ಟ್ಯಾಬ್ ರೇಸ್
ಫ್ಯಾಬ್ಲೆಟ್‌ನ ಜತೆಗೆ ಟ್ಯಾಬ್ಲೆಟ್ ಮಾರುಕಟ್ಟೆಯೂ ಸಖತ್ ಪೈಪೋಟಿಗೆ ಬಿದ್ದಿದೆ. ಟ್ಯಾಬ್ಲೆಟ್ ಮಾರುಕಟ್ಟೆಯ ಹಿರಿಯಣ್ಣ ಆ್ಯಪಲ್‌ಗೂ ಈ...

ಫ್ಯಾಬ್ಲೆಟ್‌ನ ಜತೆಗೆ ಟ್ಯಾಬ್ಲೆಟ್ ಮಾರುಕಟ್ಟೆಯೂ ಸಖತ್ ಪೈಪೋಟಿಗೆ ಬಿದ್ದಿದೆ. ಟ್ಯಾಬ್ಲೆಟ್ ಮಾರುಕಟ್ಟೆಯ ಹಿರಿಯಣ್ಣ ಆ್ಯಪಲ್‌ಗೂ ಈ ಪೈಪೋಟಿಯ ಬಿಸಿತಟ್ಟಿದೆ. ಅದಕ್ಕೇ ಆ್ಯಪಲ್ ಕಂಪನಿ ಐಪ್ಯಾಡ್‌ನ ಥಿನ್‌ಏರ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆ್ಯಪಲ್‌ಗೆ ಪೈಪೋಟಿ ನೀಡುತ್ತಿರುವ ಸ್ಯಾಮ್‌ಸಂಗ್ ಕಂಪನಿ ಗ್ಯಾಲಕ್ಸಿ ನೋಟ್ 10.1 ಸೀರೀಸ್ ಮಾರುಕಟ್ಟೆಗೆ ಪರಿಚಯಿಸಿದೆ.
ಕಂಪ್ಯೂಟರ್ ಕ್ಷೇತ್ರದಲ್ಲಿ ಭರ್ಜರಿ ಸಾಧನೆ ಮಾಡುತ್ತಿರುವ ಲೆನೊವೊ ಕಂಪನಿಯೂ ಯೋಗಾ ಹೆಸರಿನ ಟ್ಯಾಬ್ಲೆಟ್ಟನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಭಾರಿ ಪೈಪೋಟಿ ಕಾಣಿಸಿಕೊಳ್ಳುತ್ತಿದೆ. ಮಾರುಕಟ್ಟೆ ಪ್ರವೇಶಿಸಿರುವ ಈ ಮೂರು ಪ್ರಮುಖ ಟ್ಯಾಬ್ಲೆಟ್‌ಗಳ ಬಗ್ಗೆ ಮಾಹಿತಿ ಇಲ್ಲಿ...
ಆ್ಯಪಲ್ ಥಿನ್‌ಏರ್
ಆ್ಯಪಲ್ ಐಪ್ಯಾಡ್‌ಗಳಲ್ಲೇ ಅತ್ಯಂತ ತೆಳ್ಳಗಿನ ಐಪ್ಯಾಡ್ ಇದು. ಐಒಎಸ್ 7 ಮತ್ತು ಎ7 ಚಿಪ್ ಹೊಂದಿರುವ ಇದು, ಹಳೆಯ ಐಪ್ಯಾಡ್‌ಗಳಿಗಿಂತ ಶೇ.20ರಷ್ಟು ತೆಳ್ಳಗಿದೆ. ನೋಡೋದಿಕ್ಕೆ ಅತ್ಯಂತ ಸುಂದರವಾಗಿ ಕಾಣುತ್ತದೆ. ಶೇ.28ರಷ್ಟು ಹಗುರಾಗಿದೆ. ಗಾತ್ರದಲ್ಲಿ ಶೇ.24ರಷ್ಟು ಸಣ್ಣದು. ಅರ್ಧ ಕೆಜಿಯೂ ಇಲ್ಲ. ಆದರೆ ನೋಡಲು ಚಿಕ್ಕದಾಗಿ, ತೆಳ್ಳಗಿದೆ ಎಂದಾಕ್ಷಣ ಅದರ ಸಾಮರ್ಥ್ಯವೇನೂ ಕಡಿಮೆಯಾಗಿಲ್ಲ. ಎ7 ಚಿಪ್ ಮತ್ತು ಎಂ7 ಪ್ರೊಸೆಸರ್‌ನಿಂದಾಗಿ ಹಳೆಯ ಐಪ್ಯಾಡ್‌ಗಳಿಗಿಂತ ಇದು ವೇಗವಾಗಿ ಕೆಲಸ ಮಾಡಲಿದೆ. 9.7 ಇಂಚಿನ 2048x1536 ರೆಸಲ್ಯೂಷನ್ ಸ್ಕ್ರೀನ್ ಹೊಂದಿದೆ.
ಐಪ್ಯಾಡ್ ಥಿನ್‌ಏರ್ ಮಾದರಿಯಲ್ಲಿ ಡೆಸ್ಕ್‌ಟಾಪ್ ಮಾದರಿಯ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದರಿಂದಾಗಿ ಹಳೇ ಐಪ್ಯಾಡ್‌ಗಳಿಗಿಂತ 2 ಪಟ್ಟು ಹೆಚ್ಚುವೇಗದಲ್ಲಿ ಹೊಸ ಐಪ್ಯಾಡ್ ಕೆಲಸ ಮಾಡಲಿದೆ. ಅದರಲ್ಲೂ ವಿಶೇಷವಾಗಿ ಗ್ರಾಫಿಕ್ಸ್‌ಗಳು ಅತ್ಯುತ್ತಮವಾಗಿ ಮೂಡಿಬರಲಿವೆ ಎಂದು ಕಂಪನಿ ಹೇಳಿದೆ. ಇದರ ಪರಿಣಾಮವಾಗಿಯೇ 10 ತಾಸುಗಳ ಬ್ಯಾಟರಿ ಲೈಫ್ ಲಭ್ಯವಾಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನೋಡಲು ಅತ್ಯಂತ ಆಕರ್ಷಕವಾಗಿದೆ.
ಗ್ಯಾಲಕ್ಸಿ ನೋಟ್ 10.1
ಆ್ಯಪಲ್‌ಗೆ ಅತ್ಯುತ್ತಮ ಪೈಪೋಟಿ ನೀಡುತ್ತಿರುವುದು ಸ್ಯಾಮ್‌ಸಂಗ್ ಕಂಪನಿ. ಆ್ಯಪಲ್ ಐಪ್ಯಾಡ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್ ಕಂಪನಿ ಗ್ಯಾಲಕ್ಸಿ 10.1 ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು 10.1 ಇಂಚು ಸ್ಕ್ರೀನ್ ಹೊಂದಿದ್ದು, 2560x1600 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಇದು ಆ್ಯಪಲ್‌ಗಿಂತ ಕೊಂಚ ಹೆಚ್ಚಿನ ರೆಸಲ್ಯೂಷನ್ ಆಗಿದೆ. ಆ್ಯಪಲ್‌ಗಿಂತಲೂ .4 ಇಂಚು ದೊಡ್ಡ ಗಾತ್ರದ ಸ್ಕೀನ್ ಹೊಂದಿದೆ. ಇದರ ಹಿಂಭಾಗ ಲೆದರ್ ಫೀಲ್ ಹೊಂದಿರುವುದು ವಿಶೇಷ.
ಇದು ಒಕ್ಟಾಕೋರ್ (8 ಕೋರ್) ಪ್ರೊಸೆಸರ್ ಹೊಂದಿದ್ದು, 3 ಜಿಬಿ ರ್ಯಾಮ್ ಹೊಂದಿದೆ. 8,220 ಎಂಎಎಚ್ ಬ್ಯಾಟರಿ ಹೊಂದಿದೆ. ಇಷ್ಟು ಹೈ ಕಾನ್ಫಿಗರೇಷನ್ ಹೊಂದಿರುವ ಇನ್ನೊಂದು ಟ್ಯಾಬ್ಲೆಟ್ ಇರಲಾರದು ಎಂಬುದೇ ಇದರ ಹೆಗ್ಗಳಿಕೆ. ತುಂಬ ತೆಳ್ಳಗಿರುವುದೂ ಇದರ ಪ್ಲಸ್ ಪಾಯಿಂಟ್. ಇದರ ಜತೆಯಲ್ಲೇ ಎಸ್‌ಪೆನ್ ಕೂಡ ಬರುತ್ತದೆ.
ಲೆನೊವೊ ಯೋಗಾ
ಲೆನೊವೊ ಕಂಪನಿ ಯೋಗಾ ಹೆಸರಿನಲ್ಲಿ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಕ್ರಾಂತಿಯನ್ನೇ ಮಾಡಿತ್ತು. ಅದು ಗ್ರಾಹಕರನ್ನು ಆಕರ್ಷಿಸಿದ ಕಾರಣಕ್ಕೆ, ಅದೇ ಹೆಸರಿನ ಹೊಸ ಮಾದರಿಯ ಮತ್ತು ಅಪರೂಪದ ವಿನ್ಯಾಸದ ಟ್ಯಾಬ್ಲೆಟ್ಟನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ.
ವಿಶೇಷವಾದ ಸಿಲೆಂಡರ್ ಗಾತ್ರದ ಬ್ಯಾಟರಿ ಇರುವುದು ಮತ್ತು ಇದೇ ಸ್ಟ್ಯಾಂಡ್ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಇದರ ವಿಶೇಷ. 18 ತಾಸುಗಳ ಬ್ಯಾಟರಿ ಲೈಫ್ ಇದೆ ಎಂದು ಕಂಪನಿ ಹೇಳಿದೆ. ಇದು ನಿಜವೇ ಆಗಿದ್ದಲ್ಲಿ ಇದಕ್ಕಿಂತ ಹೆಚ್ಚು ಬ್ಯಾಟರಿ ಲೈಫ್ ಹೊಂದಿರುವ ಇನ್ನೊಂದು ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿಲ್ಲ. ಹಿಂಬದಿಯಲ್ಲಿ 5 ಮೆಗಾಫಿಕ್ಸೆಲ್ ಕ್ಯಾಮೆರಾ ಮತ್ತು ಮುಂಬದಿಯಲ್ಲಿ 1.6 ಮೆಗಾಪಿಕ್ಸೆಲ್ ಎಚ್‌ಡಿ ಕ್ಯಾಮೆರಾ ಹೊಂದಿದೆ.
ಮೊದಲ ನೋಟಕ್ಕೇ ನಿಮ್ಮನ್ನು ಅಕರ್ಷಿಸುವ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ಇದರ ಪ್ಲಸ್‌ಪಾಯಿಂಟ್. ಆದರೆ ಇದರ ಕಾರ್ಯನಿರ್ವಹಣೆ ನಿಮಗೆ ಸ್ವಲ್ಪ ಬೇಸರ ತರಿಸಬಹುದು. ಕಾರಣ ಇದರಲ್ಲಿ ಕೇವಲ 1 ಜಿಬಿ ರ್ಯಾಮ್ ನೀಡಲಾಗಿದೆ. ಇದರಿಂದಾಗಿ ಆಟಗಳನ್ನು ಆಡಲು ಮತ್ತು ಗ್ರಾಫಿಕ್ಸ್ ಬಳಸುವಾಗ ಟ್ಯಾಬ್ಲೆಟ್ ನಿಧಾನ ಎಂದು ನಿಮಗೆ ಭಾಸವಾದರೆ ಅಚ್ಚರಿಯಿಲ್ಲ. ಕೇವಲ ಆಕರ್ಷಕ ಶೈಲಿ ಮತ್ತು 10 ಇಂಚ್ ಸ್ಕ್ರೀನ್ ಅಷ್ಟೇ ನಿಮ್ಮ ಗುರಿಯಾದರೆ ಖಂಡಿತ ಈ ಟ್ಯಾಬ್ಲೆಟ್ ತಗೊಳ್ಳಿ.
ಇಲ್ಲವಾದಲ್ಲಿ ಕೊಂಚ ದಿನ ಕಾದು, ಇನ್ನಷ್ಟು ದುಡ್ಡು ಕೂಡಿಟ್ಟು ಬೇರೆ ಟ್ಯಾಬ್ಲೆಟ್‌ನತ್ತ ಕಣ್ಣುಹಾಯಿಸಬಹುದು.
- ವಕ್ರದಂತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


