್ಲಿರುವ 'ಕ್ವಿಕ್ ರಿಮೋಟ್' ಅದ್ಭುತವಾಗಿದೆ. ಜಗತ್ತಿನಲ್ಲಿರುವ ಎಲ್ಲ ಟಿವಿ, ಸೆಟ್ ಅಪ್ ಬಾಕ್ಸ್, ಡಿವಿಡಿ, ಆಡಿಯೋ, ಬ್ಲ್ಯೂ ರೇ ಪ್ಲೇಯರ್, ಪ್ರೊಜೆಕ್ಟರ್ ಹಾಗೂ ಎಸಿ ಯಂತ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ನಿಮ್ಮ ಆಯ್ಕೆಯ ಬ್ರಾಂಡ್‌ಗಳನ್ನು ನೋಡಿಕೊಂಡು ಕಾನ್ಫಿಗರ್ ಮಾಡಿಕೊಳ್ಳುವುದು ಮಾತ್ರ. ಇದು ಅಕ್ಷರಶಃ ರಿಮೋಟ್ ಆಗಿಯೇ ಕಾರ್ಯನಿರ್ವಹಿಸುತ್ತದೆ. ಮನೆಯಲ್ಲಿರುವ ಎಲ್ಲ ರಿಮೋಟ್‌ಗಳ ತರಹ ಕೆಲಸಮಾಡುತ್ತದೆ. ಕಾನ್ಫಿಗರ್ ಆಗುವಾಗ ಮಾತ್ರ ಇಂಟರ್ನೆಟ್ ಸಂಪರ್ಕ ಅನಿವಾರ್ಯ.
ಅಪಾಯವೂ ಇದೆ!
ಮೊದಲೇ ತಿಳಿಸಿದ ಹಾಗೆ ಇದ್ಯಾವುದೇ ಸೆಟ್ ಅಪ್ ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಡಿವೈಸ್‌ಗಳ ರಿಮೋಟ್‌ಗೆ ಪಾಸ್‌ವರ್ಡ್ ಇರುವುದಿಲ್ಲ. ಇದರಿಂದ ಸ್ಮಾರ್ಟ್‌ಫೋನ್ ಹೊಂದಿದ ಯಾರೂ ಬೇಕಾದರೂ ಎಲೆಕ್ಟ್ರಾನಿಕ್ ಡಿವೈಸ್ ನಿಯಂತ್ರಿಸುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಫೋನ್‌ಗಳಲ್ಲಿ ಪರಿಪೂರ್ಣವಾದ ರಿಮೋಟ್ ಲಭ್ಯವಿಲ್ಲದಿರಬಹುದು. ಆದರೆ ಎಲ್ಲ ಐಓಎಸ್ ಹಾಗೂ 2.2 ನಂತರದ ಎಲ್ಲ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇಂತಹ ಬೇರೆ ಬೇರೆ ಅಪ್ಲಿಕೇಷನ್‌ಗಳು ಲಭ್ಯವಿವೆ. ವಿಶೇಷವಾಗಿ ಸಾರ್ವ ಜನಿಕ ಕಾರ್ಯಕ್ರಮ ಅಥವಾ ಸಭಾ ಕಾರ್ಯಕ್ರಮಕ್ಕೆ ಅಡ ಚಣೆ ನೀಡಲು ಕೂಡ ಕಿಡಿಗೇಡಿಗಳು ಇಂಥ ಅಪ್ಲಿಕೇಷನ್‌ಗಳನ್ನು ದುರುಪಯೋಗ ಮಾಡಿಕೊಳ್ಳಬಹುದು. ಏಕೆಂದರೆ ವೇದಿಕೆಯ ಎದುರುಗಡೆಯೇ ಸಾಮಾನ್ಯವಾಗಿ ಆಡಿಯೋ ಅಥವಾ ವಿಡಿಯೋ ಸಿಸ್ಟಮ್‌ಗಳಿರುತ್ತವೆ. ಇಂಥ ಅಪ್ಲಿಕೇಷನ್‌ಗಳಿಂದ ಸುಲಭವಾಗಿಯೇ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಸ್ವಿಚ್ ಆಫ್ ಅಥವಾ ಆನ್ ಮಾಡಬಹುದು. ಹಾಗೆಯೇ ಕಾರ್ಯಕ್ರಮಗಳ ಸೋರ್ಸ್, ಕಂಟೆಂಟ್ ಅನ್ನು ಬದಲಿಸಬಹುದು.
ಇಂಥ ಅಪಾಯಗಳು ನಡೆಯುವ ಮುಂಚೆ ಮುಂಬರುವ ರಿಮೋಟ್ ವ್ಯವಸ್ಥೆಗಳಿಗೆ ಪಾಸ್‌ವರ್ಡ್ ಸೌಲಭ್ಯ ಬಂದರೆ ಅಚ್ಚರಿಪಡಬೇಕಿಲ್ಲ. ಅದು ಅನಿವಾರ್ಯವೂ ಆಗಬಹುದು. ಏಕೆಂದರೆ ಯಾವುದೇ ತನಿಖೆಯಿಂದಲೂ ಯಾವ ಸ್ಮಾರ್ಟ್‌ಪೋನ್‌ನಿಂದ ಡಿವೈಸ್ ಅನ್ನು ನಿಯಂತ್ರಿಸಲಾಗುತ್ತಿದೆ ಎಂದು ಕಂಡುಹಿಡಿಯುವುದು ಕಷ್ಟವಾಗಬಹುದು. ಅಂದಹಾಗೆ ಮಾರುಕಟ್ಟೆಯಲ್ಲಿ ಇಂಥ ನೂರಕ್ಕೂ ಅಧಿಕ ಅಪ್ಲಿಕೇಷನ್‌ಗಳು ಲಭ್ಯವಿವೆ. ಇದರಲ್ಲಿ ಕ್ವಿಕ್ ರಿಮೋಟ್, ವಾಚ್ ಆನ್, ಐ ರೂಲ್, ಬೆಂಕಿ ಪ್ರಖ್ಯಾತವಾಗಿವೆ.
ಮನೆಯಲ್ಲಿ ಮಕ್ಕಳ ಕೀಟಲೆಯಿಂದ ರಿಮೋಟ್‌ಗಳು ಹಾಳಾಗುವುದು ಅಥವಾ ಒಡೆಯುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಮೊಬೈಲ್‌ಗಳನ್ನೇ ರಿಮೋಟ್ ಆಗಿ ಪರಿವರ್ತಿಸಬಹುದು. ಕೊನೆಯ ಪಕ್ಷ ಮೊಬೈಲ್ ಮೇಲೆ ಬೇಸರ ಬಂದರೆ, ಹಳೆಯದಾದರೆ ಆ ನಂತರ ರಿಮೋಟ್ ಆಗಿ ಬಳಸಬಹುದು.
- ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


