ಲೈಫ್ ಆಫ್ ಸ್ಪೈ
ಮೊಬೈಲ್ ಎದುರು ಉಸಿರಾಡಿದರೂ ಕೇಳುವ, ಮೊಬೈಲ್‌ನಲ್ಲಿ ವೀಕ್ಷಿಸುತ್ತಿರುವ ದೃಶ್ಯಗಳನ್ನು...

ದೂರವಾಣಿ ಕದ್ದಾಲಿಕೆ ಕಾರಣದಿಂದ ಮುಖ್ಯಮಂತ್ರಿ ಕುರ್ಚಿಯನ್ನೇ ಕಳೆದುಕೊಂಡ ಉದಾಹರಣೆಗಳು ನಮ್ಮದೇ ರಾಜ್ಯದ ಇತಿಹಾಸದಲ್ಲಿದೆ. ಆದರೆ ಈಗ ಮೊಬೈಲ್ ಕದ್ದಾಲಿಕೆಗಾಗಿಯೇ ಸಾಫ್ಟ್‌ವೇರ್ ಹಾಗೂ ಮೊಬೈಲ್ ಅಪ್ಲಿಕೇಷನ್‌ಗಳು ಹುಟ್ಟಿಕೊಂಡಿವೆ.
ಮೊಬೈಲ್ ಅನ್ನು ತೀರಾ ಖಾಸಗಿ ಸಂವಹನ ಮಾಧ್ಯಮ ಎನ್ನುತ್ತಿದ್ದವರಿಗೆ ಕೆಲ ಕಂಪನಿಗಳು ದೊಡ್ಡ ಶಾಕ್ ನೀಡಿವೆ. ಹೆಂಡತಿ, ಗಂಡ, ಮಗ, ಮಗಳು ಅಥವಾ ಕಚೇರಿಯ ಸಿಬ್ಬಂದಿಯ ಮೊಬೈಲ್‌ಗಳನ್ನು ಸುಲಭವಾಗಿ ಸ್ಪೈ ಮಾಡುವ ಅಪ್ಲಿಕೇಷನ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ.
ಮೊಬೈಲ್ ಎದುರು ಉಸಿರಾಡಿದರೂ ಕೇಳುವ, ಮೊಬೈಲ್‌ನಲ್ಲಿ ವೀಕ್ಷಿಸುತ್ತಿರುವ ದೃಶ್ಯಗಳನ್ನು ಕ್ಷಣಾರ್ಧದಲ್ಲಿ ಮನೆಯಲ್ಲಿಯೇ ಕುಳಿತು ಪರಿಶೀಲಿಸುವ, ಕಳುಹಿಸುವ ಪ್ರತಿ ಸಂದೇಶಗಳನ್ನು ಓದುವ, ಪ್ರತಿ ಕರೆಯ ಮಾಹಿತಿ ಪಡೆಯುವ ಸಾಧ್ಯತೆಗಳನ್ನು ತಾಂತ್ರಿಕ ಲೋಕ ನಿಜವಾಗಿಸಿದೆ.
ಸ್ವಲ್ಪ ಚಾಣಾಕ್ಷತನ ಉಪಯೋಗಿಸಿದರೆ ಯಾವುದೇ ಸ್ಮಾರ್ಟ್‌ಫೋನ್ ಬಳಕೆದಾರರರ ಪ್ರತಿ ಹೆಜ್ಜೆಯನ್ನು ಕದ್ದಾಲಿಸುವ ಅಗತ್ಯವೂ ಇಲ್ಲ, ರಾಜಾರೋಷವಾಗಿಯೇ ಗುರುತಿಸಬಹುದು. ಆ್ಯಂಡ್ರಾಯ್ಡ್, ಐಫೋನ್, ಸಿಂಬಿಯಾನ್, ಬ್ಲ್ಯಾಕ್‌ಬೆರ್ರಿ ಹಾಗೂ ವಿಂಡೋಸ್ ಓಎಸ್‌ಗಳಿರುವ ಫೋನ್‌ಗಳಲ್ಲಿ ಸ್ಪೈ ಮಾಡಬಹುದಾಗಿದೆ. ಅಪ್ಲಿಕೇಷನ್ ಸ್ಟೋರ್‌ಗಳಲ್ಲಿ ಮೊಬೈಲ್ ಸ್ಪೈಗೆ ಸಂಬಂಧಿಸಿ ನೂರಕ್ಕೂ ಅಧಿಕ ಅಪ್ಲಿಕೇಷನ್‌ಗಳು ಲಭ್ಯವಿವೆ. ಎಲ್ಲ ಫೀಚರ್‌ಗಳಿರುವ ಅಪ್ಲಿಕೇಷನ್‌ಗಳು ಬೇಕೆಂದರೆ ಸಾವಿರಾರು ರು. ತೆರಲೇಬೇಕು. ಪ್ರತಿಯೊಂದು ತಂತ್ರಜ್ಞಾನಕ್ಕೆ ಎರಡು ಮುಖಗಳಿರುವಂತೆ ಮೊಬೈಲ್ ಸ್ಪೈ ಕೂಡ ಬಳಕೆದಾರರ ಇತಿಮಿತಿಗೆ ಬಿಟ್ಟಿದೆ.
ಖಾಸಗಿ ಸ್ಪೈ!
ಯಾವುದೇ ಸ್ಮಾರ್ಟ್‌ಫೋನ್ ಬಳಕೆದಾರರು ಮೊಬೈಲ್‌ನಲ್ಲಿ ಏನೇ ಕಾರ್ಯ ಮಾಡಿದರೂ ಸ್ಪೈ ಮೂಲಕ ತಿಳಿಯಬಹುದು. ಮೊಬೈಲ್‌ನಲ್ಲಿ ಕಾರ್ಯನಿರ್ವಹಿಸುವಾಗ ಕೈ ಮುಚ್ಚಿಕೊಂಡು, ತೆರೆಮರೆಯಲ್ಲಿರಿಸಿಕೊಂಡು ಚಾಟ್ ಹಾಗೂ ಬ್ರೌಸ್ ಮಾಡುವ ಅಭ್ಯಾಸವಿರುತ್ತದೆ. ಮತ್ತೆ ಕೆಲವರಿಗೆ ಮನೆಯಿಂದ ಹೊರಬಂದು ಮಾತನಾಡುವಷ್ಟು 'ರಹಸ್ಯ' ಮಾತುಕತೆಯಿರುತ್ತದೆ. ಇವೆಲ್ಲವೂ ರಹಸ್ಯವಾಗಿಯೇ ಉಳಿಯುವ ಕಾಲ ಮುಗಿದಿದೆ.
ಮೊಬೈಲ್ ಅಪ್ಲಿಕೇಷನ್ ಸ್ಟೋರ್ ಅಥವಾ ಮಾರುಕಟ್ಟೆಯಲ್ಲಿ ಇರುವ ಮೊಬೈಲ್ ಸ್ಪೈಗಳು ಅಷ್ಟರಮಟ್ಟಿಗೆ ತಾಂತ್ರಿಕವಾಗಿ ಮುಂದುವರಿದಿವೆ. ಒಳ್ಳೆಯ ಉದ್ದೇಶಗಳಿಗೆ ಬಳಸಿದರೆ ಇದು ಉಪಯೋಗಕಾರಿ. ಇಲ್ಲವಾದಲ್ಲಿ ಅನವಶ್ಯ ಕಲಹಗಳಿಗೂ ಕಾರಣವಾಗಬಹುದು. ಬಳಕೆಗೆ ಮುಂಚೆ ಸ್ವಲ್ಪ ಎಚ್ಚರದಿಂದಿರಿ.
ಕಳೆದೊಂದು ವರ್ಷದಿಂದ ವಿದೇಶಗಳಲ್ಲಿ ವಿಶೇಷವಾಗಿ ಈ ಅಪ್ಲಿಕೇಷನ್ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ತಾನು ಪ್ರೀತಿಸುವ ಹುಡುಗನ ಮೇಲೆ ನಂಬಿಕೆಯಿಲ್ಲದ ಹುಡುಗಿಯರಿಗಾಗಿ ಈ ಅಪ್ಲಿಕೇಷನ್ ಹುಟ್ಟಿಕೊಂಡಿತು. ಪ್ರಾರಂಭಿಕ ಹಂತದಲ್ಲಿ ಕೇವಲ ಮೊಬೈಲ್ ನೆಟ್‌ವರ್ಕ್ ಹಾಗೂ ಪ್ರದೇಶಗಳ ಟ್ರ್ಯಾಕಿಂಗ್‌ಗೆ ಇದು ಬಳಕೆಯಾಗುತ್ತಿತ್ತು. ಮೊಬೈಲ್ ಕಳೆದಾಗ ಹುಡುಕಲು ನೆರವಿಗೆ ಬರುತ್ತಿತ್ತು.
ತಂತ್ರಜ್ಞಾನವನ್ನು ಹಾಗೆಯೇ ಅಭಿವೃದ್ಧಿಪಡಿಸಿ ಮತ್ತೊಂದು ಮೊಬೈಲ್‌ನಲ್ಲಿಯ ಖಾಸಗಿ ವಿಚಾರಗಳನ್ನು ಕದಿಯುವ ಮಟ್ಟಿಗೆ ತಲುಪಿತು. ತಾನು ಪ್ರೀತಿಸುವ ಹುಡುಗ ಮತ್ತೊಂದು ಹುಡುಗಿಯ ಜತೆಗೆ 'ಡೇಟಿಂಗ್' ಮಾಡುತ್ತಿರಬಹುದು ಎಂಬ ಹೆದರಿಕೆ ವಿಶೇಷವಾಗಿ ಬ್ರೆಜಿಲ್ ಹಾಗೂ ಅಮೆರಿಕದ ಹುಡುಗಿಯರಿಗೆ ಕಾಡತೊಡಗಿತ್ತಂತೆ. ಹುಡುಗಿಯರ ಆತಂಕಗಳಿಗೆ ಯಾವಾಗಲೂ ಸ್ಪಂದನೆ ಹೆಚ್ಚಿರುತ್ತದೆ!
ಹಾಗೆಯೇ ಸಾಫ್ಟವೇರ್ ಕಂಪನಿಗಳು ಹುಡುಗಿಯರ ಆತಂಕವನ್ನೇ ಮಾರುಕಟ್ಟೆಯನ್ನಾಗಿ ರೂಪಿಸಿಕೊಂಡರು. ಅಮೆರಿಕದಲ್ಲಿ ಐಫೋನ್ ಪಾರುಪತ್ಯ ಹೆಚ್ಚಿದ್ದರಿಂದ ಫೈಂಡ್ ಮೈ ಫ್ರೆಂಡ್, ಫ್ರೆಂಡ್ ಟ್ರ್ಯಾಕರ್‌ನಂತಹ ಅಪ್ಲಿಕೇಷನ್ ಐಓಎಸ್‌ಗೆ ಬಿಡಲಾಯಿತು. ಆ ಸಂದರ್ಭದಲ್ಲಿ ತಮ್ಮ ಪ್ರೀತಿಪಾತ್ರರಾದವರು ಎಲ್ಲಿದ್ದಾರೆಂಬುದನ್ನು ತಿಳಿದುಕೊಳ್ಳಲಷ್ಟೇ ಸೀಮಿತವಾಗಿತ್ತು.
ಪ್ರೀತಿಯಲ್ಲಿ ಕೆಲವರು 'ಡಬಲ್ ಗೇಮ್' ಆಡುತ್ತಾ, ತಾವಿರುವ ಜಾಗವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಈ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ತನ್ನ ಆಯಾಮಗಳನ್ನು ಬದಲಿಸಿಕೊಂಡಿತು. ವ್ಯಕ್ತಿ ಅತಿ ಎನಿಸುವಷ್ಟು ಖಾಸಗಿ ವಿಚಾರಗಳನ್ನು ತಿಳಿಯಲು ಅವಕಾಶ ನೀಡಲಾಯಿತು. ಕಾರ್ಪೊರೇಟ್ ಜಗತ್ತಿಗೂ ಮೊಬೈಲ್ ಸ್ಪೈ ಕಾಲಿಡಲಾರಂಭಿಸಿತು. ತನ್ನ ಸಿಬ್ಬಂದಿಯ ಚಲನವಲನಗಳ ಬಗ್ಗೆ ನಿಗಾ ಇಡಲು ಖಾಸಗಿ ಕಂಪನಿಗಳು ಮೊಬೈಲ್ ಸ್ಪೈ ಬಳಸಲಾರಂಭಿಸಿದರು.
1980-90ರ ದಶಕದ ಸಿನೆಮಾಗಳಲ್ಲಿ ಡಿಟೆಕ್ಟಿವ್ ಏಜೆನ್ಸಿಗಳ ರೋಚಕ ಕತೆ ನೋಡಿರುತ್ತೇವೆ. ಆದರೆ ಅವರು ಮಾಡುವ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ದಾಖಲೆ ಸಹಿತವಾಗಿ ಈ ಅಪ್ಲಿಕೇಷನ್‌ಗಳು ಮಾಡುತ್ತವೆ ಎನ್ನುವುದು ತಯಾರಕರ ವಾದ.
ಕುಟುಂಬ ಮತ್ತು ಕಚೇರಿ
ಯುರೋಪ್ ಹಾಗೂ ಅಮೆರಿಕ ದೇಶಗಳಲ್ಲಿ 12ನೇ ವರ್ಷಕ್ಕೆ ಮಕ್ಕಳ ಕೈನಲ್ಲಿ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಇರುತ್ತದೆ. ಇನ್ನು ಭಾರತದಲ್ಲಿಯೂ ಕಾಲೇಜು ಮೆಟ್ಟಿಲು ಏರಿದಾಗ ಮೊಬೈಲ್ ಇಲ್ಲದಿದ್ದರೆ ಸಾಧ್ಯವಿಲ್ಲ ಎಂಬ ಅನಿವಾರ್ಯ ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿದೆ.
ಮಕ್ಕಳ ಹಟ ತಾಳಲಾರದೆ ಮೊಬೈಲ್ ಕೊಡಿಸುವ ಪಾಲಕರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಮೊಬೈಲ್‌ನಲ್ಲಿ ಮಗ ಅಥವಾ ಮಗಳು ಏನು ಚಾಟ್ ಮಾಡುತ್ತಾರೋ, ಯಾರೊಂದಿಗೆ ಗಂಟೆಗಟ್ಟಲೇ ಹರಟುತ್ತಾರೋ, ಏನೇನೆಲ್ಲ ವೀಕ್ಷಿಸುತ್ತಾರೋ ಎಂಬ ಸಂದೇಹದಲ್ಲಿ ಸಾಕಷ್ಟು ಪಾಲಕರು ನರಳುತ್ತಿರುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಈ ಹೊಸ ಮೊಬೈಲ್‌ಗಳ ಕುರಿತು ಮಕ್ಕಳಿಗೆ ಗೊತ್ತಿರುವ ಶೇ.10ರಷ್ಟು ಕೂಡ ಪಾಲಕರಿಗೆ ಗೊತ್ತಿರುವುದಿಲ್ಲ.ಪಾಲಕರಿಗೆ ನೇರವಾಗಿ ಮಕ್ಕಳನ್ನು ಪ್ರಶ್ನಿಸಿದರೆ ಎಲ್ಲ ಬೇಜಾರಾಗುತ್ತಾರೋ ಎಂಬ ಭಯ ಒಂದೆಡೆಯಾದರೆ, ಮಕ್ಕಳು ಹಾಳಾಗುತ್ತಿದ್ದಾರೇನೋ ಎಂಬ ಆತಂಕ ಮತ್ತೊಂದೆಡೆ.
ಮಕ್ಕಳಿಗೆ ಮೊಬೈಲ್ ಕೊಡಿಸದ ಸಂದರ್ಭದಲ್ಲಿ ಅಥವಾ ಸಂದೇಹ ಬಂದಾಗ ಇಂಥ ಮೊಬೈಲ್ ಸ್ಪೈ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಮೊಬೈಲ್‌ನಲ್ಲಿ ಅಫ್ಲಿಕೇಷನ್ ಇರುವುದು ಬಳಕೆದಾರರಿಗೆ ತಿಳಿಯುವುದಿಲ್ಲ. ನೋಂದಣಿ ಸಂದರ್ಭದಲ್ಲಿ ಇನ್‌ಸ್ಟಾಲ್ ಮಾಡುವವರು ಖಾಸಗಿ ಅಕೌಂಟ್ ರೂಪಿಸಿಕೊಳ್ಳಬೇಕು. ಆ ಸಂದರ್ಭದಲ್ಲಿ ನೀಡಿರುವ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್‌ಗಳನ್ನು ಅಪ್ಲಿಕೇಷನ್‌ನ ಮೂಲ ವೆಬ್‌ಸೈಟ್‌ಗೆ ಭೀಟಿ ನೀಡಿ ಲಾಗ್‌ಇನ್ ಆಗಬೇಕು. ತಮ್ಮ ವೈಯಕ್ತಿಕ ಪುಟದ ಮೂಲಕ ಇನ್‌ಸ್ಟಾಲ್ ಆಗಿರುವ ಮೊಬೈಲ್‌ನ ಸಂಪೂರ್ಣ ವಿವರ ಪಡೆಯಬಹುದು.
ಮಧ್ಯರಾತ್ರಿಯಲ್ಲಿ ಮಗ ಯಾರೊಂದಿಗೆ ಹರಟೆ ಹೊಡೆಯುತ್ತಿದ್ದಾನೆ, ಎನೆಲ್ಲ ಮಾತನಾಡುತ್ತಿದ್ದಾನೆ, ಎಂಥ ಸಂದೇಶ ಕಳುಹಿಸುತ್ತಿದ್ದಾನೆ, ಸಾಮಾಜಿಕ ತಾಣಗಳಲ್ಲಿ ಏನೆಲ್ಲ ಪೋಸ್ಟ್ ಮಾಡುತ್ತಾನೆ ಎನ್ನುವುದನ್ನು ಮನೆಯಲ್ಲಿಯೇ ಕುಳಿತು ಅವಲೋಕಿಸಬಹುದು. ಇದಲ್ಲದೇ ಮಗ ಯಾವ ಪ್ರದೇಶದಲ್ಲಿದ್ದಾನೆ, ಆತನ ಸುತ್ತಲಿನ ವಾತಾವರಣದ ಆಡಿಯೋ ರೆಕಾರ್ಡಿಂಗ್ ಕೂಡ ಗ್ರಹಿಸಬಹುದು.
ಆ ಮೊಬೈಲ್ ಕಾರ್ಯನಿರ್ವಹಣೆ ಕುರಿತು ಕ್ಷಣಕ್ಷಣದ ಮಾಹಿತಿಯೂ ದೊರೆಯುತ್ತದೆ. ಇದನ್ನು ಮಗ ಅಥವಾ ಮಗಳಲ್ಲದೇ ಹೆಂಡತಿ, ಗಂಡ, ಪ್ರಿಯಕರರ ಮೇಲೂ ಬಳಸುವವರ ಸಂಖ್ಯೆ ದೊಡ್ಡದಿದೆ.
ಇನ್ನು ಕೆಲ ಖಾಸಗಿ ಕಂಪನಿಗಳಲ್ಲಿ ಸಿಬ್ಬಂದಿ ಮೇಲೆ ನಿಗಾ ಇಡಲು ಇಂಥ ಅಪ್ಲಿಕೇಷನ್‌ಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಇದಲ್ಲದೇ ಸಿಬ್ಬಂದಿಯು ಕಂಪನಿಯ ಮಾಹಿತಿಗಳನ್ನು ವಿರೋಧಿಗಳೊಂದಿಗೆ ಹಂಚಿಕೊಳ್ಳುವುದನ್ನು ನಿಯಂತ್ರಿಸುವ ಉಪಾಯವು ಇದರಲ್ಲಿದೆ. ಆದರೆ ವೈಯಕ್ತಿಕ ವಿಚಾರಗಳಿಗೆ ವರ್ಷಾನುಟ್ಟಲೇ ಹಣ ಸಂದಾಯ ಮಾಡುವುದು ದುಬಾರಿಯಾಗಬಹುದು. ಗಂಭೀರ ಸಮಸ್ಯೆಗಳ ನಿಯಂತ್ರಣಕ್ಕೆ ಒಂದು ತಿಂಗಳ 'ಟೆಸ್ಟ್ ಡ್ರೈವ್' ನೆರವಾಗಬಹುದು.
ಒಟ್ಟಿನಲ್ಲಿ ಸಂದೇಹ ಪ್ರಾಣಿಗಳಿಗೆ ತಂತ್ರಜ್ಞಾನವು ಇನ್ನಷ್ಟು ನೆರವು ನೀಡುತ್ತಿದೆ. ಇದು ಸರ್ವವ್ಯಾಪಿಯಾದರೆ ಗೆಳೆಯ- ಗೆಳತಿ, ಗಂಡ- ಹೆಂಡತಿ, ಮಕ್ಕಳು- ಪಾಲಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ನೋಡಲು ಕೊಡುವುದು ಕೂಡ ಕಡಿಮೆಯಾಗಬಹುದು.
ನೀವು ಮಾಡಬೇಕಿರುವುದು
- ಯಾರ ಮೇಲೆ ಸ್ಪೈ ಮಾಡಬೇಕೆಂಬ ಉದ್ದೇಶವಿದೆಯೇ ಅವರ ಮೊಬೈಲ್ ಪಡೆದು ಗುಟ್ಟಾಗಿ ಮೊಬೈಲ್ ಸ್ಪೈ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಬೇಕು.
- ಅಪ್ಲಿಕೇಷನ್ ಇನ್‌ಸ್ಟಾಲ್ ಆಗಿರುವುದು ಬಳಕೆದಾರರಿಗೆ ತಿಳಿಯುವುದಿಲ್ಲ.
- ಮೊಬೈಲ್‌ನಲ್ಲಿ ಅವರ ಪ್ರತಿ ಚಲನವಲನವನ್ನು ತಿಳಿಯಬಹುದು.
- ಆದರೆ ಈ ಅಫ್ಲಿಕೇಷನ್‌ಗಳಿಗೆ ಸಾವಿರಾರು ರುಪಾಯಿ ಖರ್ಚು ಮಾಡಬೇಕು.
- ಕಾಲ್ ಹಿಸ್ಟರಿ
- ಎಸ್‌ಎಂಎಸ್
- ಸೋಷಿಯಲ್ ನೆಟ್‌ವರ್ಕ್ ಚಾಟಿಂಗ್
- ಸರೌಂಡಿಂಗ್ ರೆಕಾರ್ಡಿಂಗ್
- ಜಿಪಿಎಸ್ ಲೊಕೇಷನ್
- ವಿಡಿಯೋ
- ಫೋಟೊ
- ಕಾಲ್ ರೆಕಾರ್ಡಿಂಗ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


